ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

On This Day: ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 25ರ ಸಂಭ್ರಮ!

Published 7 ಫೆಬ್ರುವರಿ 2024, 11:02 IST
Last Updated 7 ಫೆಬ್ರುವರಿ 2024, 11:02 IST
ಅಕ್ಷರ ಗಾತ್ರ

ಬೆಂಗಳೂರು: 25 ವರ್ಷಗಳ ಹಿಂದೆ ಅಂದಿನ ಈ ದಿನ (ಫೆ.7, 1999) ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ, ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ ಅವಿಸ್ಮರಣೀಯ ಸಾಧನೆ ಮಾಡಿದ್ದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್‌ನ ಮಾಜಿ ಬೌಲರ್ ಜಿಮ್ ಲೇಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿದ್ದರು. ಈ ಐತಿಹಾಸಿಕ ಕ್ಷಣವನ್ನು ನೆನಪಿಸಿಕೊಂಡಿರುವ ಬಿಸಿಸಿಐ, ಅಭಿಮಾನಿಗಳಿಗಾಗಿ ವಿಡಿಯೊ ಹಂಚಿಕೊಂಡಿದೆ.

ಬಳಿಕ ಈ ದಾಖಲೆಯನ್ನು ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ (2021, ಭಾರತ ವಿರುದ್ಧ) ಸರಿಗಟ್ಟಿದ್ದರು. ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಎಜಾಜ್ ಮೂರನೇ ಆಟಗಾರರೆನಿಸಿದ್ದಾರೆ.

ಕುಂಬ್ಳೆ ಜಾದೂ...

ದೆಹಲಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 252ಕ್ಕೆ ಆಲೌಟ್ ಆಗಿತ್ತು. ನಾಯಕ ಮೊಹಮ್ಮದ್ ಅಜರುದ್ದೀನ್ 67 ಹಾಗೂ ಸಡಗೋಪನ್ ರಮೇಶ್ 60 ರನ್ ಗಳಿಸಿದ್ದರು. ಪಾಕಿಸ್ತಾನದ ಪರ ಸಕ್ಲೈನ್ ಮುಶ್ತಾಕ್ ಐದು ವಿಕೆಟ್ ಗಳಿಸಿದ್ದರು.

ಬಳಿಕ ಅನಿಲ್ ಕುಂಬ್ಳೆ (75ಕ್ಕೆ 4) ದಾಳಿಗೆ ಕುಸಿದಿದ್ದ ಪಾಕಿಸ್ತಾನ 172ಕ್ಕೆ ಆಲೌಟ್ ಆಗಿತ್ತು. ಆ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 80 ರನ್‌ಗಳ ಮುನ್ನಡೆ ಗಳಿಸಿತ್ತು.

ಸಡಗೋಪನ್ ರಮೇಶ್ (96), ಸೌರವ್ ಗಂಗೂಲಿ (62*) ಹಾಗೂ ಜಾವಗಲ್ ಶ್ರೀನಾಥ್ (49) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 339 ರನ್ ಪೇರಿಸಿತ್ತು. ಪಾಕ್ ಪರ ಸಕ್ಲೈನ್ ಮುಶ್ತಾಕ್ ಎರಡನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್ ಗಳಿಸಿದ್ದರು.

ಅಂತಿಮ ಇನಿಂಗ್ಸ್‌ನಲ್ಲಿ 420 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 101 ರನ್ ಗಳಿಸಿತ್ತು. ಈ ಹಂತದಲ್ಲಿ ದಾಳಿಗಿಳಿದ ಕುಂಬ್ಳೆ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು. ಕುಂಬ್ಳೆ ಜಾದೂ ಮುಂದೆ ಪಾಕ್ ಆಟಗಾರರ ಬಳಿ ಉತ್ತರವೇ ಇರಲಿಲ್ಲ. ಅಂತಿಮವಾಗಿ 207 ರನ್ನಿಗೆ ತನ್ನೆಲ್ಲ ವಿಕಟ್‌ಗಳನ್ನು ಕಳೆದುಕೊಂಡಿತ್ತು.

ಅನಿಲ್ ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್ ತೆತ್ತು 10 ವಿಕೆಟ್ ಗಳಿಸಿದ್ದರು. ಇದರಲ್ಲಿ ಒಂಬತ್ತು ಮೇಡನ್ ಓವರ್‌ಗಳು ಸೇರಿದ್ದವು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಸೇರಿದಂತೆ ಪಂದ್ಯದಲ್ಲಿ ಒಟ್ಟು 14 ವಿಕೆಟ್‌ ಪಡೆದಿದ್ದರು.

619 ವಿಕೆಟ್ ಸಾಧನೆ...

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪೈಕಿ ಕುಂಬ್ಳೆ ನಾಲ್ಕನೇ ಸ್ಥಾನದಲ್ಲಿದ್ದಾರೆ. 1990ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಪದಾರ್ಪಣೆ ಮಾಡಿದ್ದ ಕುಂಬ್ಳೆ, 132 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 619 ವಿಕೆಟ್ ಗಳಿಸಿದ್ದರು.

ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ (708) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (695*) ಮೂರನೇ ಸ್ಥಾನದಲ್ಲಿದ್ದಾರೆ.

ಅನಿಲ್ ಕುಂಬ್ಳೆ 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT