ಮಂಗಳವಾರ, ನವೆಂಬರ್ 19, 2019
22 °C
ಪಿಂಕ್ ಬಾಲ್ 'ಟೆಸ್ಟ್'

ಮೊದಲ ಹಗಲು ರಾತ್ರಿ ಟೆಸ್ಟ್ ಕ್ರಿಕೆಟ್: ನ. 22 ರಿಂದ ಆರಂಭ

Published:
Updated:

ಟೆಸ್ಟ್ ಕ್ರಿಕೆಟ್‌ ಜನಪ್ರಿಯತೆ ಹೆಚ್ಚಿಸಲು ಹಗಲು ರಾತ್ರಿ ಪಂದ್ಯಗಳನ್ನು ಆಡಿಸುವ ಪ್ರಯೋಗಕ್ಕೆ ಭಾರತವೂ ಸಿದ್ಧವಾಗುತ್ತಿದೆ. ಇದೇ 22ರಿಂದ ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್‌ ನಡೆಯಲಿದೆ.

‘ಅಭಿಮಾನಿ ಪ್ರೇಕ್ಷಕರೆ ನಿಮ್ಮ ಕಣ್ಣುಗಳು ಚೆಂಡಿನ ಮೇಲೆಯೇ ನೆಟ್ಟಿರಲಿ. ಯಾವುದೇ ಸಂದರ್ಭದಲ್ಲಿ ನಿಮ್ಮತ್ತ ನುಗ್ಗಿ ಬರಬಹುದು. ಆದ್ದರಿಂದ ನಿಮ್ಮನ್ನು ಚೆಂಡಿನ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಜಾಗೃತರಾಗಿರಿ’

1952ರ ಆಗಸ್ಟ್‌ 11ರ ಮುಸ್ಸಂಜೆಯ ಮಬ್ಬುಗತ್ತಲನ್ನು ಸೀಳಿಕೊಂಡು ಬರುತ್ತಿದ್ದ ಈ ಘೋಷಣೆಯು ಪ್ರತಿಧ್ವನಿಸಿದ್ದು ಇಂಗ್ಲೆಂಡ್‌ನ ಅರ್ಸೆನಲ್ ಕ್ರೀಡಾಂಗಣದಲ್ಲಿ. ಆ ಸಂಜೆ ನಡೆದಿದ್ದು ಮೊಟ್ಟಮೊದಲ ಹಗಲು–ರಾತ್ರಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ. ಅದನ್ನು ನೋಡಲು ಸೇರಿದ್ದ ಏಳು ಸಾವಿರ ಪ್ರೇಕ್ಷಕರಿಗೆ ಉದ್ಘೋಷಕರು ಮಾಡಿದ್ದ ಮನವಿ ಇದು. ಏಕೆಂದರೆ ಅಂದು ಬಳಕೆಯಾಗಿದ್ದ ಹೊನಲು ಬೆಳಕಿನ ವ್ಯವಸ್ಥೆ ಮತ್ತು ಕೆಂಪು ಚೆರ‍್ರಿ ಚೆಂಡು ನೋಟಕ್ಕೆ ಬೀಳುವುದು ಕಷ್ಟವಾಗಿತ್ತು.  ಆ ಲೈಟ್ಸ್‌ಗಳನ್ನು ಹಾಕಿದ್ದು ಫುಟ್‌ಬಾಲ್ ಪಂದ್ಯಗಳಿಗಾಗಿ. ಅಂದು ಕೂಡ ಒಂದು ಫುಟ್‌ಬಾಲ್ ಪಂದ್ಯ ಮುಗಿದ ನಂತರ, ಜ್ಯಾಕ್ ಯಂಗ್ ಅವರ ಸಹಾಯಾರ್ಥ ಕ್ರಿಕೆಟ್ ಪಂದ್ಯ ನಡೆಸಲಾಗಿತ್ತು. ಮಿಡ್ಲ್‌ಸೆಕ್ಸ್‌ ಕ್ರಿಕೆಟ್‌ ಕ್ಲಬ್ ಮತ್ತು ಅರ್ಸನಲ್ ಫುಟ್‌ಬಾಲ್ ಕ್ಲಬ್ ನಡುವಣ ಆ ಪಂದ್ಯ ಆರಂಭವಾದಾಗ ಸಂಜೆಯ ಸೂರ್ಯ ಪಶ್ಚಿಮದತ್ತ ಪಯಣಿಸಿದ್ದ.

ಆದರೂ ಬಿಬಿಸಿಯ ಮೂಲಕ ಪ್ರಸಾರವಾದ ಈ ಪಂದ್ಯ ಕ್ರೀಡಾಪ್ರೇಮಿಗಳ ವಲಯವನ್ನು ಆಕರ್ಷಿಸಿತು. ಆದರೆ, ಅಲ್ಲಿಯ ದ ಟೈಮ್ಸ್‌ ಪತ್ರಿಕೆಯು ಮಾಡಿದ್ದ ಟೀಕೆಯೇ ಬಹಳ ವರ್ಷಗಳ ಕಾಲ ಚಾಲ್ತಿಯಲ್ಲಿ ಉಳಿಯಿತು. ‘ಟೆಸ್ಟ್ ಪಂದ್ಯದ ಇನಿಂಗ್ಸ್‌ ಅನ್ನು ಸಂಜೆ ಆರಂಭಿಸಿದರೆ ಆ ತಂಡದ ಕೊನೆಯ ವಿಕೆಟ್ ಬೀಳುವ ಹೊತ್ತಿಗೆ ಹಾಲು ಮಾರುವ ಹುಡುಗ ಬಂದಿರುತ್ತಾನೆ’ ಎಂದು ಪತ್ರಿಕೆಯು ವ್ಯಂಗ್ಯ ಮಾಡಿತ್ತು.

ಆದರೆ ಇದಾಗಿ 67 ವರ್ಷಗಳ ನಂತರ ಕ್ರಿಕೆಟ್ ಲೋಕ ಅಗಾಧವಾಗಿ ಬೆಳೆಯಿತು. ಟೆಸ್ಟ್ ಪಂದ್ಯಗಳು ಐದು ದಿನಗಳಿಗೆ (ದಿನವೊಂದಕ್ಕೆ 90 ಓವರ್ ಗರಿಷ್ಠ) ಸೀಮಿತವಾದವು. ಏಕದಿನ, ಟ್ವೆಂಟಿ –20 ಮಾದರಿಗಳು ಜನಪ್ರಿಯವಾದವು. 1979ರಲ್ಲಿಯೇ ಏಕದಿನ ಪಂದ್ಯವನ್ನು ಮೊದಲ ಬಾರಿ ಹೊನಲು ಬೆಳಕಿನಲ್ಲಿ ಆಡಿಸಲಾಯಿತು. ಆದರೂ ಮೊದಲ ಹೊನಲು ಬೆಳಕಿನ ಟೆಸ್ಟ್ ನೋಡಲು 2015ರವರೆಗೂ ಕಾಯಬೇಕಾಯಿತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡ ಗಳು ಮೊದಲ ಬಾರಿ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಡಿದ್ದವು.

ಅದರ ನಂತರ 11 ಹಗಲು ರಾತ್ರಿ ಪಂದ್ಯಗಳು ಇತಿಹಾಸದ ಪುಟ ಸೇರಿದವು. ಆಸ್ಟ್ರೇಲಿಯಾ, ಪಾಕಿಸ್ತಾನ (ತಟಸ್ಥ ತಾಣದಲ್ಲಿ), ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ದೇಶಗಳು ಆತಿಥ್ಯ ವಹಿಸಿದವು. ಆದರೆ, ವಿಶ್ವ ಕ್ರಿಕೆಟ್‌ನ ದೊಡ್ಡಣ್ಣನೇ ಆಗಿರುವ ಭಾರತ ಮಾತ್ರ ಅದರ ಗೋಜಿಗೆ ಹೋಗಿರಲಿಲ್ಲ. ಆದರೆ ಈಗ ಸೌರವ್ ಗಂಗೂಲಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗುವುದೇ ತಡ ಹಗಲು–ರಾತ್ರಿ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್‌ 22ರಿಂದ 26ರವರೆಗೆ ಗಂಗೂಲಿ ತವರೂರು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾ ದೇಶದ ಎದುರು ಭಾರತ ಹೊನಲು ಬೆಳಕಿನ ಟೆಸ್ಟ್ ಆಡಲಿದೆ.

ಇಷ್ಟು ದಿನ ಈ ಹಗಲುರಾತ್ರಿ ಟೆಸ್ಟ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಮಾತುಕತೆಯಿಲ್ಲದೇ ಸಮ್ಮತಿಸಿದ್ದೂ ಅಚ್ಚರಿಯೇ. ‘ದಾದಾ’ ವರ್ಚಸ್ಸು ಮತ್ತು ಗತ್ತುಗಾರಿಕೆಗೆ ವಿರಾಟ್ ತಲೆಯೂ ಬಾಗಿರಬಹುದು. ಬಾಂಗ್ಲಾ ಎದುರಿನ ಸರಣಿಯ ವೇಳಾಪಟ್ಟಿ ಸಿದ್ಧವಾದಾಗ ಬಿಸಿಸಿಐನಲ್ಲಿ ಗಂಗೂಲಿ ಆಡಳಿತ ಆರಂಭವೂ ಆಗಿರಲಿಲ್ಲ. ಆದರೆ ಹೋದ ವಾರ ಗಂಗೂಲಿ ಇಟ್ಟ ಪ್ರಸ್ತಾವಕ್ಕೆ ಬಾಂಗ್ಲಾ ಕೂಡ ಅಳುಕುತ್ತಲೇ ಒಪ್ಪಿಗೆ ಸೂಚಿಸಿದೆ. ಒಟ್ಟಿನಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ಒಪ್ಪಿರುವುದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ಗೆ ಸಮಧಾನ ತಂದಿರುವುದಂತೂ ನಿಜ.

ತಕರಾರು ಏನಿತ್ತು?

ಈ ಮಾದರಿಯ ಟೆಸ್ಟ್‌ನಲ್ಲಿ ಬಳಸಲಾಗುವ ನಸುಗೆಂಪು ಚೆಂಡಿನ (ಪಿಂಕ್ ಬಾಲ್) ಬಗ್ಗೆ ಭಾರತದ ಅಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಕೆಲವೇ ಓವರ್‌ಗಳ  ಆಟದ ನಂತರ ಚೆಂಡಿನ ಬಣ್ಣ ಮಾಸುತ್ತದೆ. ಕೆಲವೊಮ್ಮೆ  ಆಕಾರವೂ ವಿರೂಪವಾಗುತ್ತದೆ. ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆಯಾಗುತ್ತದೆ. ಭಾರತದಲ್ಲಿ ಸಂಜೆಯ ಹೊತ್ತು ಇಬ್ಬನಿ ಬೀಳುವ ವಾತಾವರಣ ಇರುತ್ತದೆ ಮತ್ತು ಪಿಚ್‌ನಲ್ಲಿ ತೇವಾಂಶವೂ ಇರುವುದರಿಂದ ಈ ಚೆಂಡನ್ನು ಸ್ಪಿನ್‌ ಅಥವಾ ರಿವರ್ಸ್ ಸ್ವಿಂಗ್‌ಗೆ ಬಳಸುವುದು ಬೌಲರ್‌ಗಳಿಗೆ ಕಷ್ಟವಾಗುತ್ತದೆ’ ಎಂದು ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ ಹಲವು ಸಲ ಬೇರೆ ದೇಶಗಳು ನೀಡಿದ ಹಗಲು ರಾತ್ರಿ ಪಂದ್ಯದ  ಆಮಂತ್ರಣವನ್ನು ಬಿಸಿಸಿಐ ತಿರಸ್ಕರಿಸಿತ್ತು.

ಹೋದ ವರ್ಷ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಲೂ ಒಂದು ಪಂದ್ಯ ಹೊನಲು ಬೆಳಕಿನಲ್ಲಿ ನಡೆಯುವ ಮಾತುಗಳು ಕೇಳಿಬಂದಿದ್ದವು.

ಆದರೆ, ಆಗ ಬಿಸಿಸಿಐ ಆಡಳಿತ ನೋಡಿಕೊಳ್ಳಲು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಕಟುವಾದ ಮಾತುಗಳಲ್ಲಿಯೇ ವಿರೋಧಿಸಿದ್ದರು.

‘ಹೊನಲು ಬೆಳಕಿನಲ್ಲಿ ಟೆಸ್ಟ್ ಆಡುವಂತೆ ಯಾರೂ ನಮ್ಮ ತಲೆಗೆ ಬಂದೂಕು ಇಟ್ಟು ಬೆದರಿಕೆ ಹಾಕಲು ಸಾಧ್ಯವಿಲ್ಲ. ಪಿಂಕ್‌ ಬಾಲ್ ಬಗ್ಗೆ ಇರುವ ಗೊಂದಲ ನಿವಾರಣೆಯಾಗಬೇಕು. ಡ್ಯೂಕ್ ಮತ್ತು ಕುಕಬುರ್ರಾ ಚೆಂಡುಗಳ ಗೊಂದಲ ಬಗೆಹರಿಯಬೇಕು’ ಎಂದು ರಾಯ್ ಹೇಳಿದ್ದರು.

ಇದೀಗ ಬಾಂಗ್ಲಾ ವಿರುದ್ಧ ನಡೆಯುವ ಪಂದ್ಯಕ್ಕೆ 72 ಹೊಸ ಪಿಂಕ್‌ ಬಾಲ್ ನೀಡುವಂತೆ ಎಸ್‌.ಜಿ.ಕಂಪೆನಿಗೆ ಬಿಸಿಸಿಐ ಬೇಡಿಕೆ ಸಲ್ಲಿಸಿದೆ. ಸದ್ಯ ಟೆಸ್ಟ್ ಪಂದ್ಯಗಳಲ್ಲಿ ಎಸ್‌.ಜಿ. ಉತ್ಪಾದಿಸುವ ಕೆಂಪು ಚೆಂಡುಗಳನ್ನೇ ಬಳಕೆ ಮಾಡಲಾಗುತ್ತಿದೆ. ಹಲವಾರು ಪ್ರಯೋಗಗಳ ನಂತರ ಟಿವಿ ನೇರಪ್ರಸಾರದಲ್ಲಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗುವ ಅರ್ಹತೆ ಗಳಿಸಿದ್ದು ಪಿಂಕ್ ಬಾಲ್. ಆದ್ದರಿಂದ ಬಿಳಿ, ಕೆಂಪು ಮತ್ತಿತರ ಬಣ್ಣಗಳನ್ನು ಕೈಬಿಟ್ಟು ಈ ವರ್ಣವನ್ನೇ ನಿಗದಿ ಮಾಡಲಾಗಿದೆ.

ಭಾರತದ ಅನುಭವ

ಮೂರು ವರ್ಷಗಳ ಹಿಂದೆ ಬಿಸಿಸಿಐ ಕೂಡ ಹಗಲು ರಾತ್ರಿ ಪಂದ್ಯಗಳ ಪ್ರಯೋಗ ಮಾಡಿತ್ತು. ದುಲೀಪ್ ಟ್ರೋಫಿ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಿಸಿತ್ತು. ಆಗ ಆಡಿದ್ದ ಭಾರತ ತಂಡದ ಆಟಗಾರರು ಪಿಂಕ್ ಬಾಲ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.

ಆ ಪಂದ್ಯದಲ್ಲಿ ಕನ್ನಡಿಗ ಮಯಂಕ್ ಅಗರವಾಲ್, ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಮತ್ತು ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಆಡಿದ್ದರು. ಈ ಬಾರಿಯ ಟೆಸ್ಟ್ ತಂಡದಲ್ಲಿ ಇದರಲ್ಲಿ ಬಹುತೇಕರು ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಗಲು–ರಾತ್ರಿ ಟೆಸ್ಟ್‌ಗೆ ಸಿದ್ಧತೆ: 72ಪಿಂಕ್ ಬಾಲ್‌ಗಳಿಗೆ ಆರ್ಡರ್ ಮಾಡಿದ ಬಿಸಿಸಿಐ

ಟೆಸ್ಟ್‌ ಕ್ರಿಕೆಟ್‌ ನೋಡಲು ಕ್ರೀಡಾಂಗಣಕ್ಕೆ ಬರುವ ಜನರನ್ನು ಆಕರ್ಷಿಸಲು ಇಂತಹ ಪ್ರಯೋಗ ಅಗತ್ಯ ಎಂಬ ಚರ್ಚೆಗಳು ಕಳೆದ ಒಂದು ದಶಕದಿಂದ ನಡೆಯುತ್ತಿದೆ. ಟಿ–20 ಅಬ್ಬರದಲ್ಲಿ ಟೆಸ್ಟ್ ಕ್ರಿಕೆಟ್ ಸೊಬಗು ಮರೆಯಾಗುವುದನ್ನು ತಪ್ಪಿಸಲು ಹಗಲು–ರಾತ್ರಿ ಪಂದ್ಯಗಳು ಅಗತ್ಯ ಎಂದು ಹಲವು ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. ಇದೀಗ ಗಂಗೂಲಿ ಕೂಡ ಅದೇ ಮಾತು ಹೇಳುತ್ತಿದ್ದಾರೆ. ಆದರೆ, ಈ ಹಿಂದೆ ಬೊಟ್ಟು ಮಾಡಿದ ತಾಂತ್ರಿಕ ತೊಂದರೆಗಳನ್ನು ನಿವಾರಿಸುವತ್ತ ಈ ಪಂದ್ಯವು ಪ್ರಯೋಗದ ವೇದಿಕೆಯಾದರೆ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗುತ್ತದೆ. ಅದರ ಶ್ರೇಯ ಗಂಗೂಲಿ ಬಳಗಕ್ಕೆ ಸಿಗುವುದು ಖಚಿತ.

ಪ್ರಯೋಗಗಳಿಗೆ ಏಕೆ ಮನಸ್ಸಿಲ್ಲ?

‘ಭಾರತವು ಕ್ರಿಕೆಟ್‌ನಲ್ಲಿ ಎಷ್ಟೇ ಬೆಳೆದಿದ್ದರೂ, ದುಡ್ಡಿನ ದೊಡ್ಡಪ್ಪನಾಗಿದ್ದರೂ ವಿನೂತನ ಪ್ರಯೋಗಗಳಿಗೆ ಮನಸ್ಸು ಮಾಡುವುದಿಲ್ಲ.  ಬೇರೆ ದೇಶಗಳು ಮಾಡಿದ ಪ್ರಯೋಗಗಳನ್ನು ತನಗೆ ಬೇಕಾದಾಗ  ಅಳವಡಿಸಿಕೊಂಡು ಯಶಸ್ವಿಯಾಗಿಬಿಡುತ್ತದೆ. ತನ್ನ ಜನಶಕ್ತಿಯ ಪ್ರದರ್ಶನ ಮಾಡುತ್ತದೆ’ ಎಂಬ ಗುಸುಗುಸು ಈಗ ಅಂತರರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿರುವುದು ಸುಳ್ಳಲ್ಲ. ಈ ಹಿಂದೆ ಟಿ20 ಮಾದರಿ ಬಂದಾಗಲೂ ಭಾರತ ಸುಲಭವಾಗಿ  ಒಪ್ಪಿರಲಿಲ್ಲ. ಆದರೆ, 2007ರಲ್ಲಿ ಮೊಟ್ಟಮೊದಲ ಟಿ20 ವಿಶ್ವಕಪ್ ಗೆದ್ದಿದ್ದು ಭಾರತವೇ; ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್‌) ಅನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿತ್ತು ಎನ್ನುವುದನ್ನು ಟೀಕಾಕಾರರು ಹೇಳಲು ಮರೆಯುವುದಿಲ್ಲ.

ಪ್ರತಿಕ್ರಿಯಿಸಿ (+)