ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಣುಕುವ ಚಟ...

ಒಡಲಾಳ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಈ ಕುತೂಹಲ ಅನ್ನುವುದಿದ್ಯಲ್ಲಾ... ಮಾನವನ ಎಲ್ಲ ತಿಕ್ಕಲುತನಗಳಿಗೆ ಮೂಲ ಹುಡುಕಿಕೊಂಡು ಹೋದರೆ ಕಾಣುವುದು ಈ ಕುತೂಹಲವೆಂಬ ಅಂತರ್ಗಾಮಿಯೇ. ಕುತೂಹಲವೆಂಬುದಿಲ್ಲದಿದ್ದರೆ ಏನೂ ಆಗುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಅದರ ಬಗ್ಗೆ ನಾನೇನೂ ಹೇಳಲು ಹೊರಟಿಲ್ಲ. ಆದರೆ ಈ ಕುತೂಹಲದ ಇರುವುದರಿಂದ ಏನೇನು ಆಗುತ್ತದೆ ಎಂಬುದನ್ನು ನೋಡಿದರೆ ಅನೇಕ ಸಂಗತಿಗಳು ಕಣ್ಣಿಗೆ ಬೀಳುತ್ತವೆ.

ಇಣುಕುವ ಚಟ ಎನ್ನುವ ತಲೆಬರಹ ಕೊಟ್ಟು ಕುತೂಹಲದ ಬಗ್ಗೆ ಪ್ರಬಂಧ ಬರೆಯಲು ಶುರು ಮಾಡಿದಳಲ್ಲಾ... ಎಂದು ಹುಬ್ಬೇರಿಸಬೇಡಿ. ನಾನು ಹೇಳಲು ಹೊರಟಿರುವ ಇಣುಕುವ ಚಟಕ್ಕೂ ಮೂಲ ಕಾರಣವಾಗುವುದು ಕುತೂಹಲವೇ. ಪುಟ್ಟ ಮಗುವೊಂದು ಹುಟ್ಟಿದ ಗಳಿಗೆಯಲ್ಲಿ ಗಮನಿಸಿ. ತನ್ನ ಪುಟ್ಟ ಪುಟ್ಟ ಕೆಂಬಣ್ಣದ ಎಸಳು ಬೆರಳುಗಳನ್ನು ಮಡಚಿ ಹೇಗೆ ಗಟ್ಟಿಯಾಗಿ ಮಡಚಿರುತ್ತ ದಲ್ಲವೇ? 

ಮಗುವನ್ನು ಮುದ್ದಾಡುವ ತಾಯಿ ಮಾಡುವ ಮೊದಲ ಕೆಲಸವೆಂದರೆ ಆ ಮುಷ್ಟಿಯನ್ನು ಬಿಡಿಸಿ ಹಸ್ತವನ್ನು  ನೋಡಿ ಮುತ್ತಿಡುವುದು. ಬಚ್ಚಿಟ್ಟುಕೊಳ್ಳುವ ಮತ್ತು ಹಾಗೆ ಬಚ್ಚಿಟ್ಟ ರಹಸ್ಯದೊಳಕ್ಕೆ ಇಣುಕುವ ಮಾನವನ ಮೂಲಭೂತ ಸ್ವಭಾವಗಳಿಗೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆಯಿಲ್ಲ. ಈ ಇಣುಕುವ ಗುಣಕ್ಕೆ ಎಷ್ಟೊಂದು ಮುಖಗಳಿವೆ, ಎಷ್ಟೆಲ್ಲ ಆಯಾಮಗಳಿವೆ ಎಂಬುದನ್ನು ನೋಡುತ್ತ ಹೋದರೆ ನಿಜಕ್ಕೂ ಬೆರಗಾಗುತ್ತದೆ.

ನಾನೊಮ್ಮೆ ಬಸ್ಸಿನಲ್ಲಿ ಪೇಪರ್ ಓದುತ್ತ ಕೂತಿದ್ದೆ. ಪಕ್ಕ ಕೂತಿದ್ದವಳು ಸುಮ್ಮನೇ ನಾನು ಬಿಡಿಸಿದ್ದ ಪತ್ರಿಕೆಯೊಳಗೆ ಇಣುಕತೊಡಗಿದಳು. ಮೊದಮೊದಲು ನಿರ್ಲಕ್ಷ್ಯ ಮಾಡಿದ ನಾನು ಕೊನೆಗೆ ನನ್ನ ಮತ್ತು ಪೇಪರ್ ಮಧ್ಯ ಅವಳ ತಲೆಯೇ ಅಡ್ಡವಾಗತೊಡಗಿದಾಗ ಪತ್ರಿಕೆಯನ್ನು ಜೋರು ಕೊಡವಿ ಅವಳನ್ನೇ ದಿಟ್ಟಿಸಿದೆ. ಅವಳಿಗೆ ನನ್ನ ಪರಿಸ್ಥಿತಿ ಅರ್ಥವಾಗಿ ಪೆಚ್ಚು ನಗುತ್ತಾ ಹಿಂದಕ್ಕೆ ಸರಿದಳು. ಹಾಗೇ ಸುಮ್ಮನೇ ಅವಳ ಕೈಯತ್ತ ನೋಡಿದರೆ ಅವಳ ಕೈಯಲ್ಲಿಯೂ ಮಡಿಸಿ ಹಿಡಿದುಕೊಂಡ ವೃತ್ತಪತ್ರಿಕೆಯಿತ್ತು. ಅದೂ ನನ್ನ ಬಳಿಯಿದ್ದ ವೃತ್ತ ಪತ್ರಿಕೆಯೇ! ಇಂಥವರ ಇಣುಕು ಚಟಕ್ಕೆ ಏನೆನ್ನೋಣ?

ಇನ್ನೊಂದು ಮಜಾ ಏನಂದ್ರೆ ನಾವು ಏನನ್ನು ಮುಕ್ತಗೊಳಿಸುತ್ತೇವೆಯೋ ಅದರ ಬಗ್ಗೆ ಕುತೂಹಲವೂ ಸತ್ತು ಹೋಗುತ್ತದೆ. ಹಾಗಂತ ಪೂರ್ತಿ ಮುಚ್ಚಿರುವುದರತ್ತಲೂ ಇಣುಕು ಕಣ್ಣುಗಳು ಹಾಯುವುದು ಅಪರೂಪ. ಇವೆರಡೂ ಅಲ್ಲದ, ಅಂದರೆ ಮುಚ್ಚಿದ್ದೂ ಸ್ವಲ್ಪ್‌ ಸ್ವಲ್ಪ ಕಂಡಂಗಾಗ್ತದೆ ಆದ್ರೆ ಕಾಣಲ್ಲ ಅನ್ನುವಂಥದ್ದರ ಮೇಲೆ ಇಣುಕು ನೋಟಗಳು ಜಾಸ್ತಿ..

ಬೀಚ್‌ಗಳಲ್ಲಿ ಖುಲ್ಲಂಖುಲ್ಲಾ ನಿಂತಿರುವ ಹೆಂಗಳೆಯರತ್ತ ನಿರಾಸಕ್ತಿ ನೋಟ ಬೀರುವ ಗಂಡಸರು, ರಸ್ತೆಯಲ್ಲಿ, ಬಸ್ಸಿನಲ್ಲಿ ಯಾವುದೋ ಹುಡುಗಿ ಹೆಗಲಿನಿಂದ ಒಳ ಉಡುಪಿನ ಬಾರ್‌ ಒಂದು ಹೊರಗಿಣುಕಿದರೆ... ಕದ್ದು ಕದ್ದು ಇಣುಕಿ ಒಳಗೊಳಗೇ ಮಂಡಿಗೆ ಮುಕ್ಕುತ್ತಾರೆ. ಮನೆಗೆಲಸದವಳು ಕಸ ಗುಡಿಸುವಾಗ, ಪಕ್ಕದ ಮನೆ ಹುಡುಗಿ ಟೆನ್ನಿಸ್‌ ಆಡುವಾಗ ಇಣುಕುವ ಪುರುಷಚಟದ ಬಗ್ಗೆ ಬರೆಯುತ್ತಾ ಹೋದರೆ ಮಹಾಪುರಾಣವೇ ಆದೀತು. ಇಣುಕು ಎಂಬ ಶಬ್ದ ಕೇಳಿದಾಗ ನೆನಪಾಗುವ ಘಟನೆಯೊಂದನ್ನು ಹಂಚಿಕೊಂಡು ಈ ಇಣುಕು ಕಥನಕ್ಕೆ ತೆರೆ ಎಳೆಯುವೆ.

ಆಗ ನಾನು ಹೈಸ್ಕೂಲ್‌ ಓದುತ್ತಿದ್ದೆ. ಹುಡುಗಿಯರು ಕಡಿಮೆ ಇದ್ದುದರಿಂದ ನಮ್ಮ ಬೆಂಚಿನ ಹಿಂದಿನ ಬೆಂಚಿನಲ್ಲಿಯೇ ಹುಡುಗರು ಕುಳಿತಿರುತ್ತಿದ್ದರು. ನಾವೆಲ್ಲ ಕೊನೆಯ ಬೆಂಚಿನ ಹುಡುಗಿಯರು. ಸುಚೇತಾ ನಮ್ಮ ಗುಂಪಿನ ದಿಟ್ಟೆ. ನಾವೆಲ್ಲ ಕೆಂಪು ಬಣ್ಣವಲ್ಲ ಇನ್ನೊಂದು ಬಣ್ಣದ ಹಣೆಬೊಟ್ಟು ಇಟ್ಟುಕೊಳ್ಳಲಿಕ್ಕೇ ಅಂಜುತ್ತಿದ್ದ ಸಮಯದಲ್ಲಿ ಅವಳು ಹಣೆಬೊಟ್ಟೇ ಇಟ್ಟುಕೊಳ್ಳದೇ ಬರುತ್ತಿದ್ದಳು.

ಗಿಡ್ಡದಾದ ಚೂಡಿದಾರ್‌ ಧರಿಸಿದರೂ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಬೇಯುತ್ತಿದ್ದರೆ ಅವಳು ಮೊಣಕಾಲ ಮೇಲಿನ ಸ್ಕರ್ಟ್‌ ತೊಟ್ಟು ಬಿಂದಾಸ್‌ ಆಗಿ ಬಂದು ಬೆರಗಿಗೆ ಕೆಡವುತ್ತಿದ್ದಳು. ನಮ್ಮ ಹಿಂದಿನ ಬೆಂಚಿನ ಹುಡುಗರಿಗೆ ಅವಳ ಮಿನಿಸ್ಕರ್ಟ್‌ ಅನ್ನುವುದು ಒಂದು ಪರಮೋನ್ನತ ‘ಇಣುಕುತಾಣ’ವಾಗಿ ಪರಿಣಮಿಸಿತ್ತು. ಅದರಲ್ಲಿಯೂ ಶ್ರೀಧರ ಎಂಬ ಹುಡುಗ ಕಿತಾಪತಿಯಲ್ಲಿ ಒಂದು ಹೆಜ್ಜೆ ಮುಂದು. ಅವನು ಬೇಕಂತಲೇ ಸುಚೇತಾಳ ಮುಂದೆ ಪೆನ್ನೋ ಮತ್ತೊಂದೋ ಒಗೆದು ‘ಸ್ವಲ್ಪ ಎತ್ತಿಕೊಡೇ’ ಎಂದು ಕೇಳುತ್ತಿದ್ದ.

ಅವಳು ಎತ್ತಿಕೊಡಲು ಮುಂದೆ ಬಾಗಿದಾಗ ಮೇಲಕ್ಕೇರುತ್ತಿದ್ದ ಅವಳ ಮಿನಿಸ್ಕರ್ಟ್‌ನೊಳಗೆ ತನ್ನ ಇಣುಕು ನೋಟ ಬೀರಿ ಅವಳ ಒಳಚಡ್ಡಿಯ ಬಣ್ಣ ಪತ್ತೆ ಹಚ್ಚುವುದು ಅವನ ತಂತ್ರಗಾರಿಕೆ. ನಂತರ ತನ್ನ ಈ ಮಹತ್ಸಾಧನೆಯನ್ನು  ಗೆಳೆಯರೊಟ್ಟಿಗೂ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದ. ಮೊದಮೊದಲು ಸಹಜವೆನಿಸಿದ ಈ ಘಟನೆ ದಿನವೂ ಅದೇ ಜಾಗಕ್ಕೆ ಶ್ರೀಧರನ ಪೆನ್ನು ಬೀಳತೊಡಗಿದಾಗ ಅವನನ್ನು ನಾವೆಲ್ಲ ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದೆವು.

ಆಗಲೇ ಒಮ್ಮೆ ಅವನ ಗೆಳೆಯರ ಜತೆ ತನ್ನ ಸಾಧನೆಯ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಾ ಸುಚೇತಾ ಅಂದು ಧರಿಸಿದ್ದ ಚಡ್ಡಿಯ ಬಣ್ಣವನ್ನು ಹೇಳುತ್ತಿರುವಾಗಲೇ ಕೇಳಿಸಿಕೊಂಡು ನಮ್ಮ ಗುಂಪಿಗೆ ಸುದ್ದಿ ಮುಟ್ಟಿಸಿದೆವು. ನಾವೆಲ್ಲ ಬೈಯುತ್ತಾ, ಕಂಪ್ಲೇಂಟ್‌ ಅಂತೆಲ್ಲ ಗೊಣಗುತ್ತಿದ್ದರೆ ಸುಚೇತಾ ಸುಮ್ಮನಿದ್ದಳು. ಅವಳೇ ಸುಮ್ಮನಾದ ಮೇಲೆ ನಮ್ಮದೇನೆಂದು ಸುಮ್ಮನಾದೆವು. ಮರುದಿನ ಯಥಾಪ್ರಕಾರ ಶ್ರೀಧರನ ಪೆನ್ನು ಸುಚೇತಾಳ ಮುಂದೆ ಬಿತ್ತು. ಹಿಂದಿನಿಂದ ಮತ್ತದೇ ಧ್ವನಿ ‘ಸ್ವಲ್ಪ ಪೆನ್ನು ಎತ್ತಿಕೊಡೇ?’.

ಈ ಸಲ ಸುಚೇತಾ ಎದ್ದು ಅವನತ್ತ ತಿರುಗಿ ನಿಂತಳು. ಜತೆಗೆ ಜೋರು ಧ್ವನಿಯಲ್ಲಿ ‘ದಿನವೂ ಪೆನ್ನು ಬೀಳಿಸಿ ಅದನ್ಯಾಕೆ ಹಾಳು ಮಾಡ್ಕೋತಿಯಾ? ನನ್ನೇ ಕೇಳು ಹೇಳ್ತೀನಿ. ಇವತ್ತು ನೀಲಿ ಬಣ್ಣ. ಮತ್ತೇನಾದ್ರೂ ಅನುಮಾನ ಇದ್ಯಾ?’ ಎಂದು ಹೇಳಿ ಅವನನ್ನೇ ನೋಡುತ್ತ ನಿಂತಳು. ವ್ಯಂಗ್ಯದ ನಗುವಿನಿಂದ ತುಳುಕುತ್ತಿದ್ದ ಶ್ರೀಧರನ ಮುಖ ಒಮ್ಮೆಲೇ ಬಿಳುಚಿಕೊಂಡಿತು.

ಬ್ಬೆಬ್ಬೆಬ್ಬೇ ಎಂದು ತಡವರಿಸಿ ಅತ್ತಿತ್ತ ನೋಡಿದ. ಅವನ ಸ್ನೇಹಿತರೆಲ್ಲ ಮುಸಿಮುಸಿ ನಗುತ್ತಿದ್ದರು. ಇನ್ನಷ್ಟು ಕಂಗಾಲಾಗಿ ಮುಖ ತಗ್ಗಿಸಿ ಕೂತುಬಿಟ್ಟ. ಅಂದು ತಗ್ಗಿಸಿದ ಮುಖವನ್ನು ಮತ್ತೆಂದೂ ಸುಚೇತಾ ಎದುರಿಗೆ ಎತ್ತಲಿಲ್ಲ. ಎಗ್ಗುಸಿಗ್ಗಿಲ್ಲದೇ ನುಗ್ಗುವ ಇಣುಕುನೋಟಕ್ಕೆ ಇಂಥ ತಪರಾಕಿ ಬಿದ್ದು ಮುಗ್ಗರಿಸುವುದೂ ಇರುತ್ತದೆ. ಯಾವ್ದಕ್ಕೂ ನಮ್ಮ ನೋಟ ನಮ್ಮ ನಿಯಂತ್ರಣದಲ್ಲಿರುವುದು ಒಳ್ಳೆಯದು ಅಲ್ಲವೇ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT