ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಶೈಲಿಯ ಕೋಟಿಪುರದ ಕೈಟಭ ದೇಗುಲ

Last Updated 23 ಜುಲೈ 2019, 3:44 IST
ಅಕ್ಷರ ಗಾತ್ರ

ಥಟ್ಟನೆ ನೋಡಿದರೆ ಹೊಯ್ಸಳ ದೇವಾಲಯಗಳಂತೆ ಕಾಣುತ್ತದೆ. ಸೂಕ್ಷ್ಮವಾಗಿ ವಾಸ್ತು ಶಿಲ್ಪ ಗಮನಿಸಿದರೆ ಹೊಯ್ಸಳ–ಚಾಲುಕ್ಯ ಮಿಶ್ರಶೈಲಿಯ ದೇಗುಲದಂತೆಯೂ ಕಾಣುತ್ತದೆ. ಹೀಗೆ ವಿಭಿನ್ನ ವಾಸ್ತುಶಿಲ್ಪದಿಂದ ಗಮನಸೆಳೆಯುವ ದೇಗುಲದ ಹೆಸರು ಕೈಟಭೇಶ್ವರ ದೇವಾಲಯ. ಇದು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿದೆ.

ಸೊರಬ ತಾಲ್ಲೂಕಿನ ಆನವಟ್ಟಿಯಿಂದ ಉತ್ತರಕ್ಕೆ ಹಾನಗಲ್ ಮಾರ್ಗದಲ್ಲಿ 2 ಕಿ.ಮೀ (ಶಿವಮೊಗ್ಗದಿಂದ 95 ಕಿ.ಮೀ) ದೂರದ ಕೋಟಿಪುರದಲ್ಲಿದೆ ಈ ದೇವಾಲಯ. ಕ್ರಿ.ಶ 1100ರಲ್ಲಿ ಹೊಯ್ಸಳರ ವಿನಯಾದಿತ್ಯನ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ.

ಹಿಂದೆ ಮಧು–ಕೈಟಭರೆಂಬ ಇಬ್ಬರು ರಾಕ್ಷಸ ಸಹೋದರರನ್ನು ಸಂಹಾರ ಮಾಡಿದ್ದರಿಂದ ಈ ಹೆಸರು ಬಂದಿತೆಂದು ಹೇಳುತ್ತಾರೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ, ನೀವು ಬನವಾಸಿಗೆ ಹೋದರೆ ಅಲ್ಲಿಯ ಗೈಡ್‌ಗಳು ಇದರ ಬಗ್ಗೆ ಇನ್ನೂ ಚೆನ್ನಾಗಿ ವಿವರಿಸುತ್ತಾರೆ. ಈ ಊರಿಗೆ ಕೋಟೆಪುರ, ಕುಪಟೂರು, ಕುಬ್ಬತ್ತೂರು ಅಥವಾ ಕೋಟಿಪುರ ಎಂಬ ನಾಲ್ಕೈದೂ ಹೆಸರುಗಳಿವೆ.

ದೂರದಿಂದ ಬಂದ ನನ್ನ ಮಿತ್ರರನ್ನು ಈ ದೇವಾಲಯಕ್ಕೆ ಕರೆದುಕೊಂಡು ಹೋದಾಗಲೆಲ್ಲ ಅಲ್ಲಿಯ ಕೆತ್ತನೆಗಳನ್ನು, ಕಂಬಗಳ ನುಣುಪನ್ನು ನೋಡಿ ಬೆರಗಾಗುತ್ತಿದ್ದರು. ಈ ದೇವಸ್ಥಾನವನ್ನು ಕಾಪಾಡಿಕೊಂಡು ಹೋಗುವಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಪ್ರಯತ್ನಗಳು ಶ್ಲಾಘನೀಯ.

1880ರಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಚಿನ್ನದ ಕಳಶ ಸ್ಥಾಪಿಸಿರುವುದನ್ನು ಶಾಸನಗಳಲ್ಲಿ ಉಲ್ಲೇಖಿಸಲಾ ಗಿದೆ. ಗರ್ಭಗುಡಿ ಮತ್ತು ಅಂತರಾಳದ ನಂತರ ನವರಂಗ, ಸುಖನಾಸಿ ಮತ್ತು ಮುಖಮಂಟಪ ಸುಂದರವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ನವರಂಗ ಇರುತ್ತದೆ ಅಥವಾ ಸುಖನಾಸಿ ಇರುತ್ತದೆ. ಆದರೆ, ಈ ದೇವಾಲಯದಲ್ಲಿ ಎರಡೂ ಇದೆ.

ನವರಂಗ ಮತ್ತು ಸುಖನಾಸಿಗಳ ಉದ್ದಕ್ಕೂ ಒಂದು ಬದಿಗೆ 6 ರಂತೆ 12 ಕಂಬಗಳಿವೆ. ಕಂಬಗಳ ಮೇಲೆ ಸುಂದರ ಕೆತ್ತನೆಗಳಿವೆ. ನವರಂಗದ ಇಕ್ಕೆಲಗಳಲ್ಲಿ ದ್ವಾರವೊಂದಕ್ಕೆ 2 ರಂತೆ ಇನ್ನೂ 4 ಕಂಬಗಳಿವೆ. ಒಟ್ಟು 16 ಅದ್ಭುತ ಕಲ್ಲಿನ ಕಂಬಗಳ ದೇವಾಲಯ ಇದು. ಈ ಕಂಬಗಳಲ್ಲಿ ನಮ್ಮ ಪ್ರತಿಬಿಂಬ ನೇರವಾಗಿಯೂ ಮತ್ತು ತಲೆಕೆಳಗಾಗಿಯೂ ಕಾಣಿಸುತ್ತದೆ. ಇದು ಇಲ್ಲಿನ ವಿಶೇಷ.

ಸುಖನಾಸಿಯ ಚಾವಣಿಯಲ್ಲಿ ಸುಮಾರು 400 ದಳಗಳಿರುವ ಕಮಲದ ಕೆತ್ತನೆ ಇದೆ. ಇಂಥ ಕಮಲದ ಹೂವಿನ ಕೆತ್ತನೆ ಕೈಟಭೇಶ್ವರ ದೇವಸ್ಥಾನ ಮತ್ತು ಹಾನಗಲ್ಲಿನ ತಾರಕೇಶ್ವರ ದೇವಾಲಯಗಳಲ್ಲಿ ಮಾತ್ರ ಇದೆಯಂತೆ. ಕಮಲದ ಕೆತ್ತನೆ ಚಾಲುಕ್ಯ ಶೈಲಿಯ ಸಂಕೇತವಂತೆ.

ಹೀಗಾಗಿ ದೇವಾಲಯದ ಒಳಗಿನ ಸ್ತಂಭಗಳು, ಮೂರ್ತಿಗಳು, ನಕಾಶೆ ಮತ್ತು ವಾಸ್ತು ಶೈಲಿಯು ಚಾಲುಕ್ಯ ಶೈಲಿಯ ದೇವಾಲಯಗಳನ್ನು ಹೋಲುತ್ತದೆ. ಹೊರಗಿನ ವಾಸ್ತುಶಿಲ್ಪಗಳನ್ನು ಗಮನಿಸಿದಾಗ ಹೊಯ್ಸಳ ಶೈಲಿ ಕಾಣಿಸುತ್ತದೆ.

ಮುಖಮಂಟಪದ ಆಸುಪಾಸಿನಲ್ಲೇ ಹೆಚ್ಚಾಗಿ ನಂದಿಯ ಮೂರ್ತಿ ಇರುತ್ತದೆ. ಇಲ್ಲಿ ಮುಖಮಂಟಪದಲ್ಲೇ ನಂದಿಮೂರ್ತಿ ಇದೆ. ಬೇರೆ ದೇವಾಲಯಗಳಿಗೆ ಹೋಲಿಸಿದರೆ ಈ ನಂದಿಮೂರ್ತಿ ಬಹಳ ಚಿಕ್ಕದು. ಬಹಳ ಹಿಂದೆ ಮೂಲ ಮೂರ್ತಿಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದರಿಂದ, ಈಗಿರುವ ಸಣ್ಣ ನಂದಿಯನ್ನು ಹೊಸದಾಗಿ ಪ್ರತಿಷ್ಠಾಪಿಸಲಾಗಿದೆ.

ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆ ಕೈಟಭೇಶ್ವರ ದೇವಾಲಯದ ಮುಂಭಾಗದಲ್ಲಿ ಉತ್ಖನನ ಮಾಡುತ್ತಿರುವಾಗ ನೆಲ ಮಟ್ಟಕ್ಕಿಂತ ಕೆಳಗಿರುವ ಒಂದು ಸಣ್ಣ ದೇವಾಲಯವ ಪತ್ತೆಯಾಗಿದೆ. ಆ ದೇವಾಲಯ ವೀಕ್ಷಣೆಗೂ ಅವಕಾಶವಿದೆ. ಗುಂಡಿಯಲ್ಲಿ ಇಳಿದು ಪ್ರದಕ್ಷಿಣೆ ಹಾಕಬಹುದು.

ಕೋಟಿಪುರ
ಕೋಟಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT