ಗುರುವಾರ , ಅಕ್ಟೋಬರ್ 6, 2022
26 °C

ಮಂಗೋಲಿಯಾ ತಿರುಗಾಟ

ಹರೀಶ್ ಸೋಮಯಾಜಿ Updated:

ಅಕ್ಷರ ಗಾತ್ರ : | |

Prajavani

ಪೂರ್ವ ಏಷ್ಯಾ ಭಾಗದಲ್ಲಿರುವ ಮಂಗೋಲಿಯಾ ದೇಶಕ್ಕೆ ಪ್ರವಾಸ ಹೊರಟೆ. ಹೀಗೆಂದು ಹೇಳಿದಾಗ, ಕೆಲವರು ‘ಆ ದೇಶ ಎಲ್ಲಿದೆ? ಅಲ್ಲಿಗೆ ಯಾಕೆ ಹೋಗುತ್ತೀರಿ’ ಎಂಬಂತಹ ವಿಚಿತ್ರ ಪ್ರಶ್ನೆಗಳನ್ನು ಕೇಳಿದರು. ‘ಹುಷಾರು’ ಎಂಬ ಉಚಿತ ಸಲಹೆಗಳನ್ನು ಕೊಟ್ಟರು. ಅವೆಲ್ಲವನ್ನೂ ಬದಿಗಿಟ್ಟು, ಮಂಗೋಲಿಯಾಕ್ಕೆ ಹೊರಟೆ.‌

ಈ ಮಂಗೋಲಿಯಾ, ಚೀನಾ ಮತ್ತು ರಷ್ಯಾ ನಡುವಿರುವ ತೀರ ಪ್ರದೇಶವಿಲ್ಲದ ಪುಟ್ಟ ರಾಷ್ಟ್ರ. ಇದನ್ನು ‘ಲ್ಯಾಂಡ್ ಲಾಕ್ಡ್‌ ಕಂಟ್ರಿ‘ ಎನ್ನುತ್ತಾರೆ.

ನಾನು, ಬೆಂಗಳೂರಿನಿಂದ ವಿಮಾನ ಏರಿ ಹಾಂಕಾಂಗ್‌ಗೆ ಹೋದೆ. ಅಲ್ಲಿಂದ ಮಂಗೋಲಿಯಾ ಏರ್‌ವೇಸ್ ಮೂಲಕ ಒಂದು ಗಂಟೆ ‍ಪ್ರಯಾಣದ ನಂತರ ರಾಜಧಾನಿ ಉಲಾನ್‌ ಬಾತರ್(Ulaanbaatar)ನಲ್ಲಿರುವ ಚೆಂಗಿಸ್ಕಾನಿ ವಿಮಾನ ನಿಲ್ದಾಣ ತಲುಪಿದೆ. ಇಮಿಗ್ರೇಷನ್ ಪ್ರಕ್ರಿಯೆ ಮುಗಿಸಿ, ಹೊರಗೆ ಬಂದೆ. ಮೊದಲೇ ಬುಕ್‌ ಮಾಡಿದ್ದ ಗೆಸ್ಟ್‌ಹೌಸ್‌ ಕಡೆಯ ಕಾರು ಚಾಲಕ ಕಾಯುತ್ತಿದ್ದ. ಏರ್‌ಪೋರ್ಟ್‌ನಲ್ಲೇ ಕರೆನ್ಸಿ ಬದಲಿಸಿಕೊಂಡು ಕಾರಲ್ಲಿ ಹೊರಟೆ.

ಬೆಂಗಳೂರಿಂದಲೇ ಆನ್‌ಲೈನ್‌ ಮೂಲಕ ಕಡಿಮೆ ಬಜೆಟ್‌ನ ಗೆಸ್ಟ್‌ಹೌಸ್‌ ಹುಡುಕಿ ಬುಕ್ ಮಾಡಿದ್ದೆ. ಒಂದು ದಿನಕ್ಕೆ  $10ಗೆ(ಅಂದಾಜು ರೂ 700) ಒಂದು ರೂಮು, ಬೆಳಗಿನ ಉಪಹಾರ ಜತೆಗೆ ಉಚಿತ ವೈಫೈ ಸೌಲಭ್ಯವಿರುವ ಗೆಸ್ಟ್‌ಹೌಸ್ ಅದು. ಬಹಳ ಸ್ವಚ್ಛವಾಗಿತ್ತು.

