ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Buddha Purnima 2023 : ಮೈತ್ರಿ ಕರುಣೆಗಳ ಬುದ್ಧಪಥ

Published 4 ಮೇ 2023, 20:24 IST
Last Updated 4 ಮೇ 2023, 20:24 IST
ಅಕ್ಷರ ಗಾತ್ರ

ಬುದ್ಧ ಹುಟ್ಟಿದ್ದು, ಸಂಬೋಧಿಯನ್ನು (ಎಂದರೆ, ಜ್ಞಾನೋದಯವನ್ನು) ಪಡೆದದ್ದು ಮತ್ತು ಪರಿನಿರ್ವಾಣವನ್ನು(ಶರೀರತ್ಯಾಗ) ಹೊಂದಿದ್ದು – ಈ ಮೂರು ಘಟನೆಗಳು ನಡೆದದ್ದು ವೈಶಾಖದ ಹುಣ್ಣಿಮೆಯಂದೇ ಹೌದು. ಹುಣ್ಣಿಮೆ ಎಂಬುದು ತಂಪಿಗೂ ಆನಂದಕ್ಕೂ ಸಂಕೇತ. ತಂಪಿಗೂ ಆನಂದಕ್ಕೂ ಮೂಲವಾಗತಕ್ಕದ್ದು ಜ್ಞಾನವೇ ಹೌದು – ಎಂಬುದನ್ನು ಬುದ್ಧನ ಈ ಜೀವನಚಕ್ರ ಹೇಳುವಂತಿದೆ.

ಬುದ್ಧನ ಮೊದಲ ಹೆಸರು ‘ಸಿದ್ಧಾರ್ಥ’; ಅವನು ರಾಜಪುತ್ರನಾಗಿ ಜನಿಸಿದವನು. ಆದರೆ ಅವನು ತನಗೆ ಸಹಜವಾಗಿ ಪ್ರಾಪ್ತವಾಗಿದ್ದ ರಾಜ್ಯವನ್ನು ತ್ಯಾಗ ಮಾಡಿದ; ನಾಡನ್ನು ತೊರೆದು ಕಾಡನ್ನು ಸೇರಿದ; ತಪಸ್ಸನ್ನು ಆಚರಿಸಿದ; ಅರಿವನ್ನು ಸಂಪಾದಿಸಿ ‘ಬುದ್ಧ’ ಎನಿಸಿಕೊಂಡ; ಲೋಕಗುರುವಾದ. ಸಿದ್ಧಾರ್ಥನು ಬುದ್ಧನಾದದ್ದು ಅಧಿಕಾರವನ್ನು ತೊರೆದು, ತಪಸ್ವಿಯಾದಾಗಲೇ.

ಸಿದ್ಧಾರ್ಥನು ಬುದ್ಧನಾಗುವ ಮೊದಲು ತಪಸ್ಸಿಗೆ ಕುಳಿತಿದ್ದನಷ್ಟೆ. ಆಗ ಮಾರ, ಎಂದರೆ ಮನ್ಮಥನು ಅವನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾನೆ; ಆಮಿಷಗಳ ಮಳೆಯನ್ನೇ ಅವನು ಸಿದ್ಧಾರ್ಥನ ಮೇಲೆ ಸುರಿಸುತ್ತಾನೆ. ಆದರೆ ಸಿದ್ಧಾರ್ಥ ಅವುಗಳಿಂದ ಆಕರ್ಷಿತನಾಗುವುದಿಲ್ಲ; ಎಚ್ಚರವನ್ನು ತಪ್ಪುವುದಿಲ್ಲ; ಸಂಕಲ್ಪದಿಂದ ಕದಲವುದೂ ಇಲ್ಲ. ಸಿದ್ಧಾರ್ಥನು ಮಾರನ ಸೈನ್ಯವನ್ನು ಚೆನ್ನಾಗಿಯೇ ಗುರುತಿಸುತ್ತಾನೆ. ಕಾಮ, ದ್ವೇಷ, ಹಸಿವು, ನೀರಡಿಕೆ, ಲೋಭ, ಆಲಸ್ಯ, ಸಂದೇಹ, ಕೃತಜ್ಞತೆ–ಕಠೋರತೆ, ಲಾಭ–ಮಾನ–ಸನ್ಮಾನ–ಕ್ಷುಲ್ಲಕ ಪ್ರಸಿದ್ಧಿ ಮತ್ತು ಆತ್ಮಪ್ರಶಂಸೆ–ಪರನಿಂದೆ – ಇವೇ ಮಾರನ ಹತ್ತು ಸೈನ್ಯಗಳು. ಇವುಗಳ ವಿರುದ್ಧ ಹೋರಾಡಿ ಜಯವನ್ನು ಸಂಪಾದಿಸಿದವನೇ ‘ಬುದ್ಧ’. ಈ ವಿವರವೂ ರೂಪಕವಾಗಿ ಒದಗುತ್ತದೆ; ನಮ್ಮನ್ನು ಅರಿವಿನ ಹಾದಿಯಿಂದ ವಿಮುಖಮಾಡುವಂಥ ಸಂಗತಿಗಳೇ ‘ಮಾರನ ಸೈನ್ಯ’.

ಸಿದ್ಧಾರ್ಥನಿಗೆ ಬುದ್ಧತ್ವ ಒದಗಿದಾಗ ಅವನಿಗೆ ಉಂಟಾದ ಅರಿವಿನ ಅನುಭವವನ್ನು ಹೀಗೆ ಉದ್ಗರಿಸಿದ್ದಾನೆ: 

‘ಜನನಮರಣಗಳ ರೂಪದಲ್ಲಿರುವ ಸಂಸಾರದ ಕಾರಣವನ್ನು ಹುಡುಕುತ್ತ ದುಃಖಮಯವಾದ ಅಸಂಖ್ಯಾತ ಜನ್ಮಗಳನ್ನು ದಾಟಿ ತೊಳಲಿದುದಾಯಿತು. ದೇಹರೂಪದ ಹಲವು ಸೆರೆಮನೆಗಳಲ್ಲಿ ಬಳಲಿದುದೂ ಆಯಿತು. ಇಂಥ ಶರೀರರೂಪದ ಬವಣೆಗಳನ್ನು ನಿರ್ಮಿಸುವ ಗೃಹಕಾರಕ ತತ್ತ್ವವೇ! ಈಗ ನಿನ್ನನ್ನು ತಿಳಿದುಕೊಂಡಿರುವೆ. ಹೀಗಾಗಿ ಇನ್ನು ನೀನು ಮನೆಗಳನ್ನು ನಿರ್ಮಿಸಿ, ಅದರಲ್ಲಿ ನನ್ನನ್ನು ಬಂಧನದಲ್ಲಿಡಲು ಆಗದು. ನಿನ್ನ ಕಟ್ಟುಗಳೆಲ್ಲವೂ ಕಳಚಿಹೋದವು. ನಿನ್ನ ಮೂಲಸ್ತಂಭವೇ ಮುರಿದುಹೋಯಿತು. ನನ್ನ ಚಿತ್ತವು ವಿಸಂಸ್ಕಾರವಾಯಿತು. ತೃಷ್ಣೆಯು ನಾಶವಾಯಿತು.’

‘ಈಗ ನಾನು ಮನೆಯಿಲ್ಲದವನಾದೆ‘ ಎಂದು ಬುದ್ಧನ ಈ ಮಾತುಗಳನ್ನು ಸಂಗ್ರಹಿಸಬಹುದು. ‘ಮನೆ‘ ಎಂದರೆ ಸ್ವಾರ್ಥ, ಅಹಂಕಾರ, ಬಯಕೆ – ಹೀಗೆ ಮಾರನ ಸೈನ್ಯಕ್ಕೆ ಇವೆಲ್ಲವೂ ನೆಲೆ. ಇಂಥ ರೋಗಗಳಿಂದ ಬಿಡುಗಡೆಯನ್ನು ಸಾಧಿಸಿ ಲೋಕೋತ್ತರವಾದ ಪ್ರಜ್ಞೆಯಲ್ಲಿ ಸ್ಥಿರವಾಗುವುದೇ ಬುದ್ಧತ್ವ.

ಹಾಗಾದರೆ ಎಲ್ಲರೂ ಸಿದ್ಧಾರ್ಥನಂತೆ ಬುದ್ಧತ್ವನ್ನು ಸಂಪಾದಿಸಬಹುದೆ? ತಾತ್ವಿಕವಾಗಿ ಹೌದು; ಆದರೆ ಇದು ಸುಲಭವೇನೂ ಅಲ್ಲ. ಬುದ್ಧತ್ವವನ್ನು ಸಂಪಾದಿಸಲು ಅನುಸರಿಸಬೇಕಾದ ನೀತಿ–ನಿಯಮಗಳನ್ನು ಬುದ್ಧ ಸಾಕಷ್ಟು ಉಪದೇಶಿಸಿದ್ದಾನೆ. ‘ಆರ್ಯಸತ್ಯಗಳ ಮನನ’ ಮತ್ತು ‘ಆರ್ಯಾಷ್ಟಾಂಗಿಕ ಮಾರ್ಗದಲ್ಲಿ ಗಮನ’ – ಬುದ್ಧನ ಎಲ್ಲ ಉಪದೇಶಗಳನ್ನೂ ಈ ಎರಡು ಒಕ್ಕಣೆಗಳಲ್ಲಿ ಪ್ರತಿಪಾದಿಸಬಹುದು. ಈ ಎರಡು ತತ್ತ್ವಮಹಾವೃಕ್ಷಗಳ ಅರ್ಥಾನುಸಂಧಾನದಲ್ಲಿ ಮುಂದೆ ಹಲವು ರೆಂಬೆಕೊಂಬೆಗಳು ಮೂಡಿಕೊಂಡವು. ಪ್ರತಿಯೊಂದು ಜೀವಿಯನ್ನೂ ಬುದ್ಧತ್ವದ ದಡಕ್ಕೆ ಮುಟ್ಟಿಸುವ ಹೊಣೆಗಾರಿಕೆಯನ್ನು ಜ್ಞಾನಿಗಳ ಹೆಗಲಿಗೆ ಏರಿಸಲಾಯಿತು. ಅವರ ಈ ಮಹಾಯಾನದಲ್ಲಿ ಮೈತ್ರಿ–ಕರುಣೆಗಳೇ ಬುತ್ತಿಗಳಾದವು; ಶೀಲ–ಅಪ್ರಮಾದಗಳೇ ಸಂಗಾತಿಗಳಾದವು; ಧರ್ಮವೇ ದಾರಿದೀಪವಾಯಿತು. ಬೋಧಿಸತ್ವದ ಈ ಲೋಕೋತ್ತರತತ್ತ್ವವೇ ಸನ್ಯಾಸಿಗಳನ್ನು ಮಾತ್ರವಲ್ಲದೆ, ರಾಜರನ್ನು ಪ್ರಜೆಗಳನ್ನೂ ವರ್ತಕರನ್ನೂ ಗೃಹಸ್ಥರನ್ನೂ – ಎಂದರೆ ಒಟ್ಟು ಸಮುದಾಯವನ್ನು ಮುನ್ನಡೆಸಬಲ್ಲ ಧರ್ಮಚಕ್ರರಥದ ಅರಿವಿನ ಪಥವಾಗಬೇಕು ಎಂಬುದೇ ಬುದ್ಧನ ಜೀವನದರ್ಶನ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT