ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಬೇಗೆಗೆ ಎಚ್ಚರಿಕೆಯೇ ಪರಿಹಾರ

ವಾರದ ಸಂದರ್ಶನ: ಡಾ. ರಾಜೇಶ್‌ ಎಸ್‌. ರೋಗಶಾಸ್ತ್ರಜ್ಞ, ಬೆಂಗಳೂರು
Last Updated 30 ಏಪ್ರಿಲ್ 2016, 20:24 IST
ಅಕ್ಷರ ಗಾತ್ರ

ಬರ ಮತ್ತು ನೀರಿನ ತತ್ವಾರದಿಂದ ಇಡೀ ದೇಶ ತತ್ತರಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದೆ. ಬಿಸಿಗಾಳಿಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬದುಕು ದುಸ್ತರವಾಗಿದೆ. ಹಿಂದೆಂದೂ ಕಂಡರಿಯದಂತಹ ಬಿಸಿಲಿನ ತಾಪಕ್ಕೆ ಜನರು, ಜಾನುವಾರುಗಳ ಬದುಕು ದುಸ್ತರವಾಗಿದೆ. ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ.

ಬಿಸಿಗಾಳಿ ಹೆಚ್ಚಾಗಿರುವುದರಿಂದ ಈಗಾಗಲೇ ಹೈದರಾಬಾದ್‌ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಮಧ್ಯಾಹ್ನ 12ರವರೆಗೆ ನಿಗದಿಪಡಿಸಲಾಗಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ವಾತಾವರಣದಲ್ಲಿ 3 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಿದೆ. ರಾಜ್ಯದ ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಹಾವೇರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಈಗಾಗಲೇ ಬಿಸಿಲಿನ ತಾಪಕ್ಕೆ ಚಾಮರಾಜನಗರ, ತುಮಕೂರು ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಮೂವರು ಬಲಿಯಾಗಿದ್ದಾರೆ. ಬಿಸಿಲಿನ ತಾಪದ ಜೊತೆಗೆ ನೀರಿನ ಸಮಸ್ಯೆ ಸಹ ಗುಡ್ಡದಷ್ಟು ದೊಡ್ಡದಾಗಿದೆ. ಹೀಗಾಗಿ ವಾಂತಿ ಭೇದಿ ಜೊತೆಗೆ ಹಲವು ರೋಗರುಜಿನಗಳು ಹರಡುತ್ತಿವೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಹಾಗೂ ದೇಹದ ತಾಪಮಾನ ನಿಯಂತ್ರಣದಲ್ಲಿಟ್ಟುಕೊಳ್ಳಲು ಏನು ಮಾಡಬಹುದು ಎಂಬುದರ ಕುರಿತು ಬೆಂಗಳೂರಿನ ಯಲಹಂಕ ಉಪನಗರದಲ್ಲಿರುವ ನವಚೇತನ ಆಸ್ಪತ್ರೆಯ ರೋಗಶಾಸ್ತ್ರಜ್ಞ ಡಾ. ರಾಜೇಶ್‌  ಎಸ್‌. ಅವರ ಸಂದರ್ಶನದ ವಿವರ ಇಲ್ಲಿದೆ:

* ಬಿಸಿಗಾಳಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?
ಉರಿ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು. ಮಧ್ಯಾಹ್ನ 12 ಗಂಟೆಯೊಳಗೆ ದೈನಂದಿನ ಕೆಲಸ ಮುಗಿಸಿಕೊಳ್ಳಬೇಕು. 12ಕ್ಕೆ ಉಷ್ಣಾಂಶ ಹೆಚ್ಚಿದ್ದರೂ ಬಿಸಿಗಾಳಿ ಪ್ರಮಾಣ ಕಡಿಮೆ ಇರುತ್ತದೆ. ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಬಿಸಿಗಾಳಿ ಪ್ರಮಾಣ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು. 

ರೈತರು, ಕೂಲಿ ಕಾರ್ಮಿಕರು, ವಾಹನ ಚಾಲಕರು, ಕಾರ್ಖಾನೆಗಳ ಕಾರ್ಮಿಕರು, ಮಕ್ಕಳು, ವಯಸ್ಸಾದವರು ಬಹಳ ಎಚ್ಚರಿಕೆ ವಹಿಸಬೇಕು. ಉಷ್ಣಾಂಶದ ಜೊತೆಗೆ ತೇವಾಂಶದ ಪ್ರಮಾಣ ಸಹ ಹೆಚ್ಚಾಗುತ್ತಿದೆ. ಇದರಿಂದ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ವಾಹನ ಸವಾರರು, ವಿಶೇಷವಾಗಿ ಮಹಿಳೆಯರು ಕೈಗವಸುಗಳನ್ನು ತೊಡಬೇಕು. ತಲೆ ಮತ್ತು ಮುಖವನ್ನು ಬಟ್ಟೆಗಳಿಂದ ರಕ್ಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಸಿಗಾಳಿಯಲ್ಲಿ ಕೆಲಸ ಮಾಡಬಾರದು.

* ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ತಂಪು ಪಾನೀಯ ಸೇವನೆ ಸರಿಯೇ?
ಬಿಸಿಗಾಳಿಯಿಂದ ಬೇಸತ್ತವರು ತಂಪು ಪಾನೀಯಗಳಿಗೆ ಮೊರೆ ಹೋಗುವುದು ಸಹಜ. ಆದರೆ ಇದರಿಂದ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಲವು ರೋಗರುಜಿನಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಐಸ್‌ಕ್ರೀಂ  ಸೇವನೆಯನ್ನಂತೂ ಮಾಡಲೇಬಾರದು.

* ಮದ್ಯವ್ಯಸನಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ?
ಬಿಸಿ ಗಾಳಿಯ ಹೊಡೆತಕ್ಕೆ ಮದ್ಯವ್ಯಸನಿಗಳು ಹೆಚ್ಚಾಗಿ ತುತ್ತಾಗುತ್ತಾರೆ. ಮದ್ಯವ್ಯಸನಿಗಳ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಬಿಸಿ ಗಾಳಿಗೆ ಅವರು ಸಾಯಲೂಬಹುದು. ಈ ಸಮಯದಲ್ಲಿ ಮದ್ಯ ಸೇವನೆಯಿಂದ ದೂರ ಉಳಿಯುವುದು ಉತ್ತಮ.

* ಯಾವ ರೀತಿಯ ಆಹಾರ ಸೇವಿಸಬೇಕು?
ಮಸಾಲೆ ಹೆಚ್ಚಿರುವ ಆಹಾರ ಸೇವಿಸುವುದನ್ನು ಕಡಿಮೆ ಮಾಡಬೇಕು. ಚಹಾ, ಕಾಫಿ ಸೇವನೆ ಸಹ ಕಡಿಮೆ ಮಾಡಬೇಕು. ಕಿತ್ತಳೆ, ದ್ರಾಕ್ಷಿ ಹಣ್ಣಿನ ರಸ ಸೇವನೆ ಕಡಿಮೆ ಪ್ರಮಾಣದಲ್ಲಿರಬೇಕು. ಈ ಸಮಯದಲ್ಲಿ ಹೊಸ ಪದಾರ್ಥಗಳ ಸೇವನೆ ಮಾಡುವುದು ಸೂಕ್ತವಲ್ಲ. ಸ್ವಚ್ಛಗೊಳಿಸದ ತರಕಾರಿ, ಹಣ್ಣು ಸೇವನೆ ಮಾಡಬಾರದು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೆ ಅತಿಸಾರ ಸೇರಿದಂತೆ ಮತ್ತಿತರ ಸಮಸ್ಯೆಗಳು ಕಾಣಲಾರಂಭಿಸುತ್ತವೆ. ಆದ್ದರಿಂದ ಮಿತ ಆಹಾರವನ್ನು ಸೇವಿಸುವುದು ಸೂಕ್ತ.

* ಬೇಸಿಗೆಯಲ್ಲಿ ರೋಗಗಳು ಹೆಚ್ಚಾಗಲು ಕಾರಣವೇನು?
ಈ ಸಮಯದಲ್ಲಿ ರೋಗಗಳು ಹೆಚ್ಚಾಗಲು ದೇಹದಲ್ಲಿನ ನೀರಿನ ಕೊರತೆ ಪ್ರಮುಖ ಕಾರಣ.

* ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಿದೆಯೇ?
ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗದಂತೆ ಕ್ರಮ ತೆಗೆದುಕೊಂಡರೆ ಮಾತ್ರ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯ.

* ವಾಂತಿ ಭೇದಿ ಜೊತೆಗೆ ಮತ್ಯಾವ ರೋಗಗಳು ಕಂಡು ಬಂದಿವೆ?
ರೋಗಶಾಸ್ತ್ರಜ್ಞಆಗಿರುವುದರಿಂದ ಎಲ್ಲ ರೀತಿಯ ರೋಗಿಗಳನ್ನೂ ತಪಾಸಣೆ ಮಾಡುತ್ತೇನೆ. ಮಳೆಗಾಲ ಬಂದಾಗ ಒಂದು ಪರಿಸ್ಥಿತಿಯಾದರೆ, ಬೇಸಿಗೆಯಲ್ಲಿ ಮತ್ತೊಂದು ಪರಿಸ್ಥಿತಿ ಸಾಮಾನ್ಯ. ಆದರೆ ಈ ಬಾರಿ ಅತಿಯಾದ ತಾಪಮಾನದಿಂದ  ಅತಿಸಾರದ ಜೊತೆಗೆ ಹಲವು ರೋಗಗಳನ್ನು ಕಾಣುತ್ತಿದ್ದೇವೆ. ಈ ಹಿಂದೆ ಬೇಸಿಗೆಯಲ್ಲಿ ವಾಂತಿ ಭೇದಿ ಪ್ರಕರಣಗಳು ಸಾಮಾನ್ಯವಾಗಿರುತ್ತಿದ್ದವು. ಆದರೆ ಈ ವರ್ಷದಲ್ಲಿ ತಲೆ ಸುತ್ತುವುದು, ಸ್ನಾಯು ಸೆಳೆತ, ನಿತ್ರಾಣಗೊಳ್ಳುವುದು ಹೆಚ್ಚಾಗಿದೆ. ತಾಪಮಾನ ಹೆಚ್ಚಾದಾಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿವಳಿಕೆ ಇಲ್ಲದಿರುವುದೇ ರೋಗ ಉಲ್ಬಣಗೊಳ್ಳಲು ಪ್ರಮುಖ ಕಾರಣ.

* ನೀರಿನ ಪ್ರಮಾಣ ಕಡಿಮೆಯಾದರೆ ಯಾವ ತೊಂದರೆ ಅನುಭವಿಸಬೇಕಾಗುತ್ತದೆ?
ಮನುಷ್ಯನ ದೇಹದಲ್ಲಿ ಶೇ 70ರಷ್ಟು ನೀರು ಇರಲೇಬೇಕು. ಆದರೆ ಬಿಸಿಲಿನ ತಾಪದಿಂದ ನೀರಿನ ಅಂಶ ಕಡಿಮೆಯಾಗುತ್ತದೆ. ನೀರಿನ ಪ್ರಮಾಣ ಕಡಿಮೆಯಾದರೆ, ದೇಹದ ಅಂಗಾಂಗಗಳಿಗೆ ಕೆಲಸ ಮಾಡಲು ತೊಂದರೆಯಾಗುತ್ತದೆ. ಅಂಗಾಂಗಗಳು ಸರಿಯಾಗಿ ಕೆಲಸ ಮಾಡಬೇಕಾದರೆ, ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ದೇಹದಲ್ಲಿನ ಪೌಷ್ಟಿಕಾಂಶ ಸಹ ಕಡಿಮೆಯಾಗುತ್ತದೆ. ಅದಕ್ಕಾಗಿ ಹೆಚ್ಚು ಶುದ್ಧ ನೀರನ್ನು ಸೇವಿಸಬೇಕು.

* ನೀರಿನ ಪ್ರಮಾಣ ಹೇಗೆ ಕಡಿಮೆಯಾಗುತ್ತದೆ?
ತಾಪಮಾನ ಜಾಸ್ತಿ ಆಗುವುದರಿಂದ ಮೈಮೇಲಿನ ಬೆವರು ಆವಿಯಾಗುವುದು ಹೆಚ್ಚಾದಂತೆ ನೀರಿನ ಅಂಶ ಕಡಿಮೆ ಆಗುತ್ತಾ ಹೋಗುತ್ತದೆ. ದೇಹದ ತಾಪಮಾನದಲ್ಲೂ ಏರುಪೇರಾಗುತ್ತದೆ. ಇದರಿಂದ ದೇಹದಲ್ಲಿರುವ ಇಲೆಕ್ಟ್ರೋಲೈಟ್ಸ್‌ ಕಡಿಮೆ ಆಗುತ್ತದೆ. ಆದ್ದರಿಂದ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು ನೀರನ್ನು ಹೆಚ್ಚಾಗಿ ಸೇವಿಸಬೇಕು. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆ ಶುರುವಾಗುವುದೇ ನೀರಿನಿಂದ. ಸಣ್ಣಪುಟ್ಟ ರೋಗ, ನೋವಿನಿಂದ ಆರಂಭವಾಗುವ ಈ ಸಮಸ್ಯೆ ಮಾರಣಾಂತಿಕವೂ ಆಗಬಹುದು.

* ದೇಹದ ತಾಪಮಾನದಿಂದ ಉಂಟಾಗುವ ಸಮಸ್ಯೆಗಳು ಯಾವುವು?
ದೇಹದ ತಾಪಮಾನ ಏರಿಕೆಯಿಂದ ಕಿಡ್ನಿ, ಯಕೃತ್‌ ಸಮಸ್ಯೆಗಳು ಎದುರಾಗುತ್ತವೆ. ರಕ್ತ ಹೆಪ್ಪುಗಟ್ಟುವಿಕೆಯ ಅಂಶ ಕಡಿಮೆಯಾಗುತ್ತದೆ. ಇದರಿಂದ ರಕ್ತಸ್ರಾವ ಹೆಚ್ಚಾಗುತ್ತದೆ. ವ್ಯಕ್ತಿ ಮರಣಹೊಂದಲೂ ಬಹುದು.

* ಬಿಸಿಲಿನ ತಾಪದಿಂದ ಬಳಲುವ ಬಗೆಗಿನ ಮುನ್ಸೂಚನೆ ಯಾವುದು?
ತಾಪಮಾನ ಹೆಚ್ಚಾದಂತೆ ಬಿಸಿಗಾಳಿ ಪ್ರಮಾಣ ಹೆಚ್ಚಾಗುತ್ತದೆ. ಚರ್ಮದಿಂದ ಹಿಡಿದು ಎಲ್ಲ ಅಂಗಾಂಗಗಳಿಗೂ ತೊಂದರೆಯಾಗುತ್ತದೆ. ಮೈಕೈ ನೋವು, ನಿತ್ರಾಣ ಸಮಸ್ಯೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಸೂಕ್ತ ಉಪಚಾರ ಪಡೆಯಲೇಬೇಕು. ಏಕೆಂದರೆ, ಇದು ಬಿಸಿಲಿನ ತಾಪದಿಂದ ಬಳಲುತ್ತಿರುವುದರ ಮುನ್ಸೂಚನೆ. ಬಿಸಿಲಿನ ಹೊಡೆತಕ್ಕೆ ಚರ್ಮದ ಮೇಲೆ ದದ್ದುಗಳು (ರ್‍ಯಾಶಸ್‌) ಕಂಡುಬರುತ್ತವೆ. ಚರ್ಮ ಸುಡುವ ಮೂಲಕ ರೋಗದ ಸೋಂಕಿನ ಸಾಧ್ಯತೆ ಹೆಚ್ಚು. ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಾರ್ವಜನಿಕ ಈಜುಕೊಳದಲ್ಲಿ ಇಳಿಯುವುದು ಸರಿಯಲ್ಲ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ.

* ರೋಗಿಗಳ ಸಂಖ್ಯೆ ಹೆಚ್ಚಾಗಿದೆಯೇ?
ಕಳೆದ ತಿಂಗಳು ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರಲಿಲ್ಲ. ಆದರೆ, ಈ ತಿಂಗಳಿನಲ್ಲಿ ಇದರ ಪ್ರಮಾಣ ಹೆಚ್ಚಾಗಿದ್ದು, ನಮ್ಮ ಆಸ್ಪತ್ರೆಯೊಂದಕ್ಕೆ ಈಗಾಗಲೇ 20ಕ್ಕೂ ಅಧಿಕ ರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳ ಪೈಕಿ ಕನಿಷ್ಠ ಶೇ 50ರಷ್ಟು ಮಂದಿ ಬಿಸಿಲಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಾಗಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗ್ಲುಕೋಸ್‌ ನೀಡಿ ಜಲಸಂಚಯನವನ್ನು ಸಮಸ್ಥಿತಿಯಲ್ಲಿ ಕಾಪಾಡಲಾಗುತ್ತದೆ. ಆದರೆ ಅವರು ಮನೆಗೆ ಹೋದ ನಂತರವೂ ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಸಮಸ್ಯೆ ಎದುರಿಸಬೇಕಾಗುತ್ತದೆ. ಬಿಸಿಲಿನ ತಾಪ ಹೆಚ್ಚಾದಂತೆ ತಲೆ ನೋವು, ನೆಗಡಿ, ಕಫ ಜಾಸ್ತಿಯಾಗುತ್ತದೆ. ಶ್ವಾಸಕೋಶ ಸಂಬಂಧಿತ ತೊಂದರೆ ಉಂಟಾಗುತ್ತದೆ.

* ಇತರ ರೋಗಗಳಿಂದ ಬಳಲುವವರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆಯೇ?
ರಕ್ತದೊತ್ತಡದ ಸಮಸ್ಯೆ ಹೊಂದಿದವರು, ಮಧುಮೇಹಿಗಳು ಹಾಗೂ ಅತಿಯಾಗಿ ಮಾತ್ರೆ ಸೇವಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಬಿಸಿಗಾಳಿಯಿಂದ ಇವರ ಮೇಲೆ ದುಷ್ಪರಿಣಾಮ ಆಗುತ್ತದೆ. ತಾಪಮಾನ ಏರಿಕೆಯಿಂದ ಹೃದಯಾಘಾತ ಆಗುವುದು ಕಡಿಮೆ. ಆದರೆ ಶ್ವಾಸಕೋಶ ತೊಂದರೆ ಅನುಭವಿಸಬೇಕಾಗುತ್ತದೆ. ವಿಪರೀತ ಸುಸ್ತು, ಸ್ನಾಯು ಸೆಳೆತ, ತಲೆ ಸುತ್ತುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

* ಬಿಸಿಲಿನಿಂದ ಮಾನಸಿಕ ತೊಂದರೆ ಆಗುತ್ತದೆಯೇ?
ಬಿಸಿಲಿನಿಂದ ಮಾನಸಿಕ ತೊಂದರೆಗಳು ಹುಟ್ಟುವುದಿಲ್ಲ. ಆದರೆ ಮಾನಸಿಕ ಸಮಸ್ಯೆಗಳಿಂದ ಬಳಲುವವರಿಗೆ ಬೇಸಿಗೆ ಹೆಚ್ಚಾದಂತೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.  ದೇಶದಲ್ಲಿ 10ರಿಂದ 15 ಕೋಟಿ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಬಿಸಿಲಿನ ತಾಪದಿಂದ ಇವರಲ್ಲಿಯೂ ಸಮಸ್ಯೆಗಳು ಹೆಚ್ಚಾಗುತ್ತವೆ. ಮಾನಸಿಕ ರೋಗಿಗಳು ಎಚ್ಚರಿಕೆ ವಹಿಸಬೇಕು. ಇಂಥ ತಾಪಮಾನದಲ್ಲಿ ಹೆಚ್ಚಿನ ವ್ಯಾಯಾಮ ಮಾಡುವುದು ಸೂಕ್ತವಲ್ಲ.

* ಉದ್ಯಾನನಗರಿ ಬೆಂಗಳೂರಿನಲ್ಲಿ ನಿಮ್ಮ ಅನುಭವ?
ತಾಪಮಾನ ಹೆಚ್ಚಾಗಿರುವುದು, ಬಿಸಿ ಗಾಳಿ ಬೀಸುವುದು ಉತ್ತರ ಭಾರತದಲ್ಲಿ ಹೆಚ್ಚು ಎಂದು ಈ ಮೊದಲು ಹೇಳಲಾಗುತ್ತಿತ್ತು. ಆದರೆ ಈಗ ನಮ್ಮ ರಾಜ್ಯದಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತ ಸಾಗಿದೆ. ಹವಾನಿಯಂತ್ರಿತ ನಗರ ಎಂದೇ ಕರೆಯಲಾಗುತ್ತಿದ್ದ ಬೆಂಗಳೂರಿನಲ್ಲಿಯೂ ಬಿಸಿಗಾಳಿ ಹೆಚ್ಚಾಗಿದೆ. ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಇಂಥ ನಗರದಲ್ಲೂ ಬದುಕು ದುಸ್ತರವಾಗಿದೆ. ಒಂದು ತಿಂಗಳಿನಿಂದ ಉಷ್ಣಾಂಶ 40 ಡಿಗ್ರಿಗೆ ಏರಿಕೆಯಾಗಿದೆ. ಈಗಾಗಲೇ ನಾಗರಿಕರಿಗೆ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಬಿಸಿಗಾಳಿಯ ಅನುಭವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT