ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಪ್ರಶಸ್ತಿ ವಿಜೇತ ಕಿರಿಯರು

Last Updated 31 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸರ್ ವಿಲಿಯಂ ಲಾರೆನ್ಸ್ ಬ್ರಾಗ್

ಆಸ್ಟ್ರೇಲಿಯಾ ಮೂಲದ ಬ್ರಿಟನ್ ಭೌತಶಾಸ್ತ್ರಜ್ಞರಾದ ಇವರು ಹುಟ್ಟಿದ್ದು 1890ರಲ್ಲಿ. ಭೌತಶಾಸ್ತ್ರದಲ್ಲಿನ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿಯನ್ನು ತಮ್ಮ 25ನೇ ವಯಸ್ಸಿನಲ್ಲಿ ಪಡೆದುಕೊಂಡದ್ದು ಇದುವರೆಗಿನ ದಾಖಲೆಯಾಗಿದೆ.

ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಇವರು ವಜ್ರದಂತಹ ಹರಳುಗಳ ಆಂತರಿಕ ರಚನೆ ಕುರಿತಂತೆ ಹೊಸ ಹೊಸ ಆಲೋಚನೆಗಳನ್ನು ತಮ್ಮ ತಂದೆ ಸರ್ ವಿಲಿಯಂ ಬ್ರಾಗ್ ಅವರ ಜತೆ ಚರ್ಚಿಸುತ್ತಿದ್ದರು. ಇವರ ಆಲೋಚನೆಗಳಂತೆ ತಂದೆ ವಿಲಿಯಂ ಅವರು ಪ್ರಯೋಗಾಲಯದಲ್ಲಿ ಪಟ್ಟ ಶ್ರಮವು ಕಡೆಗೆ ಇಬ್ಬರಿಗೂ ನೊಬೆಲ್ ಪ್ರಶಸ್ತಿ ದಕ್ಕುವಂತೆ ಮಾಡಿತು.

ಇವರ ಸಂಶೋಧನೆಗಳು, ಸಿದ್ದಾಂತಗಳು ಅಣು ವಿಜ್ಞಾನದ ಬೆಳವಣಿಗೆಗೆ ಸಹಕಾರಿಯಾಯಿತು.

ವರ್ನರ್ ಹೈಸನ್‌ಬರ್ಗ್

ಇವರು ಹುಟ್ಟಿದ್ದು 1901ರಲ್ಲಿ ಜರ್ಮನಿಯಲ್ಲಿ. ಆರಂಭದಲ್ಲಿ ಭಾಷಾ ಭೋದಕರಾಗಿದ್ದ ಇವರು ಕ್ರಮೇಣ ಭೌತಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪಾಂಡಿತ್ಯ ಗಳಿಸಿ ಪಶ್ಚಿಮ ಜರ್ಮನಿಯ ಪರಮಾಣು ವಿಜ್ಞಾನಿಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡರು.
ಇವರು ಪರಮಾಣುವಿನ ಆಂತರಿಕ ರಚನೆಯ ಗಣಿತಬದ್ದವಾದ ವಿವರಣೆಯನ್ನು ನೀಡಿದರು. ಯಾವುದೇ ಕಣದ ಸ್ಥಾನ ಹಾಗೂ ಮತ್ತು ಏಕಕಾಲಿಕ ಸಂವೇಗ ಎರಡನ್ನೂ ಕರಾರುವಕ್ಕಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ತಮ್ಮದೇ ಸಿದ್ಧಾಂತ ಮಂಡಿಸಿದರು.
ಇದನ್ನು ಅನಿಶ್ಚಿತತಾ ತತ್ವ ಎಂದು ಭೌತಶಾಸ್ತ್ರದಲ್ಲಿ ಇಂದಿಗೂ ಹೆಸರಾಗಿದೆ.
ಇಷ್ಟೆಲ್ಲದರ ಸಾಧನೆಗಾಗಿ ತಮ್ಮ 31ನೇ ವಯಸ್ಸಿನಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.

ಸಂಗ್ ದಾವ್ ಲೀ

ಚೀನಾದ ಶಾಂಘೈನಲ್ಲಿ  1926ರಲ್ಲಿ ಜನಿಸಿದ ಇವರಿಗೆ ಎರಡನೇ ಸಿನೋ ಜಪಾನ್ ಯುದ್ಧದಿಂದಾಗಿ ತಮ್ಮ ಪ್ರೌಢಶಾಲಾ ವ್ಯಾಸಂಗವನ್ನು ಮೊಟಕುಗೊಳಿಸಬೇಕಾಯಿತು. ಇನ್ನೇನು ಅಧ್ಯಯನದ ಅವಕಾಶವೇ ಮುಗಿಯಿತು ಎಂದು ಲೀ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಲಿಲ್ಲ. ಬದಲಿಗೆ ರಾಷ್ಟ್ರೀಯ ಚೇಕಾಂಗ್ ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿ ಅಧ್ಯಯನದ ಅವಕಾಶಕ್ಕೆ ಅಂಗಲಾಚಿದರು.

ಇವರ ಆಸಕ್ತಿಯನ್ನು ಗಮನಿಸಿದ ವಿಶ್ವವಿದ್ಯಾನಿಲಯವು ಪ್ರೌಢಶಾಲಾ ಶಿಕ್ಷಣವನ್ನೆ ಪೂರೈಸದ ಇವರನ್ನು ರಾಸಾಯನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿಯಾಗಿ ಸೇರಿಸಿಕೊಂಡಿತು.

ಭೌತಶಾಸ್ತ್ರದಲ್ಲಿನ ಇವರ ಅಗಾಧ ಆಸಕ್ತಿಯನ್ನು ಗಮನಿಸಿದ ಪ್ರೋಫೆಸರ್‌ಗಳು ಭೌತಶಾಸ್ತ್ರ ವಿಭಾಗಕ್ಕೆ ವರ್ಗಾಯಿಸಿದರು.

ಅಮೆರಿಕದಲ್ಲಿ ಉನ್ನತ ಅಧ್ಯಯನಕ್ಕೆ ಚೀನಾ ಸರ್ಕಾರ ಇವರಿಗೆ ನೀಡಿದ ಫೆಲೊಷಿಪ್ ಸಹಾಯದಿಂದಾಗಿ ಷಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡರು. ತಮ್ಮ 29ನೇ ವಯಸ್ಸಿನಲ್ಲಿ ಕೊಲಂಬಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿ ನೇಮಕಗೊಂಡರು. ಈ ಹುದ್ದೆಗೆ ನೇಮಕಗೊಂಡ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾದರು.

ಕಣ ಭೌತಶಾಸ್ತ್ರದ ಬೆಳವಣಿಗೆಗೆ ಪೂರಕವಾದ ಸಿದ್ದಾಂತಗಳನ್ನು ಮಂಡಿಸಿದ್ದಕ್ಕಾಗಿ ಇವರು ತಮ್ಮ 31ನೇ ವಯಸ್ಸಿನಲ್ಲಿ ನೊಬೆಲ್ ಪುರಸ್ಕೃತರಾದರು.
 

ಕಾರ್ಲ್ ಡೇವಿಡ್ ಆ್ಯಂಡರ್‌ಸನ್

ಇವರು ಅಮೆರಿಕದ ನ್ಯೂಯಾರ್ಕಿನಲ್ಲಿ 1905ರಲ್ಲಿ ಜನಿಸಿದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ಹಾಗೂ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡರು. ಇದೇ ವಿಶ್ವವಿದ್ಯಾನಿಲಯದಿಂದ 1930ರಲ್ಲಿ ಪಿಎಚ್.ಡಿ ಪದವಿ ಪಡೆದ ಇವರು 2ನೇ ಮಹಾಯುದ್ಧದ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಸಂಶೋಧನಾ ಸಮಿತಿಯ ಯೋಜನೆಗಳಲ್ಲಿ ಸಕ್ರಿಯರಾಗಿದ್ದರು.

ಆರಂಭದಲ್ಲಿ ಇವರ ಅತ್ಯಂತ ಹೆಚ್ಚಿನ ಸಂಶೋಧನೆಗಳು ನಡೆದುದು ಕ್ಷ-ಕಿರಣಗಳ ಮೇಲೆ. ಆನಂತರ ಇವರು ಕಾಸ್ಮಿಕ್ ರೇ (ವಿಶ್ವಕಿರಣಗಳು)ಕುರಿತು ಸಂಶೋಧನೆ ಆರಂಭಿಸಿದರು. ಇದರಲ್ಲಿ ಅವರು ಎಲೆಕ್ಟ್ರಾನಿಗಿಂತ ಸುಮಾರು 207ಪಟ್ಟು ಹೆಚ್ಚಿನ ತೂಕದ  ಕಣವೊಂದನ್ನು ಶೋಧಿಸಿ ಅದಕ್ಕೆ ಮ್ಯೂಆನ್ ಎಂದು ಹೆಸರಿಟ್ಟರು. ಇವರು ತಮ್ಮ ಸಂಶೋಧನೆಗೆ ತಮ್ಮ 31ನೇ ವಯಸ್ಸಿನಲ್ಲಿ ನೊಬೆಲ್ ಪಾರಿತೋಷಕ ಪಡೆದುಕೊಂಡರು.
 

ಪಾಲ್ ಆಡ್ರಿಯನ್ ಮಾರಿಸ್ ಡಿರಾಕ್

ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ 1902ರಲ್ಲಿ ಜನಿಸಿದರು. ಇವರ ಬಾಲ್ಯ ಜೀವನ ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಆಗಿದ್ದಾಗ್ಯೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಇವರು ವಿದ್ಯಾರ್ಥಿ ವೇತನ ಹಣವನ್ನೂ ಪಡೆದುಕೊಂಡರು. ಆದರೆ ಇವರಲ್ಲಿದ್ದ ಹಣವು ಕೇಂಬ್ರೀಡ್ಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವುದಕ್ಕೆ ಸಾಕಾಗುತ್ತಿರಲಿಲ್ಲ.

ಮಹಾಯುದ್ಧದ ನಂತರ ವಿಶ್ವದಲ್ಲಿ ಉಂಟಾದ ಆರ್ಥಿಕ ಮಹಾಮುಗ್ಗಟ್ಟಿನ ಪರಿಣಾಮ ಇವರಿಗೆ ಉದ್ಯೋಗವೂ ದೊರೆಯಲಿಲ್ಲ.

ಇದೇ ಸಮಯದಲ್ಲಿ ಉಚಿತವಾಗಿ ಇವರಿಗೆ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ ಪದವಿ ಅಭ್ಯಸಿಸುವ ಅವಕಾಶ ದೊರೆಯಿತು. ದೊರೆತ ಅವಕಾಶವನ್ನು ಉದಾಸೀನ ಮಾಡದ ಪಾಲ್ ಕಡೆಗೆ ಪ್ರಥಮಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಪರಿಣಾಮ ಇವರಿಗೆ ದೊರೆತ ವಿದ್ಯಾರ್ಥಿ ವೇತನದಿಂದಾಗಿ ಇವರು ತಮ್ಮ ಕನಸಿನ ಕೇಂಬ್ರೀಡ್ಜ್ ವಿಶ್ವವಿದ್ಯಾನಿಲಯ ಸೇರಿ ಅಲ್ಲಿ ತಮ್ಮ ನೆಚ್ಚಿನ ವಿಷಯವಾದ ಭೌತಶಾಸ್ತ್ರದ ಅಧ್ಯಯನಕ್ಕೆ ತಮ್ಮನ್ನು ತೊಡಗಿಸಿಕೊಂಡರು.


ಎಲೆಕ್ಟ್ರಾನ್ ಮತ್ತು ಅದರ ಪ್ರತಿಕಣಗಳನ್ನು ಪ್ರೋಟಾನ್‌ನಿಂದ ಉತ್ಪತ್ತಿ ಮಾಡಬಹುದು ಎಂದು ಸಂಶೋಧಿಸಿದ ಇವರು ಪ್ರತಿಕಣಕ್ಕೆ ಪಾಸಿಟ್ರಾನ್ ಎಂದು ಹೆಸರಿಟ್ಟರು.
ಇವರು ಇಷ್ಟೆಲ್ಲಾ ಸಾಧನೆ ಮಾಡಿದ್ದು, 31ನೆ ವಯಸ್ಸಿನ ಒಳಗೆ. ಹೌದು ಇದೇ ವರ್ಷ ಅವರಿಗೆ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT