ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾಮಾನುಜ ಜಯಂತಿ | ಭಗವದ್ರಾಮಾನುಜರ ವೈಭವ

ಎ. ನರಸಿಂಹನ್
Published 12 ಮೇ 2024, 0:30 IST
Last Updated 12 ಮೇ 2024, 0:30 IST
ಅಕ್ಷರ ಗಾತ್ರ

ಭಗವದ್ರಾಮಾನುಜರು ಕ್ರಿ.ಶ. 1017, ಚಿತ್ರಮಾಸ ಆರಿದ್ರಾ ನಕ್ಷತ್ರದಲ್ಲಿ ಅವತರಿಸಿ ವಿಶ್ವಕ್ಕೆಲ್ಲ ಭಕ್ತಿಯ ಮಹತ್ವವನ್ನು ಪ್ರಕಾಶಪಡಿಸಿದ ಮಹಾನುಭಾವರು. ರಾಮಾನುಜದರ್ಶನವೆಂದೇ ಪ್ರಸಿದ್ಧವಾಗಿರುವ ವಿಶಿಷ್ಟಾದ್ವೈತದರ್ಶನವನ್ನು ಪರಿಪೂರ್ಣವಾಗಿ ಸ್ಥಾಪನೆಮಾಡಿದ ಶ್ರೇಷ್ಠ ಆಚಾರ್ಯರು. 

ಶ್ರುತಿ, ಸ್ಮೃತಿ, ಬ್ರಹ್ಮಸೂತ್ರಗಳು ಮತ್ತು ಪೂರ್ವಾಚಾರ್ಯರುಗಳ ಗ್ರಂಥಗಳನ್ನು ಆಧರಿಸಿ ವಿಶಿಷ್ಟಾದ್ವೈತ ದರ್ಶನವನ್ನು ನವರತ್ನಗಳೆಂದು ಪ್ರಸಿದ್ಧವಾದ ತಮ್ಮ ಒಂಬತ್ತು ಗ್ರಂಥಗಳ ಮೂಲಕ ಸ್ಥಾಪಿಸಿದರು. ಗ್ರಂಥಗಳ ರಚನೆಯ ಮೂಲಕವಲ್ಲದೇ ಭಾರತದೇಶಾದ್ಯಂತ ಪ್ರಯಾಣಮಾಡಿ ಎಲ್ಲೆಡೆಯಲ್ಲಿಯೂ ಸಕಲರೂ ಉದ್ಧಾರವಾಗುವ ಮಾರ್ಗವನ್ನು ಉಪದೇಶಿಸಿ, ದೇವಸ್ಥಾನಗಳಲ್ಲಿಯೂ ಪೂಜಾವಿಧಾನವನ್ನು ವ್ಯವಸ್ಥೆಗೊಳಿಸಿದರು. ಹೀಗೆ ಬಹುಮುಖವಾಗಿ ಲೋಕೋದ್ಧಾರವನ್ನು ಮಾಡಿದ ಅವತಾರಪುರುಷರಿವರು. ಯಾವ ಭೇದಭಾವವಿಲ್ಲದೇ ಸಕಲಚೇತನರೂ ಈ ಸಂಸಾರದಿಂದ ಪಾರಾಗುವ ಪ್ರಪತ್ತಿಯೆಂಬ ಉಪಾಯವನ್ನು ಪ್ರಮಾಣಪೂರ್ವಕವಾಗಿ ಸ್ಥಾಪಿಸಿದ ಆಚಾರ್ಯರು.

ಮಾನವನು ಎಂದಿನಿಂದಲೂ ಸುಖವನ್ನೂ ನೆಮ್ಮದಿಯನ್ನೂ ಅರಸುತ್ತಲೇ ಇರುವನು. ಈ ಆಧುನಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿಯ ಆವಶ್ಯಕತೆ ಇರುವುದೆಂಬುದು ಸರ್ವಾನುಭವಸಿದ್ಧವಾಗಿದೆ. ನೆಮ್ಮದಿಯ ಜೀವನಕ್ಕೆ ಒಂದು ಸುಲಭವಾದ ಉತ್ಕೃಷ್ಟವಾದ ಪ್ರಾಮಾಣಿಕವಾದ ಉಪಾಯವನ್ನು ತಾವು ಆಚರಿಸಿ, ಲೋಕಕ್ಕೆಲ್ಲ ಉಪದೇಶಿಸಿದ ಮಹಾಪುರುಷರು ಭಗವದ್ರಾಮಾನುಜರು.

ಮೊದಲು ಎಲ್ಲರಿಗೂ ಬೇಕಾದುದು ತತ್ತ್ವಜ್ಞಾನ. ಎಂದರೆ ಯಾವುದು ಸತ್ಯ, ಯಾವುದು ನಿತ್ಯ ಎಂಬುದು. ಜಗತ್ತಿನಲ್ಲಿ ಹಲವಿಧವಾದ ವಿಚಿತ್ರವಾದ ಪದಾರ್ಥಗಳಿರುವುವು. ಎಲ್ಲ ದೇಹಗಳಲ್ಲಿ ಕೆಲಸಮಾಡುವ ಚೈತನ್ಯವಿರುವುದು. ಈ ಜಗತ್ತಿನ ವ್ಯಾಪಾರವೆಲ್ಲವೂ ಒಂದು ನಿಷ್ಕೃಷ್ಟವಾದ ರೀತಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಯಾವುದು ಸತ್ಯಭೂತವಾದುದು, ಯಾರಾದರೂ ಇದನ್ನೆಲ್ಲ ನಿಯಮನಮಾಡುತ್ತಿರುವರೋ ಮೊದಲಾದ ವಿಷಯಗಳನ್ನು ನಾವು ಪ್ರತ್ಯಕ್ಷವಾಗಿಯೋ ಊಹೆಮಾಡಿಯೋ ತಿಳಿಯಲು ಸಾಧ್ಯವಿಲ್ಲವೆಂಬುದು ಸ್ಪಷ್ಟ. ಇವನ್ನೆಲ್ಲ ತಿಳಿಸುವ ಗ್ರಂಥವೇ ವೇದಗಳು. ಆದರೆ ಅತ್ಯಂತ ಗೂಢವಾದ ರಹಸ್ಯಗಳನ್ನು ತಿಳಿಸುವ ವೇದಗಳ ಅರ್ಥಗಳನ್ನು ತಿಳಿಯುವುದು ಬಹಳ ಕಷ್ಟ. ಅದನ್ನೆಲ್ಲ ಯಾವ ಪರಸ್ಪರ ವಿರೋಧವಿಲ್ಲದಂತೆ, ಎಲ್ಲ ವೇದವಾಕ್ಯಗಳಿಗೂ ಮುಖ್ಯಾರ್ಥವನ್ನೇ ಸ್ವೀಕರಿಸಿ ತತ್ತ್ವಾರ್ಥಗಳನ್ನು ಸ್ಥಾಪಿಸಿದ ಕೀರ್ತಿ ಭಗವದ್ರಾಮಾನುಜರಿಗೆ ಸಲ್ಲುವುದು.

ಚಿತ್, ಅಚಿತ್ ಮತ್ತು ಈಶ್ವರರೆಂಬ ಮೂರು ನಿತ್ಯವಾದ ಪರಮಾರ್ಥವಾದ ತತ್ತ್ವಗಳನ್ನು ಈ ದರ್ಶನವು ಒಪ್ಪಿಕೊಂಡಿದೆ. ಈಶ್ವರನೇ ಶ್ರೀಮನ್ನಾರಾಯಣನು, ಪರಬ್ರಹ್ಮನು, ಪರಮಾತ್ಮನು, ಜಗತ್ತಿನ ಏಕೈಕಕಾರಣನು, ದೋಷದೂರನೂ ಸಕಲಕಲ್ಯಾಣಗುಣಾಕರನೂ ಆದವನು, ಚಿತ್ ಮತ್ತು ಅಚಿತ್ ತತ್ತ್ವಗಳು ಆ ಪರಮಾತ್ಮನಿಗೆ ಶರೀರವಾಗಿರುವುದರ ಮೂಲಕ ಅವನ ಪ್ರಕಾರವಾಗಿರುವುವು. ಎಲ್ಲಕ್ಕೂ ಅಂತರ್ಯಾಮಿಯಾದ ಪರಮಾತ್ಮನನ್ನು ಆತ್ಮನನ್ನಾಗಿ ಹೊಂದದ ಪದಾರ್ಥವಿಲ್ಲ. ಈ ಸಂಸಾರವನ್ನು ದಾಟಲು ಭಕ್ತಿಯೋಗ ಮತ್ತು ಪ್ರಪತ್ತಿಯೆಂಬ ಎರಡೇ ಮಾರ್ಗಗಳೆಂದು ಶ್ರುತಿಗಳು ಬೋಧಿಸುತ್ತವೆ, ಅದರಲ್ಲಿ ಪ್ರಪತ್ತಿಯೆಂಬುದು ಸಕಲರೂ, ಯಾವ ಜಾತಿ, ಲಿಂಗ, ಗುಣ, ವಯಸ್ಸು, ಜ್ಞಾನ ಮೊದಲಾದ ಭೇದವಿಲ್ಲದೇ ಅನುಷ್ಠಿಸಬಹುದಾದ ಉಪಾಯವೆಂಬುದನ್ನು ತಾವು ಅನುಷ್ಠಾನಮಾಡಿ ಎಲ್ಲರಿಗೂ ಉಪದೇಶಿಸಿದರು. ಆ ಪರಮಾತ್ಮನ ಚರಣಯುಗಳಗಳ ಧ್ಯಾನ, ಅರ್ಚನ, ಪ್ರಣಾಮ ಇವುಗಳನ್ನು ಪ್ರೀತಿಪೂರ್ವಕವಾಗಿ ಮಾಡುವುದೇ ಭಕ್ತಿಯೋಗವೆಂಬ ಉಪಾಯ. ಹಾಗೆ ಆ ರೀತಿಯ ನಿರಂತರ ಧ್ಯಾನ ಮೊದಲಾದುದು ಯಾರಿಗೆ ಸಾಧ್ಯವಿಲ್ಲವೋ ಅವರೆಲ್ಲರೂ ಮಹಾವಿಶ್ವಾಸದೊಡನೆ ಪರಮಾತ್ಮನಲ್ಲಿ ತಮ್ಮ ಆತ್ಮರಕ್ಷಣೆಯ ಭಾರವನ್ನು ಸಮರ್ಪಿಸಿ ಈ ಸಂಸಾರದಿಂದ ಪಾರಾಗಬಹುದು. ಇದುವೇ ಪ್ರಪತ್ತಿಮಾರ್ಗ. ಇದನ್ನು ಸಕಲರೂ ಅನುಷ್ಠಿಸಬಹುದು. ಇದು ವಿಶ್ವದರ್ಶನಕ್ಕೇ ಭಗವದ್ರಾಮಾನುಜರ ಅಪೂರ್ವವಾದ ಕೊಡುಗೆ ಮತ್ತು ವಿಶ್ವಜನಾಂಗಕ್ಕೇ ಸಕಲರೂ ಉದ್ಧಾರವಾಗಬಹುದೆಂಬ ಆಶ್ವಾಸನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT