ನನಗೇ ಹೀಗಾಗುತ್ತದೆಯೋ ಅಥವಾ ಇದು ಎಲ್ಲರ ಎದೆಯ ಗೋಳೋ ತಿಳಿಯದು. ಒಂದೊಂದು ಬೆಳಿಗ್ಗೆ ರೆಪ್ಪೆ ತೆರೆಯುವ ಮೊದಲೇ ಯಾವುದೋ ಹಾಡಿನ ಸಾಲು ಎದೆಯೊಳಗೆ ಮೈದೆರೆದು ಕೂತಿರುತ್ತದೆ.

ಹಾಡೆಂದರೆ ಇಡೀ ಹಾಡೂ ಅಲ್ಲ. ಇಷ್ಟಪಟ್ಟು ಕೇಳಿದ ಹಾಡೊಂದರ ನಡುನಡುವಿನ ಎರಡೇ ಸಾಲುಗಳು ಮತ್ತೆ ಮತ್ತೆ ರಿಂಗಣಿಸತೊಡಗುತ್ತವೆ. ಎಂದೋ ಕೇಳಿದ, ಕೇಳಿ ಮರೆತು ಹೋದ ಅಥವಾ ಮರೆತಿರುವೆ ಎಂದು ಭಾವಿಸಿಕೊಂಡಿರುವ ಪದ್ಯದ ಸೊಲ್ಲು ಸುಳಿಸುಳಿಯಾಗಿ ಎದ್ದು ಮನತುಂಬತೊಡಗುತ್ತವೆ.

ಇನ್ನು ಕೆಲವು ಸಲವಂತೂ ಯಾವುದೋ ಹಾಡಿನ ರಾಗ ಕಾಡಲು ಶುರುವಾಗಿ ಅದರ ಸಾಹಿತ್ಯ ನೆನಪಾಗದೇ ಹೋದರಂತೂ ಆ ಪಾಡು ಯಾರಿಗೂ ಬೇಡ. ಒಮ್ಮೆ ಮನಸ್ಸಲ್ಲಿ ಮತ್ತೊಮ್ಮೆ ಕೊಂಚ ಗುನುಗಾಗಿ, ಕೊನೆಗೆ ದೊಡ್ಡದಾಗಿಯೇ ಹಮ್ಮಿಂಗ್ ಮಾಡಿದರೂ ಹಾಡಿನ ಸಾಲು ಮಾತ್ರ ನೆನಪಾಗಲೊಲ್ಲದು. ಹೊತ್ತು ಕಳೆದಂತೆಲ್ಲ ಆ ರಾಗದೊಟ್ಟಿಗೇ ಅದರ ಭಾವ, ಹಿಂದೊಮ್ಮೆ ಅದನ್ನು ಕೇಳಿದ ಸಂದರ್ಭ ಎಲ್ಲ ನೆನಪಾಗಿ ಮನಸ್ಸನ್ನು ಹಿಂಡತೊಡಗುತ್ತವೆ. ಆದರೆ ಸ್ಮೃತಿಕೋಶವ ಎಷ್ಟೇ ತಿರುಚಿ ಮಗುಚಿ ಕೆದರಿ ಕೆದಕಿದರೂ ಊಹೂಂ! ಹೊರಬರುತ್ತಿಲ್ಲ ಹಾಡು.

ಒಂದು ಮುಂಜಾವು ಇನ್ನೂ ಹಾಸಿಗೆಯಿಂದ ಏಳುವ ಮುನ್ನವೇ ಹಾಡಿನ ರಾಗವೊಂದು ಮನಸಲ್ಲಿ ಹುಟ್ಟಿ ಹೀಗೇ ಕಾಡತೊಡಗಿದಾಗ ತಡೆಯಲಾಗದೆ ಇನ್ನೂ ನಿದ್ರೆಯಲ್ಲಿದ್ದ ಸ್ನೇಹಿತೆಯನ್ನು ಮೈದಡವಿ ಎಬ್ಬಿಸಿ ಹಮ್ಮಿಂಗ್ ಶುರುಮಾಡಿಬಿಟ್ಟಿದ್ದೆ. ಲಾ ಲಲ ಲಾ ಲಲ ಲಾ ಲಲಲ.. ತನ ನಾ ನನ ನಾ ನನ ನಾ ನನನಾ.. ಅನ್ನುತ್ತಿದ್ದಂತೆಯೇ ಗೆಳತಿ ಮುಖ ಕಿವುಚಿ ತೊದಲು ತೊದಲಾಗಿ ಏನೋ ಬೈದುಕೊಂಡು ತಿರುಗಿ ಮಲಗಿದ್ದಳು. ನಾನು ಬಿಡಬೇಕಲ್ಲ. ಮೈ ಅಲುಗಾಡಿಸಿ ಕಿವಿಯ ಬಳಿ ಸರಿದು ಮತ್ತೆ ಹಮ್ಮಿಂಗ್ ಶುರು ಮಾಡಿದೆ. ‘ಇದು ಯಾವ ಹಾಡು ಹೇಳೆ.. ಎಷ್ಟು ಪ್ರಯತ್ನಿಸಿದರೂ ನೆನಪಾಗದೆ ಸತಾಯಿಸ್ತಿದೆ..’ ಎಂದರೆ ‘ಥೂ.. ನಿನ್ನ ಆ ಹಾಡು ನಿನ್ನ ಸತಾಯಿಸ್ತಿದೆ ಅಂತ ನೀ ನನ್ನನ್ಯಾಕೆ ಸತಾಯಿಸ್ತಿದಿಯಾ? ಬೆಳ್ಳಂಬೆಳಿಗ್ಗೆ ಏನು ಕಾಟನೋ’ ಎಂದು ಮತ್ತೆ ಮುಸುಕೆಳೆದುಕೊಂಡಳು..’

ನನ್ನನ್ನು ಸುಮ್ಮನಿರಲು ಈ ಹಾಡು ಬಿಡಬೇಕಲ್ಲ. ‘ನಂಗೆ ತುಂಬ ಇಷ್ಟದ ಹಾಡು ಕಣೆ ಅದು. ಯಾವ ಹಾಡು ಅಂತಾನೇ ನೆನಪಾಗ್ತಿಲ್ಲ. ಮನ್ಸಿಗೆ ಬರ್ತದೆ ನಾಲಿಗೆಗೆ ಬರ್ತಿಲ್ಲ. ಬಂದಂಗ್ ಬಂದಂಗ್ ಆಗಿ ಮತ್ತೆ ಹೋಗ್ತದೆ..’ ಎಂದು ಗೊಣಗತೊಡಗಿದೆ. ಗೆಳತಿ ಇನ್ನು ಸಹಿಸಲಾರದವಳಂತೆ ‘ಥತ್ ನಿನ್ ಜನ್ಮಕ್ಕಿಷ್ಟು ಏನಂತ ನನ್ನ ರೂಮ್ ಮೇಟ್ ಆಗಿ ಸಿಕ್ಕಿದ್ದೀಯೋ. ನಮಗೆಲ್ಲ ಹಂಗ್ ಬಂದಂಗ್ ಬಂದಂಗ್ ಆಗಿ ಹೋಗೋದು ಹಾಡಲ್ಲ. ಬೇರೆನೇ..’ ಎಂದವಳೇ ಎದ್ದು ದುಡುದುಡುನೇ ಟಾಯ್ಲೆಟ್‌ಗೆ ಓಡಿದಳು!

ಮೊನ್ನೆ ಬಿ.ವಿ.ಕಾರಂತರ ಆತ್ಮಚರಿತ್ರೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಓದುತ್ತಿದ್ದೆ. ಅದರಲ್ಲಿನ ಒಂದು ಸಂದರ್ಭದಲ್ಲಿ ಕಾರಂತರು ತಾನು ಚಿಕ್ಕಂದಿನಲ್ಲಿ ಕೇಳಿಸಿಕೊಂಡ ಒಂದು ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳುತ್ತಾರೆ. ಏನು ಮಾಡಿದರೂ ಅದರ ಮುಂದಿನ ಸಾಲುಗಳು ನೆನಪಾಗುವುದಿಲ್ಲ. ‘ದಮ್ಮಯ್ಯ ಹೊಡೆಯಬೇಡೈ ಎನ್ನ ದಣಿಯೇ ಸುಮ್ಮನೇ ನಿಂತಿಹೆನೆ ಬಂಡಿ ಎಳೆಯದೆಯೇ’ ಎಂಬುದು ಕಾರಂತರು ನೆನಪಿಸಿಕೊಂಡ ಸಾಲುಗಳು.

ಇದನ್ನು ಓದುತ್ತಿದ್ದಂತೆಯೇ ಮುಂದುವರಿಯಲಾಗದೇ ನಿಂತುಬಿಟ್ಟೆ. ಮತ್ತೆ ಮತ್ತೆ ಅವವೇ ಸಾಲುಗಳನ್ನು ಓದಿಕೊಂಡೆ. ಕಾರಂತರ ಬಾಲ್ಯ ಅಂದರೆ ಈಗೊಂದು ಎಪ್ಪತ್ತೆಂಬತ್ತು ವರ್ಷಗಳ ಹಿಂದೆ ಕೇಳಿದ ಹಾಡದು. ನನ್ನನ್ನು ಅದ್ಯಾವ ಪರಿ ಹಿಡಿದುಬಿಟ್ಟಿತು ಅಂದ್ರೆ ಇಂದಿನ ನನ್ನದೇ ಹಾಡು ಅದು ಎನ್ನುವಷ್ಟು.

ಬಂಡಿಯನ್ನು ಎಳೆಯುತ್ತಿರುವ ಎತ್ತುಗಳು ಯಜಮಾನನಲ್ಲಿ ಹೊಡೆಯಬೇಡೈ ಎಂದು ಯಾಚಿಸುವ ಹಾಡು ಅದು. ಓದಿದ ತಕ್ಷಣ ಒಂದು ಎತ್ತಿನ ಬಂಡಿ; ಬುಸುಗುಡುತ್ತ ಬಾಯಂಚಿಂದ ನೊರೆ ಸುರಿಸುತ್ತಾ ಅರೆತೆರೆದ ರೆಪ್ಪೆಗಳಡಿಯಿಂದ ರಸ್ತೆ ದಿಟ್ಟಿಸುತ್ತಾ ಎಳೆಯಲಾರದೇ ಬಂಡಿ ಎಳೆದುಕೊಂಡು ಸಾಗಿರುವ ಬಡ ಎತ್ತುಗಳು, ಬಂಡಿಯ ಮೇಲೆ ಕೂತು ಚಾಟಿ ಹಿಡಿದು ‘ಹಯ್ಯಾ ಹಯ್ಯಾ..’ ಎನ್ನುತ್ತಾ ಎತ್ತುಗಳ ಬೆನ್ನಮೇಲೆ ಚಾಟಿ ಬಾರಿಸುತ್ತಿರುವ ಕಚ್ಚೆ ಪಂಚೆಯುಟ್ಟ ‘ದೊರೆ’ಯ ಚಿತ್ರವೂ ಕಣ್ಣೆದುರು ಕಟ್ಟಿಬಿಡುತ್ತದೆ. ಎರಡೇ ಸಾಲುಗಳಲ್ಲಿ ಇಷ್ಟು ಅದ್ಭುತ ಚಿತ್ರಕ ಶಕ್ತಿಯನ್ನು ಹೊಂದಿರುವ ಆ ಹಾಡಿನ ಮುಂದಿನ ಸಾಲುಗಳು ಏನಿರಬಹುದು? ಆ ಎತ್ತುಗಳ ಪ್ರಾರ್ಥನೆಗೆ ಮಾಲೀಕ ಏನುತ್ತರಿಸಿರಬಹುದು?

ಅವುಗಳಿಗೆ ಏನೂ ಅಲ್ಲದ ನಮ್ಮ ಮನಸ್ಸನ್ನೇ ಆ ಎತ್ತುಗಳ ಪ್ರಾರ್ಥನೆ ಇಷ್ಟು ಆಳವಾಗಿ ಕಲುಕಬೇಕಾದರೆ ಅವುಗಳನ್ನು ಹುಲ್ಲು ನೀರು ಹಾಕಿ ಸಾಕಿದ ಮಾಲೀಕನ ಮನಸ್ಸನ್ನು ಕರಗಿಸದೇ ಇದ್ದೀತಾ? ಆ ಹಾಡಿನಲ್ಲಿನ ‘ನಾವು ನಿನ್ನ ಇಚ್ಛೆಯ ವೇಗಕ್ಕೆ ಬಂಡಿಯನ್ನು ಎಳೆಯಲು ಅಸಮರ್ಥರಾಗಿರಬಹುದು. ಆದರೆ ಸುಮ್ಮನೇ ನಿಂತಿಲ್ಲ, ನಮ್ಮ ಸಾಮರ್ಥ್ಯ ಮೀರಿ ಚಲಿಸುತ್ತಿದ್ದೇವಲ್ಲ. ಅದಕ್ಕಾದರೂ ಬೆಲೆ ಕೊಡು’ ಎಂಬ ಭಾವ ಇಂದು ನನ್ನನ್ಯಾಕೆ ಇಷ್ಟು ಕಾಡುತ್ತಿದೆ. ಯೋಚಿಸತೊಡಗಿದೆ.

ಸುಮ್ಮನೆ ಅದೇ ಹಾಡಿನ ಗುಂಗಿನಲ್ಲಿ ತಯಾರಾಗಿ ಆಫೀಸಿಗೆ ಹೊರಡಲು ಬಸ್ ಏರಿದಾಗ ಮನಸ್ಸಿನಲ್ಲಿನ ಚಿತ್ರದ ಚಹರೆಗಳು ಬದಲಾಗಿ ಆ ಎರಡು ಎತ್ತುಗಳ ಸ್ಥಾನದಲ್ಲಿ ನನ್ನದೇ ಮುಖ; ಮಾಲೀಕನ ಸ್ಥಾನದಲ್ಲಿ ಆಫೀಸಿನ ಬಾಸ್ ಚಿತ್ರ ಮೂಡತೊಡಗಿದ್ದೇ ಆ ಹಾಡು ಇನ್ನೊಂದೇ ಅರ್ಥಪ್ರಭೆಯಲ್ಲಿ ಬೆಳೆಯತೊಡಗಿತು. ನಿಜಕ್ಕೂ ಅದು ಎತ್ತುಗಳ ಅಳಲಲ್ಲ, ನನ್ನದೇ ಆತ್ಮದ ಆರ್ತನಾದ ಎನ್ನಿಸತೊಡಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.