ಎರಡು ರೀತಿ ಪ್ರವಾಸಿಗರು

ಮಂಗೋಲಿಯಾಗೆ ಎರಡು ವರ್ಗದ ಪ್ರವಾಸಿಗರು ಬರುತ್ತಾರೆ. ಈ ದೇಶ ನೋಡಲೆಂದೇ ಬರುವ ಪ್ರವಾಸಿಗರು ಒಂದು ವರ್ಗ. ರಷ್ಯಾದಿಂದ ಮಂಗೋಲಿಯಾ ಮಾರ್ಗವಾಗಿ ಚೀನಾಕ್ಕೆ ಟ್ರಾನ್ಸ್‌ ಸೈಬೇರಿಯನ್ ರೈಲಿನ ಮೂಲಕ ಪ್ರಯಾಣ ಮಾಡುವವರು ಇನ್ನೊಂದು ವರ್ಗ. ಇತ್ತೀಚೆಗೆ ಎರಡನೇ ವರ್ಗದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಾನಿದ್ದ ಗೆಸ್ಟ್‌ಹೌಸ್‌ನಲ್ಲಿದ್ದ ಸುಮಾರಷ್ಟು ಯೂರೋಪಿಯನ್ನರು ಇಂಥ ಪ್ರವಾಸಿಗರೇ ಆಗಿದ್ದರು.

ಬೇರೆ ಕಡೆಗೆ ಹೋಲಿಸಿದರೆ ಮಂಗೋಲಿಯಾದಲ್ಲಿ ಪ್ರವಾಸಿ ತಾಣಗಳು ಬಹಳ ಕಡಿಮೆ. ಆದರೆ ಮಂಗೋಲಿಯನ್‌ರ ಅಲೆಮಾರಿ ಜೀವನ ಹಾಗೂ ಸಂಸ್ಕೃತಿ ಅಧ್ಯಯನ ಮಾಡಲು ಆಸಕ್ತಿ ಇರುವವರಿಗೆ ಇಲ್ಲಿ ಉತ್ತಮ ಅವಕಾಶಗಳಿವೆ.

ರಾಜಧಾನಿಯಲ್ಲಿ ಒಂದು ಸಂಜೆ

ಉಲಾನ್‌ಬಾತರ್‌ನಲ್ಲಿ ವಾಹನ ದಟ್ಟಣೆ ಕಡಿಮೆ. ಆದರೆ, ಇರುವಂತಹ ವಾಹನ ದಟ್ಟಣೆಯನ್ನೇ ಅಲ್ಲಿಯವರು ಟ್ರಾಫಿಕ್ ಜಾಮ್ ಎಂದು ಬೊಬ್ಬೆ ಹೊಡೆಯುತ್ತಾರೆ. ಉಲಾನ್‌ಬಾತರ್‌ನಲ್ಲಿ ಪೀಸ್ ಮತ್ತು ಚೆಂಗಿಸ್ ಅವೆನ್ಯೂ ಎಂಬ ಎರಡು ದೊಡ್ಡ ರಸ್ತೆಗಳಿವೆ. ಇವನ್ನು ಬಿಟ್ಟರೆ ಉಳಿದೆಲ್ಲ ರಸ್ತೆಗಳು ಸಣ್ಣವು. ಈ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲೇ ಎಲ್ಲ ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳಿವೆ. ಈ ರಸ್ತೆಗಳು ಎರಡು ಕಿ.ಮೀ ಉದ್ದವಿದ್ದವು. ಜತೆಗೆ ಪಾದಚಾರಿ ಮಾರ್ಗಗಳು ಇದ್ದಿದ್ದರಿಂದ ನಡೆದಾಡಲು ಬಹಳ ಖುಷಿಯಾಗುತ್ತಿತ್ತು.

ಕಾರಕೋರಂನಲ್ಲಿ (Karakorum)ಸ್ಮಾರಕ

12ನೇ ಶತಮಾನದಲ್ಲಿ ಮಂಗೋಲಿಯಾದ ಚಕ್ರವರ್ತಿಯಾಗಿದ್ದ ಚೆಂಗೀಸ್ ಖಾನ್‌ನ ರಾಜಧಾನಿಯಾಗಿತ್ತು ಕಾರಕೋರಂ. ಈತ ಆ ಕಾಲದಲ್ಲಿ ವಿವಿಧ ಪಂಗಡಗಳಾಗಿದ್ದ ಮಂಗೋಲಿಯರನ್ನು ಒಟ್ಟುಗೂಡಿಸಿ ಆ ದೇಶದ ಮೊದಲ ಖಾನ್ (ಚಕ್ರವರ್ತಿ) ಆದ. ಆದರೆ, ಆ ಕಾಲದ ಗತ ವೈಭವ ನೆನಪಿಸಲು ಈಗ ಅಲ್ಲಿ ಯಾವುದೇ ಸ್ಮಾರಕಗಳೂ ಉಳಿದಿಲ್ಲ. ರಾಜಧಾನಿಯ ಪ್ರಮುಖ ನಗರ ಕಾರಕೋರಿನ್. ಇಲ್ಲಿಂದ ಸ್ವಲ್ಪ ದೂರದಲ್ಲಿ ಈ ಖಾನ್‌ನ ಸ್ಮಾರಕ ಕಟ್ಟಿದ್ದಾರೆ. ನಾವು ಸ್ಮಾರಕಕ್ಕೆ ಭೇಟಿ ನೀಡಿದೆವು. ಕಾರಕೋರಂ ಹತ್ತಿರದಲ್ಲಿ ಎರ್ಡ್ನೆ ಝು (Erdne Zuu Monestry) ಎಂಬ ಸುಂದರ ಬೌದ್ಧ ದೇವಾಲಯವಿತ್ತು. ಅಲ್ಲಿಗೂ ಭೇಟಿ ನೀಡಿದ್ದೆ.

ಅಲೆಮಾರಿಗಳ ದೇಶ

ಇದು ಮೂಲತಃ ಅಲೆಮಾರಿಗಳೇ ಹೆಚ್ಚಾಗಿ ವಾಸಿಸುತ್ತಿದ್ದ ರಾಷ್ಟ್ರ. ಅವರು ಋತುಮಾನಕ್ಕೆ ಅನುಗುಣವಾಗಿ ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತಿದ್ದರಂತೆ. ಇದಕ್ಕೆ ಅನುಕೂಲವಾಗುವಂತೆ ಟೆಂಟ್ ತರಹ ಇರುವ ‘ಗೆರ್’ ಎಂಬ ಹೆಸರಿನ ಮನೆಗಳನ್ನು ನಿರ್ಮಿಸುತ್ತಿ ದ್ದರಂತೆ. ಈಗ ಅಲೆಮಾರಿ ಜೀವನ ಕಡಿಮೆಯಾಗಿದೆ. ಆದರೂ ಮುಖ್ಯ ಪಟ್ಟಣಗಳನ್ನು ಬಿಟ್ಟರೆ ಬೇರೆ ಎಲ್ಲ ಕಡೆ ಅದೇ ಗೆರ್ ಗಳಲ್ಲೇ ಜನ ತಮ್ಮ ಜೀವನ ನಡೆಸುತ್ತಿದ್ದಾರೆ.

ಮಂಗೋಲಿಯನ್ನರು ಎತ್ತರ ಹಾಗೂ ಒಳ್ಳೆ ಮೈಕಟ್ಟಿನ ಜನ. ಕೆಲವರು ಕುಳ್ಳಗಿದ್ದರೂ ಮೈಕೈ ತುಂಬಿಕೊಂಡಿರುವಂಥವರು. ಹೆಂಗಸರಂತೂ ಒಂದು ರೀತಿಯ ಚೆಲುವೆಯರು. ಕೃಶಕಾಯದ ಜನ ಕಾಣಸಿಗುವುದು ಬಹಳ ಕಡಿಮೆ. ಚೀನಾದ ಜನರಂತೆ ನುಣುಪಾದ ಕೂದಲು ತೆಳ್ಳಗಿನ ಚರ್ಮ ಹೊಂದಿದವರು ಹೆಚ್ಚು.

ನಾನು ಮಂಗೋಲಿಯಾದಲ್ಲಿದ್ದಷ್ಟು ದಿನ ನಗರದಲ್ಲಾಗಲಿ ಅಥವಾ ಹಳ್ಳಿಗಳಲ್ಲಾಗಲಿ ಒಬ್ಬನೇ ಒಬ್ಬ ಭಿಕ್ಷುಕನನ್ನು ಕಾಣಲಿಲ್ಲ. ನಮ್ಮಲ್ಲಿ ಕಂಡು ಬರುವ ಹಾಗೂ ಸುಮ್ಮನೆ ಬೀಡಿ ಸೇದುತ್ತಾ ಹರಟೆ ಹೊಡೆಯುವ ಯುವಕರಾಗಲಿ, ಮುದುಕರಾಗಲಿ ಎಲ್ಲಿಯೂ ಕಂಡುಬರಲಿಲ್ಲ.

ರಸ್ತೆಗಳೇ ವಿಚಿತ್ರವಾಗಿದ್ದವು

ಒಮ್ಮೆ ನಾವು ಉಲಾನ್ ಬಾತಾರ್‌ನಿಂದ ಹೊರಟು ಎರಡು ಗಂಟೆ ಕಾಲ ಒಂದೇ ರಸ್ತೆಯಲ್ಲಿ ಸಾಗಿದೆವು. ಅಲ್ಲಿ ಹೆದ್ದಾರಿಗಳಿಗಿಂತ ಕಾಲುದಾರಿಯೇ ಹೆಚ್ಚಾಗಿ ಕಂಡವು. ಎಲ್ಲೋ ಕೆಲವು ಮಾತ್ರ ಡಾಂಬಾರು ರಸ್ತೆಗಳು. ಎಲ್ಲಿಯೂ ಒಂದು ಮೈಲಿಗಲ್ಲಾಗಲಿ, ಸೈನ್ ಬೋರ್ಡ್‌ಗಳಾಗಲಿ ಕಾಣಲಿಲ್ಲ. ನಮ್ಮ ಡ್ರೈವರ್ ಕೂಡ ಯಾರನ್ನೂ ದಾರಿ ಕೇಳಿಲ್ಲ. ಈ ಕುರಿತು ಅವನನ್ನು ವಿಚಾರಿಸಿದಾಗ, ಅವನಿಗೆ ಇದು ದೊಡ್ಡವಿಚಾರವೇ ಎನ್ನಿಸಲಿಲ್ಲ. ‘ಒಂದು ವರ್ಷದ ಹಿಂದೆ ಇಲ್ಲಿಗೆ ಬಂದಿದ್ದೆ. ಆದ್ದರಿಂದ ನನಗೆ ದಾರಿ ಗೊತ್ತಿತ್ತು’ ಎಂದು ಹೇಳಿದ ಆ ಭೂಪ.

ಮಾಂಸಾಹಾರ ಪ್ರಾಧಾನ್ಯ

ಈ ದೇಶದಲ್ಲಿ ಫಲವತ್ತಾದ ಭೂಮಿ ಕಡಿಮೆ. ಹಾಗಾಗಿ ತರಕಾರಿ ಬೆಳೆಯೂ ಕಡಿಮೆ. ಹೆಚ್ಚಾಗಿ ಗೋಧಿ, ಮೆಕ್ಕೆಜೋಳ ಮತ್ತು ಆಲೂಗೆಡ್ಡೆ ಬೆಳೆಯುತ್ತಾರೆ. ಇಲ್ಲಿ ತರಕಾರಿಗಿಂತ ಮಾಂಸವೇ ಹೆಚ್ಚು ಪ್ರಾಧಾನ್ಯ. ಕುರಿ, ಕುದುರೆ ಮತ್ತು ಒಂಟೆಗಳ ಮಾಂಸ ನಿತ್ಯ ಬಳಕೆಯ ಆಹಾರ (ಸ್ಟೇಪಲ್ ಫುಡ್). ಇಲ್ಲಿನ ಅಲೆಮಾರಿ ಜನರ ಮನೆಯ ಮುಂದೆ ಮಾಂಸದ ತುಂಡುಗಳನ್ನು ಒಣಗಲು ಹಾಕಿದ್ದರು.

ಅಲೆಮಾರಿಗಳ ಮನೆಗಳಲ್ಲಿ ಕುದುರೆ ಹಾಲಿನ ಹುಳಿ ಮಜ್ಜಿಗೆಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಇಟ್ಟಿರುತ್ತಾರೆ. ಈ ಪೇಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರಿಯ. ಮನೆಗೆ ಬಂದವರಿಗೂ ಅದನ್ನೇ ಕೊಡುತ್ತಾರೆ. ತ್ಸುಯ್ವಾನ್ ಎನ್ನುವ ನೂಡಲ್ಸ್ ಮತ್ತು ಮಾಂಸದ ಖಾದ್ಯ ಇವರಿಗೆ ಅನ್ನ ಸಾರು ಇದ್ದಂತೆ. ನೂಡಲ್ಸ್ ಅನ್ನು ಮನೆಯಲ್ಲೇ ತಯಾರಿಸುತ್ತಾರೆ. ಇಲ್ಲಿ ಸಸ್ಯಹಾರಿಗಳಿಗೆ ಆಹಾರ ಹೊಂದಿಕೊಳ್ಳುವುದು ತುಸು ಕಷ್ಟ. ನಾನು ಮೊದಲೇ ಸಸ್ಯಹಾರಿ ಎಂದು ತಿಳಿಸಿ, ಪರ್ಯಾಯ ವ್ಯವಸ್ಥೆ ಮಾಡಿಸಿದ್ದೆ. ಸಾಮಾನ್ಯವಾಗಿ ಇಂಥ ಕಡೆ ಪ್ರವಾಸ ಹೋಗುವಾಗ ರೆಡಿ ಟು ಈಟ್ ಉಪ್ಪಿಟ್ಟು, ಬಿಸಿಬೇಳೆಬಾತ್, ಅವಲಕ್ಕಿ ತೆಗೆದುಕೊಂಡು ಹೋಗುತ್ತೇನೆ. ಅಲ್ಲಿಯವರಿಗೂ ರುಚಿ ತೋರಿಸುತ್ತೇನೆ. ಬಹಳಷ್ಟು ಹೊರಗಿನ ಜನರಿಗೆ ಇನ್ನೂ ಅಪರಿಚತವಾಗೇ ಉಳಿದಿರುವ ಈ ದೇಶ ಒಂದು ಅಪರೂಪದ ಅನುಭವ ನೀಡಿತು. ಒತ್ತಡವಿಲ್ಲದೇ ಪ್ರವಾಸದ ದಿನಗಳನ್ನು ಕಳೆಯ ಬೇಕೆನ್ನುವವರು ಈ ದೇಶಕ್ಕೆ ಬರಬೇಕು. ಒಮ್ಮೆ ಹೋಗಿಬನ್ನಿ.

ತಲುಪುವ ಬಗೆ

ಬೆಂಗಳೂರು – ಹಾಂಕಾಂಗ್ – ಉಲಾನ ಬಾರ್ತಾಗೆ ವಿಮಾನದಲ್ಲಿ ತಲುಪಬಹುದು. ಹಾಗಾಂಕ್‌ನಲ್ಲಿ ವಿಮಾನ ಬದಲಿಸಬೇಕು. ಬೆಂಗಳೂರು - ದೆಹಲಿ - ಬೀಜಿಂಗ್ – ಉಲಾನ್ ಬಾತಾರ್ ಮಾರ್ಗದಲ್ಲೂ ಹೋಗಬಹುದು. ರೈಲಿನಲ್ಲಾದರೆ ಬೀಜಿಂಗ್‌ನಿಂದ ರೈಲಿನಲ್ಲಿ ಉಲಾನ್ ಬಾರ್ತಾಗೆ ತಲುಪಬಹುದು.

ವಿಶೇಷಗಳು

ಉಲಾನ್ ಬಾತಾರ್‌ನಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನಾದಾಮ್ ಉತ್ಸವ ನಡೆಯುತ್ತದೆ. ಇದು ಮಂಗೋಲಿಯನ್ನರಿಗೆ ಸಂಭ್ರಮ. ಪಾರಂಪರಿಕ ಕಲೆಗಳಾದ ಹಾರ್ಸ್ ರೈಡಿಂಗ್, ಆರ್ಚರಿ, ಮಲ್ಲ ಯುದ್ಧದಂತಹ ಸ್ಪರ್ಧೆಗಳು ನಡೆಯುತ್ತವೆ. ಇದನ್ನು ನೋಡಲು ಬಹಳಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ.

ಗೋಬಿ ಮರುಭೂಮಿ: ಮಂಗೋಲಿಯಾದಲ್ಲಿರುವ 1500 ಕಿ.ಮೀ ಉದ್ದ ಹಾಗೂ 800 ಕಿ.ಮೀ ಅಗಲವಿರುವ ಮರುಭೂಮಿ ಇದು. ಶತಮಾನಗಳ ಹಿಂದಿನ ಸಿಲ್ಕ್ ರೂಟ್‌ನ(ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರದ ಕೊಂಡಿಯಾಗಿದ್ದ ರಸ್ತೆ) ಹಲವು ಪ್ರಮುಖ ಪಟ್ಟಣಗಳು ಈ ಮರುಭೂಮಿಯಲ್ಲಿದ್ದವಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.