ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ-ಉತ್ತರ

Last Updated 30 ಜೂನ್ 2013, 19:59 IST
ಅಕ್ಷರ ಗಾತ್ರ

ಶ್ರೀನಿಧಿ ಕೆ.ಎಸ್., ಬೆಂಗಳೂರು

ನಾನು 3ನೇ ವರ್ಷದ ಬಿ.ಇ. ಓದುತ್ತಿದ್ದೇನೆ. ಅದು ಮುಗಿದ ನಂತರ ಒಂದೆರಡು ವರ್ಷ ಕೆಲಸ ಮಾಡಿ ಬಳಿಕ ಎಂ.ಎಸ್. ಮಾಡಬೇಕು ಎಂದುಕೊಂಡಿದ್ದೇನೆ. ಆದ್ದರಿಂದ ದಯಮಾಡಿ ಎಂ.ಎಸ್. ಕುರಿತು ಮಾಹಿತಿ ಕೊಡಿ. ಇದಕ್ಕೆ ತಗಲುವ ವೆಚ್ಚ ಎಷ್ಟು? ಎಂ.ಎಸ್. ನಂತರ ಉದ್ಯೋಗಾವಕಾಶಗಳು ಹೇಗೆ?

-ಎರಡು ವರ್ಷ ಕೆಲಸ ಮಾಡಿದರೆ ಎಂ.ಎಸ್. ಅಧ್ಯಯನಕ್ಕೆ ನಿಮ್ಮ ಆಸಕ್ತಿಗೆ ಅನುಗುಣವಾದ ವಿಷಯ ಯಾವುದೆಂಬುದು ತಿಳಿಯುತ್ತದೆ. ವಿದೇಶದ ಯಾವ ವಿಶ್ವವಿದ್ಯಾಲಯಗಳಲ್ಲಿ ನಿಮ್ಮ ಆಸಕ್ತಿಯ ವಿಷಯದಲ್ಲಿ ಎಂ.ಎಸ್. ಲಭ್ಯವಿದೆ, ಅಲ್ಲಿನ ಶುಲ್ಕ ಎಷ್ಟು ಎಂಬುದನ್ನು ಆಯಾ ವಿಶ್ವವಿದ್ಯಾಲಯಗಳ ಅಂತರ್ಜಾಲ ತಾಣಗಳ ಮುಖಾಂತರ ತಿಳಿಯಬಹುದು. ಜಿ.ಆರ್.ಇ. ಮತ್ತು ಟೋಫೆಲ್ ಪರೀಕ್ಷೆಗಳನ್ನು ನೀವು ಉತ್ತಮ ಅಂಕಗಳೊಂದಿಗೆ ಮುಗಿಸಬೇಕಾಗುತ್ತದೆ. ಇಂತಹ ಶಿಕ್ಷಣಕ್ಕೆ ಬ್ಯಾಂಕ್ ಸಾಲದ ಸೌಲಭ್ಯ ಇರುವುದರಿಂದ ಹಣಕಾಸಿನ ಅಡಚಣೆ ಇಲ್ಲ. ವಿದೇಶದಲ್ಲಿ ಓದುತ್ತಲೇ ದುಡಿಯುವ ಅವಕಾಶಗಳೂ ಇರುವುದರಿಂದ ನೀವು ಚಿಂತಿಸುವ ಅಗತ್ಯವಿಲ್ಲ.

ಅನುಪಮ, ಮೈಸೂರು
ನನಗೆ ಈಗ 32 ವರ್ಷ. ಕಮರ್ಷಿಯಲ್ ಪ್ರಾಕ್ಟೀಸ್ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದೇನೆ. ಈಗ ಬಿ.ಸಿ.ಎ. ಅಥವಾ ಬಿ.ಎ. ಮಾಡಿ ಪದವಿ ಗಳಿಸಬಹುದೇ?

-ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ ಮಾಡಿರುವ ನೀವು ಈಗ ಯಾವ ಉದ್ಯೋಗದಲ್ಲಿ ಇದ್ದೀರೆಂಬುದು ನಿಮ್ಮ ಪತ್ರದಿಂದ ತಿಳಿಯುತ್ತಿಲ್ಲ. ನಿಮ್ಮ ಮುಂದಿನ ಓದು ಈಗಿನ ಉದ್ಯೋಗಕ್ಕೆ ಪೂರಕ ಆಗಿರಬೇಕು ಅಥವಾ ನಿಮ್ಮ ಆಸಕ್ತಿಯನ್ನು ಪೋಷಿಸುವಂತೆ ಇರಬೇಕು. ಇದರ ಆಧಾರದ ಮೇಲೆ ನೀವು ಬಿ.ಎ. ಅಥವಾ ಬಿ.ಸಿ.ಎ. ಆರಿಸಿಕೊಳ್ಳಬೇಕು.

ರಶೀದ್

ನನಗೆ 34 ವರ್ಷವಾಗಿದ್ದು, ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದೇನೆ. ಆಂತರಿಕ ಕಾರಣಗಳಿಂದ ಬಿ.ಎಸ್ಸಿ. ಮುಗಿಸಲು ಸಾಧ್ಯವಾಗಲಿಲ್ಲ. ಪೆರಿಯಾರ್ ವಿಶ್ವವಿದ್ಯಾಲಯದವರು ಈಗ ಒಂದೇ ವರ್ಷಕ್ಕೆ ಪದವಿ ನೀಡುತ್ತಾರಂತೆ. ಇದನ್ನು ನಾನು ಈಗ ಪಡೆದುಕೊಂಡರೆ ಮಾನ್ಯತೆ ಇರುತ್ತದೆಯೇ?

-ಯು.ಜಿ.ಸಿ. ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ನೀವು ಪದವಿ ಪಡೆದರೂ ಅದಕ್ಕೆ ಮಾನ್ಯತೆ ಇರುತ್ತದೆ. ಪೆರಿಯಾರ್ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ. ಮಾನ್ಯತೆ ಇದೆಯೇ ಎಂಬುದನ್ನು ತಿಳಿಯಿರಿ. ಬಿ.ಎಸ್ಸಿ.ಗಿಂತ ನಿಮ್ಮ ಈಗಿನ ಉದ್ಯೋಗಕ್ಕೆ ಯಾವ ರೀತಿ ಪ್ರಯೋಜನ ಎಂಬುದನ್ನೂ ಯೋಚಿಸಿ. ನೀವು ಮಾಡುತ್ತಿರುವ ಕೆಲಸಕ್ಕೆ ಪೂರಕವಾದ ವಿಷಯದಲ್ಲಿ ಡಿಪ್ಲೊಮಾ ಮಾಡುವುದು ಅಥವಾ ಬಿ.ಎಸ್ಸಿ. ಮಾಡುವುದು ಉತ್ತಮ. ಪದವಿಗೋಸ್ಕರ ಪದವಿಯಲ್ಲ. ಜ್ಞಾನಕ್ಕೋಸ್ಕರ ಮತ್ತು ಉದ್ಯೋಗಕ್ಕೋಸ್ಕರ ಪದವಿ ಎಂಬ ಸತ್ಯವನ್ನು ತಿಳಿದು ಮುಂದುವರಿಯಿರಿ.

ಸ್ಮಿತಾ ಮಿರಾಂಡ, ಚಿಕ್ಕಮಗಳೂರು

ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಬಿ.ಎಸ್ಸಿ. ನಂತರ ಭೌತಶಾಸ್ತ್ರ ಮತ್ತು ಗಣಿತದಲ್ಲಿ ಬಿ.ಎಡ್. ಮಾಡಿದೆ. ಪರಿವಾರದಲ್ಲಿನ ತೊಂದರೆಗಳಿಂದಾಗಿ ಎಂ.ಎಸ್ಸಿ. ಮಾಡಲು ಸಾಧ್ಯವಾಗಲಿಲ್ಲ. ಈಗ ಕೆ.ಎಸ್.ಒ.ಯು. ಮೂಲಕ ಇಂಗ್ಲಿಷ್ ಎಂ.ಎ. ಮಾಡುತ್ತಾ ಇದ್ದೇನೆ. ಆದರೆ ಕೆಲವರು ಹೇಳುವ ಪ್ರಕಾರ, ಉದ್ಯೋಗದಲ್ಲಿ ಬಡ್ತಿ ಪಡೆಯಬೇಕಾದರೆ ನಾವು ಪಾಠ ಮಾಡುವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬ ನಿಯಮವಿದೆ. ಇದು ನಿಜವೇ?
-ನಾನು ಈಗ ಇಂಗ್ಲಿಷ್ ಎಂ.ಎ. ಮಾಡುತ್ತಿರುವುದರಿಂದ ಮತ್ತು ಇದರ ನಂತರ ಪ್ರಾದೇಶಿಕ ಕಾಲೇಜೊಂದರಲ್ಲಿ ಇಂಗ್ಲಿಷ್ ಡಿಪ್ಲೊಮಾ ಮಾಡಿದರೆ ನನಗೆ ಮುಂದೆ ಇಂಗ್ಲಿಷ್ ಶಿಕ್ಷಕಿಯಾಗಿ ಬಡ್ತಿ ದೊರೆಯಬಹುದೇ? ನನ್ನ ಆರೋಗ್ಯದ ಕಾರಣಗಳಿಂದ ಈಗ ಎಂ.ಎಸ್ಸಿ. ಮಾಡಲಾರೆ.

ನೀವು ಸರ್ಕಾರಿ ಉದ್ಯೋಗದಲ್ಲಿ ಇರುವುದರಿಂದ ಅದರಲ್ಲಿ ಬಡ್ತಿ ಪಡೆಯಲು ನೀವು ಬೋಧಿಸುತ್ತಿರುವ ವಿಚಾರದಲ್ಲೇ ಎಂ.ಎಸ್ಸಿ. ಮಾಡುವುದು ಸೂಕ್ತ. ನೀವು ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿಕೊಂಡರೆ, ಇಂಗ್ಲಿಷ್ ಬೋಧಿಸುತ್ತಾ ಎಂ.ಎ. ಮಾಡಿಕೊಂಡಿರುವವರ ಮಧ್ಯೆ ನೀವು ಅವಕಾಶ ಕಳೆದುಕೊಳ್ಳುವ ಸಾಧ್ಯತೆಯೇ ಜಾಸ್ತಿ. ಆದ್ದರಿಂದ ನೀವು ಈಗಲೂ ಬೋಧಿಸುತ್ತಿರುವ ವಿಚಾರದಲ್ಲೇ ಸ್ನಾತಕೋತ್ತರ ಪದವಿ ಪಡೆಯುವ ಪ್ರಯತ್ನ ಮಾಡಿ. ಆಗ ನಿಮ್ಮ ಮುಂದಿನ ದಾರಿ ಸುಗಮವಾಗುತ್ತದೆ.

ಪಂಕಜ ಜೈನ್, ಅಜಯ್ ಬಿ. ಕೊಟ್ಟೂರು
ನಾನು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಎಸ್ಸಿ. ಓದುತ್ತಿದ್ದೇನೆ. ಪದವಿಯ ನಂತರ ಎಂ.ಎಸ್ಸಿ. ಎಲೆಕ್ಟ್ರಾನಿಕ್ಸ್ ಮಾಡಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಸಾಕಷ್ಟು ಬೇಡಿಕೆ ಇದೆಯೇ ಅಥವಾ ಎಂ.ಸಿ.ಎ. ಮಾಡುವುದು ಸೂಕ್ತವೇ? ಈ ಎರಡರಲ್ಲಿ ಯಾವುದಕ್ಕೆ ಸೇರಿಕೊಳ್ಳಲಿ?

-ನೀವು ಬಿ.ಎಸ್ಸಿ. ನಂತರ ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಎಂ.ಎಸ್ಸಿ. ಮಾಡಬಹುದು. ಎಂ.ಎಸ್ಸಿ. ಮಾಡಿದರೆ ಮುಂದೆ ಪಿಎಚ್.ಡಿ. ಮಾಡಲು ಸಾಧ್ಯವಾಗುತ್ತದೆ. ಸಂಶೋಧನೆಯ ನಂತರ ನೀವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಕಂಪ್ಯೂಟರ್ ವಿಜ್ಞಾನವನ್ನು ತಾತ್ವಿಕ ತಳಹದಿಯ ಮೇಲೆ ಅಭ್ಯಾಸ ಮಾಡುವ ಬಯಕೆ ಇದ್ದರೆ ಎಂ.ಎಸ್ಸಿ. ಮಾಡಿ. ಕಂಪ್ಯೂಟರ್ ಅನ್ವಯಗಳಲ್ಲಿ ನಿಮಗೆ ಆಸಕ್ತಿ ಇದ್ದರೆ ಎಂ.ಸಿ.ಎ. ಮಾಡಿ. ಹಲವಾರು ದಾರಿಗಳು ನಿಮ್ಮ ಮುಂದೆ ಇವೆಯಾದರೂ ನಿಮ್ಮ ಆಸಕ್ತಿಯನ್ನು ಗುರುತಿಸಿಕೊಂಡು ಮುಂದುವರಿಯಿರಿ. ಶುಭವಾಗಲಿ.

ಜಾಯ್ ರಾಹುಲ್
ನಾನು ರಾಮನಗರದ ಸರ್ಕಾರಿ ಕಾಲೇಜಿನಲ್ಲಿ ಓದಿ ದ್ವಿತೀಯ ಪಿ.ಯು.ಸಿ. (ಪಿ.ಸಿ.ಎಂ.ಬಿ) ಮುಗಿಸಿದ್ದೇನೆ. ನನಗೆ ಬಿ.ಸಿ.ಎ. ಮಾಡಬೇಕೆಂಬ ಹಂಬಲ ಇದೆ. ಆದರೆ ಪಿ.ಯು.ಸಿ.ಯಲ್ಲಿ ಪಿ.ಸಿ.ಎಂ.ಬಿ. ತೆಗೆದುಕೊಂಡವರಿಗೆ ಬಿ.ಸಿ.ಎ. ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಗೊಂದಲದಲ್ಲಿ ಇದ್ದೇನೆ. ಅಲ್ಲದೆ ಆರ್ಥಿಕ ತೊಂದರೆಯಿಂದಾಗಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ದಯಮಾಡಿ ಪೂರಕ ಸಲಹೆ ಕೊಡಿ.
-ನೀವು ಪಿ.ಯು.ನಲ್ಲಿ ಪಿ.ಸಿ.ಎಂ.ಬಿ. ತೆಗೆದುಕೊಂಡಿರುವುದರಿಂದ ಬಿ.ಸಿ.ಎ. ಮಾಡಲಾಗುವುದಿಲ್ಲ ಎಂಬುದು ತಪ್ಪು ಕಲ್ಪನೆ. ಪಿ.ಯು.ನಲ್ಲಿ ಕಂಪ್ಯೂಟರ್ ಸೈನ್ಸ್ ತೆಗೆದುಕೊಂಡವರು ಮಾತ್ರ ಮುಂದೆ ಬಿ.ಸಿ.ಎ. ಮಾಡಬಹುದೆಂದೇನೂ ಇಲ್ಲ. ಭೌತಶಾಸ್ತ್ರ ಮತ್ತು ಗಣಿತವನ್ನು ಪಿ.ಯು.ನಲ್ಲಿ ಓದಿದ ಯಾವ ವಿದ್ಯಾರ್ಥಿಯಾದರೂ ಬಿ.ಸಿ.ಎ. ಮಾಡಬಹುದು. ಬಿ.ಸಿ.ಎ. ನಂತಹ ಕಂಪ್ಯೂಟರ್ ಕೋರ್ಸುಗಳು ಖಾಸಗಿ ಕಾಲೇಜುಗಳಲ್ಲೇ ಹೆಚ್ಚು ಸಿಗುತ್ತವೆ. ಆರ್ಥಿಕ ತೊಂದರೆಗಳಿದ್ದರೆ ನೀವು ಬ್ಯಾಂಕ್‌ಗಳಿಂದ ವಿದ್ಯಾಭ್ಯಾಸದ ಸಾಲ ತೆಗೆದುಕೊಳ್ಳಬಹುದು. ಬಿ.ಸಿ.ಎ. ಕೋರ್ಸಿಗೆ ಅವಕಾಶ ಸಿಗದಿದ್ದರೆ ನೀವು ಕಂಪ್ಯೂಟರ್ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡು ಬಿ.ಎಸ್ಸಿ. ಮಾಡಬಹುದು.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ,ಬೆಂಗಳೂರು 560001
ಪ್ರಶ್ನೆಗಳನ್ನು ಇ- ಮೇಲ್‌ನಲ್ಲೂ ಕಳುಹಿಸಬಹುದು: shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT