ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಮಗಟ ಮಾರು ದುರಂತ

ಕೊಮಗಟ ಮಾರು - ನೀರಮೇಲೆ ನಡೆದ ದುರಂತಕತೆ
Published 12 ಅಕ್ಟೋಬರ್ 2023, 0:10 IST
Last Updated 12 ಅಕ್ಟೋಬರ್ 2023, 0:10 IST
ಅಕ್ಷರ ಗಾತ್ರ

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರಕಾರದ ಅಧಿಕಾರಿಗಳ ಕೈವಾಡವಿದೆ ಎಂದು‌ ಇತ್ತೀಚೆಗೆ ಕೆನಡಾ ಆರೋಪಿಸಿದ ಬಳಿಕ ಭಾರತ- ಕೆನಡಾ ರಾಜತಾಂತ್ರಿಕ ಸಂಬಂಧಗಳು ತೀವ್ರ ಬಿಕ್ಕಟ್ಟಿನಲ್ಲಿವೆ. ಈ‌ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಭಾರತ-ಕೆನಡಾ ದೇಶಗಳ ಮಧ್ಯೆ ಮಹಾಸಾಗರದ ನೀರಿನ ಮೇಲೆಯೇ ತಿಂಗಳುಗಟ್ಟಲೆ ನಡೆದ ಒಂದು ಬಿಕ್ಕಟ್ಟಿನ ರೋಚಕಕಥನವಾದ ಕೋಮಗಟಮಾರು ಬಗ್ಗೆ ಈ ಬರಹದಲ್ಲಿ ವಿವರಿಸಲಾಗಿದೆ

ಕೊಮಗಟ ಮಾರು ಘಟನೆಯು ಭಾರತ ಮತ್ತು ಕೆನಡಾದ ಸಂಬಂಧಗಳ ಇತಿಹಾಸಗಳಲ್ಲಿ ಒಂದು ಮಹತ್ವದ ಘಟನೆಯಾಗಿದ್ದು, 20ನೇ ಶತಮಾನದ ಆರಂಭದಲ್ಲಿ ಜನಾಂಗೀಯ ತಾರತಮ್ಯ, ವಲಸೆ ನೀತಿಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟದ ಕರಾಳ ಕತೆಯನ್ನು ವಿವರಿಸುತ್ತದೆ. ಜಪಾನಿನ ಕೊಮಗಟ ಮಾರು ಎಂಬ ಹೆಸರಿನ ನೌಕೆಯ 1914ರಲ್ಲಿ ಕೆನಡಾಕ್ಕೆ ಕೈಗೊಂಡ ದುರಂತ ಪ್ರಯಾಣದ ಕತೆಯನ್ನು ವಿವರಿಸುತ್ತದೆ.

ಹಿನ್ನೆಲೆ

ಕೊಮಗಟ ಮಾರು ಎಂಬ ಚಾರ್ಟರ್ಡ್ ಹಡಗು, ಏಪ್ರಿಲ್‌ 4, 1914ರಲ್ಲಿ ಹಾಂಗ್ ಕಾಂಗ್‌ನಿಂದ ಕೆನಡಾದೆಡೆಗೆ 376 ಪ್ರಯಾಣಿಕರನ್ನು ಹೊತ್ತೊಯ್ದಿತ್ತು. ಅವರೆಲ್ಲರೂ ಭಾರತದ ಪಂಜಾಬ್‌ ನಿವಾಸಿಗಳಾಗಿದ್ದರು. (ಆ ಗುಂಪಿನಲ್ಲಿ ಕೆಲವು ಮಂದಿ ಹಿಂದೂ ಮತ್ತು ಮುಸ್ಲಿಮರಿದ್ದರು, ಉಳಿದಂತೆ ಬಹುತೇಕ ಸಿಖ್ಖರಾಗಿದ್ದರು.) ಆ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಕೆನಡಾದಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭಿಸಬಹುದು ಎಂಬ ಆಶೆಯಿಂದ ಕೆನಡಾಗೆ ಹೊರಟಿದ್ದರು.

ಕೆನಡಾಕ್ಕೆ ಆಗಮನ 

ಈ ಹಡಗು ಮೇ 23, 1914 ರಂದು ಬ್ರಿಟಿಷ್ ಕೊಲಂಬಿಯಾದ ಭಾಗವಾಗಿದ್ದ ವ್ಯಾಂಕೋವರ್‌ಗೆ ಬಂತು. ಆದರೆ, ಕೆನಡಾದ ಅಧಿಕಾರಿಗಳು ಪ್ರಯಾಣಿಕರಿಗೆ ಕೆಳಗಿಳಿಯಲು ಬಿಡಲಿಲ್ಲ.

ಕೆನಡಾದ ವಲಸೆ ನೀತಿಗಳು

ಕೆನಡಾವು ಕಠಿಣ ವಲಸೆ ಕಾನೂನು ಹೊಂದಿತ್ತು. ವಲಸಿಗರು ತಮ್ಮ ಮೂಲ ದೇಶದಿಂದ ನೇರವಾಗಿ ಕೆನಡಾಕ್ಕೆ ಪ್ರಯಾಣಿಸಬೇಕು ಎಂಬ ಕಾನೂನು ಚಾಲ್ತಿಯಲ್ಲಿತ್ತು. ಬ್ರಿಟಿಷ್‌ ಭಾರತದ ಪ್ರಜೆಗಳು ಹಾಂಗ್‌ಕಾಂಗ್‌ನಿಂದ ಬಂದಿರುವುದೇ ಅವರ ತಕರಾರಾಗಿತ್ತು. ಭಾರತದ ಜನರು ನೇರವಾಗಿ ಬರಬೇಕು ಎನ್ನುವುದು ಅವರ ವಾದವಾಗಿತ್ತು. ವಿಶೇಷವಾಗಿ ಭಾರತ ಮತ್ತು ಇತರ ಏಷ್ಯಾದ ದೇಶಗಳಿಂದ ವಲಸೆ ತಡೆಯುವ ಉದ್ದೇಶದಿಂದ ಈ ನಿಯಂತ್ರಣ ಜಾರಿಗೊಳಿಸಲಾಗಿತ್ತು.

ಪ್ರವೇಶ ನಿರಾಕರಣೆ

ಪ್ರಯಾಣಕ್ಕೆ ಅಗತ್ಯವಿದ್ದ ಎಲ್ಲಾ ದಾಖಲೆಗಳಿದ್ದರೂ ಕೊಮಗಟ ಮಾರು ಪ್ರಯಾಣಿಕರಿಗೆ ಅಲ್ಲಿನ ಅಧಿಕಾರಿಗಳು ಇಳಿಯಲು ಅವಕಾಶ ನೀಡಲಿಲ್ಲ. ಜನಾಂಗೀಯವಾದಿ ಚಿಂತನೆ ಮತ್ತು ಏಷ್ಯನ್ ವಿರೋಧಿ ವಲಸೆ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಉತ್ಸುಕರಾಗಿದ್ದ ಅಧಿಕಾರಿಗಳಿಗೆ ಯಾವುದೇ ದಯೆ ಇರಲಿಲ್ಲ. ಹಡಗನ್ನು ಎರಡು ತಿಂಗಳು ಬಂದರಿನಲ್ಲಿಯೇ ಲಂಗರು ಹಾಕಿ ಪ್ರಯಾಣಿಕರು ಹಡಗಿನಲ್ಲಿಯೇ ಜೀವಿಸುವಂತಾಯಿತು. ಪ್ರಯಾಣಿಕರು ತೀವ್ರ ಹಸಿವು ಮತ್ತು ಮೂಲಸೌಕರ್ಯಗಳಿಲ್ಲದೇ ಬಳಲಿದರು.

ಕಾನೂನು ಹೋರಾಟ

ಪ್ರಯಾಣಿಕರು ವಕೀಲರನ್ನು ನೇಮಿಸಿ  ಕೆನಡಾದ ನ್ಯಾಯಾಲಯಗಳಲ್ಲಿ ಪ್ರವೇಶ ನಿರಾಕರಣೆಯ ವಿರುದ್ಧ ಹಲವು ರೀತಿಯಲ್ಲಿ ಹೋರಾಟ ಕೈಗೊಂಡರು. ಅವರ ಎಲ್ಲ ಪ್ರಯತ್ನಗಳು ವಿಫಲವಾದವು. ಕೆನಡಾದ ಬಂದರು ಪ್ರದೇಶದಲ್ಲಿಯೇ ಎರಡು ತಿಂಗಳು ಕಳೆದ ಬಳಿಕ ಜುಲೈ 23, 1914ರಂದು ಆ ಪ್ರಯಾಣಿಕರು ಕೆನಡಾದಿಂದ ಹೊರಟು ಜಪಾನ್‌ಗೆ ಬಂದರು. ಅಲ್ಲಿಯೂ ಕೆಲ ತಿಂಗಳಿದ್ದು ನಂತರ ಆ ಹಡಗು ಭಾರತಕ್ಕೆ ಮರಳಿತು.

ದುರಂತ

ಆ ನೌಕೆಯು ಮತ್ತೆ ಜಪಾನಿನಲ್ಲಿಯೂ ಕೆಲತಿಂಗಳು ಉಳಿಯಬೇಕಾಯಿತು. ಸಂಕಟ ತಾಳದೇ ಕೆಲವು ಪ್ರಯಾಣಿಕರು ಜಪಾನ್‌ನಲ್ಲಿ ಇಳಿದರು. ಆದರೆ ಹಡಗಿನಲ್ಲಿಯೇ ಮತ್ತೆ ತಿಂಗಳುಗಳ ಕಾಲ ಉಳಿದ 321 ಪ್ರಯಾಣಿಕರು 29 ಸೆಪ್ಟೆಂಬರ್ 1914ರಂದು ಕೋಲ್ಕತ್ತದ ಬಳಿಯ ಬಡ್ಜ್ ಬಡ್ಜ್ ಭಾರತೀಯ ಬಂದರನ್ನು ತಲುಪಿದರು. ದುರದೃಷ್ಟವಶಾತ್‌ ಬ್ರಿಟಿಷ್ ಅಧಿಕಾರಿಗಳು ಆ ಪ್ರಯಾಣಿಕರು ಜಪಾನಿನ ತೀರದಲ್ಲಿ ತಂಗಿದ್ದರಿಂದ, ಜಪಾನ್‌ನಲ್ಲಿ ನೆಲೆಸಿದ್ದ ಗದರ್ ಪಾರ್ಟಿಯ ಕ್ರಾಂತಿಕಾರಿ ಸಂಘಟನೆ ನಾಯಕರ ಜತೆ ನಂಟು ಬೆಳೆಸಿರಬಹುದು ಎಂಬ ಶಂಕೆಯಿಂದ ತೀವ್ರ ವಿಚಾರಣೆಗೆ ಒಳಪಡಿಸಿದರು. ಬಾಬಾ ಗುರುದೀತ್ ಸಿಂಗ್‌ ಎಂಬ ನಾಯಕನನ್ನು ಬಂಧಿಸಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿ ಗಲಭೆ ನಡೆಯಿತು. ಪರಿಣಾಮ ಸುಮಾರು 20 ಪ್ರಯಾಣಿಕರು ಹತ್ಯೆಗೊಳಗಾದರು. ಅನೇಕರು ಜೈಲು ಪಾಲಾದರು. ಹೊಸ ಬದುಕಿನ ಕನಸಿನಲ್ಲಿದ್ದ ಪ್ರಯಾಣಿಕರು ನಿರ್ದಯ ಕಾನೂನುಗಳ ಕಾರಣ ಸಾವನ್ನಪ್ಪಿದರು.

ನಂತರದ ಬೆಳವಣಿಗೆಗಳು

ಕೊಮಗಟ ಮಾರು ಘಟನೆಯು ಕೆನಡಾದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ಉಳಿದಿದೆ. ವರ್ಣಭೇದ ನೀತಿ, ತಾರತಮ್ಯದ ವಲಸೆ ನೀತಿಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟವನ್ನು ಎತ್ತಿ ತೋರಿಸುತ್ತದೆ. ಇದು ವಲಸಿಗರು, ವಿಶೇಷವಾಗಿ ದಕ್ಷಿಣ ಏಷ್ಯಾ ಮೂಲದವರು ಪಾಶ್ಚಿಮಾತ್ಯ ದೇಶವೊಂದರಲ್ಲಿ ಎದುರಿಸಿದ ಸವಾಲುಗಳು ಮತ್ತು ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಹೋರಾಟದ ಕತೆಯ ಸ್ಮರಣೆಯಾಗಿದೆ. ಕೊಮಗಟ ಮಾರು ಶತಮಾನೋತ್ಸವ ಸಮೀಪಿಸುತ್ತಿದ್ದಂತೆ ಅಧಿಕೃತವಾಗಿ ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಕೆನಡಾದ ಸಿಖ್ ಸಮುದಾಯದಲ್ಲಿ ಬೇಡಿಕೆ ಇಟ್ಟಿತು.

ಕ್ಷಮೆ ಯಾಚಿಸಿದ ಕೆನಡಾ

ಮೇ 2008ರಲ್ಲಿ, ಬ್ರಿಟಿಷ್ ಕೊಲಂಬಿಯಾ ಸರ್ಕಾರವು ಕೊಮಗಟಮಾರು ಪ್ರಯಾಣಿಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ ಔಪಚಾರಿಕವಾಗಿ ಕ್ಷಮೆಯಾಚಿಸಿತು. ಬಳಿಕ ಆಗಸ್ಟ್ 2008ರಲ್ಲಿ, ಬ್ರಿಟಿಷ್

ಕೊಲಂಬಿಯಾದ ಸರ್ರೆಯಲ್ಲಿನ ಉದ್ಯಾನವನದಲ್ಲಿ ಸಿಖ್ಖರು ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಸ್ಟೀಫನ್ ಹಾರ್ಪರ್ ಕ್ಷಮೆಯಾಚಿಸಿದರು. ಆದರೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನೇಕ ಸಿಖ್ಖರು ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಒಟ್ಟಾವಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಕ್ಷಮಾಪಣೆ ಕೇಳಬೇಕೆಂದು ಬಯಸಿದ್ದರು. ಇತರ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಐತಿಹಾಸಿಕ ಅನ್ಯಾಯಗಳಿಗಾಗಿ ಕೆನಡಾದ ಸರ್ಕಾರ ಕ್ಷಮೆಯಾಚಿಸಿದ್ದನ್ನು ನೆನಪಿಸಿ (ಭಾರತೀಯ ವಸತಿ ಶಾಲೆಗಳ ಮಾಜಿ ವಿದ್ಯಾರ್ಥಿಗಳ ವಿಷಯದಲ್ಲಿ ಸರ್ಕಾರ ಕ್ಷಮೆಯಾಚನೆ ಮಾಡಿದಂತೆ) ಕ್ಷಮಾಪಣೆ ಕೇಳಲಿ ಎನ್ನುವುದು ಅವರ ಆಗ್ರಹವಾಗಿತ್ತು. ಸಿಖ್‌ ಸಮುದಾಯದ ಆಗ್ರಹದಂತೆ 18 ಮೇ 2016ರಂದು, ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಹೌಸ್ ಆಫ್ ಕಾಮನ್ಸ್ ಮುಂದೆ ಈ ಘಟನೆಯ ಕ್ಷಮೆಯಾಚಿಸಿದರು. ‘ಇಂದು ನಾನು ಹೇಳುವ ಯಾವ ಪದಗಳು ಕೂಡಾ ಕೊಮಗಟಮಾರು ಪ್ರಯಾಣಿಕರು ಅನುಭವಿಸಿದ ನೋವು, ಅವಮಾನದ ನೆನಪು ಅಳಿಸಲು ಅಸಾಧ್ಯ ಎಂದು ತಿಳಿದಿದ್ದರೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ’ ಎಂದರು.

ಸ್ಮಾರಕ

2012ರಲ್ಲಿ ವ್ಯಾಂಕೋವರ್‌ನ ಕೋಲ್ ಹಾರ್ಬರ್‌ನಲ್ಲಿರುವ ಕೊಮಗಟ ಮಾರು ಪ್ರಯಾಣಿಕರ ಗೌರವಾರ್ಥವಾಗಿ ಸ್ಮಾರಕವನ್ನು ಕೂಡಾ ನಿರ್ಮಿಸಲಾಗಿದೆ. ಮೇ 2021ರಲ್ಲಿ, ವ್ಯಾಂಕೋವರ್ ನಗರವು ಕೊಮಗಟ ಮಾರು ಘಟನೆಗೆ ವಿಷಾದವನ್ನು ವ್ಯಕ್ತಪಡಿಸಿತು. ಹೆಚ್ಚುವರಿಯಾಗಿ ಅಲ್ಲಿನ ಸಿಟಿ ಕೌನ್ಸಿಲ್ ಮೇ 23 ಅನ್ನು ಕೊಮಾಗಟ ಮಾರು ದಿನದ ಅಧಿಕೃತ ಸ್ಮರಣಾರ್ಥ ದಿನವೆಂದು ಘೋಷಿಸಿತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ನ್ಯೂ ವೆಸ್ಟ್‌ಮಿನಿಸ್ಟರ್ ನಗರವು ಕೂಡಾ ಔಪಚಾರಿಕವಾಗಿ ಕ್ಷಮಾಪಣೆಯನ್ನು ಕೇಳಿತು. 

ದೇಶದಲ್ಲಿ ನಡೆದಿರಬಹುದಾದ ಐತಿಹಾಸಿಕ ಅನ್ಯಾಯಗಳ ಅರಿವು ಮೂಡಿಸಲು ಈ ಘಟನೆಯನ್ನು ಕೆನಡಾದಲ್ಲಿ ಒಂದು ಪ್ರಾಯಶ್ಚಿತದ ಘಟನೆಯಾಗಿ ಸ್ಮರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT