ಸೋಮವಾರ, ಡಿಸೆಂಬರ್ 6, 2021
27 °C
ಯಶವಂತಪುರ ರೈಲು ನಿಲ್ದಾಣ ರಿಯಾಲಿಟಿ ಚೆಕ್

ರೈಲು ಟಿಕೆಟ್‌ಗೆ ವೆಂಡಿಂಗ್ ಮಿಷಿನ್, ಪ್ರಯಾಣಿಕರ ನಿರಾಸಕ್ತಿ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಅಲ್ಲಿ ಉದ್ದುದ್ದ ಕ್ಯೂ ಇತ್ತು. ಸರದಿಯಲ್ಲಿ ನಿಂತಿದ್ದವರು ತಾವು ಪ್ರಯಾಣಿಸಬೇಕಿದ್ದ ಊರಿಗೆ ಟಿಕೆಟ್‌ ಖರೀದಿಸುವ ಕಾತುರದಲ್ಲಿದ್ದರು. ಇನ್ನೂ ಕೆಲವರು ರೈಲ್ವೆ ಪ್ಲಾಟ್‌ಫಾರಂ ಟಿಕೆಟ್‌ ಖರೀದಿಸುವವರಿದ್ದರು. ಸರದಿಯಲ್ಲಿದ್ದ ಹಲವರು 15ರಿಂದ 20 ನಿಮಿಷವಾದರೂ ಟಿಕೆಟ್‌ ಅಥವಾ ಪ್ಲಾಟ್‌ಫಾರಂ ಟಿಕೆಟ್‌ ಖರೀದಿಸಲಾಗದೆ ಗೊಣಗುತ್ತಾ, ಶಪಿಸುತ್ತಿದ್ದರು.

ಅದು ಯಶವಂಪುರ ರೈಲು ನಿಲ್ದಾಣದ ಸ್ವಯಂ ಚಾಲಿತ ಟಿಕೆಟ್‌ ವಿತರಣಾ ಯಂತ್ರಗಳ (ಎಟಿವಿಎಂ) ಬಳಿ ಕಂಡು ಬಂದ ದೃಶ್ಯ.

ಯಶವಂತಪುರದಿಂದ ಬೀದರ್‌ಗೆ ಚಲಿಸುವ ರೈಲಿಗೆ ಮುಂಗಡ ಸೀಟು ಕಾಯ್ದಿರಿಸಿದ್ದ ಅಪ್ಪ– ಅಮ್ಮನನ್ನು (ಹಿರಿಯ ನಾಗರಿಕರು) ರೈಲು ಹತ್ತಿಸಲು 40 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಬಂದಿದ್ದ ಅವರ ಮಗಳು ಪ್ಲಾಟ್‌ಫಾರಂ ಟಿಕೆಟ್‌ಗಾಗಿ ಎಟಿವಿಎಂನ ಸರದಿಯಲ್ಲಿ ನಿಂತಿದ್ದರು. 20 ನಿಮಿಷ ಕಾದರೂ ಯಂತ್ರದ ಬಳಿ ಹೋಗಲು ಆಗಲಿಲ್ಲ. ಅವರ ಮುಂದೆ ಇನ್ನೂ 30ಕ್ಕೂ ಹೆಚ್ಚು ಜನ ಇದ್ದರು!

ಇನ್ನೇನು ರೈಲು ಚಲಿಸಲು ಕೇವಲ 15 ನಿಮಿಷ ಬಾಕಿ ಇತ್ತು. ಆಗ ಅವರಲ್ಲಿ ಗಾಬರಿ ಮತ್ತು ಆತಂಕ ಹೆಚ್ಚಾಯಿತು. ಈ ನಡುವೆ ಅವರ ತಾಯಿ ಯಂತ್ರದ ಬಳಿ ಹೋಗಿ ಅಲ್ಲಿದ್ದ ಸಹಾಯಕರನ್ನು (facilitator) ಒಂದು ಪ್ಲಾಟ್‌ಫಾರಂ ಟಿಕೆಟ್‌ ಕೊಡಿ ಎಂದು ₹ 10 ಕೊಟ್ಟು ಕೋರಿದರು. ಆದರೆ ‘ಎಟಿವಿಎಂನಲ್ಲಿ ಟಿಕೆಟ್‌ ಪಡೆಯಲು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಪ್ರತ್ಯೇಕ ಸರದಿಯಿಲ್ಲ. ಎಲ್ಲರೂ ಒಂದೇ ಸಾಲಿನಲ್ಲಿ ಬರಬೇಕು’ ಎಂದು ಆ ಸಹಾಯಕ ಹೇಳಿದ. ‘ರೈಲು ಹೊರಡುವ ಸಮಯ ಸಮೀಪಿಸುತ್ತಿದೆ, ದಯವಿಟ್ಟು ಟಿಕೆಟ್‌ ಕೊಡಿ’ ಎಂದು ಪರಿಪರಿಯಾಗಿ ಕೇಳಿದರೂ ಅವರು ಕೊಡಲಿಲ್ಲ. ಕೊನೆಗೆ ಬೇಸರಗೊಂಡ ಅವರು ಹಿಂದಕ್ಕೆ ಸರಿದರು.

ಇದಾದ ಬಳಿಕ ಅವರ ಮಗಳು, ಸರದಿಯಲ್ಲಿ ಯಂತ್ರದ ಬಳಿ ನಿಂತಿದ್ದ ವ್ಯಕ್ತಿಯನ್ನು ಪ್ಲಾಟ್‌ಫಾರಂ ಟಿಕೆಟ್‌ ತೆಗೆದುಕೊಡುವಂತೆ ಕೋರಿದರು. ಅವರು ದೊಡ್ಡ ಮನಸ್ಸು ಮಾಡಿ ತಾನು ತೆಗೆದುಕೊಳ್ಳುವ ಟಿಕೆಟ್‌ ಜತೆಗೆ ಹೆಚ್ಚುವರಿಯಾಗಿ ಒಂದು ಪ್ಲಾಟ್‌ಫಾರಂ ಟಿಕೆಟ್‌ ಅನ್ನೂ ತೆಗೆದುಕೊಂಡು ಅವರಿಗೆ ಕೊಟ್ಟರು. ಕೂಡಲೇ ಅವರು ಲಗೇಜ್‌ ಸಮೇತ ತನ್ನ ಪೋಷಕರನ್ನೂ ಕರೆದುಕೊಂಡು ಪ್ಲಾಟ್‌ಫಾರಂನತ್ತ ಸಾಗಿದರು.

ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಂಜೆ 5.30ರಿಂದ 7 ಗಂಟೆಯವರೆಗೆ ಇಂಥ ದೃಶ್ಯಗಳು ಇಲ್ಲಿ ಸಾಮಾನ್ಯ. ಸಾಂಪ್ರದಾಯಿಕ ಟಿಕೆಟ್‌ ಕೌಂಟರ್‌ ಮತ್ತು ಎಟಿವಿಎಂಗಳ ಬಳಿ ಈ ವೇಳೆ ಹೆಚ್ಚಿನ ಜನರು ಸರದಿಯಲ್ಲಿರುತ್ತಾರೆ.

ಕೌಂಟರ್‌ಗಿಂತ ತ್ವರಿತವಾಗಿ ಟಿಕೆಟ್‌ ಲಭ್ಯ: ‘ಯಶವಂತಪುರದಲ್ಲಿ ಶುಕ್ರವಾರ, ಶನಿವಾರ, ಭಾನುವಾರಗಳಂದು ಎವಿಟಿಎಂ ಬಳಿ ಹೆಚ್ಚಿನ ಜನರು ಟಿಕೆಟ್‌ ಖರೀದಿಸಲು ಮುಂದಾಗುತ್ತಾರೆ. ಆಗ ಇಲ್ಲೂ ಕ್ಯೂ ನಿರ್ಮಾಣವಾಗುತ್ತದೆ. ಅಲ್ಲದೆ ಹಬ್ಬಗಳು, ಸರಣಿ ರಜಾಗಳು ಎದುರಾದಾಗ, ದಸರಾ ರಜೆ, ಕ್ರಿಸ್‌ಮಸ್‌ ರಜೆ ಮತ್ತು ಬೇಸಿಗೆ ರಜೆಗಳು ಬಂದಾಗ ಟಿಕೆಟ್‌ ಕೌಂಟರ್‌ಗಳಿಗಿಂತ ಹೆಚ್ಚಿನ ಕ್ಯೂ ಎಟಿವಿಎಂ ಯಂತ್ರಗಳ ಬಳಿಯೇ ಕಂಡು ಬರುತ್ತದೆ. ಈ ಯಂತ್ರಗಳ ಬಳಿಯಿರುವ ಸಹಾಯಕರು ತಮ್ಮ ಸ್ಮಾರ್ಟ್‌ಕಾರ್ಡ್‌ ಬಳಸಿ ಅವರೆಲ್ಲರಿಗೂ ಟಿಕೆಟ್‌ ಒದಗಿಸುತ್ತಾರೆ. ಈ ಯಂತ್ರಗಳು ಟಚ್‌ ಸ್ಕ್ರೀನ್‌ ಆಗಿರುವುದರಿಂದ, ಕೌಂಟರ್‌ಗಿಂತ ತ್ವರಿತವಾಗಿ ಟಿಕೆಟ್‌ ವಿತರಿಸಬಹುದು. ಇದರಿಂದ ನಮಗೆ ಬೋನಸ್‌ ಕೂಡ ದೊರೆಯುತ್ತದೆ’ ಎನ್ನುತ್ತಾರೆ ಇಲ್ಲಿನ ಸಹಾಯಕರಾದ ರಾಜು ಮತ್ತು ಶ್ರೀಹರಿ.

‘ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹೆಚ್ಚಿನ ಜನರು ತಮ್ಮೂರುಗಳಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ಅವರಲ್ಲಿ ಬಹುತೇಕರು ಈ ಯಂತ್ರಗಳ ಸಹಾಯಕರ ಬಳಿಯೇ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ದಿನಕ್ಕೆ ₹ 10 ಲಕ್ಷದಷ್ಟು ವಹಿವಾಟನ್ನು ಸಹಾಯಕರೇ ಎಟಿವಿಎಂ ಬಳಸಿ ಮಾಡಿದ್ದಾರೆ’ ಎನ್ನುತ್ತಾರೆ ಅವರು.

ಅರಿವಿನ ಕೊರತೆ: ಪ್ರಯಾಣಿಕರ ಬಳಿ ಸ್ಮಾರ್ಟ್‌ಕಾರ್ಡ್‌ ಇದ್ದರೆ ಅವರೇ ಎಟಿವಿಎಂ ಯಂತ್ರಗಳಿಂದ ಪ್ರಯಾಣದ ಟಿಕೆಟ್‌ ಅಥವಾ ಪ್ಲಾಟ್‌ಫಾರಂ ಟಿಕೆಟ್‌ ಪಡೆಯಬಹುದು. ಆದರೆ ಗಂಟೆಗಟ್ಟಲೆ ಕಾಯ್ದರೂ ಸ್ಮಾರ್ಟ್‌ಕಾರ್ಡ್‌ ಬಳಸಿದ ಪ್ರಯಾಣಿಕರು ಒಬ್ಬರೂ ಕಾಣಲಿಲ್ಲ! ಬದಲಿಗೆ ಪ್ರತಿಯೊಬ್ಬರೂ ಅಲ್ಲಿದ್ದ ಸಹಾಯಕರ ನೆರವಿನಿಂದಲೇ ಟಿಕೆಟ್‌ ಪಡೆಯುತ್ತಿದ್ದರು.

‘ಸ್ಮಾರ್ಟ್‌ಕಾರ್ಡ್‌ ಅನ್ನೂ ಪ್ರಯಾಣಿಕರೂ ತೆಗೆದುಕೊಳ್ಳಬಹುದು ಎಂಬ ಮಾಹಿತಿಯೇ ನನಗೆ ಗೊತ್ತಿಲ್ಲ. ಈ ಕುರಿತು ರೈಲ್ವೆ ಇಲಾಖೆ ಅಷ್ಟಾಗಿ ಪ್ರಚಾರ ಮಾಡಿಲ್ಲ ಅನಿಸುತ್ತೆ. ವಿಷಯ ಗೊತ್ತಿರದ ಕಾರಣ ನಾನೂ ಕ್ಯೂನಲ್ಲಿ ನಿಂತಿದ್ದೇನೆ’ ಎಂದು ಪ್ರಯಾಣಿಕ ನಿಜಗುಣ ತಿಳಿಸಿದರು.

‘ಈ ಕಾರ್ಡ್‌ನಿಂದ ಪ್ರಯೋಜನ ಕಡಿಮೆ. ಹಾಗಾಗಿ ನಾನು ಅದನ್ನು ಖರೀದಿಸುವ ಗೋಜಿಗೆ ಹೋಗಿಲ್ಲ. ಕೌಂಟರ್‌ ಅಥವಾ ಸಹಾಯಕರ ಬಳಿಯೇ ಟಿಕೆಟ್‌ ಖರೀದಿಸುತ್ತೇನೆ’ ಎನ್ನುತ್ತಾರೆ ಮತ್ತೊಬ್ಬ ಪ್ರಯಾಣಿಕ ಚೇತನ್‌ ಕುಮಾರ್‌.

ಹೊಸ ಕ್ಯೂ: ರೈಲ್ವೆ ಟಿಕೆಟ್‌ ಕೌಂಟರ್‌ಗಳ ಬಳಿ ಟಿಕೆಟ್‌ ಖರೀದಿಗೆ ಪ್ರಯಾಣಿಕರ ನೂಕು ನುಗ್ಗಲು ತಡೆಯಲು ಹಾಗೂ ಉದ್ದುದ್ದದ ಕ್ಯೂ ತಪ್ಪಿಸಲು ರೈಲ್ವೆ ಇಲಾಖೆ ಮೂರು ವರ್ಷಗಳ ಹಿಂದೆ ನಗರದ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಟಿಕೆಟ್‌ ವಿತರಣಾ ಯಂತ್ರಗಳನ್ನು (ಎಟಿವಿಎಂ) ತೆರೆದಿದೆ. ಆದರೆ ಈ ಯಂತ್ರಗಳಿರುವೆಡೆ ಹೊಸ ಕ್ಯೂಗಳು ಹಾಗೂ ಜನ ಜಂಗುಳಿ ಸೃಷ್ಟಿಯಾಗಿವೆ.

ಯಶವಂತಪುರ ರೈಲು ನಿಲ್ದಾಣದ ಎರಡು ಪ್ರವೇಶ ದ್ವಾರಗಳಲ್ಲಿ ಒಟ್ಟು ಏಳು ಎಟಿವಿಎಂ ಯಂತ್ರಗಳಿವೆ. ಅವುಗಳಲ್ಲಿ ಮೂರು ಯಂತ್ರಗಳ ಬಳಿ ಸಹಾಯಕರು ಇರಲಿಲ್ಲ. ಈ ಕುರಿತು ಕೇಳಿದರೆ ಅವು ಕೆಟ್ಟಿವೆ ಎಂಬ ಉತ್ತರ ಅಲ್ಲಿನ ಯಂತ್ರವೊಂದರ ಬಳಿಯಿದ್ದ ಸಹಾಯಕರಿಂದ ಬಂದಿತು. ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ‘ನಾನು ಇಲ್ಲಿಗೆ ವರ್ಗವಾಗಿ ಬಂದಾಗಿನಿಂದ ಈ ಯಂತ್ರ ಕೆಲಸ ಮಾಡಿದ್ದೇ ನೋಡಿಲ್ಲ’ ಎಂದು ಎಟಿವಿಎಂ ಒಂದನ್ನು ತೋರಿಸಿ ಹೇಳಿದರು.

‘ಟಿಕೆಟ್‌ ಕೌಂಟರ್‌ ಪಕ್ಕದಲ್ಲಿಯೇ ಎಟಿವಿಎಂ ಇರುವುದರಿಂದ ಎರಡೂ ಕಡೆ ಸರದಿ ಸಾಲಿದೆ. ಕೌಂಟರ್‌ಗಳ ಮುಂಭಾಗ ಕಂಬಿಗಳ ಮೂಲಕ ಸಾಲಾಗಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಆದರೆ ಎಟಿವಿಎಂ ಬಳಿ ಆ ವ್ಯವಸ್ಥೆ ಇಲ್ಲ. ಅಕ್ಕಪಕ್ಕದಲ್ಲಿಯೇ ಎರಡು, ಮೂರು ಎಟಿವಿಎಂ ಇರುವುದರಿಂದ ಜನರು ಹೇಗೆಂದರೆ ಹಾಗೆ ನಿಲ್ಲುತ್ತಾರೆ. ಕೆಲವೊಮ್ಮೆ ಒಂದು ಅಥವಾ ಎರಡು ಯಂತ್ರಗಳ ಬಳಿ ಮಾತ್ರ ಸಹಾಯಕರು ಇರುತ್ತಾರೆ. ಇನ್ನು ಕೆಲವೊಮ್ಮೆ ಯಾವ ಯಂತ್ರದ ಬಳಿಯೂ ಸಹಾಯಕರು ಇರುವುದಿಲ್ಲ. ಆಗೆಲ್ಲ ಜನರು ಶಪಿಸುತ್ತಲೇ ಟಿಕೆಟ್‌ ಕೌಂಟರ್‌ಗಳ ಬಳಿ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆಯುತ್ತಾರೆ’ ಎಂದು ಹೆಸರೇಳಲು ಇಚ್ಛಿಸದ ಪೊಲೀಸ್‌ ಸಿಬ್ಬಂದಿ ಮಾಹಿತಿ ನೀಡಿದರು.

ಸ್ಮಾರ್ಟ್‌ಕಾರ್ಡ್‌ ಬಳಕೆಗೆ ನಿರಾಸಕ್ತಿ

ಪ್ರಯಾಣಿಕರು ಟಿಕೆಟ್‌ ಪಡೆಯಲು ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಇಲಾಖೆ ಸ್ಮಾರ್ಟ್‌ಕಾರ್ಡ್‌ ಪರಿಚಯಿಸಿದೆ. ಇವುಗಳನ್ನು ಎಟಿವಿಎಂಗಳಲ್ಲಿ ಬಳಸಿ ತಾವೇ ಟಿಕೆಟ್‌ ಪಡೆದು ಪ್ರಯಾಣ ಬೆಳೆಸಬಹುದು. ಇದರಿಂದ ಪ್ರಯಾಣಿಕರ ಅಮೂಲ್ಯವಾದ ಸಮಯವೂ ಉಳಿಯುತ್ತದೆ. ಜತೆಗೆ ಪ್ರಯಾಣದ ಟಿಕೆಟ್‌ ದರದಲ್ಲಿ ಶೇ 3ರಷ್ಟು ಬೋನಸ್‌ ಕೂಡ (ಮೊದಲು ಶೇ 5ರಷ್ಟು ಬೋನಸ್‌ ನೀಡಲಾಗತ್ತಿತ್ತು) ದೊರೆಯುತ್ತದೆ. ಒಂದು ಕಾರ್ಡ್‌ನಲ್ಲಿ ದಿನಕ್ಕೆ ಗರಿಷ್ಠ ಎಂಟು ಟಿಕೆಟ್‌ಗಳನ್ನು ಪಡೆಯಬಹುದು. ₹ 5,000 ದವರೆಗೆ ರೀಚಾರ್ಜ್‌ ಮಾಡಿಸಬಹುದು. ಕಾರ್ಡ್‌ನ ವೆಲಿಡಿಟಿ ಒಂದು ವರ್ಷ. ನಿತ್ಯ ಅಥವಾ ನಿಯಮಿತವಾಗಿ ರೈಲಿನಲ್ಲಿ ಸಂಚರಿಸುವವರಿಗೆ ಇದು ಉಪಯುಕ್ತ.

ನಿರಾಸಕ್ತಿಗೆ ಕಾರಣಗಳು

* ಸ್ಮಾರ್ಟ್‌ಕಾರ್ಡ್‌ಗಳು ಎಲ್ಲ ಟಿಕೆಟ್‌ ಕೌಂಟರ್‌ಗಳಲ್ಲೂ ಸಿಗಲ್ಲ. ಯಾವ ನಿರ್ದಿಷ್ಟ ಕೌಂಟರ್‌ನಲ್ಲಿ ಇದು ದೊರೆಯುತ್ತದೆ ಎಂಬುದರ ಫಲಕ ಎಲ್ಲೂ ಇರುವುದಿಲ್ಲ. ಹೀಗಾಗಿ ಇದನ್ನು ಖರೀದಿಸಲು ವಿವಿಧ ಕೌಂಟರ್‌ಗಳನ್ನು ಸುತ್ತಬೇಕು.

* ಹಿರಿಯ ನಾಗರಿಕರಿಗೆ (60 ವರ್ಷದ ದಾಟಿದ ಪುರುಷರಿಗೆ ಶೇ 40 ಹಾಗೂ 58 ವರ್ಷ ದಾಟಿದ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ) ಟಿಕೆಟ್‌ ದರದ ಮೇಲೆ ದೊರೆಯುವ ವಿಶೇಷ ರಿಯಾಯಿತಿ ಸೌಲಭ್ಯ ಈ ಸ್ಮಾರ್ಟ್‌ಕಾರ್ಡ್‌ನಿಂದಾಗಲಿ ಅಥವಾ ಎಟಿವಿಎಂ ಯಂತ್ರದಿಂದಾಗಲಿ ಪಡೆಯಲು ಆಗದು.

* ಅಂಧರು, ಅಂಗವಿಕಲರು ಮತ್ತು ವಿವಿಧ ಕಾಯಿಲೆ ಪೀಡಿತರ ಪ್ರಯಾಣಕ್ಕೆ ದೊರೆಯುವ ರಿಯಾಯಿತಿ ದರದ ಟಿಕೆಟ್‌ಗಳನ್ನು ಇದರಿಂದ ಪಡೆಯಲು ಆಗುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಕೌಂಟರ್‌ಗಳಲ್ಲಿ ಸರದಿಯಲ್ಲಿ ನಿಲ್ಲಲೇಬೇಕು.

* ಸ್ಮಾರ್ಟ್‌ಕಾರ್ಡ್‌ ಅನ್ನು ಆನ್‌ಲೈನ್‌ ಮೂಲಕ ರೀಚಾರ್ಜ್‌ ಮಾಡಲು ಆಗುವುದಿಲ್ಲ. ನಿಗದಿತ ಕೌಂಟರ್‌ ಬಳಿಯೇ ರೀಚಾರ್ಜ್‌ ಮಾಡಬೇಕು.

ನಿವೃತ್ತ ನೌಕರರಿಗೆ ಉದ್ಯೋಗ: ರೈಲ್ವೆ ಇಲಾಖೆಯ ನಿವೃತ್ತ ನೌಕರರನ್ನು ಎವಿಟಿಎಂ ಯಂತ್ರಗಳ ಸಹಾಯಕರನ್ನಾಗಿ ನಿಯೋಜಿಸಿದೆ. ಅವರಿಗೆ ತಲಾ ಎರಡೆರಡು ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಿದೆ. ಅವರು ಒಂದು ಸ್ಮಾರ್ಟ್‌ಕಾರ್ಡ್‌ಗೆ ಗರಿಷ್ಠ ₹ 10 ಸಾವಿರದವರೆಗೆ ರೀಚಾರ್ಜ್‌ ಮಾಡಬಹುದು. ದಿನಕ್ಕೆ ಎಷ್ಟು ಬಾರಿಯಾದರೂ ರೀಚಾರ್ಜ್‌ ಮಾಡಿಸಿಕೊಳ್ಳಬಹುದು. ಎಷ್ಟು ಜನರಿಗಾದರೂ ಎಟಿವಿಎಂ ಯಂತ್ರದ ಮೂಲಕ ಟಿಕೆಟ್‌ ವಿತರಿಸಬಹುದು. ಇದರಿಂದಾಗಿ ಅವರು ಎಟಿವಿಎಂ ಯಂತ್ರಗಳ 
ಬಳಿಯೇ ಇದ್ದು, ಪ್ರಯಾಣಿಕರನ್ನು ತಮ್ಮತ್ತ ಸೆಳೆದು, ಟಿಕೆಟ್ ವಿತರಿಸುತ್ತಾರೆ. ಇದರಿಂದ ಅವರ ಕಾರ್ಡ್‌ಗೆ ಬೋನಸ್‌ ದೊರೆಯುತ್ತದೆ. ತನ್ನ ನಿವೃತ್ತ ನೌಕರರಿಗೆ ಇಲಾಖೆ ಈ ರೀತಿಯ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ.

ಸ್ಮಾರ್ಟ್‌ಕಾರ್ಡ್‌ ಬೆನ್ನಟ್ಟಿ

ನಗರದ ಸಿಟಿ ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) 10 ಎಟಿವಿಎಂ ಮತ್ತು 6 ಸಿಟಿವಿಎಂ ಯಂತ್ರಗಳಿವೆ. ಈ ನಿಲ್ದಾಣದಲ್ಲಿ 15 ನಿವೃತ್ತ ರೈಲ್ವೆ ಸಿಬ್ಬಂದಿಯನ್ನು ಸಹಾಯಕರನ್ನಾಗಿ ಇಲಾಖೆ ನಿಯೋಜಿಸಿದೆ. ಆದರೆ ಈ ನಿಲ್ದಾಣದಲ್ಲಿ ಸ್ಮಾರ್ಟ್‌ಕಾರ್ಡ್‌ ಪಡೆಯುವುದು ಸುಲಭವಲ್ಲ. ಇದಕ್ಕಾಗಿ ಹರಸಾಹಸ ಪಡಬೇಕಾಯಿತು.

ನಿಲ್ದಾಣದಲ್ಲಿನ ಹಲವು ಟಿ.ವಿ ಪರದೆಗಳಲ್ಲಿ ಎವಿಟಿಎಂ ಯಂತ್ರಗಳು ಮತ್ತು ಸ್ಮಾರ್ಟ್‌ಕಾರ್ಡ್‌ ಬಳಕೆಯಿಂದಾಗುವ ಅನುಕೂಲಗಳ ಕುರಿತು ಆಗಾಗಾ ಮಾಹಿತಿ ಬಿತ್ತರವಾಗುತ್ತಿತ್ತು. ಆದರೆ ನಿಲ್ದಾಣದಲ್ಲಿ ಸ್ಮಾರ್ಟ್‌ಕಾರ್ಡ್‌ ಎಲ್ಲಿ ಪಡೆದುಕೊಳ್ಳಬೇಕು ಎಂಬುದರ ಫಲಕ ಮಾತ್ರ ಎಲ್ಲೂ ಇರಲಿಲ್ಲ. ‘ಸ್ಮಾರ್ಟ್‌ಕಾರ್ಡ್‌ ಎಲ್ಲಿ ದೊರೆಯುತ್ತದೆ’ ಎಂದು ನಿಲ್ದಾಣದೊಳಗಿದ್ದ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಯನ್ನು ವಿಚಾರಿಸಿದಾಗ, ‘ವಿಚಾರಣಾ ಕೌಂಟರ್‌ನಲ್ಲಿ’ ವಿಚಾರಿಸಿ ಎಂಬ ಉತ್ತರ ಬಂತು.

ವಿಚಾರಣಾ ಕೌಂಟರ್‌ನಲ್ಲಿದ್ದ ಸಿಬ್ಬಂದಿಯನ್ನು ಈ ಕುರಿತು ಕೇಳಿದಾಗ, ನಿಲ್ದಾಣದ ಹೊರಗಡೆ ಇರುವ ಟಿಕೆಟ್‌ ಕೌಂಟರ್‌ಗಳಲ್ಲಿ ಒಂದರಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗುತ್ತದೆ, ಅಲ್ಲಿಯೇ ಹೋಗಿ ಕೇಳಿ ಎಂದರು. ಅಲ್ಲಿಗೆ ಹೋಗಿ ಕೌಂಟರ್‌ವೊಂದರ ಸಿಬ್ಬಂದಿಯನ್ನು ಸ್ಮಾರ್ಟ್‌ಕಾರ್ಡ್‌ ಎಲ್ಲಿ ದೊರೆಯುತ್ತವೆ ಎಂದು ಕೇಳಿದೆ. ಅದಕ್ಕೆ ಅವರು ‘ಇಲ್ಲಿನ ಕೌಂಟರ್‌ಗಳಲ್ಲಿ ಅವುಗಳನ್ನು ಒದಗಿಸುವುದಿಲ್ಲ. 8ನೇ ಪ್ಲಾಟ್‌ಫಾರಂನ ಟಿಕೆಟ್‌ ಕೌಂಟರ್‌ಗೆ ಹೋದರೆ ಅಲ್ಲಿ ದೊರೆಯುತ್ತದೆ’ ಎಂದು ಉತ್ತರಿಸಿದರು.

ಬಳಿಕ ₹ 10 ಕೊಟ್ಟು ಪ್ಲಾಟ್‌ಫಾರಂ ಟಿಕೆಟ್‌ ಪಡೆದು ಅರ್ಧ ಕಿ.ಮೀ ನಡೆದು 8ನೇ ಪ್ಲಾಟ್‌ಫಾರಂನ ಟಿಕೆಟ್‌ ಕೌಂಟರ್‌ ಬಳಿಗೆ ಹೋದೆ. ‘ಇಲ್ಲಿ ಎರಡು ತಿಂಗಳಿಂದ ಯಾವುದೇ ಹೊಸ ಸ್ಮಾರ್ಟ್‌ಕಾರ್ಡ್‌ ವಿತರಿಸುತ್ತಿಲ್ಲ. ಹಳೆಯದಿದ್ದರೆ ಕೊಡಿ ರೀಚಾರ್ಜ್ ಮಾಡಿಕೊಡುತ್ತೇವೆ’ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ‘ಸ್ಮಾರ್ಟ್‌ ಕಾರ್ಡ್‌ಗಳು 8ನೇ ಪ್ಲಾಟ್‌ಫಾರಂನ ಟಿಕೆಟ್‌ ಕೌಂಟರ್‌ನಲ್ಲಿ ದೊರೆಯುತ್ತವೆ ಎಂದು ಮುಖ್ಯದ್ವಾರದ ಕೌಂಟರ್‌ನ ಸಿಬ್ಬಂದಿ ಇಲ್ಲಿಗೆ ಕಳುಹಿಸಿದ್ದಾರೆ’ ಎಂದು ನಾನು ಹೇಳಿದೆ. ಅದಕ್ಕೆ ಬೇಸರಗೊಂಡ ಅಲ್ಲಿನ ಸಿಬ್ಬಂದಿ ಕೂಡಲೇ ಮುಖ್ಯದ್ವಾರದ ಕೌಂಟರ್‌ಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರಿಗೆ ಹೀಗೆಲ್ಲ ‘ಮಿಸ್‌ಗೈಡ್‌’ ಮಾಡಬೇಡಿ. ನಮ್ಮ ಕೌಂಟರ್‌ನಲ್ಲಿ ಎರಡು ತಿಂಗಳಿಂದ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸುತ್ತಿಲ್ಲ ಎಂಬ ಮಾಹಿತಿ ನಿಮಗಿಲ್ಲವೇ ಎಂದು ಗದರಿದರು. ಬಳಿಕ ‘ನೀವು ಅಲ್ಲಿಯೇ ಹೋಗಿ ಈಗ ಕೊಟ್ಟೇ ಕೊಡುತ್ತಾರೆ’ ಎಂದು ಸಲಹೆ ನೀಡಿದರು.

ಪುನಃ ನಾನು ಅರ್ಧ ಕಿ.ಮೀ ನಡೆದು ಮುಖ್ಯದ್ವಾರದ ಹೊರಗಿದ್ದ ಕೌಂಟರ್‌ಗೆ ಹೋದೆ. ಅಲ್ಲಿನ 13ನೇ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಸ್ಮಾರ್ಟ್‌ಕಾರ್ಡ್‌ ವಿತರಿಸಿದರು.

***

'ನಿರೀಕ್ಷಿತ ಪ್ರಮಾಣದಲ್ಲಿಲ್ಲ'

‘ಸ್ಮಾರ್ಟ್‌ಕಾರ್ಡ್‌ ಮತ್ತು ಎಟಿವಿಎಂ ಬಳಕೆಗೆ ಸಾಕಷ್ಟು ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಎಟಿವಿಎಂಗಳ ಬಳಿ ಸಹಾಯಕರನ್ನು ನೇಮಿಸಿ ಪ್ರಯಾಣಿಕರಿಗೆ ತ್ವರಿತವಾಗಿ ಟಿಕೆಟ್‌ ದೊರೆಯುವಂತೆ ಮಾಡಿದ್ದೇವೆ. ಅಲ್ಲದೆ ಸಹಾಯಕರಿಗೆ ಸಮವಸ್ತ್ರವನ್ನೂ ವಿತರಿಸಿದ್ದೇವೆ. ಸಿಟಿ ರೈಲು ನಿಲ್ದಾಣದಲ್ಲಿ ವಿತರಣೆಯಾಗುತ್ತಿರುವ ಟಿಕೆಟ್‌ಗಳಲ್ಲಿ ಶೇ 19 ಹಾಗೂ ಯಶವಂತಪುರ ನಿಲ್ದಾಣದಲ್ಲಿ ಶೇ 14.5ರಷ್ಟು ಟಿಕೆಟ್‌ಗಳು ಎಟಿವಿಎಂ/ಸಿಟಿವಿಎಂ ಮೂಲಕವೇ ವಿತರಣೆಯಾಗುತ್ತಿವೆ. ರೈಲ್ವೆ ಟಿಕೆಟ್‌ ಬುಕಿಂಗ್‌ ಆ್ಯಪ್‌ ಬಳಕೆಯೂ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಸ್ಮಾರ್ಟ್‌ಕಾರ್ಡ್‌ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ’ ಎನ್ನುತ್ತಾರೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಎನ್‌.ಎಸ್‌.ಶ್ರೀಧರ್‌ ಮೂರ್ತಿ ಪ್ರತಿಕ್ರಿಯಿಸುತ್ತಾರೆ.

***

ಬೆಂಗಳೂರು ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ವಿತರಣೆಯಾಗಿರುವ ಸ್ಮಾರ್ಟ್‌ಕಾರ್ಡ್‌

ವರ್ಷ                    ಸ್ಮಾರ್ಟ್‌ಕಾರ್ಡ್‌

2015–16                662

2016–17               1429

2017–18                771

2018 (ಏಪ್ರಿಲ್‌–ಮೇ)    72

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು