ಭಾನುವಾರ, ಏಪ್ರಿಲ್ 11, 2021
25 °C
ಹೀನತೆ

ಋತುಬಂಧದಲ್ಲಿ ಕಾಡುವ ನಿದ್ರಾಹೀನತೆ

ಡಾ.ಕೆ.ಜಯಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಪ್ರತಿ ಹೆಣ್ಣಿನ ಬಾಳಿನಲ್ಲೂ ಋತುಚಕ್ರ ಮಹತ್ತರ ಪಾತ್ರ ವಹಿಸುತ್ತದೆ. ಅಂಡಾಶಯಗಳ ಕಾರ್ಯ ಕ್ಷೀಣಿಸುತ್ತಾ, ಅಂಡಾಣು ಹೊರಬರುವ ಪ್ರಕ್ರಿಯೆ ನಿಂತು ಅದರ ಜೊತೆಗೆ ಸ್ತ್ರೀಯರ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರಾನ್‌ಗಳ ಉತ್ಪಾದನೆ ಕ್ಷೀಣಗೊಳ್ಳುತ್ತದೆ. ಈ ಹಂತವನ್ನೇ ಮುಟ್ಟು ನಿಲ್ಲುವಿಕೆ, ಋತುಬಂಧ ಅಥವಾ ಮೆನೋಪಾಸ್ ಎನ್ನುತ್ತೇವೆ.

ಋತುಬಂಧ ರೋಗವಲ್ಲ. ಇದು ಶರೀರದಲ್ಲಾಗುವ ಸಹಜ ಕ್ರಿಯೆಯೇ ವಿನಃ ರೋಗದ ಸ್ಥಿತಿಯಲ್ಲ. ಈ ಸಮಯದಲ್ಲಿ ತಲೆದೋರುವ ಸಣ್ಣಪುಟ್ಟ ತೊಂದರೆಗಳೂ ಸಹಜವಾಗಿ ಆಗುವಂತಹುದು. ಇದು ಸಾಮಾನ್ಯವಾಗಿ 50ನೇ ವಯಸ್ಸಿನಲ್ಲಿ ಕಂಡು ಬರುತ್ತದೆ. ತಮಾಷೆಯೆಂದರೆ ಮುಟ್ಟು ನಿಂತು ಒಂದು ವರ್ಷ ಕಳೆದ ಮೇಲೆ ಹಿಂತಿರುಗಿ ನೋಡಿ ಕಳೆದ ವರ್ಷ ಋತುಬಂಧ ಆಗಿದೆ ಎಂದು ಹೇಳಬಹುದೇ ಹೊರತು ನಿನ್ನೆ, ಒಂದು ವಾರದ ಹಿಂದೆ ಎಂದು ಹೇಳಲು ಆಗುವುದಿಲ್ಲ.

ಋತುಬಂಧ ಆಗುವ ಸಮಯದಲ್ಲಿ ತೋರಿ ಬರುವ ಲಕ್ಷಣಗಳು ಕೆಲವು ತಿಂಗಳುಗಳಿಂದ ವರ್ಷಗಳವರೆಗೆ ಕಾಣಿಸಿಕೊಳ್ಳಬಹುದು. ಬಹಳಷ್ಟು ಮಹಿಳೆಯರು ಮೈ ಬಿಸಿಯಾಗುವುದು, ಸ್ವಲ್ಪ ಖಿನ್ನತೆ, ಆಯಾಸ ಇಂತಹವನ್ನು ಈ ಸಮಯದಲ್ಲಿ ಎದುರಿಸುತ್ತಾರೆ. ಜೊತೆಗೆ ಒತ್ತಡ, ಕೋಪ, ನಿದ್ರಾಹೀನತೆ, ಮರೆವು, ಬದಲಾಗುವ ಮೂಡ್‌ಗಳು, ಆತ್ಮಹತ್ಯಾ ಮನೋಭಾವದಿಂದ ಬಳಲುತ್ತಾರೆ.

ಶಾರೀರಿಕ, ಮಾನಸಿಕ ತೊಂದರೆ

ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಹಾಗೂ ಔದ್ಯೋಗಿಕ, ಸಾಮಾಜಿಕವಾಗಿ ಸಹಜ ಚಟುವಟಿಕೆಗಳಿಗೆ ಆರೋಗ್ಯಕರವಾದ ನಿದ್ರೆ ಬಹಳ ಮುಖ್ಯ. ಮನುಷ್ಯ ತನ್ನ ಇಡೀ ಜೀವಮಾನದ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ, ಸಾಮಾನ್ಯ ಜನರಲ್ಲಿ ನಿದ್ರಾನ್ಯೂನತೆಗಳು ಸಾಮಾನ್ಯವಾಗಿ ಬಿಟ್ಟಿದೆ.

ನಿದ್ರಾಹೀನತೆಯಿಂದ ಮೂಡ್‌ನಲ್ಲಿ ವ್ಯತ್ಯಯ, ಏಕಾಗ್ರತೆಯ ಕೊರತೆ, ಬಲಹೀನತೆ ಇನ್ನಿತರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ಅಧ್ಯಯನ ಒಂದರ ಪ್ರಕಾರ ಏಷ್ಯಾದ ಮಹಿಳೆಯರಲ್ಲಿ ಋತುಬಂಧದ ಆಚೀಚೆ ಕಾಡುವ ತೊಂದರೆಗಳಲ್ಲಿ ನಿದ್ರಾಹೀನತೆ ಹೆಚ್ಚಾಗಿ ಕಾಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೈ ಬಿಸಿಯಾಗುವುದು ಜಾಸ್ತಿ ಕಾಡುವ ತೊಂದರೆ. ನಿದ್ರಾಹೀನತೆಯಿಂದ ಬಳಲುವವರಲ್ಲಿ ಶೇ 92ರಷ್ಟು ಮಹಿಳೆಯರು ರಾತ್ರಿ ನಿದ್ರೆಯಿಂದ ಥಟ್ಟನೆ ಎದ್ದುಬಿಡುತ್ತಾರೆ. ಶೇ 60 ರಷ್ಟು ಮಹಿಳೆಯರು ಬೆಳಿಗ್ಗೆ ಬಹುಬೇಗ ಎಚ್ಚರಗೊಳ್ಳುತ್ತಾರೆ. ಶೇ 49 ರಷ್ಟು ಮಹಿಳೆಯರು ರಾತ್ರಿ ನಿದ್ದೆ ಹೋಗುವುದಕ್ಕೆ ಕಷ್ಟಪಡುತ್ತಾರೆ. ರಾತ್ರಿ ನಿದ್ದೆಗೆ ಜಾರುವುದಕ್ಕೆ ಕಷ್ಟಪಡುವವರು ಆತಂಕಕ್ಕೆ ಒಳಗಾಗಿರುತ್ತಾರೆ, ರಾತ್ರಿ ಥಟ್ಟನೆ ಎಚ್ಚರವಾಗಿ ಮತ್ತೆ ನಿದ್ರಿಸಲು ಕಷ್ಟಪಡುವವರು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಹೀಗೆ ನಿದ್ರಾಹೀನತೆಯಿಂದ ಬಳಲುವುದಕ್ಕೆ ಯಾವುದೇ ನಿರ್ದಿಷ್ಟವಾದ ದೈಹಿಕ ಕಾರಣವಿರುವುದಿಲ್ಲ. ಆದರೆ ರಾತ್ರಿ ನಿದ್ರೆ ಸರಿಯಾದ ಪ್ರಮಾಣದಲ್ಲಿ ಆಗದಿದ್ದಾಗ, ಹಗಲಿನ ಸಮಯದಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಉತ್ಸಾಹವೂ ಇರುವುದಿಲ್ಲ.

