ಅಲ್ಲಲ್ಲಿ ಕಡೆದು ಕೂರಿಸಿದಂತಿರುವ ಕುರುಚಲು ಕಾಡಿನ ಗುಡ್ಡಗಳು. ದೃಷ್ಟಿ ಹಾಯಿಸಿದತ್ತೆಲ್ಲಾ ಕಾಣುವ ಹಸಿರು ಸಿರಿ. ಕಣ್ಮನ ತಣಿಸುವ ಜಲರಾಶಿ. ಏರಿ ಮೇಲೆ ನಿಂತು ಜಲಧಾರೆಯನ್ನು ಕಣ್ತುಂಬಿಕೊಳ್ಳುವಾಗ, ಸುಯ್ ಎಂದು ತಣ್ಣಗೆ ಬೀಸುವ ತಂಗಾಳಿಯ ರೋಮಾಂಚನ...
ಹಸಿರು ಹೊದ್ದ ಪ್ರಕೃತಿಯ ಮಡಿಲಲ್ಲಿರುವ ನೀರಸಾಗರ ಜಲಾಶಯದ ತೀರದಲ್ಲಿ ನಿಂತಾಗ ಸಿಗುವ ಹಿತಕರ ಅನುಭವವಿದು.
ಅರೆ ಮಲೆನಾಡು ಕಲಘಟಗಿ ತಾಲ್ಲೂಕಿನಲ್ಲಿರುವ ನೀರಸಾಗರ, ಧಾರವಾಡ ಜಿಲ್ಲೆಯ ಮಳೆಗಾಲದ ಆಕರ್ಷಣಾ ಕೇಂದ್ರ. ಸತತ ಮಳೆಗೆ ಮೈದುಂಬಿರುವ ಜಲಾಶಯ ಈಗ ಕೋಡಿ ಹರಿಯುತ್ತಿದೆ. ದುಮ್ಮಿಕ್ಕುವ ನೀರಿನ ಸೊಬಗನ್ನು ಸವಿಯಲು ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಐದಾರು ವರ್ಷದಿಂದ ಒಡಲು ಬರಿದು ಮಾಡಿಕೊಂಡು ಸೊರಗಿದ್ದ ನೀರಸಾಗರಕ್ಕೆ, ಕಳೆದ ಎರಡು ವರ್ಷದಿಂದ ವಿಶೇಷ ಕಳೆ ಬಂದಿದೆ. ಮನಸ್ಸಿಗೆ ಮುದ ನೀಡುವ ಇಲ್ಲಿನ ಜಲಸೌಂದರ್ಯ ಕಂಡವರು ಮೂಕ ವಿಸ್ಮಿತರಾಗುವುದು ಖಚಿತ. ಜಲಾಶಯದ ಒಡಲು ಪ್ರಶಾಂತವಾಗಿ ನಿದ್ರಿಸುತ್ತಿರುವಂತೆ ಭಾಸವಾದರೆ, ಬೋರ್ಗಲ್ಲುಗಳ ಮಧ್ಯೆ ಹರಿಯುವ ಕೋಡಿ ನೀರು ಜಲಪಾತದ ರೋಮಾಂಚನ ನೀಡುತ್ತದೆ. ನಯನ ಮನೋಹರವಾದ ಈ ತಾಣ, ಅವಳಿನಗರ ಹುಬ್ಬಳ್ಳಿ ಮತ್ತು ಧಾರವಾಡದಿಂದ 19 ಕಿಲೋಮಿಟರ್ ದೂರದಲ್ಲಿದೆ.
ಬರಗಾಲದಿಂದಾಗಿ ದಶಕಗಳ ಹಿಂದೆ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಯಿತು. ಆಗ ಪರಿಹಾರವಾಗಿ ಕಂಡದ್ದು ಬೇಡ್ತಿಹಳ್ಳ. 1955ರಲ್ಲಿ ಇದಕ್ಕೆ ಅಣೆಕಟ್ಟೆ ನಿರ್ಮಿಸಲಾಯಿತು. ಎರಡು ಹಂತದಲ್ಲಿ ಅಭಿವೃದ್ಧಿಗೊಂಡ ಇದರ ಸಾಮರ್ಥ್ಯ 1.02 ಟಿಎಂಸಿ ಅಡಿ. ಜಲಾಶಯದ ಗರಿಷ್ಠ ಮಟ್ಟ 38 ಅಡಿ ಆಗಿದ್ದು, ನೀರು ಸಂಗ್ರಹ ಪ್ರದೇಶದ ವಿಸ್ತೀರ್ಣ 1087 ಚದರ ಕಿಲೋಮೀಟರ್. ಇಂದಿಗೂ ಹುಬ್ಬಳ್ಳಿಯ ಶೇ 25ರಷ್ಟು ಪ್ರದೇಶಕ್ಕೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಜನಾಕರ್ಷಣೆಯ ನೀರಸಾಗರ ರಾಜ್ಯದ ಇತರ ಜಲಾಶಯಗಳ ಮಾದರಿಯಂತೆ ಅಭಿವೃದ್ಧಿಯಾಗಿಲ್ಲ. ಜಿಲ್ಲೆಯ ಪ್ರಮುಖ ಪ್ರವಾಸ ಸ್ಥಳಗಳಲ್ಲೂ ನೀರಸಾಗರದ ಹೆಸರಿಲ್ಲ. ಬಾಯಿಮಾತಿನ ಪ್ರಚಾರವೇ ಪ್ರವಾಸಿಗರಿಗೆ ಮಾರ್ಗದರ್ಶಿ. ಪ್ರವಾಸ ಸ್ಥಳವೊಂದರಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಹೋಟೆಲ್‌ಗಳು, ಅಂಗಡಿಗಳು ಹಾಗೂ ಸುಸಜ್ಜಿತ ಉದ್ಯಾನವೂ ಇಲ್ಲಿಲ್ಲ. ಆದರೆ, ಇಲ್ಲಿನ ಪರಿಸರ ಯಾವ ಉದ್ಯಾನಕ್ಕೂ ಕಮ್ಮಿ ಇಲ್ಲ. ಏರಿಯ ಎರಡೂ ಕಡೆ ಹುಲುಸಾಗಿ ಬೆಳೆದಿರುವ ಹುಲ್ಲು, ತೀರದ ಮೇಲಿನ ನಡಿಗೆ,ಜಲಾಶಯಕ್ಕೆ ಹೊಂದಿಕೊಂಡಂತಿರುವ ವಿಶಾಲವಾದ ಜಾಗದಲ್ಲಿ ತಂಗಾಳಿ ಸೂಸುವ ಮರಗಳು, ಯಾವುದೇ ಕೊರತೆ ಕಾಡದಂತೆ ಪ್ರವಾಸಿಗರಿಗೆ ಮುದ ನೀಡುತ್ತವೆ.
ಹಾಗಾಗಿಯೇ ಈ ಜಾಗಕ್ಕೆ ಯುವಜನರಷ್ಟೇ ಅಲ್ಲದೆ, ಕುಟುಂಬ ಸಮೇತರಾಗಿ ವಾಹನಗಳಲ್ಲಿ ಬರುವವರ ಸಂಖ್ಯೆಯೂ ಹೆಚ್ಚು. ಮನಸೋ ಇಚ್ಛೇ ಜಲಾಶಯವನ್ನು ಕಣ್ತುಂಬಿಕೊಳ್ಳುವ ಮಂದಿ, ಕೋಡಿ ನೀರಿನಲ್ಲಿ ಆಟವಾಡುತ್ತಾರೆ. ಅಚ್ಚಳಿಯದ ನೆನಪುಗಳನ್ನು ಕ್ಯಾಮೆರಾ ಮತ್ತು ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಳ್ಳುತ್ತಾರೆ. ನಂತರ, ತಂದಿರುವ ತಿನಿಸುಗಳನ್ನು ಮರಗಳ ಕೆಳಗಿನ ಹಸಿರು ಹುಲ್ಲಿನ ಮೇಲೆ ಕುಳಿತು ಸವಿಯುತ್ತಾರೆ.
ಬೃಂದಾವನ ಮಾದರಿ ಅಭಿವೃದ್ಧಿ
ನೀರಸಾಗರವನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಜನಪ್ರತಿನಿಧಿಗಳು ಇದಕ್ಕೆ ದನಿಗೂಡಿಸಿದರೂ ಇಲ್ಲಿಯವರೆಗೂ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಇತ್ತೀಚೆಗೆ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಮತ್ತೊಮ್ಮೆ ನೀರಸಾಗರ ಅಭಿವೃದ್ಧಿಗೊಳಿಸುವ ಮಾತನ್ನಾಡಿದ್ದಾರೆ.
‘ಜಲಾಶಯದ ಸುತ್ತಮುತ್ತ ಖಾಲಿ ಇರುವ ಸುಮಾರು 300 ಎಕರೆ ಜಾಗವನ್ನು ಮೈಸೂರಿನ ಬೃಂದಾವನದ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಇದರಿಂದ ಈ ಭಾಗದ ಜನರ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗುತ್ತದೆ’ ಎಂದಿದ್ದಾರೆ. ಅಲ್ಲದೆ ಈ ಕುರಿತು ವರದಿ ತಯಾರಿಸುವಂತೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೂ ಸೂಚಿಸಿದ್ದಾರೆ.
‘ಉಸ್ತುವಾರಿ ಸಚಿವರ ಸೂಚನೆಯಂತೆ ನೀರಸಾಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ವಿಸೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಅಂದುಕೊಂಡಂತೆ ಎಲ್ಲವೂ ಆದರೆ, ನೀರಸಾಗರ ಜಲಾಶಯ ಈ ಭಾಗದ ಮತ್ತೊಂದು ಬೃಂದಾವನ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎನ್ನುತ್ತಾರೆ ಜಲಮಂಡಳಿಯ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ಸುರೇಶ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.