ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಣಜಿ: ಬಿಹಾರದ ಎರಡು ತಂಡ ಕಣಕ್ಕೆ

ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳ ಜಟಾಪಟಿ; ವಿಳಂಬವಾಗಿ ಆರಂಭವಾದ ಪಂದ್ಯ
Published 7 ಜನವರಿ 2024, 0:26 IST
Last Updated 7 ಜನವರಿ 2024, 0:26 IST
ಅಕ್ಷರ ಗಾತ್ರ

ನವದೆಹಲಿ: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುವ ಬಿಹಾರ ಕ್ರಿಕೆಟ್ ಸಂಸ್ಥೆ ಈಗ ಮತ್ತೊಂದು ಅವಾಂತರ ಸೃಷ್ಟಿಸಿ ಗಮನ ಸೆಳೆದಿದೆ.

ಪಟ್ನಾದಲ್ಲಿ ಶುಕ್ರವಾರ ರಣಜಿ ಟೂರ್ನಿಯ ಬಿ ಗುಂಪಿನ ಪಂದ್ಯವು ಮುಂಬೈ ವಿರುದ್ಧ ಆರಂಭವಾಗಿದೆ. ಆದರೆ ಈ ಮುಂಬೈ ತಂಡವನ್ನು ಎದುರಿಸಲು ಆತಿಥೇಯ ಬಿಹಾರದಿಂದ ಎರಡು ತಂಡಗಳು ಮೈದಾನದಲ್ಲಿ ಜಮಾಯಿಸಿದ್ದು ಗೊಂದಲಕ್ಕೆ ಕಾರಣವಯಿತು. ಇದರಿಂದಾಗಿ ಪಂದ್ಯವು ಸುಮಾರು ಮೂರು ತಾಸು ತಡವಾಗಿ ಆರಂಭವಾಯಿತು. 

ಬಿಹಾರ ಕ್ರಿಕೆಟ್ ಸಂಸ್ಥೆಯ  ಕಾರ್ಯದರ್ಶಿ ಅಮಿತ್ ಕುಮಾರ್ ಮತ್ತು ಅಧ್ಯಕ್ಷ ರಾಕೇಶ್ ತಿವಾರಿ ಅವರು ಬೆಂಬಲಿತರು ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಿ ಕಳಿಸಿದ್ದು ಈ ಅವಾಂತರಕ್ಕೆ ಕಾರಣವಾಯಿತು.

ಮಾತುಕತೆಗಳ ನಂತರ ತಿವಾರಿ ಅವರ ಕಡೆಯಿಂದ ಆಯ್ಕೆಯಾದ ತಂಡಕ್ಕೆ ಆಡಲು ಅನುಮತಿ ನೀಡಲಾಯಿತು. ಅನುಭವಿ ಎಡಗೈ ಸ್ಪಿನ್ನರ್ ಆಶುತೋಷ್ ಅಮನ್ ತಂಡದ ನಾಯಕತ್ವ ವಹಿಸಿದ್ದಾರೆ.  ಆದರೆ ಈ ಬೆಳವಣಿಗೆಯು ಕ್ರಿಕೆಟ್ ವಲಯದಲ್ಲಿ ಬಹಳಷ್ಟು ಟೀಕೆಗಳಿಗೆ ಕಾರಣವಾಯಿತು.

‘ಇಂತಹ ಪ್ರಕರಣಗಳಿಂದಾಗಿ ರಾಜ್ಯದ ಕ್ರಿಕೆಟ್ ಹದಗೆಟ್ಟು ಹೋಗುತ್ತಿದೆ. ಇಲ್ಲಿಯ ಪ್ರತಿಭಾವಂತ ಆಟಗಾರರು ಬೇರೆಡೆ ವಲಸೆ ಹೋಗುತ್ತಿದ್ದಾರೆ‘ ಎಂದು ಬಿಸಿಎ ಮಾಜಿ ಅಧ್ಯಕ್ಷ ಆದಿತ್ಯ ವರ್ಮಾ ಟೀಕಿಸಿದ್ದಾರೆ. ವರ್ಮಾ ಅವರು 2013ರ ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.

‘ಈ ಸಂಸ್ಥೆಗೆ ಪದಾಧಿಕಾರಿಗಳಾಗಲು ಬರುವವರಿಗೆ ಕ್ರಿಕೆಟ್‌ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ. ಅಲ್ಲದೇ ದುಡ್ಡು ಬಾಚಿಕೊಳ್ಳುವುದರ ಮೇಲೆ ಕಣ್ಣು.  ತಿವಾರಿ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಸಂಪೂರ್ಣ ನೆಲಕಚ್ಚಿದೆ. ನಾವು ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಬಿಹಾರ ಕ್ರಿಕೆಟ್‌ ಸಂಸ್ಥೆಯ ಎಲ್ಲ ಅವ್ಯವಸ್ಥೆಗಳನ್ನು ಕಿತ್ತು ಹಾಕುವುದು ನಮ್ಮ ಗುರಿ’ ಎಂದು ಹೆಸರು ಗೌಪ್ಯವಾಗಿಡುವ ಶರತ್ತಿನ ಮೇರೆಗೆ ಹಿರಿಯ ಕೋಚ್ ಒಬ್ಬರು ಹೇಳಿಕೆ ನೀಡಿದ್ದಾರೆ.

ಬಿಹಾರ ಮೂಲದ ಇಶಾನ್ ಕಿಶನ್ ಅವರು ಈ ಹಿಂದೆ ಜಾರ್ಖಂಡ್‌ ಮತ್ತು ಬೌಲರ್ ಮುಕೇಶ್ ಕುಮಾರ್ ಬಂಗಾಳ ತಂಡಕ್ಕೆ ವಲಸೆ ಹೋಗಿದ್ದರು. ಅವರಿಬ್ಬರೂ ಈಗ ಭಾರತ ತಂಡದಲ್ಲಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 76.2 ಓವರ್‌ಗಳಲ್ಲಿ 251 (ಭೂಪೆನ್ ಲಾಲ್‌ವಾನಿ 65, ಸುವೇದ್ ಪಾರ್ಕರ್ 50, ಶಿವಂ ದುಬೆ 41, ತನುಷ್ ಕೋಟ್ಯಾನ್ 50, ವಿ. ಪ್ರತಾಪ್ ಸಿಂಗ್ 45ಕ್ಕೆ5, ಶಕೀಬುಲ್ ಗಣಿ 60ಕ್ಕೆ2, ಹಿಮಾಂಶು ಸಿಂಗ್ 21ಕ್ಕೆ2) ಬಿಹಾರ: 37 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 89 (ಆಕಾಶ್ ರಾಜ್ ಬ್ಯಾಟಿಂಗ್ 26, ಶಕೀಬುಲ್ ಗಣಿ 22, ಮೋಹಿತ್ ಅವಸ್ತಿ 22ಕ್ಕೆ4, ಶಿವಂ ದುಬೆ 13ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT