ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು

Published 5 ಸೆಪ್ಟೆಂಬರ್ 2023, 20:22 IST
Last Updated 5 ಸೆಪ್ಟೆಂಬರ್ 2023, 20:22 IST
ಅಕ್ಷರ ಗಾತ್ರ

ನಮ್ಮಲ್ಲಿ ಅವತಾರದ ಕಲ್ಪನೆಯುಂಟು. ಧರ್ಮದ ಅವನತಿಯಾದಾಗ ಲೋಕದಲ್ಲಿ ಪುನಃ ಧರ್ಮಸ್ಥಾಪನೆಗಾಗಿ ದೇವರೇ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾನೆ – ಎಂಬುದು ಈ ಕಲ್ಪನೆಯ ಸ್ವಾರಸ್ಯ. ಗಂಗೆ ಕೂಡ ಹೀಗೆ ಭೂಲೋಕದಲ್ಲಿ ಅವತರಿಸಿದವಳು; ಜೀವಿಗಳನ್ನು ಉದ್ಧಾರ ಮಾಡುತ್ತಿರುವವಳು (ಬೇಂದ್ರೆ ಅವರ ‘ಗಂಗಾವತರಣ’ ಕವನವನ್ನು ಇಲ್ಲಿ ಮೆಲುಕು ಹಾಕಿಕೊಳ್ಳಬಹುದು). ಇದೇ ರೀತಿ ಹಲವರು ದೇವತೆಗಳ ಅವತಾರ ನಡೆದಿದೆ, ನಡೆಯುತ್ತಲೂ ಇರುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯದ್ದು. ಹೀಗೆ ನಡೆದ ಅವತಾರಗಳಲ್ಲಿ ವಿಷ್ಣುವಿನ ದಶಾವತಾರಗಳು ಬಹಳ ಪ್ರಸಿದ್ಧ. ಕೃಷ್ಣನ ಅವತಾರ ಈ ಹತ್ತು ಅವತಾರಗಳಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಶ್ರೀಕೃಷ್ಣನು ಪೂರ್ಣಾವತಾರಿ.

ಶ್ರೀರಾಮನ ಅವತಾರವೂ ತುಂಬ ಪ್ರಸಿದ್ಧವೇ; ಆದರೆ ಶ್ರೀಕೃಷ್ಣನನ್ನೇ ಪೂರ್ಣಾವತಾರಿ ಎಂದು ಕರೆದಿರುವುದು ಸ್ವಾರಸ್ಯಕರವಾಗಿದೆ. ನಮ್ಮ ಜೀವನದ ಎಲ್ಲ ಆಯಾಮಗಳಲ್ಲೂ ತಾದಾತ್ಮ್ಯವನ್ನು ಸಾಧಿಸಬಲ್ಲವನ ವ್ಯಕ್ತಿತ್ವವೇ ಪೂರ್ಣವ್ಯಕ್ತಿತ್ವ. ಕೃಷ್ಣನಷ್ಟು ನಮ್ಮಲ್ಲಿ ಒಂದಾಗಿ ಬೆರೆಯಬಲ್ಲ ದೈವ ಇನ್ನೊಬ್ಬನಿಲ್ಲ. ಪ್ರತಿ ಕ್ಷಣವೂ ಮನುಷ್ಯನಾಗಲು ತವಕಿಸುವ ದೈವವೆಂದರೆ ಅದು ಶ್ರೀಕೃಷ್ಣನೇ ಹೌದು. ಅವನು ಎಷ್ಟೆಲ್ಲ ವಿಧಗಳಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಾನೆ! ಸ್ನೇಹಿತನಾಗಿ, ಅಣ್ಣನಾಗಿ, ತಮ್ಮನಾಗಿ, ಮಗನಾಗಿ, ಸಾಕುಮಗನಾಗಿ, ತಂದೆಯಾಗಿ, ಗುರುವಾಗಿ, ಶಿಷ್ಯನಾಗಿ, ತುಂಟನಾಗಿ, ದೂತನಾಗಿ, ದನಕಾಯುವವನಾಗಿ, ಕಲಾವಿದನಾಗಿ, ವೀರನಾಗಿ – ಹೀಗೆ ಹಲವು ನೆಲೆಗಳಲ್ಲಿ ನಮ್ಮವನಾಗಬಲ್ಲ ದೈವ ಶ್ರೀಕೃಷ್ಣ; ಮಾತ್ರವಲ್ಲ, ಅವನು ಪ್ರೇಮಿಯೂ ಆಗಬಲ್ಲ. ದೇವರು ನಮ್ಮ ಪ್ರಿಯಕರನೂ ಆಗಬಹುದು ಎಂಬ ಕಲ್ಪನೆಯೇ ಸ್ವಾರಸ್ಯಕರವಾಗಿದೆ (ಪುತಿನ ಅವರ ‘ಗೋಕುಲ ನಿರ್ಗಮನ’ವನ್ನು ಗಮನಿಸಬಹುದು); ಕೃಷ್ಣ ನಮ್ಮ ಹೃದಯವನ್ನು ಕದಿಯಬಲ್ಲ ದೇವರು; ಬೆಣ್ಣೆಯನ್ನೂ ಕದಿಯುವ ದೇವರು!

ಕೃಷ್ಣನ ಪೂರ್ಣಾವತಾರವನ್ನು ಎತ್ತಿಹಿಡಿಯುವ ಇನ್ನೊಂದು ಆಯಾಮವೂ ಉಂಟು. ಜೀವನವನ್ನು ಪರಿಪೂರ್ಣವಾಗಿ ಕಾಣಿಸಿದವನು ಅವನು. ಇದನ್ನು ನಾವು ಅವನು ಹಾಡಿನಲ್ಲಿ, ಎಂದರೆ ‘ಭಗವದ್ಗೀತೆ’ಯಲ್ಲಿ ಕಾಣಬಹುದು. ಜೀವನದ ಸಾಕ್ಷಾತ್ಕಾರದ ಹಾದಿಯಲ್ಲಿ ಎರಡು ಧರ್ಮಗಳು ಒದಗುತ್ತವೆ; ಒಂದು: ಪ್ರವೃತ್ತಿಧರ್ಮ; ಇನ್ನೊಂದು: ನಿವೃತ್ತಿಧರ್ಮ. ಪ್ರವೃತ್ತಿಧರ್ಮದ ಗತಿಯೇ ಕ್ರಿಯಾಶೀಲತೆ; ಕರ್ಮಮಾರ್ಗ. ನಿವೃತ್ತಿಧರ್ಮದ ಗತಿ ಎಂದರೆ ಕರ್ಮಸನ್ಯಾಸ; ಅದುವೇ ತ್ಯಾಗಮಾರ್ಗ. ಈ ಎರಡರ ಸಮನ್ವಯವನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಇದನ್ನು ಶಂಕರಾಚಾರ್ಯರು ಗೀತಾಭಾಷ್ಯದ ಆರಂಭದಲ್ಲಿಯೇ ಧ್ವನಿಸಿದ್ದಾರೆ ಕೂಡ. ಸಂಸಾರಿಯಾದವನು ಹೇಗಿರಬೇಕು ಎಂಬುದಕ್ಕೂ ಗೀತೆಯಲ್ಲಿ ಮಾರ್ಗದರ್ಶನ ಸಿಗುತ್ತದೆ; ಸನ್ಯಾಸಿಗಳಿಗೂ ಉಪದೇಶ ದೊರೆಯುತ್ತದೆ. ಹೀಗಾಗಿ ಕೃಷ್ಣತತ್ತ್ವ ಎಂಬುದು ಕೇವಲ ಜೀವನದ ಯಾವುದೋ ಒಂದು ಮುಖಕ್ಕೆ ಒದಗುವ ಬೆಳಕು ಅಲ್ಲ; ಅದು ಸಮಗ್ರಜೀವನಕ್ಕೂ ಒದಗುವ ದರ್ಶನ. ಧರ್ಮದ ಸೊಗಸಿಗೂ ಸಂತಸಕ್ಕೂ ಸಂಭ್ರಮಕ್ಕೂ ಕರ್ತವ್ಯಕ್ಕೂ ಒಳಿತಿಗೂ ಒದಗಿದ ಮೂರ್ತರೂಪವೇ ಶ್ರೀಕೃಷ್ಣ. ಅವನು ದಿಟವಾದ ಅರ್ಥದಲ್ಲಿ ‘ಲೋಕಗುರು’. ಗೀತೆಯಲ್ಲಿಯೇ ಬರುವ ಶ್ಲೋಕವೊಂದು ಹೀಗಿದೆ:

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥

‘ಸುಖ-ದುಃಖಗಳನ್ನೂ ಲಾಭ–ನಷ್ಟಗಳನ್ನೂ ಸೋಲು-ಗೆಲುವುಗಳನ್ನೂ ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡಲು ತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು’ – ಇದು ಅದರ ಸರಳ ತಾತ್ಪರ್ಯ. ಇದು ನಮಗೆ ಎಂದಿಗೂ ಬೇಕಾದ ಉಪದೇಶವೇ ಆಗಿದೆ. ಕೃಷ್ಣ ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ; ತನ್ನ ಉಪದೇಶಕ್ಕೆ ತಾನೇ ಉದಾಹರಣೆಯೂ ಆದವನು. ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳನ್ನು, ಅಪಮಾನಗಳನ್ನು ಎದುರಿಸಿದರೂ ಅವನು ತನ್ನ ಕರ್ತವ್ಯಪ್ರಜ್ಞೆಯಿಂದ ದೂರ ಸರಿದವನಲ್ಲ. ಅವನಷ್ಟು ಕಷ್ಟಗಳನ್ನು ಅನುಭವಿಸಿದವರು ಬಹುಶಃ ಇತಿಹಾಸದಲ್ಲಿ ಇನ್ನೊಬ್ಬರು ಇರಲಾರರು. ಅವನು ಹುಟ್ಟುವುದಕ್ಕೂ ಮೊದಲೇ ಸಾವಿನ ಮಡಿಲಿನಲ್ಲಿ ಬಿದ್ದಿದ್ದವನು. ಎಷ್ಟೆಲ್ಲ ಬಂಧುಗಳ, ಸ್ನೇಹಿತರ, ರಾಜಮಹಾರಾಜರ ನಡುವೆ ಬದುಕಿದ್ದವನು ಕೊನೆಗೆ ಪ್ರಾಣವನ್ನು ತ್ಯಾಗ ಮಾಡುವಾಗ ಆತ್ಮೀಯರು ಯಾರೂ ಅವನ ಸಮೀಪದಲ್ಲಿ ಇರಲಿಲ್ಲ. ಈ ಹುಟ್ಟು–ಸಾವುಗಳ ನಡುವೆ ಅವನು ನೆಮ್ಮದಿಯಾಗಿ ಇದ್ದ ದಿನಗಳೂ ಕಡಿಮೆಯೇ; ನಿರಂತರವಾಗಿ ಒಂದಲ್ಲ ಒಂದು ಚಟುವಟಿಕೆಯಲ್ಲಿಯೇ ತೊಡಗಿಕೊಂಡಿದ್ದ. ಹೀಗಿದ್ದರೂ ತನ್ನ ವೈಯಕ್ತಿಕ ಸುಖ–ದುಃಖಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕರ್ತವ್ಯಬುದ್ಧಿಯನ್ನು ಮೆರೆದವನು ಶ್ರೀಕೃಷ್ಣ. ದೈವತ್ವದ ಸ್ಥಿತಿಯನ್ನೂ, ಮಾನುಷತ್ವದ ಗತಿಯನ್ನೂ ಏಕಕಾಲದಲ್ಲಿ ಕಾಣಿಸಿದವನು ಅವನು.

ಕೃಷ್ಣನೊಬ್ಬನು ಇಲ್ಲದೆ ಹೋಗಿದಿದ್ದರೆ ನಮ್ಮ ಸಂಸ್ಕೃತಿ ತುಂಬ ಸಪ್ಪೆಯಾಗಿರುತ್ತಿತ್ತು. ನಮ್ಮ ಸಂಸ್ಕೃತಿಗೆ ರಸಶಕ್ತಿಯನ್ನು ತುಂಬಿದ್ದು ಕೃಷ್ಣತತ್ತ್ವವೇ ಹೌದು. ಈ ತತ್ತ್ವದಲ್ಲಿಯೇ ನಮ್ಮೆಲ್ಲರ ಯೋಗಕ್ಷೇಮಗಳೂ ಅಡಕವಾಗಿವೆ ಎಂಬ ಭರವಸೆಯನ್ನು ಕೊಟ್ಟಿದ್ದು ಅವನ ಜೀವನ. ಹೀಗಾಗಿ ಕೃಷ್ಣನ ಜೀವನ ಮತ್ತು ದರ್ಶನ – ಎರಡೂ ನಮ್ಮ ಪಾಲಿಗೆ ಪ್ರತಿದಿನದ ಹಬ್ಬವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT