ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆ ಎಂಬ ತಾಯಿ

Last Updated 1 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಭಗವದ್ಗೀತೆ ಜಗತ್ತಿನ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದು. ತತ್ತ್ವಶಾಸ್ತ್ರದಲ್ಲಿ ಆಸಕ್ತಿ–ಶ್ರದ್ಧೆ ಇರುವವರಿಗೆ ನೆರವಾಗುವ ಗ್ರಂಥ. ಭಾರತೀಯ ತತ್ತ್ವಶಾಸ್ತ್ರದ ಸಾರವನ್ನೆಲ್ಲ ಈ ಪುಟ್ಟ ಕೃತಿಯಲ್ಲಿ ನೋಡಬಹುದಾಗಿದೆ. ಭಗವದ್ಗೀತೆಯ ಬಗ್ಗೆ ಜಗತ್ತಿನಾದ್ಯಂತ ಹಲವರು ಬರೆದಿದ್ದಾರೆ. ಇದರಲ್ಲಿ ಭಾರತೀಯರೂ ಸೇರಿದ್ದಾರೆ, ವಿದೇಶಿಯರೂ ಸೇರಿದ್ದಾರೆ. ಭಾಷ್ಯಗಳು, ಟೀಕೆಗಳು, ವಿವರಣೆಗಳು, ಅನುವಾದಗಳು – ಹೀಗೆ ಭಗವದ್ಗೀತೆಯನ್ನು ಹಲವು ವಿಧಾನಗಳ ಮೂಲಕ ಅರ್ಥೈಸುವ ಪ್ರಕ್ರಿಯೆಗಳು ನಡೆಯುತ್ತ ಬಂದಿವೆ. ನಮ್ಮ ಕಾಲದಲ್ಲಿ ಭಗವದ್ಗೀತೆಯನ್ನು ಕುರಿತು ವ್ಯಾಖ್ಯಾನಿಸಿದವರಲ್ಲಿ ವಿನೋಬಾ ಕೂಡ ಒಬ್ಬರು. ತುಂಬ ಅರ್ಥಗರ್ಭಿತವಾದ ವ್ಯಾಖ್ಯಾನವದು. ಅವರ ಈ ‘ಗೀತಾಪ್ರವಚನ’ವನ್ನು ಕನ್ನಡಕ್ಕೆ ಸಿದ್ದವನಹಳ್ಳಿ ಕೃಷ್ಣಶರ್ಮ ತಂದಿದ್ದಾರೆ. ಈಗ ಅಲ್ಲಿಯ ಕೆಲವೊಂದು ಮಾತುಗಳನ್ನು ನೋಡೋಣ:

‘ಗೀತೆಗೂ ನನಗೂ ಇರುವ ಸಂಬಂಧ ತರ್ಕಕ್ಕೆ ಮೀರಿದ್ದು. ನನ್ನ ಮೈ ತಾಯ ಹಾಲಿನಿಂದ ಬೆಳೆದಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮನಸ್ಸು ಹಾಲಿನಿಂದ ಬೆಳೆದಿದೆ. ಎಲ್ಲಿ ಜೀವಾಳದ ಸಂಬಂಧ ಇರುತ್ತದೆಯೋ ಅಲ್ಲಿ ತರ್ಕಕ್ಕೆ ಎಡೆಯಿಲ್ಲ. ತರ್ಕವನ್ನುಳಿದು ಶ್ರದ್ಧೆ–ಪ್ರಯೋಗ – ಈ ಎರಡು ರೆಕ್ಕೆಗಳನ್ನು ಕೆದರಿ ಗೀತಾಗಗನದಲ್ಲಿ ನಾನು ಯಥಾಶಕ್ತಿ ವಿಹರಿಸುತ್ತೇನೆ. ಬಹುಶಃ ನಾನು ಗೀತೆಯ ವಾತಾವರಣದಲ್ಲೇ ಇದ್ದೇನೆ. ಗೀತೆಯೆಂದರೆ ನನ್ನ ಪ್ರಾಣತತ್ವ. ಗೀತೆಯ ಬಗ್ಗೆ ಯಾರಿಗಾದರೂ ನಾನು ಹೇಳಿದರೆ ಆಗ ಗೀತಾಸಮುದ್ರದ ಮೇಲೆ ತೇಲಾಡುತ್ತಿರುತ್ತೇನೆ. ನಾನೊಬ್ಬನೇ ಇದ್ದರೆ ಆ ಅಮೃತದ ಕಡಲಿನಲ್ಲಿ ಆಳವಾಗಿ ಮುಳುಗಿ ಕುಳಿತಿರುತ್ತೇನೆ.’

ಭಗವದ್ಗೀತೆಯನ್ನು ‘ಗೀತೆ’ ಎಂದು ಕರೆಯುವ ವಾಡಿಕೆಯಿದೆಯಷ್ಟೆ. ಗೀತೆಯನ್ನು ಪಠಿಸುವುದಕ್ಕೆ ಮೊದಲು ಪ್ರಾರ್ಥನೆಯ ರೂಪದಲ್ಲಿ ಕೆಲವೊಂದು ಶ್ಲೋಕಗಳನ್ನು ಹೇಳುವ ಸಂಪ್ರದಾಯವುಂಟು. ಇವನ್ನೇ ‘ಧ್ಯಾನಶ್ಲೋಕ’ಗಳು ಎಂದು ಕರೆದಿರುವುದು. ಅವುಗಳಲ್ಲಿ ಮೊದಲನೆಯದು ಹೀಗೆ:

ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಂ |
ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್‌
ಅಂಬತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ ||

ಈ ಧ್ಯಾನಶ್ಲೋಕದಲ್ಲಿ ಗೀತೆಯನ್ನು ತಾಯಿ ಎಂದೇ ಸಂಬೋಧಿಸಲಾಗುತ್ತಿದೆ. ವಿನೋಬಾ ಅವರು ಕೂಡ ಈ ಮಾತಿಗೆ ಒತ್ತು ಕೊಟ್ಟು, ಗೀತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇಲ್ಲೊಂದು ವಾಸ್ತವ ಸಂಗತಿಯೊಂದುಂಟು. ನಮ್ಮೆಲ್ಲರ ಜೀವನವೂ ಆರಂಭವಾಗುವುದೇ ನಮ್ಮ ತಾಯಿಯಿಂದ. ಇದು ಆಕೆಯ ಗರ್ಭದಲ್ಲಿ ಬೆಳೆಯುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ; ನಾವು ಈ ಲೋಕಕ್ಕೆ ಪ್ರವೇಶಿದ ಮೇಲೂ ಮೊದಲ ಸಂಪರ್ಕ ಬರುವುದು ಆಕೆಯೊಂದಿಗೆ. ಗರ್ಭದಲ್ಲಿ ಮಾತ್ರವೇ ಅಲ್ಲ, ನಾವು ಜನಿಸಿದ ಮೇಲೂ ನಮ್ಮ ಮೊದಲ ಆಹಾರವನ್ನು ಪಡೆಯುವುದು ಆಕೆಯ ಮೂಲಕವೇ. ಮತ್ತೆ, ಹೀಗೆ ಪಡೆದ ಆಹಾರವೇ ನಮ್ಮನ್ನು ಜೀವನದುದ್ದಕ್ಕೂ ಆರೋಗ್ಯವಾಗಿರಲು ಸಾಧ್ಯವಾಗಿಸುವುದು. ಎಂದರೆ ನಮಗೂ ನಮ್ಮ ತಾಯಿಗೂ ಇರುವ ಸಂಬಂಧ ಸಾವಯವ ಸಂಬಂಧ; ಆಕೆ ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ತಾಯ್ತತನ ನಮ್ಮನ್ನು ಕಾಪಾಡುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿನೋಬಾ ಮಾತುಗಳನ್ನು ಮನನ ಮಾಡಿದಾಗ, ಅದರ ಗಾಢವಾದ ಭಾವ ನಮ್ಮನ್ನು ಆಲೋಚನೆಯ ಕಡೆಗೆ ಪ್ರಚೋದಿಸದೆ ಇರದು.

‘ನನ್ನ ಮೈ ತಾಯ ಹಾಲಿನಿಂದ ಬೆಳೆದಿದೆ; ಅದಕ್ಕಿಂತಲೂ ಹೆಚ್ಚಾಗಿ ನನ್ನ ಮನಸ್ಸು ಗೀತೆಯ ಹಾಲಿನಿಂದ ಬೆಳೆದಿದೆ’ ಎಂದಿದ್ದಾರೆ, ವಿನೋಬಾ.

ನಾವು ಬೆಳವಣಿಗೆ ಎಂದರೆ ಶಾರೀರಕವಾದ ಬೆಳವಣಿಗೆಗೆ ಮಾತ್ರಕ್ಕೇ ಸೀಮಿತವಾಗಿ ಯೋಚಿಸುತ್ತೇವೆ. ಆದರೆ ಸಮಗ್ರ ಬೆಳವಣಿಗೆ, ವಿಕಾಸ ಎಂದರೆ ಅದು ಶಾರೀಕವಾದ ಹಾಗೂ ಮಾನಸಿಕವಾದ – ಎರಡೂ ಸೇರಿರುತ್ತವೆ. ನಾವು ಸೇವಿಸುವ ಆಹಾರ ನಮ್ಮನ್ನು ಶಾರೀರಿಕವಾಗಿ ಬೆಳೆಸುತ್ತದೆ. ಹೀಗೆಯೇ ನಾವು ಪಡೆಯುವ ವಿದ್ಯೆ–ಚಿಂತನೆಗಳು ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ. ಹೀಗಿದ್ದರೂ ತಾಯಿಯ ಹಾಲು, ಎಂದರೆ ಅವಳು ಕೊಡುವ ಆಹಾರ ಕೇವಲ ನಮ್ಮನ್ನು ಶಾರೀರಕವಾಗಿ ಮಾತ್ರವೇ ಬೆಳಸುವುದಿಲ್ಲ; ಅವಳ ಉದ್ದೇಶ ನಮ್ಮನ್ನು ಶಾರೀಕವಾಗಿಯೂ ಮಾನಸಿಕವಾಗಿಯೂ ಬೌದ್ಧಿಕವಾಗಿಯೂ ಆಗಿರುತ್ತದೆ. ಅವಳು ಉಣಿಸುವ ಆಹಾರಕ್ಕೆ ಅಂಥ ಶಕ್ತಿಯೂ ಸಂಕಲ್ಪವೂ ಇರುತ್ತದೆ. ಮಕ್ಕಳು ಎಲ್ಲ ವಿಧದಲ್ಲಿಯೂ ಗಟ್ಟಿಯಾಗಿರಲಿ ಎನ್ನುವುದೇ ತಾಯಿಯ ಆಸೆ ಅಲ್ಲವೆ? ಹೆತ್ತತಾಯಿಯಂತೆ ಭಗವದ್ಗೀತೆಯೂ ನಮ್ಮ ಪಾಲಿಗೆ ಒದಗುವಂಥದ್ದು. ಅದು ಜೀವನದುದ್ದಕ್ಕೂ ನಮಗೆ ಬೇಕಾಗಿರುವ ಮಾನಸಿಕ ಮತ್ತು ಬೌದ್ಧಿಕ ಕ್ಷಮತೆಯನ್ನು ಕೊಡುವುದರಿಂದ ಅವಳು ಕೂಡ ನಮಗೆ ತಾಯಿಯೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT