ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ಇಂದು: ಯುವ ಆಟಗಾರರಿಗೆ ಸತ್ವಪರೀಕ್ಷೆ

Published 9 ಡಿಸೆಂಬರ್ 2023, 19:30 IST
Last Updated 9 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ಡರ್ಬನ್‌: ಯುವ ಪ್ರತಿಭಾನ್ವಿತ ಆಟಗಾರರಿಂದ ಕೂಡಿರುವ ಭಾರತ, ಭಾನುವಾರ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ತಂಡದ ಕಿರಿಯ ಆಟಗಾರರಿಗೆ ಈ ಪ್ರವಾಸ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಾಗಿದೆ.

ಗಾಯಾಳಾಗಿರುವ ನಾಯಕ ಹಾರ್ದಿಕ್ ಪಾಂಡ್ಯ, ಅವರು ಐಪಿಎಲ್‌ವರೆಗೆ ಅಲಭ್ಯರಾಗಿದ್ದಾರೆ. ಪ್ರಮುಖ ಬೌಲರ್ ಜಸ್‌ಪ್ರೀತ್‌ ಬೂಮ್ರಾ ವಿರಾಮ ಪಡೆದಿದ್ದಾರೆ. ಜೂನ್‌ನಲ್ಲಿ ಟಿ20 ವಿಶ್ವಕಪ್‌ ಇರುವಂತೆಯೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಚುಟುಕು ಕ್ರಿಕೆಟ್‌ ಭವಿಷ್ಯ ಅನಿಶ್ಚಿತವಾಗಿದೆ. ಆದರೂ ಈ ತಂಡದ ಪ್ರದರ್ಶನವೇ ಅಂತಿಮ ಎಂದು ಹೇಳುವಂತಿಲ್ಲ. ಐಪಿಎಲ್‌ ನಂತರವೇ, ಆ ವೇಳೆ ಫಾರ್ಮ್‌, ಫಿಟ್ನೆಸ್‌  ಸಂಬಂಧಿಸಿ ವಿಶ್ವಕಪ್‌ಗೆ ತಂಡದ ಆಯ್ಕೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು.

ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಇತ್ತೀಚೆಗೆ ತವರಿನಲ್ಲಿ ವಿಶ್ವಕಪ್‌ ಬೆನ್ನಿಗೇ ನಡೆದ ಟಿ–20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 4–1 ರಿಂದ ಸೋಲಿಸಿತ್ತು. ಆದರೆ ಆಸ್ಟ್ರೇಲಿಯಾ ತಂಡ ಪೂರ್ಣ ಪ್ರಮಾಣದಲ್ಲಿ ಆಡಿರಲಿಲ್ಲ. ಬಹುತೇಕ ಆಟಗಾರರು ವಿಶ್ವಕಪ್ ನಂತರ ತವರಿಗೆ ಮರಳಿದ್ದರು.

ದಕ್ಷಿಣ ಆಫ್ರಿಕಾ ಸರಣಿಯ ನಂತರ ಭಾರತ ತಂಡವು ಜನವರಿ ಮಧ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಲಿದೆ.

ದಕ್ಷಿಣ ಆಫ್ರಿಕಾ ತಂಡವು ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಿದೆ. ಆ್ಯನ್ರಿಚ್‌ ನೊರ್ಕಿಯೆ ಮತ್ತು ಲುಂಗಿ ಗಿಡಿ ಗಾಯಾಳಾಗಿದ್ದಾರೆ. ಆದರೂ ತವರಿನಲ್ಲಿ ಆತಿಥೇಯರ ಬೌಲಿಂಗ್ ಪಡೆ ಉತ್ತಮವಾಗಿದೆ.

ಭಾರತ ಟಿ20 ತಂಡದಲ್ಲಿರುವ ಶ್ರೇಯಸ್ ಅಯ್ಯರ್, ಮುಕೇಶ್ ಕುಮಾರ್ ಮತ್ತು ಇಶಾನ್ ಕಿಶನ್ ಅವರು ಏಕದಿನ ತಂಡದಲ್ಲೂ ಭಾಗಿಯಾಗಲಿದ್ದಾರೆ. ಭಾರತದ ಬೌಲರ್‌ಗಳಿಗೆ ಈ ಪ್ರವಾಸ ಸತ್ವಪರೀಕ್ಷೆ. ಕ್ವಿಂಟನ್‌ ಡಿಕಾಕ್ ತಂಡದಲ್ಲಿ ಇಲ್ಲದಿದ್ದರೂ ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್, ನಾಯಕ ಏಡನ್ ಮರ್ಕರಂ, ಬಿರುಸಿನ ಹೊಡೆತಗಳ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್‌ ಮೊದಲಾದ ಬ್ಯಾಟರ್‌ಗಳು ಆತಿಥೇಯ ತಂಡದಲ್ಲಿದ್ದಾರೆ.

ತಂಡಗಳು ಇಂತಿವೆ

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್, ಋತುರಾಜ್ ಗಾಯಕವಾಡ್, ತಿಲಕ್‌ ವರ್ಮಾ, ರಿಂಕು ಸಿಂಗ್, ಶ್ರೇಯಸ್‌ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮರ್ ಮತ್ತು ದೀಪಕ್ ಚಾಹರ್.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ), ಒಟ್ನೆಯಿಲ್ ಬಾರ್ತ್‌ಮ್ಯಾನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನ್ಯಾಂಡ್ರೆ ಬರ್ಗರ್‌, ಜೆರಾಲ್ಡ್ ಕೋಜಿ, ಡೊನವಾನ್ ಫೆರೀರಾ, ರೀಝಾ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸನ್‌, ಹೆನ್ರಿಚ್‌ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಆಂಡಿಲೆ ಪಿಶುವಾಯೊ, ತಬ್ರೇಜ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್‌ ಮತ್ತು ಲಿಝಾರ್ಡ್‌ ವಿಲಿಯಮ್ಸ್‌.

ಪಂದ್ಯ ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT