ಭಾನುವಾರ, ಜೂನ್ 26, 2022
28 °C

ಕೆನಾಲ್ ಸಿಟಿ ಸುತ್ತುತ್ತಾ..

ಜಿ.ನಾಗೇಂದ್ರ ಕಾವೂರು Updated:

ಅಕ್ಷರ ಗಾತ್ರ : | |

Prajavani

ನೆದರ್‌ಲೆಂಡ್‌ನ ದಕ್ಷಿಣ ಹಾಲೆಂಡ್‌ನಲ್ಲಿರುವ ‌ಡೆಲ್ಫ್ಟ್(Delft) ಕೇವಲ 23 ಚದರ ಕಿ.ಮೀ ಭೂಪ್ರದೇಶವಿರುವ ತಾಣ. ಆದರೂ ಶತಮಾನಗಳ ಇತಿಹಾಸವಿರುವ ‘ಬ್ಲೂ ಪಾಟರಿ’ಗೆ ಪ್ರಸಿದ್ಧಿಯಾಗಿದೆ. ಇಲ್ಲಿರುವ ಆಕರ್ಷಕ ಕೆನಾಲ್‌(ಕಾಲುವೆ)ಗಳು ಹಾಗೂ ಹಲವು ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಯೂರೋಪ್ ಪ್ರವಾಸ ಮಾಡಿದ ದಿನಗಳಲ್ಲಿ ನಾವಿದ್ದ ಹೇಗ್‌ನ (ಡಚ್: ಡೆನ್ ಹಾಗ್) ಸ್ಕೆವೇನಿನ್ ( ಡಚ್: Scheveningen) ಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿದ್ದ 'ಡೆಲ್ಫ್ಟ್' ನಗರವನ್ನು ಎರಡು ಬಾರಿ ನೋಡುವ ಅವಕಾಶ ಒದಗಿ ಬಂದಿತು.

ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಸೈನ್ಸ್ ಮ್ಯೂಸಿಯಂ, ಬ್ಲೂ ಪಾಟರಿ ಕಾರ್ಖಾನೆಗಳು, ನಗರದ ಮಧ್ಯಭಾಗದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳು, ಆಕರ್ಷಕ ಹೂವುಗಳನ್ನು ಬೆಳೆಸಲಾಗಿರುವ ಹೂವಿನ ಕುಂಡಗಳಿಂದ ಅಲಂಕರಿಸಿದ್ದ ಸೇತುವೆಗಳು, ವಿದ್ಯುತ್ ಕಂಬಗಳು, ಹಳೆಯ ಮತ್ತು ಹೊಸ ಚರ್ಚ್‌ಗಳು ಇಲ್ಲಿಯ ಪ್ರಮುಖ ಆಕರ್ಷಣೆಗಳು. ಡಚ್ ಸಂಸ್ಕೃತಿ ಮತ್ತು ಕಲೆಗಳ ಮೇಲೆ ಬೆಳಕು ಚೆಲ್ಲುವ ಈ ಎರಡೂ ಚರ್ಚ್‌ಗಳು ಪ್ರವಾಸಿಗರನ್ನು ದೂರದಿಂದಲೇ ಆಕರ್ಷಿಸುತ್ತವೆ.

ಬ್ಲೂ ಪಾಟರಿ

16ರಿಂದ18 ನೇ ಶತಮಾನಗಳ ನಡುವೆ ಡೆಲ್ಫ್ಟ್‌ನಲ್ಲಿ 33 ಕುಂಬಾರಿಕೆ ಕಾರ್ಖಾನೆಗಳಿದ್ದವಂತೆ. ಈಗ ಬೆರಳೆಣಿಕೆಯಷ್ಟಿವೆ. ಅವುಗಳಲ್ಲಿ ‘ರಾಯಲ್ ಡೆಲ್ಫ್ಟ್' ಕಾರ್ಖಾನೆ ಹೆಸರುವಾಸಿಯಾಗಿದೆ. ನಿಗದಿತ ಶುಲ್ಕ ಪಾವತಿಸಿ ಕಾರ್ಖಾನೆಯಲ್ಲಿ ಪಿಂಗಾಣಿ ಪಾತ್ರೆಗಳ ತಯಾರಿ ವಿಧಾನವನ್ನು ವೀಕ್ಷಿಸಬಹುದು. ಮತ್ತೊಂದು ಪಾಟರಿ ಕಾರ್ಖಾನೆ ‘ಡೆಲ್ಫ್ಟ್ ಪಾವ್’(Delft Pauw)ನಲ್ಲಿಯೂ ಸಹ ಪಿಂಗಾಣಿ ಪಾತ್ರೆಗಳ ತಯಾರಿಕೆಯನ್ನು, ಮಣ್ಣು ಕಲಸುವಾಗಿನಿಂದ ತಯಾರಾಗುವವರೆಗಿನ ಹಲವು ಹಂತಗಳನ್ನು ಕಂಪೆನಿಯ ಸಿಬ್ಬಂದಿ ವಿವರಿಸುತ್ತಾರೆ. ಪ್ರವೇಶ ಶುಲ್ಕ ನೀಡದೆ ಪ್ರವಾಸಿಗರು ವೀಕ್ಷಿಸಬಹುದು.
‘ಡೆಲ್ಫ್ಟ್ ಪಾವ್’ ಕಾರ್ಖಾನೆಯಲ್ಲಿ ಸುಮಾರು 45 ನಿಮಿಷಗಳ ಅವಧಿಯಲ್ಲಿ ಪಿಂಗಾಣಿ ವಸ್ತುಗಳ ತಯಾರಿಕೆಯ ಎಲ್ಲಾ ಹಂತಗಳನ್ನು ವೀಕ್ಷಿಸಿದೆವು. ಪಿಂಗಾಣಿ ವಸ್ತುಗಳ ಮೇಲಿನ ವಿನ್ಯಾಸಗಳನ್ನು ಕೈಗಳಿಂದಲೇ ರಚಿಸುವ ವೃತ್ತಿಪರ ವರ್ಣ ಚಿತ್ರಕಾರರ ಕಲಾ ನೈಪುಣ್ಯತೆಗೆ ಎಂತಹವರೂ ತಲೆದೂಗಲೇಬೇಕು.

ಪ್ರಾಚೀನ ವಸ್ತುಗಳ ಮಾರಾಟ

ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ ಪ್ರತಿ ಗುರುವಾರ ಹಾಗೂ ಶನಿವಾರ ನ್ಯೂ ಚರ್ಚ್ ಮುಂಭಾಗದಲ್ಲಿ ಹಾಗೂ ಕೆಲವು ಕೆನಾಲ್‌ಗಳ ಅಕ್ಕ ಪಕ್ಕ ಪ್ರಾಚೀನ ವಸ್ತುಗಳ ಮಾರಾಟ ನಡೆಯುತ್ತದೆ. ಹಳೆಯ ಕಾಲದ ಪೆನ್ನುಗಳು, ಗೃಹೋಪಯೋಗಿ ವಸ್ತುಗಳು, ಗಡಿಯಾರಗಳು, ನಾಣ್ಯ, ನೋಟುಗಳು,ಅಲಂಕಾರಿಕ ವಸ್ತುಗಳು ಹೀಗೆ ಇಲ್ಲಿ ಮಾರಾಟ ಮಾಡದ ವಸ್ತಗಳೇ ಇಲ್ಲವೆನ್ನಬಹುದು. 17 ನೇ ಶತಮಾನದ ಕಲಾತ್ಮಕ 'ಡೆಲ್ಫ್ಟ್ ಬ್ಲೂ' ಪಿಂಗಾಣಿ ಪಾತ್ರೆಗಳನ್ನು ಖರೀದಿಸುವಲ್ಲಿ ಜನರು ಹೆಚ್ಚು ಆಸಕ್ತಿ ತೋರಿಸುತ್ತಾರೆ.

ಓಲ್ಡ್ ಚರ್ಚ್ –ನ್ಯೂ ಚರ್ಚ್‌

246 ಅಡಿ ಎತ್ತರದ ಗೋಪುರ ಹೊಂದಿರುವ ಈ ಚರ್ಚ್‌ ಅನ್ನು 1050ರಲ್ಲಿ ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮೊದಲಿಗೆ ಸೇಂಟ್ ಹಿಪ್ಪೋಲೈಟಿಸ್ ಚರ್ಚ್ ಎಂದು ನಾಮಕರಣ ಮಾಡಲಾಗಿತ್ತು. 13ನೇ ಶತಮಾನದಲ್ಲಿ ಸೇಂಟ್ ಬಾರ್ಥೋಲೋಮೆನ್ ಚರ್ಚ್‌ ಎಂದು ಮರು ನಾಮಕರಣ ಮಾಡಲಾಯಿತು. ಪ್ರಸ್ತುತ ಈ ಚರ್ಚ್ ಡಚ್ ಪರಂಪರೆಯ ಹೆಗ್ಗುರುತಾಗಿದೆ. ಒಳಾಂಗಳದಲ್ಲಿರುವ ಸ್ತಂಭಗಳು ಹಾಗೂ ಕಮಾನುಗಳು ಆಕರ್ಷಕವಾಗಿವೆ. 9 ಟನ್ ತೂಕದ ಚರ್ಚ್ ಗಂಟೆಯನ್ನು ರಾಜಮನೆತನದವರು ಕೊಡುಗೆಯಾಗಿ ನೀಡಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಉಪಯೋಗಿಸುತ್ತಾರೆ. ನಾವು ಈ ಚರ್ಚ್‌ಗೆ ಭೇಟಿ ನೀಡಿದಾಗ, ಚರ್ಚ್‌ನ ಕೆಲವು ಭಾಗಗಳ ನವೀಕರಣ ನಡೆಯುತ್ತಿತ್ತು.

ಇಲ್ಲಿನ ನ್ಯೂ ಚರ್ಚ್ ಕೂಡ ಗೋಥಿಕ್‌ ಶೈಲಿಯಲ್ಲಿ ನಿರ್ಮಾಣವಾಗಿದೆ. ಇದು ಪ್ರೊಟೆಸ್ಟೆಂಟ್ ಚರ್ಚ್. ಮಾರ್ಕೆಟ್ ಸ್ಕ್ವೇರ್ ಬಳಿ, ಸಿಟಿ ಹಾಲ್ ಎದುರು ಇದೆ. 1496ರಲ್ಲಿ ನಿರ್ಮಿಸಲ್ಪಟ್ಟ ಈ ಚರ್ಚ್‌ನ ಗೋಪುರ 357 ಅಡಿ ಎತ್ತರವಿದ್ದು, ನೆದರ್‌ಲ್ಯಾಂಡ್‌ನ ಎರಡನೇ ಅತಿ ಎತ್ತರದ ಗೋಪುರವೆಂಬ ಹೆಗ್ಗಳಿಕೆ ಪಾತ್ರವಾಗಿದೆ.

ಗಂಟೆಗಳ ಗೋಪುರ

ನ್ಯೂ ಚರ್ಚ್ ಗೋಪುರವು ಸಾಲು ಗಂಟೆಗಳಿಂದಾಗಿಯೇ ಹೆಚ್ಚು ಆಕರ್ಷಕವಾಗಿದೆ. ಗೋಪುರದಲ್ಲಿರುವ ಯಾಂತ್ರಿಕ ಗಡಿಯಾರಕ್ಕೆ (Mechanical Clock) 48 ಗಂಟೆಗಳನ್ನು ಅಳವಡಿಸಲಾಗಿದೆ. 1662 ರಲ್ಲಿ ನಿರ್ಮಿಸಲಾದ 104 ಸೆಂಟಿ ಮೀಟರ್ ವ್ಯಾಸದ ದೊಡ್ಡ ಗಂಟೆಯನ್ನೂ ಈ ಗೋಪುರದಲ್ಲಿ ನೋಡಬಹುದು. ಮಿಕ್ಕುಳಿದಂತೆ ಉಪಯೋಗಿಸದ 20 ಗಂಟೆಗಳೂ ಸಹ ಗೋಪುರದಲ್ಲಿವೆ.

ಪ್ರಿನ್ಸೆನ್‍ಹಾಫ್ ಮ್ಯೂಸಿಯಂ

ಡಚ್ ರಿಪಬ್ಲಿಕ್‌ನ ಇತಿಹಾಸ, 17 ನೇ ಶತಮಾನದ ಕಲೆ, ಸಂಸ್ಕೃತಿ, ಆರೆಂಜ್‌ನ ರಾಜಾ ವಿಲಿಯಂನ ಇತಿಹಾಸ ಹಾಗೂ ಡೆಲ್ಫ್ಟ್ ಸಂಪ್ರದಾಯದ ‘ಡೆಲ್ಫ್ಟ್ ಪಾಟರಿ’ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳ ಬಯಸುವವರು ಈ ಮ್ಯೂಸಿಯಂಗೆ ಭೇಟಿನೀಡಿದರೆ ಸಾಕಷ್ಟು ಮಾಹಿತಿ ಲಭಿಸುತ್ತದೆ. ಡೆಲ್ಫ್ಟ್ರ್‌ನ ಕಲಾಕಾರರ, ವಿಜ್ಞಾನಿಗಳ ಮೇರುಕೃತಿಗಳನ್ನು ಇಲ್ಲಿ ಕಣ್ತುಂಬಾ ನೋಡಬಹುದು. ರಾಜ ವಿಲಿಯಂ ಕೊಲೆಮಾಡಲ್ಪಟ್ಟ ಸ್ಥಳ ಹಾಗೂ ಬುಲೆಟ್‌ಗಳಿಂದ ಉಂಟಾದ ರಂಧ್ರಗಳನ್ನೂ ಸಹ ನೋಡಬಹುದು. ಓಲ್ಡ್ ಚರ್ಚ್ ಹತ್ತಿರವಿರುವ ಈ ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಕನಿಷ್ಠ 5 ಗಂಟೆ ಸಮಯ ಹಿಡಿಯುತ್ತದೆ.

ಪೂರ್ವ ಹೆಬ್ಬಾಗಿಲು: ಸಂಪೂರ್ಣವಾಗಿ ಇಟ್ಟಿಗೆಗಳನ್ನು ಬಳಸಿ 1400 ರಲ್ಲಿ ನಿರ್ಮಿಸಲಾಗಿರುವ ಈ ಹೆಬ್ಬಾಗಿಲು, ಉತ್ತರ ಯೂರೋಪಿನ ಗೋಥಿಕ್ ಶೈಲಿಯ ವಾಸ್ತು ಶಿಲ್ಪಕ್ಕೆ ಸಾಕಿಯಾಗಿದ್ದು ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿರುವ ಹಳೆ ನಗರದ ಏಕೈಕ ಹೆಬ್ಬಾಗಿಲು ಇದಾಗಿದೆ.

ಕೆನಾಲ್ ಕ್ರೂಸ್‌

ಬೋಟ್ ಹಾಗೂ ಕೆನಾಲ್‌ಗಳು ಡಚ್ಚರ ಜೀವನದ ಅವಿಭಾಜ್ಯ ಅಂಗಗಳು. ಮೂಲ ಉದ್ದೇಶವಾದ ಸರಕು ಸಾಗಾಣಿಕೆಗೆ ಇಂದಿಗೂ ಮುಂದುವರಿದಿದೆ. ನಾವು ಸುಮಾರು ಒಂದು ಗಂಟೆಯ 'ಕೆನಾಲ್ ಕ್ರೂಸ್’ನಲ್ಲಿ ನಗರದ ಅಂದವನ್ನು ಸವಿಯುವುದರೊಂದಿಗೆ ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕಟ್ಟಡಗಳ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆವು. ನಮ್ಮ ಗೈಡ್ ಡಚ್ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ನೀಡಿದ ಮಾಹಿತಿಯಿಂದ ಅಲ್ಪ ಸ್ವಲ್ಪ ತಿಳಿದುಕೊಳ್ಳುವಂತಾಯ್ತು.

ಸೈಕಲ್ ಪ್ರಿಯರು

ನೆದರ್‌ಲೆಂಡ್‌ನ ಎಲ್ಲ ನಗರಗಳಲ್ಲಿ ಜನರು ಹೆಚ್ಚಾಗಿ ಬೈಸಿಕಲ್‌ಗಳನ್ನು ಉಪಯೋಗಿಸುತ್ತಾರೆ. ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಆದಷ್ಟು ಕಡಿಮೆ. ಪಿಕ್‌ನಿಕ್, ಹತ್ತಿರದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಸೈಕಲ್‌ಗಳನ್ನೇ ಬಳಸಲು ಇಚ್ಛಿಸುತ್ತಾರೆ. ರಸ್ತೆಯಲ್ಲಿ ಸೈಕಲ್ ಸವಾರರಿಗೆಂದೇ ಪ್ರತ್ಯೇಕ ಪಥವನ್ನು ನಿರ್ಮಿಸಿರುತ್ತಾರೆ. ಒಟ್ಟಿಗೆ ಇಬ್ಬರು ಸವಾರರು ಸೈಕಲ್ ಚಾಲನೆ ಮಾಡುವಂತೆ, ಎರಡು ಸೀಟುಗಳುಳ್ಳ ಸೈಕಲ್‌ಗಳಲ್ಲಿ ದಂಪತಿ ತಿರುಗಾಡುವುದನ್ನು ನಾವಿಲ್ಲಿ ನೋಡಿದೆವು. ನಾಲ್ಕು ನೀರಿನ ಬಾಟಲ್‌ಗಳನ್ನು ಇಡಲು ಪ್ರತ್ಯೇಕ 'ಬಾಟಲ್ ಹೋಲ್ಡರ್'ಗಳು ಈ ಸೈಕಲ್ ಗಳಲ್ಲಿ ಇರುತ್ತವೆ.

ಇದನ್ನೂ ಓದಿ: 'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ

ಡೆಲ್ಫ್ಟ್ರ್‌ನಲ್ಲಿ ಸಾರ್ವಜನಿಕ ಸಾರಿಗೆ ಚೆನ್ನಾಗಿದೆ. ಸಮಯಪಾಲನೆಗೆ ಆದ್ಯತೆ ನೀಡುತ್ತಾರೆ. ಬಸ್, ಟ್ರಾಮ್‌ಗಳ ಮೂಲಕ ಡೆಲ್ಫ್ಟ್ ನಗರದಲ್ಲಿರುವ ಪ್ರವಾಸಿ ತಾಣಗಳನ್ನು ವೀಕಿಸಬಹುದು. ಪ್ರತಿಯೊಬ್ಬರ ಬಜೆಟ್‌ಗೆ ತಕ್ಕಂತಹ ಹೋಟಲ್‌ಗಳೂ ಇಲ್ಲಿವೆ. ಎಲ್ಲಾ ಚರ್ಚ್ ಹಾಗೂ ಮ್ಯೂಸಿಯಂಗಳನ್ನು ವೀಕ್ಷಿಸಲು ಪ್ರವೇಶ ಶುಲ್ಕವಿರುತ್ತದೆ. ನೆದರ್‌ಲೆಂಡ್‌ ಮ್ಯೂಸಿಯಂ ಕಾರ್ಡ್‌ ಹೊಂದಿರುವವರು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಚಿತ್ರಗಳು: ಲೇಖಕರವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು