ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷನ್ 2023

Last Updated 14 ಜುಲೈ 2019, 19:30 IST
ಅಕ್ಷರ ಗಾತ್ರ

‘ಭಾರತದ ಕನಸುಗಳ ಕಾರ್ಖಾನೆ ಕ್ರಿಕೆಟ್. ಹಲವು ಕತೆಗಳು ದಾಖಲಾಗುತ್ತವೆ. ಸೌಭಾಗ್ಯದ ಕ್ಷಣಗಳು ಅಚ್ಚೊತ್ತುತ್ತವೆ’–

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕುರಿತ ‘ಡ್ರೈವನ್’ ಪುಸ್ತಕದ ಮುನ್ನುಡಿಯಲ್ಲಿ ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಬರೆದಿರುವ ಸಾಲುಗಳು ಇವು.

ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡ ಸೋತರೂ ಅಭಿಮಾನಿಗಳ ಪ್ರೀತಿ ಕಮ್ಮಿಯೇನಾಗಿಲ್ಲ. ಕೆಲವು ಆಟಗಾರರ ಬಗ್ಗೆ ಒಂದಿಷ್ಟು ಬೇಸರದ ನುಡಿಗಳು, ಟೀಕೆಗಳನ್ನು ಬಿಟ್ಟರೆ ಕಠೋರತೆಯನ್ನು ಅಭಿಮಾನಿಗಳು ಮೆರೆದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ಆಟಗಾರರ ಬೇಸರಕ್ಕೆ ಸಾಂತ್ವನದ ದನಿಯಾಗುವಂತಹ ಸಂದೇಶಗಳನ್ನೇ ಹೆಚ್ಚಾಗಿ ಹಾಕುತ್ತಿದ್ದಾರೆ. ವಿದಾಯದ ಹೊಸ್ತಿಲಲ್ಲಿ ಇರುವ ಮಹೇಂದ್ರಸಿಂಗ್ ಧೋನಿ, ವಿಶ್ವದಾಖಲೆಯ ಶತಕ ವೀರ ರೋಹಿತ್ ಶರ್ಮಾ ಅವರ ಕಣ್ಣೀರು ಹಾಕುವ ಚಿತ್ರಗಳೊಂದಿಗೆ ತಾವೂ ಮರುಗಿದ್ದಾರೆ. ಅಭಿಮಾನಿಗಳ ಕಂಗಳೂ ತೇವಗೊಂಡಿವೆ. ಜೊತೆಗೆ ‘ಬೆಟರ್‌ ಲಕ್ ನೆಕ್ಸ್ಟ್‌ ಟೈಮ್‌ ಇಂಡಿಯಾ..’ ಎಂಬ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸುವ ಉದಾರತೆಯನ್ನೂ ಕ್ರಿಕೆಟ್ ಅಭಿಮಾನಿಗಳು ಮೆರೆದಿದ್ದಾರೆ. 1996, 2003 ಮತ್ತು 2007ರಲ್ಲಿ ಭಾರತ ಸೋತಾಗ ಕಂಡಿದ್ದ ಉತ್ಕಟ ವಿರೋಧ ಈಗ ಇಲ್ಲ.

ಬಿದ್ದವರನ್ನು ಟೀಕಿಸಿ, ನಿಂದಿಸಿ ಪಾತಾಳಕ್ಕೆ ಇಳಿಸುವ ಬದಲು ಕೈಹಿಡಿದು ಎಬ್ಬಿಸಿ, ತಪ್ಪುಗಳನ್ನು ಅರುಹಿ, ಬೆನ್ನು ತಟ್ಟಿ ಮುನ್ನಗ್ಗು ಹಿಂದೆ ನಾವಿದ್ದೇವೆ ಎಂದು ಹೇಳುವ ಈ ಪರಿ ಬಹುಶಃ ಜಗತ್ತಿನ ಯಾವ ಆಟದಲ್ಲಿಯೂ ಇಲ್ಲಿಯವರೆಗೆ ನೋಡಲು ಸಾಧ್ಯವಾಗಿಲ್ಲ. ಇದನ್ನು ಸಮೂಹ ಸನ್ನಿ ಎಂದು ಟೀಕಿಸಲೂಬಹುದು ಅಥವಾ ಹೊಸ ಕನಸು ಗರಿಗೆದರುವ ಸಮಯ ಎಂದೂ ಹೇಳಬಹುದು.

ಒಂದು ಕ್ರೀಡೆ, ಪಂದ್ಯ ಎಂದ ಮೇಲೆ ಸೋಲು–ಗೆಲುವು ಸಹಜ. ಅದರಲ್ಲೂ ಕ್ರಿಕೆಟ್‌ ಎಂಬುದು ಅನಿರೀಕ್ಷಿತ ಬೆಳವಣಿಗೆಗಳ ಬುಟ್ಟಿ. ಕೊನೆಯ ಎಸೆತದವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಅದಕ್ಕೆ ಈಗ ಸೋಲಿನ ಕಹಿ ಮರೆತು, ಕಲಿತ ಪಾಠದ ಮೆಲುಕಿನೊಂದಿಗೆ ಮುಂದೆಜ್ಜೆ ಇಡುವ ಹೊತ್ತು. ನಾಲ್ಕು ವರ್ಷಗಳ ನಂತರ ನಡೆಯುವ ವಿಶ್ವಕಪ್‌ ಸಿದ್ಧತೆಯ ಕುರಿತ ಚರ್ಚೆಗಳು ಮೆಲ್ಲಗೆ ಆರಂಭವಾಗಿವೆ.

2023ರಲ್ಲಿ ಭಾರತವೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. 2011ರಲ್ಲಿ ಟೂರ್ನಿ ಆಯೋಜಿಸಿದ್ದ ಭಾರತವು ಚಾಂಪಿಯನ್ ಆಗಿತ್ತು. 1983ರ ನಂತರ ಒಲಿದಿದ್ದ ಜಯ ಅದು. ಕಪಿಲ್ ದೇವ್ ಬಳಗದ ನಂತರ ಮಹೇಂದ್ರಸಿಂಗ್ ಧೋನಿ ಪಡೆಯು ಮಾಡಿದ್ದ ಕಮಾಲ್ ಅದಾಗಿತ್ತು.

ಆದರೆ ಈ ಬಾರಿಯ ವಿಶ್ವಕಪ್‌ನೊಂದಿಗೆ ಧೋನಿ ನಿವೃತ್ತಿಯತ್ತ ಸರಿಯುವುದು ಬಹುತೇಕ ಖಚಿತವಾಗಿದೆ. ಅವರ ಫಿಟ್‌ನೆಸ್‌ ಮಟ್ಟ ಮತ್ತು ಆಟದ ಬಗೆಗಿನ ಅವರ ಬದ್ಧತೆಯನ್ನು ನೋಡಿದರೆ, ಮುಂದಿನ ವರ್ಷ ನಡೆಯುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ನಂತರ ವಿದಾಯ ಹೇಳಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಅವರ ಸ್ಥಾನ ತುಂಬಬಲ್ಲ ಆಟಗಾರ ಯಾರು ಎಂಬುದು.ಬಿಸಿಸಿಐ ಮುಂದೆ ಇರುವ ಪ್ರಮುಖ ಸವಾಲೂ ಇದೆ ಆಗಿದೆ.

ಏಕೆಂದರೆ, ಧೋನಿ ಎಂದರೆ ಕೇವಲ ಒಬ್ಬ ಆಟಗಾರನಷ್ಟೇ ಅಲ್ಲ. ಮಿಂಚಿನ ವೇಗದ ಸ್ಟಂಪಿಂಗ್ ಚತುರ ವಿಕೆಟ್‌ಕೀಪರ್, ಬ್ಯಾಟಿಂಗ್‌ನಲ್ಲಿ ಫಿನಿಷರ್, ನಾಯಕತ್ವದಲ್ಲಿ ದಿಗ್ಗಜ, ತಂತ್ರಗಾರಿಕೆಯಲ್ಲಿ ಚಾಣಾಕ್ಷ ಮತ್ತು ತಂಡಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಹಿರಿಯಣ್ಣ.

‘ಧೋನಿ ನನಗೆ ಅಣ್ಣನಿದ್ದಂತೆ. ಅವರು ನನಗೆ ಸಾರ್ವಕಾಲೀಕ ನಾಯಕ’ ಎಂದು ಕೊಹ್ಲಿಯೇ ಹೇಳಿದ್ದಾರೆ. ಇದು ಧೋನಿಯ ಮಹತ್ವವನ್ನು ತೋರಿಸುತ್ತದೆ. ಅವರ ವಾರಸುದಾರ ವಿಕೆಟ್‌ಕೀಪರ್ ಎಂದು ಹೇಳಲಾಗುತ್ತಿರುವ ರಿಷಭ್ ಪಂತ್ ಇನ್ನೂ ಭರವಸೆ ಮೂಡಿಸಬೇಕಿದೆ.

ಹಿರಿಯ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಇನ್ನು ಕೆಲವೇ ದಿನಗಳಲ್ಲಿ ವಿದಾಯ ಹೇಳುವ ಸಾಧ್ಯತೆ ಇದೆ. ದೇಶಿ ಕ್ರಿಕೆಟ್‌ನತ್ತ ಮುಖಮಾಡಿದರೆ ರಿಷಭ್‌ಗಿಂತ ಒಳ್ಳೆಯ ಆಯ್ಕೆ ಸದ್ಯಕ್ಕೆ ಕಂಡುಬರುತ್ತಿಲ್ಲ.

ಧೋನಿ ಇಲ್ಲದೇ ವಿರಾಟ್ ಕೊಹ್ಲಿ ನಾಯಕರಾಗಿ ಎಷ್ಟರ ಮಟ್ಟಿಗೆ ಸಫಲರಾಗಬಲ್ಲರು ಎಂಬುದೂ ಈಗ ಕಾಡುತ್ತಿರುವ ಅನುಮಾನ. ಅಲ್ಲದೇ ನಾಲ್ಕನೇ ಕ್ರಮಾಂಕದ ಕಗ್ಗಂಟು ಬಿಡಿಸುವ ಅವಶ್ಯಕತೆಯೂ ಇದೆ.

ಏಕೆಂದರೆ ತಂಡದ ಗೆಲುವನ್ನು ಕುಣಿಯುತ್ತ, ಹಾಡುತ್ತ, ನಗುತ್ತ ಆಸ್ವಾದಿಸುವ ಕೊಹ್ಲಿ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಸಂಪೂರ್ಣ ಪರಿಪಕ್ವತೆಯನ್ನು ಇನ್ನೂ ರೂಢಿಸಿಕೊಂಡಿಲ್ಲ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ಅವರಂತಹ ಗಟ್ಟಿ ಮತ್ತು ಶಾಂತಚಿತ್ತತೆಯನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಕೊಹ್ಲಿಗೆ ಇದೆ. ಅವರ ಆಕ್ರಮಣಕಾರಿ ಶೈಲಿಯು ಬ್ಯಾಟಿಂಗ್‌ಗೆ ಸೀಮಿತವಾದರೆ ತಂಡಕ್ಕೆ ಲಾಭ. ಅವರಿಗಿಂತ ಕೂಲ್ ಆಗಿರುವ ರೋಹಿತ್ ಶರ್ಮಾ ಕೂಡ ನಾಯಕತ್ವಕ್ಕೆ ಪೈಪೋಟಿ ಒಡ್ಡಿರುವ ಅಭ್ಯರ್ಥಿಯೂ ಹೌದು.

ಯಾವುದೇ ವಿಶ್ವಕಪ್ ಟೂರ್ನಿಯಲ್ಲಿ ಆಲ್‌ರೌಂಡರ್‌ಗಳ ಪಾತ್ರ ದೊಡ್ಡದು. ಕಪಿಲ್‌ದೇವ್ ಅವರಿಗೆ ಹೋಲಿಕೆ ಮಾಡಲಾಗುತ್ತಿದ್ದ ಹಾರ್ದಿಕ್ ಪಾಂಡ್ಯ ತಾವಿನ್ನೂ ಎಳಸು ಎಂಬುದನ್ನು ಈ ಟೂರ್ನಿಯಲ್ಲಿ ಬಹಿರಂಗ ಮಾಡಿದರು. ‘ಜಂಟಲ್‌ಮ್ಯಾನ್ ಗೇಮ್‌’ ಕ್ರಿಕೆಟ್‌ನಲ್ಲಿ ತಾವಿನ್ನೂ ಏರಬೇಕಾದ ಎತ್ತರ ಮತ್ತು ಕಲಿಯಬೇಕಾದ ಪಾಠ ಬೇಕಾದಷ್ಟಿದೆ ಎಂಬುದನ್ನು ಅರಿತರೆ ಮಾತ್ರ ಅವರು ಬಹಳ ದಿನಗಳ ಕಾಲ ಬಾಳಬಲ್ಲರು. ಆದರೆ 30 ವರ್ಷದ ರವೀಂದ್ರ ಜಡೇಜ ತಾವೆಷ್ಟು ಉಪಯುಕ್ತ ಆಲ್‌ರೌಂಡರ್‌ ಎಂಬುದನ್ನು ಸೆಮಿಫೈನಲ್‌ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿಯೂ ಅವರು ಇದೇ ಸಾಮರ್ಥ್ಯವನ್ನು ಉಳಿಸಿಕೊಂಡರೆ ಮತ್ತೊಮ್ಮೆ ವಿಶ್ವಕಪ್ ಅಂಗಳದಲ್ಲಿ ಅವರ ಆಟ ನೋಡಬಹುದು. ಯುವರಾಜ್ ಸಿಂಗ್ ಜಾಗವನ್ನು ತುಂಬುವ ಸಾಮರ್ಥ್ಯ ರವೀಂದ್ರಗೆ ಇದೆ.

ಬೌಲಿಂಗ್‌ನಲ್ಲಿ ಈ ಬಾರಿ ಅತ್ಯಂತ ಯಶಸ್ವಿ ಪಡೆ ಇದ್ದಿದ್ದಂತೂ ನಿಜ. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರು ವಿಶ್ವಾಸ ಉಳಿಸಿಕೊಂಡರು. ಆದರೆ, ತಮ್ಮ ವಿಶಿಷ್ಟ ಶೈಲಿಯಿಂದಾಗಿ ಗಾಯದ ಸಮಸ್ಯೆಯ ಆತಂಕ ಎದುರಿಸುವ ಬೂಮ್ರಾ, ಭವಿಷ್ಯದಲ್ಲಿ ಎಷ್ಟು ವರ್ಷ ಇದೇ ಲಯವನ್ನು ಕಾಪಾಡಿಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆ.

ಶಮಿ ಮತ್ತು ಭುವನೇಶ್ವರ್ ಕೂಡ ತಮ್ಮ ಫಿಟ್‌ನೆಸ್‌ ನಿರ್ವಹಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಮಧ್ಯಮವೇಗಿಗಳ ವಿಚಾರದಲ್ಲಿ ಇದು ಯಾವಾಗಲೂ ಕಾಡುವ ಸಮಸ್ಯೆ. ಅದರಲ್ಲೂ ಭಾರತದ ಪಿಚ್‌ಗಳಲ್ಲಿ ತಮ್ಮ ಲಯ ಮತ್ತು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಮಧ್ಯಮವೇಗಿಗಳಿಗೆ ಸವಾಲೇ ಸರಿ.

2011ರ ವಿಶ್ವಕಪ್ ನಂತರ ನಡೆದ ಎರಡೂ ವಿಶ್ವಕಪ್ ಟೂರ್ನಿಗಳು ವೇಗದ ಬೌಲರ್‌ ಸ್ನೇಹಿ ಪಿಚ್‌ಗಳು ಇದ್ದ ನಾಡಿನಲ್ಲಿ ನಡೆದವು. ಅದಕ್ಕಾಗಿ ಬಿಸಿಸಿಐ ಭಾರತದಲ್ಲಿಯೂ ವೇಗಿಗಳ ಬೆಳವಣಿಗೆಗೆ ಸಹಕಾರಿಯಾಗುವಂತ ಯೋಜನೆಗಳನ್ನೇ ರೂಪಿಸಿತ್ತು. ಮುಂದೆ ಭಾರತದಲ್ಲಿ ಟೂರ್ನಿ ನಡೆಯುವುದರಿಂದ ಸ್ಪಿನ್‌ ಬೌಲಿಂಗ್‌ ನತ್ತ ಮಂಡಳಿಯು ‘ತಿರುವು’ ಪಡೆಯುವ ಸಾಧ್ಯತೆ ಹೆಚ್ಚಿದೆ.

ಅದರಿಂದಾಗಿ ದೇಶಿ ಸ್ಪಿನ್ ಬೌಲರ್‌ಗಳ ವಲಯದಲ್ಲಿ ಪೈಪೋಟಿ ಏರುವ ಎಲ್ಲ ಸಾಧ್ಯತೆಗಳೂ ಇವೆ. ಈಗಿರುವ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಆರ್. ಅಶ್ವಿನ್, ಅಮಿತ್ ಮಿಶ್ರಾ ಅವರಂತಹ ಅನುಭವಿಗಳು ಯುವ ಸ್ಪಿನ್ನರ್‌ಗಳ ಜೊತೆಗೆ ಸ್ಪರ್ಧೆಗೆ ನಿಲ್ಲುವುದು ಅನಿವಾರ್ಯವಾಗಲಿದೆ. ಅದರಲ್ಲೂ ಸ್ಪಿನ್ನರ್‌ಗಳು ಬ್ಯಾಟಿಂಗ್‌ನಲ್ಲಿ 40–50 ರನ್‌ ಗಳಿಸುವ ಮತ್ತು ಫೀಲ್ಡಿಂಗ್‌ನಲ್ಲಿ 20–30 ರನ್‌ ಉಳಿಸುವ ಸಮರ್ಥರಾಗಿದ್ದರೆ ಸ್ಥಾನ ಗಿಟ್ಟಿಸುವುದು ಇನ್ನೂ ಸುಲಭವಾಗುವ ಕಾಲ ಬರಲಿದೆ.

ಆದರೆ ಇವೆಲ್ಲವನ್ನೂ ಸಮರ್ಥವಾಗಿ ಅವಲೋಕಿಸಿ ತಂಡವನ್ನು ಆಯ್ಕೆ ಮಾಡುವ ಒಳ್ಳೆಯ ಆಯ್ಕೆ ಸಮಿತಿಯೂ ಬೇಕು. ಅಂಬಟಿ ರಾಯುಡು, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಮಯಂಕ್ ಅಗರವಾಲ್ ಅವರಂತಹ ಪ್ರತಿಭೆಗಳನ್ನು ಕಡೆಗಣಿಸುವ ಸಮಿತಿಗಳು ಇದ್ದರೆ ಪ್ರಶಸ್ತಿ ಮರೀಚಿಕೆಯೂ ಆಗಬಹುದು.

ಕನಸಿನ ಹಾದಿಯಂತೂ ಆರಂಭವಾಗಿದೆ. ಒಂದೊಂದೇ ಹಂತಗಳನ್ನು ದಾಟಿ ಅಗ್ನಿಪರೀಕ್ಷೆಗೆ ಅಂಗಳಕ್ಕೆ ಬಂದು ನಿಲ್ಲುವ ಮುನ್ನ ಸರ್ವಸನ್ನದ್ಧರಾಗುವ ಸವಾಲು ಭಾರತ ತಂಡದ ಮುಂದಿದೆ. ಕಾಲದ ಆಟ ಕಾದು
ನೋಡಬೇಕಷ್ಟೇ!

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT