‘ಸಂವಿಧಾನವನ್ನು ಉಳಿಸಿ’ ಎಂಬ ಆಶಯದೊಂದಿಗೆ ನಮ್ಮ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಾದರೆ ಸಂವಿಧಾನವನ್ನು ಅಳಿಸಿಹಾಕಲು ಸಾಧ್ಯವೆ ಎಂಬ ಪ್ರಶ್ನೆಯೂ ಏಳುತ್ತದೆ. ಅಳಿಸಿ ಹಾಕುವುದು ಅಷ್ಟು ಸುಲಭವಾದ ಕೆಲಸವಲ್ಲ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಭಿಪ್ರಾಯ ಮೂಡಿಸುತ್ತ ಅದರ ಮೂಲ ಸಾಮಾಜಿಕ ಸತ್ವ ಮತ್ತು ಸಮಾನತೆಯ ತತ್ತ್ವದ ಶಕ್ತಿ ಕುಗ್ಗಿಸಲು ಸಾಧ್ಯ.

ಅಂತಹ ಪ್ರಯತ್ನಗಳು ಆರಂಭವಾಗಿರುವ ಅಪಾಯವನ್ನರಿತ ವ್ಯಕ್ತಿಗಳು, ಸಂಘಟನೆಗಳು ಸಂವಿಧಾನದ ಮಹತ್ವ ಪ್ರತಿಪಾದಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅನಿವಾರ್ಯಕ್ಕೆ ಒಳಗಾಗಿವೆ. ಕರ್ನಾಟಕ ಮೂಲದ ‘ಕೇಂದ್ರ’ ಸರ್ಕಾರದ ಸಚಿವರೊಬ್ಬರು ‘ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಬಂದಿದ್ದೇವೆ’ ಎಂದು ಹೇಳುವುದರಿಂದ ಆರಂಭಿಸಿ ಕೆಲವು ತಿಂಗಳ ಹಿಂದೆ ದೆಹಲಿಯ ಜಂತರ್ ಮಂತರ್ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ವಿಕೃತವಾಗಿ ಕೇಕೆ ಹಾಕಿದ ಕಿಡಿಗೇಡಿಗಳವರೆಗೆ ಸಂವಿಧಾನ ವಿರೋಧಿ ವಿಕಾರ ಹಬ್ಬಿದೆ.

ಹಾಗಾದರೆ ಸಂವಿಧಾನ ಉಳಿಸುವುದೆಂದರೆ ಇಂಥ ಕಿಡಿಗೇಡಿಗಳಿಗೆ ಉತ್ತರ ಕೊಡುವ ಕ್ರಿಯೆಯಷ್ಟೇ ಆಗಬೇಕೆ ಅಥವಾ ಅವರನ್ನು ವಿರೋಧಿಸುತ್ತಲೇ ಸಂವಿಧಾನದ ತಾತ್ತ್ವಿಕತೆಗೆ ಒದಗುತ್ತ ಬಂದಿರುವ ಆತಂಕದ ವ್ಯಾಪ್ತಿಯನ್ನು ಗ್ರಹಿಸಿ ವಿರೋಧದ ವಿಚಾರವನ್ನು ವಿಸ್ತರಿಸಿಕೊಳ್ಳಬೇಕೇ? ನಿಜಕ್ಕೂ ವಿಸ್ತರಿಸಿಕೊಳ್ಳಬೇಕು.

ಮೊದಲಿಗೆ ನಮ್ಮ ಸಂವಿಧಾನದ ಪೀಠಿಕೆ ಗಮನಿಸೋಣ. ಸಂವಿಧಾನ ರಚನೆಯ ಮೂಲಕ ನಮ್ಮ ದೇಶದ ಪ್ರಜಾಸತ್ತಾತ್ಮಕತೆಗೆ ಭದ್ರ ಬುನಾದಿ ಹಾಕಿದ ಡಾ. ಅಂಬೇಡ್ಕರ್ ಸಮಾಜವಾದ ಮತ್ತು ಜಾತ್ಯತೀತ ಸಿದ್ಧಾಂತಗಳಿಗೆ ಬದ್ಧರಾಗಿದ್ದವರು. ಒಟ್ಟು ಸಂವಿಧಾನದ ಆಶಯದಲ್ಲೇ ಸಮಾಜವಾದ, ಜಾತ್ಯತೀತತೆಗಳ ಕೇಂದ್ರಪ್ರಜ್ಞೆಯಿರುವುದರಿಂದ ಆ ಪದಗಳನ್ನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು.

ಆದರೆ, ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ– ನಮ್ಮದು ‘ಸಮಾಜವಾದಿ’ ‘ಜಾತ್ಯತೀತ’ ರಾಷ್ಟ್ರ ಎಂಬ ಅಂಶವನ್ನು 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಮೊದಲೇ ಅಂಬೇಡ್ಕರ್ ಅವರಿಂದ ನಮೂದಿತವಾಗಿದ್ದ ‘ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ’ದ ಪರಿಕಲ್ಪನೆಗೆ ಪದಗಳ ಮೂರ್ತರೂಪ ಕೊಡಲಾಯಿತು. ಜೊತೆಗೆ ‘ದೇಶದ ಐಕ್ಯಮತ್ಯ ಮತ್ತು ಅಖಂಡತೆ’ಯನ್ನು ಖಾತರಿಪಡಿಸಲಾಯಿತು. ಈ ಹಿನ್ನೆಲೆಯಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಯಾರು ಯಾರಿಂದ ಎಷ್ಟು ಆತಂಕ ಹಾಗೂ ಅಪಾಯಗಳು ಎದುರಾಗಿವೆ ಎಂಬುದನ್ನು ಪರಿಶೀಲಿಸಬೇಕು.

ನಿಸ್ಸಂದೇಹವಾಗಿ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳು ಸಂವಿಧಾನದ ‘ಜಾತ್ಯತೀತ’ ತತ್ತ್ವವನ್ನು ಉಗ್ರವಾಗಿ ವಿರೋಧಿಸುತ್ತಿವೆ. ಆಂಗ್ಲಭಾಷೆಯಲ್ಲಿರುವ ‘ಸೆಕ್ಯುಲರ್’ ಪದಕ್ಕೆ ಜಾತ್ಯತೀತ, ಧರ್ಮ ನಿರಪೇಕ್ಷ ಎಂಬ ಕನ್ನಡ ಪದಗಳಿದ್ದರೂ ಮೂಲದ ಪೂರ್ಣಾರ್ಥ ಕೊಡುವುದಿಲ್ಲವೆಂಬ ಅಭಿಪ್ರಾಯದೊಂದಿಗೇ ‘ಜಾತ್ಯತೀತ’ವೆಂಬುದೇ ಚಾಲ್ತಿಯಲ್ಲಿದೆ. ಕೋಮುವಾದಿಗಳು ಜಾತ್ಯತೀತ ಪರಿಕಲ್ಪನೆಗೆ ಅದೆಷ್ಟು ವಿರೋಧಿಗಳೆಂಬುದಕ್ಕೆ ಸಂವಿಧಾನದ ಪ್ರತಿ ಸುಟ್ಟದ್ದು ಒಂದು ಸಾಕ್ಷಿಯಾದರೆ, ಕರ್ನಾಟಕದ ಶಾಸಕರೊಬ್ಬರು ತಾವು ಗೃಹಮಂತ್ರಿಯಾಗಿದ್ದರೆ ಜಾತ್ಯತೀತವಾದಿ ಬುದ್ಧಿಜೀವಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಲು ಆದೇಶಿಸುತ್ತಿದೆ ಎಂದು ಭಾಷಣ ಮಾಡಿದ್ದು ಇನ್ನೊಂದು ಸಾಕ್ಷಿ. ಮೀಸಲಾತಿ ಮತ್ತು ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಪ್ರಸಿದ್ಧರಾದ ದೇಶದ ಅನೇಕ ನೇತಾರರ ಉದಾಹರಣೆಗಳೂ ಇವೆ. ಮಾತಿನ ಹಿಂಸೆಯ ಜೊತೆಗೆ ದೈಹಿಕ ಹಿಂಸೆಗೆ ಇಳಿದ ಅನೇಕ ಪ್ರಕರಣಗಳು ನಡೆದಿವೆ. ಬಹುಮುಖವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹಲ್ಲೆ, ಹತ್ಯೆಗಳು ನಡೆಯುತ್ತಿವೆ.

ಸ್ವಾತಂತ್ರ್ಯಾನಂತರದ ನಮ್ಮ ದೇಶದಲ್ಲಿ ಹಿಂದೆಯೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಗಾಲು ಹಾಕಿದ ಪ್ರಕರಣಗಳು ನಡೆದಿದ್ದರೂ ಅವು ಈಗಿನಷ್ಟು ಸಾಂಘಿಕವೂ ಸಂಘಟನಾತ್ಮಕವೂ ಆಗಿರಲಿಲ್ಲ. ಇಂದು ಧರ್ಮದ ಹೆಸರಿನಲ್ಲಿ ಸಾಂಸ್ಕೃತಿಕ ವೇಷಧಾರಿಗಳು ಹಲ್ಲೆಕೋರ ಭಾಷೆಯನ್ನು ಬಳಸುತ್ತಾರೆ, ಹಲ್ಲೆಗೂ ಕಾರಣರಾಗುತ್ತಾರೆ. ಏಕಧರ್ಮ ಮತ್ತು ಏಕ ಸಂಸ್ಕೃತಿ ಸ್ಥಾಪನೆಯ ‘ಸಂಕಲ್ಪ’ದ ಮೂಲಕ ಸಂವಿಧಾನದ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ.

ಇನ್ನೊಂದು ಕಡೆ ಜಾಗತಿಕವಾಗಿ ಹಬ್ಬಿರುವ ಭಯೋತ್ಪಾದಕರ ದಾಳಿಗೆ ಭಾರತವೂ ತುತ್ತಾಗುತ್ತಿದೆ. ಫೆಬ್ರವರಿ 14 ರಂದು ನಡೆದ ನಮ್ಮ ನಲವತ್ತಕ್ಕೂ ಹೆಚ್ಚು ಸೈನಿಕರ ಹತ್ಯೆಯು ಭಯೋತ್ಪಾದನಾ ಕ್ರೌರ್ಯಕ್ಕೊಂದು ಉದಾಹರಣೆ. ಒಟ್ಟಾರೆ ಧರ್ಮದ ಅಪ ವ್ಯಾಖ್ಯಾನ ಮತ್ತು ಅನುಷ್ಠಾನ, ನಮ್ಮ ನೆಲವನ್ನು ತಲ್ಲಣಗೊಳಿಸಿದೆ. ಸಂವಿಧಾನದ ವಿಷಯಕ್ಕೆ ಬರುವುದಾದರೆ ದೇಶದ ‘ಐಕಮತ್ಯ ಮತ್ತು ಅಖಂಡತೆ’ಯನ್ನು ಕಾಪಾಡಿಕೊಳ್ಳಬೇಕು, ಜಾತ್ಯತೀತ ತತ್ವ್ತವನ್ನು ಉಳಿಸಿ ಬೆಳೆಸಬೇಕು, ಧಾರ್ಮಿಕ ಸೌಹಾರ್ದ, ಸೋದರತೆ, ಸಾಮಾಜಿಕ ನ್ಯಾಯಗಳನ್ನು ಸಂರಕ್ಷಿಸಬೇಕು.

ಸಂವಿಧಾನದ ರಚನಾ ಸಭೆಯ ಚರ್ಚೆಯಲ್ಲಿ ಡಾ. ಅಂಬೇಡ್ಕರ್ ಮತ್ತು ಡಾ. ಎಸ್. ರಾಧಾಕೃಷ್ಣನ್ರವರು ಪ್ರತಿಪಾದಿಸಿದ ಒಮ್ಮತಾಭಿಪ್ರಾಯವನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ ಡಾ. ಅಂಬೇಡ್ಕರ್ ಹಿಂದೂ ಧರ್ಮದಾಚೆಗೆ ನಿಂತವರು, ಡಾ.ಎಸ್. ರಾಧಾಕೃಷ್ಣನ್ ಹಿಂದೂ ಧರ್ಮದ ಒಳಗೆ ನಿಂತವರು. ಆದರೆ ಇಬ್ಬರೂ ‘ನಮ್ಮದು ಸರ್ವಧರ್ಮಗಳ ಸಮಾನತೆಯನ್ನು ಒಪ್ಪಿಕೊಂಡ ದೇಶ. ಇಲ್ಲಿ ಯಾವುದೇ ಒಂದು ಧರ್ಮದ ಆಳ್ವಿಕೆಗೆ ಅವಕಾಶವಿಲ್ಲ’ ಎಂಬರ್ಥದ ಪ್ರತಿಪಾದನೆ ಮಾಡಿದರು. ಇದೇ ಸಂವಿಧಾನದ ಜಾತ್ಯತೀತ ತತ್ತ್ವ, ಇಂದು ಸಾಮಾಜಿಕ ಹಾಗೂ ಧಾರ್ಮಿಕ ನ್ಯಾಯ ಕಲ್ಪನೆಗೆ ಜಾತಿವಾದಿ ಹಾಗೂ ಕೋಮುವಾದಿಗಳಿಂದ ಎಂದೂ ಇಲ್ಲದಷ್ಟು ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದರಿಂದ ‘ಸಂವಿಧಾನ ಉಳಿಸಿ’ ಚಳವಳಿ ಅನಿವಾರ್ಯವಾಗಿದೆ.

ಆದರೆ ಸಂವಿಧಾನ ಉಳಿಸಿ ಚಳವಳಿ ಜಾತಿವಾದಿ, ಕೋಮುವಾದಿಗಳ ವಿರೋಧಕ್ಕಷ್ಟೇ ಸೀಮಿತವಾದರೆಪೂರ್ಣ ಸ್ವರೂಪ ಪಡೆಯುವುದಿಲ್ಲ. ಸಂವಿಧಾನವು ಜಾತ್ಯತೀತ ತತ್ತ್ವದ ಜೊತೆಗೆ ಬಹುಮುಖ್ಯವಾದ ಇತರೆ ವಿಧಾಯಕ ಅಂಶಗಳನ್ನೂ ಒಳಗೊಂಡಿದೆ. ಒಕ್ಕೂಟ ವ್ಯವಸ್ಥೆ, ಸಂಸದೀಯ ಪ್ರಜಾಪ್ರಭುತ್ವ ಪದ್ಧತಿ, ಸಮಾನತೆ, ಸಮಾಜವಾದ ಇಂಥ ಕೆಲವು ತಾತ್ತ್ವಿಕ ಪರಿಕಲ್ಪನೆಗಳು ಸಂವಿಧಾನದ ಅವಿಭಾಜ್ಯ ಅಂಗಗಳಾಗಿವೆ. ಈ ಪರಿಕಲ್ಪನಾತ್ಮಕ ಅಂಗಗಳನ್ನು ಉಳಿಸಿಕೊಳ್ಳುವಲ್ಲಿ ಜಾತಿವಾದಿ, ಕೋಮುವಾದಿ ವಿರೋಧಿ ವಲಯದ ನೇತಾರರು, ಪಕ್ಷಗಳು ಮತ್ತು ಪ್ರತಿಪಾದಕರು ಅಗತ್ಯ ಆದ್ಯತೆ ಕೊಟ್ಟಿದ್ದಾರೆಯೆ ಎಂಬ ಪ್ರಶ್ನೆ ಮುಖ್ಯವಾದುದು.

ಈಗ ಒಂದೊಂದೇ ಅಂಶಗಳನ್ನು ಪರಿಶೀಲಿಸೋಣ. ನಮ್ಮದು ಒಕ್ಕೂಟ ವ್ಯವಸ್ಥೆಯೆಂಬುದಕ್ಕೆ ಸಾಕ್ಷಿ ಬೇಕಿಲ್ಲ. ವಿವಿಧ ರಾಜ್ಯಗಳು ಸೇರಿರುವ ಸಂಯುಕ್ತ ಸ್ವರೂಪದ ಒಕ್ಕೂಟ ನಮ್ಮದಾಗಿದೆ. ಸಂವಿಧಾನದ ಪ್ರಕಾರ ಅಧಿಕಾರದ ಹಂಚಿಕೆಯನ್ನು ಸಂಯುಕ್ತ ಸರ್ಕಾರದ ಪಟ್ಟಿ, ರಾಜ್ಯದ ಪಟ್ಟಿ ಮತ್ತು ಎರಡೂ ಅಧಿಕಾರ ಪಡೆದ ಸಮವರ್ತಿ ಪಟ್ಟಿಗಳಲ್ಲಿ ವಿಂಗಡಿಸಲಾಗಿದೆ. ಒಟ್ಟಾರೆ ಒಕ್ಕೂಟ ವ್ಯವಸ್ಥೆಯ ಮೂಲ ಆಶಯದಲ್ಲಿ ಅಖಂಡತೆಯ ನಡುವೆಯೇ ರಾಜ್ಯಗಳ ಸ್ವಾಯತ್ತತೆಯೂ ಅಂತರ್ಗತವಾಗಿದೆ. ಆದರೆ ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಯನ್ನು ಪ್ರಾದೇಶಿಕ ಪಕ್ಷಗಳನ್ನೂ ಒಳಗೊಂಡಂತೆ ಯಾವ ಪಕ್ಷಗಳೂ ಪ್ರಮುಖ ಪ್ರಶ್ನೆಯಾಗಿಸಿಕೊಂಡಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ‘ಚಲೇಜಾವ್ ಚಳವಳಿ’ಗೆ ಕರೆಕೊಟ್ಟು ಅಂದಿನ ಕಾಂಗ್ರೆಸ್ ‘ಸಂವಿಧಾನವು ಒಕ್ಕೂಟ ಸ್ವರೂಪದ್ದಾಗಿದ್ದು ಈ ಒಕ್ಕೂಟದ ಘಟಕಗಳಿಗೆ ಅತಿಹೆಚ್ಚಿನ ಸ್ವಾಯತ್ತತೆ ನೀಡಬೇಕು’ ಎಂದು ನಿರ್ಣಯಿಸಿತ್ತು. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಒಕ್ಕೂಟ ಪದ್ಧತಿಯನ್ನು ಒಳಗೊಂಡಿದ್ದರೂ ಅನೇಕ ಸಂದರ್ಭಗಳಲ್ಲಿ ‘ಕೇಂದ್ರ’ (ಸಂಯುಕ್ತ) ಸರ್ಕಾರವು ರಾಜ್ಯಗಳನ್ನು ‘ವಿಧೇಯ’ ನೆಲೆಯಲ್ಲಿ ನಡೆಸಿಕೊಳ್ಳುವ ‘ಯಜಮಾನ’ನಾಗಿ ವರ್ತಿಸುತ್ತ ಬಂದಿದೆ. ಇದನ್ನು ಗಮನಿಸಿದ ರಾಜಾಜಿಯವರು 1952ರಲ್ಲಿ ‘ರಾಜ್ಯ ಸರ್ಕಾರಗಳೆಂದರೆ ವೈಭವೀಕೃತ ಮುನಿಸಿಪಾಲಿಟಿಗಳು ಎಂಬಂತಾಗಿದೆ’ ಎಂದು ವಿಷಾದಿಸಿದರು. ‘ಜನರ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಪೂರ್ಣ ಅಧಿಕಾರ ಮತ್ತು ಹಣ ಎಲ್ಲಿದೆ?’ ಎಂದು ಪ್ರಶ್ನಿಸಿದರು.

ಎಡಪಕ್ಷಗಳ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂಬೂದರಿಪಾಡ್ ಅವರು ರಾಜ್ಯಗಳ ಸ್ವಾಯತ್ತತೆ ಕುರಿತು ನಿಂತರ ಪ್ರತಿಪಾದನೆ ಮಾಡಿದರು (1957). ನಂತರ 1977ರಲ್ಲಿ ಪಶ್ವಿಮ ಬಂಗಾಳದ ಮುಖ್ಯಮಂತ್ರಿಗಳಾಗಿದ್ದ ಜ್ಯೋತಿಬಸು ಅವರು ರಾಜ್ಯಗಳ ಸ್ವಾಯತ್ತ ಅಧಿಕಾರದ ಪರ ದನಿಯೆತ್ತಿದರು. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಸ್ವಲ್ಪ ಮಟ್ಟಿಗೆ ಸ್ವಾಯತ್ತತೆ ಕುರಿತು ಪ್ರಸ್ತಾಪಿಸಿದ್ದುಂಟು. ಕೇಂದ್ರ–ರಾಜ್ಯಗಳ ಅಧಿಕಾರ ಸಂಬಂಧವಾಗಿ ರಚಿತವಾದ ಸರ್ಕಾರಿಯಾ ಆಯೋಗದ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಆದ್ದರಿಂದ ರಾಜ್ಯಗಳ ಸ್ವಾಯತ್ತಾಧಿಕಾರವನ್ನು ಮೊಟಕು ಮಾಡುವ ಪ್ರಯತ್ನಗಳನ್ನು ‘ಕೇಂದ್ರ’ ಸರ್ಕಾರ ಬಿಟ್ಟಿಲ್ಲ.

ಹಿಂದಿ ಹೇರಿಕೆಯ ವಿಷಯ ಬಂದಾಗ ಕರ್ನಾಟಕದ ಕೆಲವು ಸಂಘಟನೆಗಳು ಮತ್ತು ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿವೆ. ಸಂವಿಧಾನವು ಹಿಂದಿಯನ್ನು ರಾಷ್ಟ್ರಭಾಷೆಯೆಂದು ಎಲ್ಲೂ ಹೆಸರಿಸದಿದ್ದರೂ ಹಿಂದಿಗೆ ಕೆಲವು ವಿಶೇಷ ಸವಲತ್ತುಗಳನ್ನು ನೀಡಿದೆ. ಹಿಂದಿ ಅನುಷ್ಠಾನಕ್ಕೆ ರಾಷ್ಟ್ರೀಯ ಆಯೋಗ ರಚನೆ, ಸಂಸದೀಯ ಸಮಿತಿಯಿಂದ ಪರಿಶೀಲನೆ ಮುಂತಾದ ವಿಶೇಷ ಸವಲತ್ತುಗಳು (ವಿಧಿ 344 ಮತ್ತು 351) ಹಿಂದಿಗೆ ಲಭ್ಯವಾಗಿದ್ದು ಈ ಸವಲತ್ತುಗಳನ್ನು ಎಲ್ಲ ಭಾಷೆಗಳಿಗೂ ವಿಸ್ತರಿಸುವ ತಿದ್ದುಪಡಿಗಾಗಿ ಒತ್ತಾಯಿಸುವ ಹೋರಾಟ ಕಟ್ಟಿದರೆ ಹಿಂದಿ ವಿರೋಧಕ್ಕೊಂದು ತಾತ್ವಿಕತೆ ಬರುತ್ತದೆ. ಇಲ್ಲದಿದ್ದರೆ ಅದು ‘ದಾಯಾದಿ ಕಲಹ’ದ ಭಾವುಕ ನೆಲೆಯಲ್ಲಿ ನಿಂತು ಬಿಡುತ್ತದೆ. ಸರ್ವ ಭಾಷಾ ಸಮಾನತೆಯ ಸಿದ್ಧಾಂತವು ಸಂವಿಧಾನ ಒಳಗೊಂಡ ಬಹುತ್ವ ಭಾರತದ ಭಾಷಿಕ ತತ್ತ್ವವಾಗಬೇಕಾಗಿದೆ.

ಕರ್ನಾಟಕದಲ್ಲಿ ವೃತ್ತಿಶಿಕ್ಷಣ ಪದವಿ ಪ್ರವೇಶಕ್ಕೆ ನಡೆಸುತ್ತಿದ್ದ ಸಿಇಟಿ ರಾಷ್ಟ್ರಾದ್ಯಂತ ಹೆಸರು ಮಾಡಿತ್ತು. ಆದರೆ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಒಂದೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ‘ನೀಟ್’ (NEET) ಜಾರಿಗೆ ತಂದಿತು. ಎಂಜನಿಯರಿಂಗ್ ಕಾಲೇಜು ಪ್ರವೇಶಕ್ಕೂ ಇಂಥದೇ ಕೇಂದ್ರೀಕೃತ ಪದ್ಧತಿ ಅಳವಡಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿದೆ. ಶಿಕ್ಷಣವು ಸಂವಿಧಾನದ ಪ್ರಕಾರ ‘ಸಮವರ್ತಿಪಟ್ಟಿ’ಯಲ್ಲಿ ಇರುವುದನ್ನು ಬಳಸಿಕೊಂಡು ಕೇಂದ್ರವು ಕೇಂದ್ರೀಕೃತ ವ್ಯವಸ್ಥೆಗೆ ಮುಂದಾಗಿದೆ. ಆದರೆ ಸಮವರ್ತಿಪಟ್ಟಿಯೂ ಕೇಂದ್ರೀಕೃತ ಪದ್ಧತಿಯನ್ನು ಪ್ರತಿಪಾದಿಸುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ‘ಕೇಂದ್ರ’ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಪಾಲುದಾರರನ್ನಾಗಿ ಮಾಡಿದೆ. ಇದು ಅವಕಾಶವಾಗಬೇಕೇ ಹೊರತು ಕೇಂದ್ರೀಕೃತ ಅಧಿಕಾರವಾಗಬೇಕಿಲ್ಲ. ರಾಜ್ಯಗಳ ಶೈಕ್ಷಣಿಕ ಅವಕಾಶ ಹಾಗೂ ಹಕ್ಕುಗಳನ್ನು ಕಿತ್ತುಕೊಳ್ಳಬೇಕಾಗಿಲ್ಲ. ಆದ್ದರಿಂದ ಎಲ್ಲ ರಾಜ್ಯಗಳೂ ಕೇಂದ್ರೀಕೃತ ‘ನೀಟ್’ಪದ್ಧತಿಯನ್ನು ವಿರೋಧಿಸಬೇಕಿತ್ತು.

ಆದರೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೊರತುಪಡಿಸಿ ಯಾರೊಬ್ಬರೂ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಉಳಿದ ಪ್ರಾದೇಶಿಕ ಪಕ್ಷಗಳಿಗೂ ಇದೊಂದು ಪ್ರಶ್ನೆಯಾಗಲಿಲ್ಲ. ರಾಜ್ಯಗಳ ಸ್ವಾಯತ್ತತೆಯ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲೇ ನಿರ್ಣಯ ಮಾಡಿದ್ದ ಕಾಂಗ್ರೆಸ್ಸಿಗೂ ಕೇಂದ್ರೀಕೃತ ನೀತಿಯ ಅಪಾಯ ಅರಿವಾಗಲಿಲ್ಲ ಅಥವಾ ಅದ್ಯಾವುದೂ ಬೇಕಿರಲಿಲ್ಲ. ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬಾವುಟಕ್ಕೆ ಆಸಕ್ತಿ ತೋರಿದ ಕಾಂಗ್ರೆಸ್ ಸರ್ಕಾರವು ‘ನೀಟ್’ ಪದ್ಧತಿಯನ್ನಷ್ಟೇ ಅಲ್ಲಿ ಕೇಂದ್ರೀಯ ಪಠ್ಯಗಳ ಅನುವಾದಕ್ಕೆ ರಾಜ್ಯದ ಶಿಕ್ಷಣ ಇಲಾಖೆ ಮುಂದಾದಾಗ ತಡೆಯೊಡ್ಡಲಿಲ್ಲ.

ಇದರ ಫಲವಾಗಿ ಈಗ ರಾಜ್ಯದ ಶಿಕ್ಷಣ ಇಲಾಖೆಯು 6ನೇ ತರಗತಿಯಿಂದ ಭಾಷಾ ವಿಷಯ ಹೊರತಾದ ಎಲ್ಲ ಪಠ್ಯ ಪುಸ್ತಕಗಳನ್ನೂ ಎನ್.ಸಿ.ಇ.ಆರ್.ಟಿ.ಯಿಂದ ’ಕಡ’ ತೆಗೆದುಕೊಂಡು ಅನುವಾದಿಸುತ್ತಿದೆ. ನಾನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನಾಗಿದ್ದಾಗ ಯಾವುದೇ ಕಾರಣಕ್ಕೂ ಸಮಾಜ ವಿಜ್ಞಾನದ ಎನ್.ಸಿ.ಇ.ಆರ್.ಟಿ.ಪಠ್ಯಗಳನ್ನು ಅನುವಾದಿಸಿ, ಅಳವಡಿಸಬಾರದೆಂದು ತಡೆದಿದ್ದೆ. ಕೇಂದ್ರ ಮತ್ತು ರಾಜ್ಯ ಪಠ್ಯ ಪುಸ್ತಕಗಳಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪಠ್ಯಗಳನ್ನು ತೌಲನಿಕವಾಗಿ ಅಧ್ಯಯನಿಸಿ ಅದರ ಆಧಾರದ ಮೇಲೆ ಗುಣಮಟ್ಟ ನಿರ್ಧರಿಸುವ ಕೆಲಸ ಆಗಿತ್ತು. ಈಗಲೂ ಹಾಗೆ ಮಾಡಬಹುದೇ ಹೊರತು ಸ್ಥಳೀಯ ಇತಿಹಾಸ, ಪರಿಸರ, ಪರಿಕರ ಯಾವುದರ ಸುಳಿವೂ ಇಲ್ಲದ ಎನ್.ಸಿ.ಇ.ಆರ್.ಟಿ. ಪುಸ್ತಕಗಳ ಅನುವಾದ ಮಾಡಿಸಿ ರಾಜ್ಯದ ಮಕ್ಕಳಿಗೆ ಬಲವಂತವಾಗಿ ಉಣಿಸುವುದು ಸಲ್ಲದು, ಇದು ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಯ ಉಲ್ಲಂಘನೆ. ಒಕ್ಕೂಟ ಪದ್ಧತಿಯನ್ನು ಮುಕ್ಕಾಗಿಸುವ ಪ್ರಯತ್ನ. ಶಿಕ್ಷಣ ಮತ್ತು ಸಂಸ್ಕೃತಿಯ ಕ್ಷೇತ್ರಗಳನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ ಮತ್ತು ನೇತಾರರಿಗೆ ಸ್ವಾಯತ್ತತೆಯ ಸೂಕ್ಷ್ಮ ಅರ್ಥವಾಗುವುದಿಲ್ಲ.

ಇನ್ನು ಜಿ.ಎಸ್.ಟಿ. ವಿಷಯಕ್ಕೆ ಬರೋಣ. ತೆರಿಗೆಯ ಸರಳೀಕರಣಕ್ಕಾಗಿ ಆರಂಭವಾದ ಜಿ.ಎಸ್.ಟಿ. ಪರಿಕಲ್ಪನೆಯು ತೆರಿಗೆಗಳ ಕೇಂದ್ರೀಕರಣದಲ್ಲಿ ಮುಕ್ತಾಯಗೊಂಡಿದೆ. ಸರಳೀಕರಣದ ಬದಲು ಜಟಿಲೀಕರಣವಾಗಿದೆ. ಇದು ಕೂಡ ಸಂವಿಧಾನಾತ್ಮಕ ರಾಜ್ಯ ಸ್ವಾಯತ್ತತೆ ಚರ್ಚೆಯ ವ್ಯಾಪ್ತಿಗೆ ಬರುತ್ತದೆ. ರಾಜ್ಯಗಳಿಂದಲೂ ಜಿ.ಎಸ್.ಟಿ. ಹೆಸರಿನಲ್ಲಿ ತೆರಿಗೆಗಳನ್ನು ಸಂಗ್ರಹಿಸುವ ಕೇಂದ್ರ ಸರ್ಕಾರದಿಂದ, ತೆರಿಗೆ ನೀಡಿದ ರಾಜ್ಯಗಳು ತಮ್ಮ ಪಾಲಿಗಾಗಿ ಕೈಒಡ್ಡಿ ನಿಲ್ಲಬೇಕು.

‘ಕೇಂದ್ರ’ವು ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯನ್ನು ತನ್ನ ವಿವೇಚನಾಧಿಕಾರವನ್ನು ಬಳಸಿ ಹಂಚುತ್ತದೆ. ಅಂದರೆ ರಾಜ್ಯಗಳ ನೇರ ತೆರಿಗೆ ಸಂಗ್ರಹ ಮತ್ತು ವಿನಿಯೋಗದ ಹಕ್ಕು ಉಲ್ಲಂಘನೆಯಾಗಿದೆ. ಇನ್ನೊಂದು ರೀತಿಯಲ್ಲಿ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯ ಆಶಯವನ್ನು ಉಲ್ಲಂಘಿಸಿದ ಕ್ರಮವೂ ಆಗುತ್ತದೆ. ಆದ್ದರಿಂದ ಸಂವಿಧಾನವನ್ನು ಉಳಿಸುವುದೆಂದರೆ ಶೈಕ್ಷಣಿಕ ಮತ್ತು ಆರ್ಥಿಕ ಕೇಂದ್ರೀಕರಣದ ನೀತಿಗಳನ್ನು ವಿರೋಧಿಸಿ ರಾಜ್ಯಗಳ ಸ್ವಾಯತ್ತತೆಯನ್ನು ಅಖಂಡತೆಗೆ ಧಕ್ಕೆಯಾಗದಂತೆ ಉಳಿಸಿಕೊಳ್ಳುವುದು ಎಂಬ ಅಂಶವನ್ನು ಮನಗಾಣಬೇಕು.

ಇನ್ನು, ಸಂವಿಧಾನ ನೀಡಿರುವ ಸಂಸದೀಯ ಪ್ರಜಾಪ್ರಭುತ್ವದ ವಿಷಯದಲ್ಲಿ ಸಾಮಾನ್ಯ ನಡವಳಿಕೆಗಳನ್ನೂ ಉಲ್ಲಂಘಿಸುತ್ತಿರುವುದನ್ನು ಗಮನಿಸಬೇಕು. ನಮ್ಮ ಕೆಲವು ಪ್ರಧಾನ ನೇಕಾರರಿಗೂ ಸಂಸದೀಯ ನಡವಳಿಕೆ ಮನೋಗತವಾಗಿಲ್ಲ. ಸಂಸದೀಯ ವೇದಿಕೆಗಳಲ್ಲೂ ಚುನಾವಣಾ ಪ್ರಚಾರದ ಬಹಿರಂಗ ಸಭೆಯ ವೈಖರಿಯಿಂದಲೇ ವಿಜೃಂಭಿಸುತ್ತಾರೆ. ಅಷ್ಟೇಕೆ, ಚುನಾವಣೆ ಹತ್ತಿರ ಬಂದಾಗ ಕೇಳುವ, ಹೇಳುವ ಪ್ರಶ್ನೆಯೊಂದು ಇದೆ. ‘ನಿಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು? ಮುಖ್ಯಮಂತ್ರಿ ಅಭ್ಯರ್ಥಿ ಯಾರು?’ ಇದು ಮಾಧ್ಯಮದವರನ್ನೂ ಒಳಗೊಂಡಂತೆ ಕೆಲವು ಪಕ್ಷದವರು ಕೇಳುವ ಪ್ರಶ್ನೆ. ಚುನಾವಣೆಗೆ ಮೊದಲೇ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ವ್ಯಕ್ತಿಯನ್ನು ನಿರ್ಧರಿಸಬೇಕೆಂಬ ವಿಚಾರವೇ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು.

ಚುನಾವಣೆಯಲ್ಲಿ ಬಹುಮತ ಗಳಿಸಿದ ಪಕ್ಷ ಅಥವಾ ಪಕ್ಷಗಳ ಒಕ್ಕೂಟವು ಜನರಿಂದ ಆಯ್ಕೆಯಾದ ಸಂಸದರ ಅಭಿಮತದ ಆಯ್ಕೆಯಾಗಿ ಪ್ರಧಾನಿಯನ್ನೂ ಶಾಸಕರ ಆಯ್ಕೆಗನುಗುಣವಾಗಿ ಮುಖ್ಯಮಂತ್ರಿಯನ್ನೂ ಆರಿಸುವುದು ಸಂಸದೀಯ ಪ್ರಜಾಪ್ರಭುತ್ವದ ನೀತಿ. ಹೀಗೆ ತಮ್ಮ ಅಭಿಮತವನ್ನು ವ್ಯಕ್ತಪಡಿಸುವುದು ಸಂಸದರ ಮತ್ತು ಶಾಸಕರ ಹಕ್ಕು. ಆಯ್ಕೆಯಾದ ಮೇಲೆ ಅವರೇ ಓಟು ಮಾಡಲಿ ಅಥವಾ ಆಯಾ ಪಕ್ಷದ ‘ಹೈಕಮಾಂಡ್’ಗೆ ಬಿಡಲು ನಿರ್ಣಯಿಸಲಿ– ಒಟ್ಟಾರೆ ಅವರ ಅಭಿಪ್ರಾಯ ಸ್ವಾತಂತ್ರ್ಯವನ್ನು ಸಂರಕ್ಷಿಸುವುದು ಸಂವಿಧಾನವನ್ನು ಉಳಿಸುವ ಒಂದು ವಿಸ್ಮಾಯಕ ವಿಧಾನ.

ಆದರೆ ಈಗ ಕೆಲವು ಪಕ್ಷಗಳು ಚುನಾವಣೆಗೆ ಮೊದಲೇ ‘ಅಧಿಕೃತ’ವಾಗಿ ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗುವ ವ್ಯಕ್ತಿಯನ್ನು ಹೆಸರಿಸುತ್ತವೆ, ಹೆಸರಿಸಲು ಇತರೆ ಪಕ್ಷಗಳನ್ನೂ ಒತ್ತಾಯಿಸುತ್ತವೆ. ವಿಪರ್ಯಾಸವೆಂದರೆ, ಈ ಸಂವಿಧಾನ ವಿರೋಧಿ ನಡವಳಿಕೆಯನ್ನು ವಿರೋಧಿಸುವ ಬದಲು ‘ಕೆಲವು’ ಮಾಧ್ಯಮದವರೂ ಇದೇ ಪ್ರಶ್ನೆ ಕೇಳುತ್ತಾರೆ. ಮತ್ತೂ ವಿಪರ್ಯಾಸವೆಂದರೆ ‘ಸಂವಿಧಾನ ಉಳಿಸಿ’ ಎನ್ನುವ ಕೆಲವರಿಗೆ, ಸಂಸದೀಯ ನಡಾವಳಿಯ ಈ ಉಲ್ಲಂಘನೆಯನ್ನು ವಿರೋಧಿಸುವುದು ಮುಖ್ಯವಾಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದ ಸಾಮಾನ್ಯ ನಡಾವಳಿಯ ಈ ಒಂದು ಅಂಶವನ್ನೂ ಒಳಗೊಳ್ಳದ ರಾಜಕಾರಣ ಸಂವಿಧಾನದ ಸೂಕ್ಷ್ಮತೆಯನ್ನು ನಾಶ ಮಾಡುತ್ತದೆಯೆಂದು ಸಂವಿಧಾನ ಉಳಿಸುವ ಕಾಳಜಿಯುಳ್ಳವರೆಲ್ಲ ಹೇಳಲೇ ಬೇಕಾಗಿದೆ. ಇದು ಫ್ಯೂಡಲ್ ಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ ಎಂದು ಮನವರಿಕೆ ಮಾಡಬೇಕಾಗಿದೆ.

ಪ್ರಮಾಣ ವಚನವನ್ನು ಜನಪ್ರತಿನಿಧಿಗಳು ಯಾರ ಅಥವಾ ಯಾವ ಹೆಸರಿನಲ್ಲಿ ಸ್ವೀಕರಿಸುತ್ತಾರೆಂಬುದು ಸಹ ಪ್ರಶ್ನಾರ್ಹ ವಿಷಯವಾಗಿದೆ. ಹಿಂದೆ ಕೆಲವರು ದೇವರ ಅಥವಾ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಇತ್ತೀಚೆಗೆ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ನಮ್ಮ ರಾಜಕಾರಣದಲ್ಲಿ ಸತ್ಯಕ್ಕೆ ಸಿಕ್ಕಿರುವ ಸ್ಥಾನಕ್ಕೆ ಈ ಸಂಖ್ಯಾಕಡಿತ ಒಂದು ಸಂಕೇತವಾದೀತು. ಇರಲಿ, ಈಗ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವವರು ಒಟ್ಟಾರೆ ದೇವರ ಬದಲು ತಂತಮ್ಮ ಇಷ್ಟದ ದೇವರ ಹೆಸರುಗಳನ್ನು ಹೇಳತೊಡಗಿದ್ದಾರೆ. ಇನ್ನು ಕೆಲವರು ತಮ್ಮ ರಾಜಕೀಯ ನೇತಾರರ ಹೆಸರನ್ನು ಹೇಳಿ ಋಣ ತೀರಿಸುವುದೂ ಉಂಟು. ಸದ್ಯ ತಂತಮ್ಮ ಜಾತಿಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿಲ್ಲ ಎಂಬುದೊಂದೇ ಸಮಾಧಾನದ ಸಂಗತಿ. ಅಂತಹ ದುರ್ಗತಿಯೂ ಬರುವುದಕ್ಕೆ ಮುಂಚೆ ಸಂವಿಧಾನದ ಹೆಸರಲ್ಲೇ ಎಲ್ಲರೂ ಪ್ರಮಾಣ ವಚನ ಸ್ವೀಕರಿಸುವುದನ್ನು ಕಡ್ಡಾಯ ಮಾಡಬೇಕಾಗಿದೆ.

ಸಂವಿಧಾನವು ತನ್ನ ಪೀಠಿಕೆಯಲ್ಲಿ ಸ್ಪಷ್ಟವಾಗಿ ಒಟ್ಟು ಒಡಲಲ್ಲಿ ಆಶಯವಾಗಿ ನಮ್ಮದು ಸಮಾಜವಾದಿ ರಾಷ್ಟ್ರ ಎಂದು ನಮೂದಿಸಿದೆ. ಹಾಗಾದರೆ ನಮ್ಮದು ನಿಜಕ್ಕೂ ಸಮಾಜವಾದಿ ರಾಷ್ಟ್ರವೇ? ಕಡೆಯ ಪಕ್ಷ ಸಮಾಜವಾದಿ ಆಶಯಗಳು ಸರ್ಕಾರದ ಸಾಮಾಜಿಕ ಆರ್ಥಿಕ ನೀತಿಗಳಲ್ಲಿ ಪ್ರತಿಫಲನಗೊಂಡಿವೆಯೆ? ಈಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಿರಾಶೆ ಕಾಣಿಸುತ್ತದೆ. ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಜನರಿಗೆ ನೀಡಿದ ಶಕ್ತಿಗಳಾಗಿರುವುದು ನಿಜ.

ಸಾಮಾಜಿಕ ನ್ಯಾಯದ ಆಶಯಗಳಿಗೆ ಅನುಗುಣವಾಗಿ ಅನುಷ್ಠಾನಗೊಂಡ ಕೆಲವು ಯೋಜನೆಗಳು ಸಮಾಜವಾದದ ಮೂಲ ನೆಲೆಯಿಂದ ಪ್ರೇರಿತವಾಗಿರುವುದೂ ನಿಜ. ಆದರೆ ಜಾಗತೀಕರಣದ ಹೆಸರಿನಲ್ಲಿ ಜಾರಿಗೊಳಿಸಿದ ಮುಕ್ತ ಆರ್ಥಿಕ ನೀತಿ ಅಥವಾ ಉದಾರೀಕರಣ ನೀತಿಗಳ ಫಲವಾಗಿ ಸಮಾಜವಾದ ಸೆರೆವಾಸ ಅನುಭವಿಸುವಂತಾಗಿದೆ. 1991–92ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಅರ್ಥ ಸಚಿವ ಮನಮೋಹನ್ ಸಿಂಗ್ ಜೋಡಿ ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ತಂದ ಮುಕ್ತ ಆರ್ಥಿಕ ನೀತಿಯು ದೇಶದ ‘ದೃಷ್ಟಿ ಕೋನ’ವನ್ನು ಸಮಾಜವಾದದಿಂದ ಬಂಡವಾಳಶಾಹಿ ವಲಯಕ್ಕೆ ಕೊಂಡೊಯ್ಯಲು ‘ಶಂಖ ಸ್ಥಾಪನೆ’ (ಶಂಕುಸ್ಥಾಪನೆ ಅಲ್ಲ) ಮಾಡಿತು. ಮುಕ್ತ ಆರ್ಥಿಕ ನೀತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಶಂಖನಾದ ಮಾಡಲಾಯಿತು.

ಮುಂದೆ 1995ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರವು WTO ಒಪ್ಪಂದಕ್ಕೆ ಸಹಿ ಹಾಕಿ ಜಾಗತೀಕರಣವನ್ನು ಅಧಿಕೃತಗೊಳಿಸಿತು. ಈಗ ಮೋದಿ ನೇತೃತ್ವದ ಸರ್ಕಾರವು ಮುಕ್ತ ಆರ್ಥಿಕ ನೀತಿಯನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ, ಈ ಆರ್ಥಿಕ ನೀತಿಯ ಜನಕ ಮನಮೋಹನ್ ಸಿಂಗ್ ಕಾಲದ ಹಿಂಜರಿಕೆಯ ಕಾಲ್ನಡಿಗೆಯನ್ನು ಮುರಿದು ವೇಗ ವರ್ಧಕ ವಾಹನಗಳಲ್ಲಿ ಆರ್ಥಿಕ ನೀತಿಯನ್ನು ಮುಕ್ತವಾಗಿ’ ಸಾಗಿಸಲಾಗುತ್ತಿದೆ. ಈಗ ಆರ್ಥಿಕ ನೀತಿಯೂ ಒಂದು ಸರಕು. ಸರ್ಕಾರಕ್ಕೆ ಸರಕನ್ನು ಸಲೀಸಾಗಿ ಸಾಗಿಸುವ, ಸರಬರಾಜು ಮಾಡುವ ಕೆಲಸ, ಸಂವಿಧಾನದಲ್ಲಿರುವ ‘ಸಮಾಜವಾದ’ವೆಂಬ ಆಶಯ ಬೇಂದ್ರೆಯವರ ‘ಕುರುಡು ಕಾಂಚಾಣ’ ಕವಿತೆಯ ‘ಅಂಗಾತ ಬಿತ್ತೊ ಹೆಗಲಲಿ ಎತ್ತೊ’ ಎಂಬಂತಾಗಿದೆ. ‘ಕುರುಡು ಕಾಂಚಾಣ’ದಲ್ಲಿ ಬಂಡವಾಳಶಾಹಿಯನ್ನು ಕುರಿತು ಹೇಳಿದ ಈ ಸಾಲು ಸಮಾಜವಾದಕ್ಕೆ ಅನ್ವಯಿಸುವಂತಾದದ್ದು ಎಂಥ ವಿಪರ್ಯಾಸ.

ಮುಕ್ತ ಆರ್ಥಿಕ ನೀತಿಯ ವಿಪರ್ಯಾಸಗಳನ್ನು ಕುರಿತು ಹರ್ಬಟ್ ಅಪ್ರೇಕರ್ ಎಂಬ ಚಿಂತಕರು ಹೇಳಿರುವ ವಿಚಾರಗಳು ಇಲ್ಲಿ ಉಲ್ಲೇಖನೀಯವಾಗಿದೆ. 1) ಮುಕ್ತ ಆರ್ಥಿಕ ನೀತಿಗೆ ಮುಕ್ತ ವ್ಯಾಪಾರ ಮತ್ತು ಮಾರುಕಟ್ಟೆಯಷ್ಟೇ ಮುಖ್ಯ, 2) ಈ ನೀತಿಯು ದೇಶದ ಆರ್ಥಿಕತೆಯಲ್ಲಿ ಬಂಡವಾಳಶಾಹಿಯ ಪಾತ್ರವನ್ನು ಸಹಜ, ಸ್ವಾಭಾವಿಕ ಎಂದು ಒಪ್ಪಿಕೊಳ್ಳುತ್ತದೆ, 3) ಮುಕ್ತ ಆರ್ಥಿಕ ನೀತಿಯು ಸರ್ಕಾರಿ ನಿಯಂತ್ರಣವನ್ನು ನಿರಾಕರಿಸುತ್ತದೆ. ಖಾಸಗಿಯವರೇ ಸರ್ಕಾರದ ಮೇಲೆ ನಿಯಂತ್ರಣವನ್ನು ಹೇರುತ್ತಾರೆ. 4) ರಾಜಕೀಯ ಸ್ವಾತಂತ್ರ್ಯ ಇರಲಿ, ಆರ್ಥಿಕ ಸ್ವಾತಂತ್ರ್ಯ ಸಲ್ಲದು ಎಂಬುದು ಈ ನೀತಿಯ ಒಂದು ಭಾಗ, 5) ಅಸಮಾನತೆಯೆಂಬುದು ಸ್ವಾತಂತ್ರ್ಯದ ಒಂದು ಸ್ವಾಭಾವಿಕ ಪರಿಣಾಮ ಎಂದು ಮುಕ್ತ ಆರ್ಥಿಕ ನೀತಿ ನಂಬುತ್ತದೆ.

ಈ ಐದು ಅಂಶಗಳನ್ನು ಗಮನಿಸಿದಾಗ ‘ಮುಕ್ತ ಆರ್ಥಿಕ ನೀತಿಯು ಖಾಸಗೀಕರಣ ಮತ್ತು ಅಸಮಾನತೆಯ ಪರವಾಗಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈಗ ಜಾರಿಯಲ್ಲಿರುವ ಮುಕ್ತ ಆರ್ಥಿಕ ನೀತಿಯು ಸಂವಿಧಾನದ ಸ್ಪಷ್ಟ ಆಶಯಗಳಾದ ಸಮಾನತೆ ಮತ್ತು ಸಮಾಜವಾದಗಳಿಗೆ ವಿರುದ್ಧವಾಗಿದೆ. ಖಾಸಗೀಕರಣವನ್ನು ಶ್ರೇಷ್ಠವೆಂದೂ ಸರ್ಕಾರಿ ಸಾರ್ವಜನಿಕ ವಲಯವನ್ನು ಕನಿಷ್ಠವೆಂದೂ ಭಾವಿಸಿದ ಆರ್ಥಿಕ ನೀತಿಯನ್ನು ಪ್ರತಿರೋಧಿಸದೆ ಹೋದರೆ ಸಂವಿಧಾನವನ್ನು ಉಳಿಸುವ ಕ್ರಿಯೆ ಆಂಶಿಕ ಅರ್ಥವಂತಿಕೆಗೆ ಮಾತ್ರ ಪಾತ್ರವಾಗುತ್ತದೆ.

ಇಲ್ಲಿ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಕುರಿತು ಮಾಡಿದ ವ್ಯಾಖ್ಯಾನ ಉಲ್ಲೇಖನೀಯ. ಅವರ ಪ್ರಕಾರ ಪ್ರಜಾಪ್ರಭುತ್ವವು ಪರಿಪೂರ್ಣವಾಗಬೇಕಾದರೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮತ್ತು ಸಮಾನತೆ ಅಗತ್ಯ ಎಂದು ವ್ಯಾಖ್ಯಾನಿಸಿದರು. 1947ರಲ್ಲಿ ಸಂವಿಧಾನ ಸಭೆಯಲ್ಲಿ ತಮ್ಮ ವಿಚಾರ ಮಂಡನೆ ಮಾಡುತ್ತ ‘ನಮ್ಮ ಸಂವಿಧಾನದಲ್ಲಿ ಸಮಾಜವಾದ ಅಂತರ್ಗತವಾಗಿರುತ್ತದೆ’ಯೆಂದು ಹೇಳಿದ್ದಲ್ಲದೆ ಮಾರ್ಕ್ಸ್ವಾದದ ಮಹತ್ವವನ್ನೂ ಹೇಳಿದರು.

ಅದೇ ಉಸಿರಿನಲ್ಲಿ ‘ಮಾರ್ಕ್ಸ್ವಾದವು ಉಲ್ಲಂಘಿಸಲಾಗದ ವೇದವಾಗಬಾರದು’ ಎಂಬ ಎಚ್ಚರದ ನುಡಿಯನ್ನೂ ಹೇಳಲು ಮರೆಯಲಿಲ್ಲ. ಮುಖ್ಯವಾಗಿ ತಮ್ಮ ವಿಚಾರ ಮಂಡನೆಯಲ್ಲಿ ಖಾಸಗೀಕರಣ ನೀತಿಯನ್ನು ಪ್ರಬಲವಾಗಿ ವಿರೋಧಿಸಿ ‘ಅದು ಸ್ವಾರ್ಥಪರ; ಸಮಾಜಪರ ಅಲ್ಲ’ ಎಂದರು. ಸಂವಿಧಾನ ಪರರಾದ ನಾವೆಲ್ಲ ಅಂಬೇಡ್ಕರ್ ಅವರ ಈ ಮಾತುಗಳನ್ನು ಮನನ ಮಾಡಿಕೊಂಡು ಸ್ಪಂದಿಸದಿದ್ದರೆ ಸಂವಿಧಾನವನ್ನು ಎಷ್ಟರಮಟ್ಟಿಗೆ ಉಳಿಸುತ್ತೇವೆ ಎಂದು ಪ್ರಶ್ನಿಸಿಕೊಳ್ಳಬೇಕು, ಕಡೇ ಪಕ್ಷ, ಮುಕ್ತ ಆರ್ಥಿಕ ನೀತಿಗೆ ಮುಂಚೆ ಇದ್ದ ‘ಮಿಶ್ರ ಆರ್ಥಿಕ ನೀತಿ’ಯು ಖಾಸಗಿಯವರಿಗೂ ಅವಕಾಶ ಕಲ್ಪಿಸುತ್ತ ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ನಿಯಂತ್ರಣದ ಅಧಿಕಾರ ನೀಡಿತ್ತು.

ಈಗ ಸರ್ಕಾರದ ಆರ್ಥಿಕ ಅಧಿಕಾರವೆನ್ನುವುದು ಹುಸಿ ಪ್ರದರ್ಶನವಾಗಿದೆ. ಆರ್ಥಿಕ ಅಧಿಕಾರ ಕುಂಠಿತವಾದಾಗ ರಾಜಕೀಯ ಅಧಿಕಾರವೂ ಖಾಸಗಿ ನಿಯಂತ್ರಣಕ್ಕೆ ಒಳಪಟ್ಟು ಸಾಮಾಜಿಕ ನ್ಯಾಯಾಧಿಕರಣಕ್ಕೂ ಧಕ್ಕೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಹೋರಾಟವು ಕೇವಲ ಕೋಮುವಾದಿಗಳ ವಿರೋಧಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯಗಳ ಸ್ವಾಯತ್ತತೆ, ಸಂಸದೀಯ ಪ್ರಜಾಸತ್ತೆ, ಒಕ್ಕೂಟ ವ್ಯವಸ್ಥೆ, ಸಮಾನತೆ, ಸಹಿಷ್ಣುತೆ ಮತ್ತು ಸಮಾಜವಾದಿ ಆಶಯಗಳ ಆಧಾರದಲ್ಲಿ ರೂಪುಗೊಂಡ ಗಟ್ಟಿ ತಾತ್ತ್ವಿಕತೆಯನ್ನು ಒಳಗೊಳ್ಳಬೇಕು. ಕೋಮುವಾದಿಗಳನ್ನೂ ಒಳಗೊಂಡಂತೆ ಕೋಮುವಾದಿ ವಿರೋಧಿ ವಲಯದಲ್ಲೂ ಸಂವಿಧಾನದ ತಾತ್ತ್ವಿಕ ವಿರೋಧಿಗಳು ಇರುವುದನ್ನು ಮನಗಾಣಬೇಕು. ಯಾಕೆಂದರೆ ಸಂವಿಧಾನವನ್ನು ಉಳಿಸುವುದೆಂದರೆ ಏಕಮುಖೀ ವಿರೋಧವಷ್ಟೇ ಅಲ್ಲ. ಅದೊಂದು ಬಹುಮುಖೀ ಅಂಶಗಳನ್ನು ಅಂತರ್ಗತ ಮಾಡಿಕೊಂಡ ಕಾಳಜಿ, ಸಂವಿಧಾನವು ಘೋಷಣೆಗಳ ಸಾಧನವಲ್ಲ, ಸಂವಿಧಾನವು ನಮ್ಮ ಸಂಸದೀಯ ಸಂವೇದನೆ, ಶಾಸ್ತ್ರಕ್ಕೆ ಸಿಗದ ಸಂವೇದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.