ಋತುಬಂಧದ ಆಚೀಚೆ ಉಂಟಾಗುವ ನಿದ್ರಾವ್ಯತ್ಯಯಗಳಿಗೆ ಮೈ ಬಿಸಿಯಾಗುವಿಕೆ, ಬೆವರುವಿಕೆ, ಮೂಡ್‌ನ ಬದಲಾವಣೆ, ಆತಂಕ ಇವುಗಳು ಕಾರಣವಿರಬಹುದು. ನಿದ್ರಾಹೀನತೆಗೆ ದೈಹಿಕ ಕಾರಣಗಳಿಗಿಂತ ಮಾನಸಿಕ ತೊಳಲಾಟಗಳೇ ಮುಖ್ಯ ಕಾರಣ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಮಹಿಳೆಯರಲ್ಲಿ ಮೂಡ್‌ನ ಬದಲಾವಣೆ ಹಾಗೂ ಆತಂಕದ ಚಿಹ್ನೆಗಳು ಸಾಮಾನ್ಯವಾಗಿದ್ದು, ವಯಸ್ಸಾಗುತ್ತಾ ಹೋದಂತೆ ಇವೂ ಹೆಚ್ಚಾಗುತ್ತವೆ. ಬೆಳಿಗ್ಗೆ ಬೇಗನೇ ಎಚ್ಚರವಾಗುವುದು ಖಿನ್ನತೆಯ ಮೊದಲ ಲಕ್ಷಣವಾಗಿರಬಹುದು.

ಹಲವು ಬಾರಿ ಜೀವನಶೈಲಿಯ ಸನ್ನಿವೇಶಗಳು ನಿದ್ರಾಹೀನತೆಗೆ ಕಾರಣವಾಗುತ್ತವೆ. ಮಹಿಳೆಗೆ, ಬದಲಾದ ಸಾಮಾಜಿಕ ಪರಿಸ್ಥಿತಿಯಿಂದ ಉಂಟಾದ ಜವಾಬ್ದಾರಿಗಳು, ಜೀವನ ಖಾಲಿ ಖಾಲಿ ಎನಿಸುವುದು. ಕುಟುಂಬದ ಸದಸ್ಯರೊಡನೆ ಮೈಮನಸ್ಯ, ಒತ್ತಡ ಇವು ನಿದ್ರಾಹೀನತೆಗೆ ಕಾರಣವಾಗುತ್ತವೆ, ಇದರ ಜೊತೆಗೆ ಬೆಳಕಿನ ವ್ಯವಸ್ಥೆ, ಉದ್ಯೋಗದ, ಹಣಕಾಸಿನ ತೊಂದರೆಗಳು, ದೈಹಿಕ ಅನಾರೋಗ್ಯ, ಧೂಮಪಾನ, ಮದ್ಯಪಾನ ಇವುಗಳೂ ನಿದ್ರಾಹೀನತೆಗೆ ಕಾರಣವಾಗುತ್ತವೆ. ಕೆಲವು ವೇಳೆ ಆರೋಗ್ಯದ ಸಮಸ್ಯೆಗಳಿಗೆ ಸೇವಿಸುತ್ತಿರುವ ಔಷಧಗಳ ಅಡ್ಡ ಪರಿಣಾಮದಿಂದ ನಿದ್ರಾಹೀನತೆ ಉಂಟಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಯನ್ನು ಪಡೆಯುತ್ತಿಲ್ಲ.

ಕಾರಣಗಳು

ಋತುಬಂಧದ ಸಮಯದಲ್ಲಿ ನಿದ್ರಾಹೀನತೆ ಕಂಡು ಬಂದರೆ ಉಸಿರಾಟದ ತೊಂದರೆ, ಖಿನ್ನತೆ, ಆತಂಕ ಇದೆಯೇ ಎಂದು ಪತ್ತೆ ಹಚ್ಚಬೇಕಾಗುತ್ತದೆ. ನಿದ್ರಾಹೀನತೆಗೆ ಈ ಕೆಳಕಂಡ ಕಾರಣಗಳು ಕಂಡು ಬರುತ್ತವೆ.

* ಮೈ ಬಿಸಿಯಾಗುವಿಕೆ

* ರಾತ್ರಿ ಅತಿಯಾಗಿ ಬೆವರುವುದು

* ಖಿನ್ನತೆ ಮತ್ತು ಆತಂಕ

* ನಿದ್ರೆಯಲ್ಲಿ ಉಸಿರಾಡಲು ತೊಂದರೆಯಾಗುವುದು

* ಕಾಲು ಅಲ್ಲಾಡಿಸುವುದು

* ಮಾನಸಿಕ ಕಾಯಿಲೆ

* ಪದೇ ಪ‍ದೇ ಮೂತ್ರ ವಿಸರ್ಜಿಸುವುದು

* ಬೊಜ್ಜು

* ಎದೆ ಉರಿಯ ತೊಂದರೆ

* ಮಧುಮೇಹದಿಂದಾದ ನರದೌರ್ಬಲ್ಯ

* ವಿಟಮಿನ್ ಬಿ12ರ ಕೊರತೆ

* ಬದುಕೇ ಖಾಲಿ ಖಾಲಿ ಎನಿಸುವುದು

* ದಾಂಪತ್ಯ ಸಮಸ್ಯೆ

* ಔಷಧಿಗಳ ಅಡ್ಡ ಪರಿಣಾಮ

ರಾತ್ರಿ ನಿದ್ದೆ ಬರದೆ ಎಚ್ಚರವಾಗಿದ್ದಾಗ ಕೆಲವರು ಕುರುಕುಲು ತಿಂಡಿ ತಿನ್ನಲು ಶುರು ಮಾಡುತ್ತಾರೆ. ಇದರಿಂದ ಮೈ ತೂಕ ಹೆಚ್ಚಾಗುತ್ತದೆ. ರಾತ್ರಿ ನಿದ್ದೆ ಬಾರದಿರುವಿಕೆ ಮತ್ತು ಹೆಚ್ಚಾದ ಸ್ಥೂಲತೆಯಿಂದ ಹಗಲಿನ ವೇಳೆ ನಿದ್ರೆ ಹೆಚ್ಚಾಗುತ್ತದೆ, ಕಾರ್ಯಚಟುವಟಿಕೆ ಕಡಿಮೆಯಾಗುತ್ತದೆ. ಇದರಿಂದ ತೂಕ ಮತ್ತಷ್ಟು ಹೆಚ್ಚಾಗುತ್ತದೆ. ಕೆಲವರಿಗೆ ಹೆಚ್ಚಾದ ತೂಕದಿಂದ ಉಸಿರಾಟದಲ್ಲಿ ತೊಂದರೆಯಾಗಿ, ರಾತ್ರಿ ನಿದ್ರೆ ಮಾಡುವುದಕ್ಕೆ ಕಷ್ಟವಾಗುತ್ತದೆ. ಇದರಿಂದ ಅವರು ಖಿನ್ನತೆಗೊಳಗಾಗುತ್ತಾರೆ. ಖಿನ್ನತೆ ನಿವಾರಣೆಗೆ ತೆಗೆದುಕೊಂಡ ಔಷಧದಿಂದ ಮತ್ತಷ್ಟು ತೂಕ ಹೆಚ್ಚಾಗುತ್ತದೆ. ಹೀಗೆ ಈ ವಿಷವರ್ತುಲ ಪುನಃ ಪುನಃ ಆಗುತ್ತಲೇ ಇರುತ್ತದೆ.

ಋತುಬಂಧ ಎಂಬುದನ್ನು ಸರಳವಾಗಿ ಹೇಳಬೇಕೆಂದರೆ ಚಯಾಪಚಯ ಕ್ರಿಯೆಯಲ್ಲಿ ಆಗುವ ಬದಲಾವಣೆ. ಇದು ಕಾಯಿಲೆಯಲ್ಲ ಅಥವಾ ತೊಂದರೆಯೂ ಅಲ್ಲ, ಆದರೆ ಅದಕ್ಕೆ ಸರಿಯಾದ ಗಮನವನ್ನು ನೀಡಬೇಕಿದೆ ಅಷ್ಟೆ. 

ಆಯುರ್ವೇದದಲ್ಲಿ  ಋತುಬಂಧ ಎಂದರೆ ದೇಹವನ್ನು ಶಕ್ತಿಯುತವಾಗಿ ಮಾಡುವುದು. ಇದೊಂದು ಜೀವನದ ಸಹಜವಾದ ಘಟ್ಟ ಎಂದೇ ಆಯುರ್ವೇದ ನಂಬುತ್ತದೆ.

ಇದಕ್ಕೆ ಪರಿಹಾರವೇನು?

* ನಿದ್ರೆಗೆ ತೊಂದರೆ ಮಾಡುವಂತಹ ವರ್ತನೆಗಳಿಂದ ದೂರವಿರಿ.

* ನಿದ್ರೆ ಬರದಂತೆ ತೊಂದರೆ ಉಂಟು ಮಾಡುವಂತಹ ವಾತಾವರಣದಿಂದ ದೂರವಿರಿ.

* ಪ್ರತಿದಿನ ನಿಯಮಿತ ಸಮಯಕ್ಕೆ ನಿದ್ರೆಗೆ ಮಾಡುವಂತಹ ನಿಯಮವನ್ನು ಬೆಳೆಸಿಕೊಳ್ಳಿ.

* ರಾತ್ರಿ ಮಲಗುವ ಸಮಯದಲ್ಲಿ ಕಾಫಿ, ಚಹಾ, ನಿಕೋಟಿನ್, ಮದ್ಯ‍ಪಾನ ಇವುಗಳ ಸೇವನೆ ಮಾಡಬೇಡಿ.

* ಮಲಗುವ ಸಮಯದಲ್ಲಿ ಓದಬೇಡಿ.

* ನಿದ್ರೆ ಬಂದಾಗ ಮಾತ್ರ ಮಲಗಲು ಹೊರಡಿ. ನಿದ್ರೆ ಬರುವುದಕ್ಕೆ ಮುನ್ನವೇ ಬಹಳ ಹೊತ್ತು ಹಾಸಿಗೆಯ ಮೇಲೆ ಕಾಲ ಕಳೆಯಬೇಡಿ.

* ಮಲಗುವ ಸಮಯದಲ್ಲಿ ಸಂಗಾತಿಯೊಡನೆ ಜಗಳವಾಡಬೇಡಿ.

* ಯೋಗ, ವಿಶ್ರಾಂತಿಯ ವಿಧಾನಗಳನ್ನು ಕಲಿತುಕೊಳ್ಳಿ.

* ನಿಯಮಿತ ಸಮಯಕ್ಕೆ ಮಲಗುವುದು, ನಿಯಮಿತ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

* ಮಲಗುವ 2 ಗಂಟೆಗೆ ಮುನ್ನ ವ್ಯಾಯಾಮ ಮಾಡಬೇಡಿ.

* ಹಾಸಿಗೆಯ ಮೇಲೆ ಮಲಗಿ ಟಿವಿ ನೋಡುವುದು, ಓದುವುದು, ತಿನ್ನುವುದು ಮಾಡಬೇಡಿ.

* ನಿದ್ರೆ ಬರದಿದ್ದರೆ ಹಾಸಿಗೆಯಿಂದ ಎದ್ದುಬಿಡಿ.

* ಮಧ್ಯಾಹ್ನದ ವೇಳೆ ಮಲಗಬೇಡಿ.

* ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ.

* ಸಂಜೆಯ ನಂತರ ಹೆಚ್ಚಿನ ದ್ರವಾಹಾರ ಸೇವಿಸಬೇಡಿ.

* ಮಲಗುವ ಕೋಣೆಯಲ್ಲಿ ಟಿವಿ ಇರಬಾರದು, ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಇರಬಾರದು. ದೀ‍ಪ ಮಂದವಾಗಿರಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು