ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U19 World Cup: ದ.ಆಫ್ರಿಕಾ ಮಣಿಸಿ ಸತತ 5ನೇ ಸಲ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

Published 6 ಫೆಬ್ರುವರಿ 2024, 16:09 IST
Last Updated 6 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಬೆನೋನಿ (ಪಿಟಿಐ): ನಾಯಕ ಉದಯ್ ಸಹಾರನ್ ಮತ್ತು ಸಚಿನ್‌ ದಾಸ್‌ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡ, ಐಸಿಸಿ 19 ವರ್ಷದೊಳಗಿನ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಂಗಳವಾರ ಎರಡು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ದಾಪುಗಾಲಿಟ್ಟಿತು.

245 ರನ್‌ಗಳ ಬೆನ್ನತ್ತಿದ್ದ ಹಾಲಿ ಚಾಂಪಿಯನ್ ಭಾರತ 12 ಓವರ್‌ಗಳಾಗುವಷ್ಟರಲ್ಲಿ 32 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಗೂಡಿದ ಸಹಾರನ್ (81, 124ಎ, 4x6) ಮತ್ತು ದಾಸ್‌ (96, 95 ಎಸೆತ, 4x11, 6x1) ಐದನೇ ವಿಕೆಟ್‌ಗೆ 171 ರನ್ ಸೇರಿಸಿ ತಂಡವನ್ನು ವಿಜಯಪಥದಲ್ಲಿ ಮುನ್ನಡೆಸಿದರು. ನಂತರ ಮೂರು ವಿಕೆಟ್‌ಗಳು ಬಿದ್ದರೂ ಒತ್ತಡವಿರಲಿಲ್ಲ. ಏಳು ಎಸೆತ ಗಳಿರುವಂತೆ ತಂಡ 8 ವಿಕೆಟ್‌ಗೆ 248 ರನ್ ಹೊಡೆಯಿತು.

ನೇಪಾಳ ವಿರುದ್ಧ ಸೂಪರ್‌ ಸಿಕ್ಸ್‌ ಹಂತದ ಪಂದ್ಯದಲ್ಲೂ ಇವರಿಬ್ಬರು ಶತಕ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದರು. ಈ ಬಾರಿ ಶತಕ ಬಾರಿಸದಿದ್ದರೂ ಅವರ ಇನಿಂಗ್ಸ್‌ನ ಮೌಲ್ಯ ಅದಕ್ಕಿಂತ ಹೆಚ್ಚಾಗಿತ್ತು.

ಗುರುವಾರ ಎರಡನೇ ಸೆಮಿಫೈನಲ್‌ ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಫೆ.11 ರಂದು ನಿಗದಿಯಾಗಿದೆ.

ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮೆಫಕಾ ಮೊದಲ ಓವರ್‌ನಲ್ಲೇ ಆದರ್ಶ್ ಸಿಂಗ್ ವಿಕೆಟ್ ಪಡೆದರು. ಮೆಫಾಕಾ ಜೊತೆಗಾರ ಟ್ರಿಸ್ಟಾನ್ ಲಸ್‌ ಮತ್ತಷ್ಟು ಹೊಡೆತ ನೀಡಿದರು. ಉತ್ತಮ ಲಯದಲ್ಲಿದ್ದ ಮುಶೀರ್‌ ಖಾನ್‌, ಅರ್ಷಿನ್ ಕುಲಕರ್ಣಿ ಮತ್ತು ಪ್ರಿಯಾಂಶು ಮೊಲಿಯಾ ಅವರು ಆಫ್‌ ಸ್ಟಂಪ್‌ ಆಚೆ ಹೋಗುತ್ತಿದ್ದ ಚೆಂಡನ್ನು ಕೆಣಕಿ ವಿಕೆಟ್‌ ಕಳೆದುಕೊಂಡರು.

ಆದರೆ ದಾಸ್ ಮತ್ತು ಸಹಾರನ್ ಮತ್ತೊಮ್ಮೆ ಆಪತ್ಬಾಂಧವರಾದರು. ದಾಸ್‌ ಅಕ್ರಮಣದ ಆಟಕ್ಕೆ ಇಳಿದರೆ, ಸಹಾರನ್ ಎಚ್ಚರಿಕೆಯಿಂದ ಆಡಿ ಅವರಿಗೆ ಬೆಂಬಲ ನೀಡಿದರು. ಸಹಾರನ್ ಈ ಟೂರ್ನಿಯಲ್ಲಿ 389 ರನ್ ಗಳಿಸಿದಂತಾಗಿದೆ.

ಇದಕ್ಕೆ ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡವನ್ನು ಭಾರತದ ಬೌಲರ್‌ಗಳು 244 ರನ್‌ಗಳಿಗೆ (7 ವಿಕೆಟ್‌ಗೆ) ನಿಯಂತ್ರಿಸಿದ್ದರು.

ಆರಂಭ ಆಟಗಾರ ಹಾಗೂ ವಿಕೆಟ್‌ ಕೀಪರ್ ಲುವಾನ್ ಡ್ರಿ ಪ್ರಿಟೋರಿಯಸ್ (76, 102 ಎಸೆತ, 4x6, 6x3) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ರಿಚರ್ಡ್‌ ಸೆಲೆಟ್‌ಸ್ವೇನ್ (64, 100ಎ, 4x4, 6x2) ಉತ್ತಮ ಕೊಡುಗೆ ನೀಡಿದರು. ತಂಡ 46 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದಾಗ ಇವರಿಬ್ಬರು ಜೊತೆಗೂಡಿ 76 ರನ್ ಸೇರಿಸಿದರು. ಆದರೆ ನಂತರ ನಿಯಮಿತವಾಗಿ ವಿಕೆಟ್‌ಗಳು ಬಿದ್ದವು.

ಕೊನೆಯಲ್ಲಿ ಜುವಾನ್ ಜೇಮ್ಸ್ (24) ಮತ್ತು ಟ್ರಿಸ್ಟಾನ್ ಲಸ್ (23) ತಂಡ ಗೌರವಾರ್ಹ ಮೊತ್ತ ತಲುಪಲು ನೆರವಾದರು. ಭಾರತದ ಪರ ವೇಗದ ಬೌಲರ್‌ ರಾಜ್‌ ಲಿಂಬಾನಿ ಮೂರು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರುಗಳು: ದಕ್ಷಿಣ ಆಫ್ರಿಕಾ: 50 ಓವರುಗಳಲ್ಲಿ 7 ವಿಕೆಟ್‌ಗೆ 244 (ಲುವಾನ್ ಡ್ರೆ ಪ್ರಿಟೋರಿಯಸ್‌ 76, ರಿಚರ್ಡ್‌ ಸೆಲೆಟ್‌ಸ್ವೇನ್ 64, ಒಲಿವರ್‌ ವೈಟ್‌ಹೆಡ್‌ 22, ಜುವಾನ್ ಜೇಮ್ಸ್ 24, ಟ್ರಿಸ್ಟಾನ್ ಲಸ್‌ ಔಟಾಗದೇ 23; ರಾಜ್ ಲಿಂಬಾನಿ 60 ಕ್ಕೆ3, ಮುಶೀರ್ ಖಾನ್ 43ಕ್ಕೆ2); ಭಾರತ: 48.5 ಓವರುಗಳಲ್ಲಿ 8 ವಿಕೆಟ್‌ಗೆ 248 (ಉದಯ್ ಸಹಾರನ್ 81, ಸಚಿನ್ ದಾಸ್ 96, ರಾಜ್‌ ಲಿಂಬಾನಿ ಔಟಾಗದೇ 13; ಕ್ವೇನಾ ಮೆಫಾಕಾ 32ಕ್ಕೆ3, ಟ್ರಿಸ್ಟಾನ್ ಲಸ್‌ 37ಕ್ಕೆ3).

ಸತತ 5ನೇ ಸಲ ಫೈನಲ್‌ಗೆ ಲಗ್ಗೆ...

ಐದು ಬಾರಿಯ ಚಾಂಪಿಯನ್ ಭಾರತ ಆರನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣು ನೆಟ್ಟಿದೆ. ಅಲ್ಲದೆ ಸತತ ಐದನೇ ಸಲ ಸೇರಿದಂತೆ ಒಟ್ಟಾರೆಯಾಗಿ ಒಂಬತ್ತನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್: 2000, 2008, 2012, 2018, 2022

ಸವಾಲಿನ ಮೊತ್ತ ಪೇರಿಸಿದ ದ.ಆಫ್ರಿಕಾ...

ಈ ಮೊದಲು ಬ್ಯಾಟಿಂಗ್ ನಡೆಸಿದ ಅತಿಥೇಯ ದಕ್ಷಿಣ ಆಫ್ರಿಕಾ, ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಆರಂಭಿಕ ಬ್ಯಾಟರ್ ಲುವಾನ್ ಡ್ರೆ ಪ್ರಿಟೋರಿಯಸ್ (76) ಹಾಗೂ ರಿಚರ್ಡ್ ಸೆಲೆಸ್ವಾನ್ (64) ಆಕರ್ಷಕ ಅರ್ಧಶತಕ ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಒಲಿವರ್ ವೈಟ್‌ಹೆಡ್ (22), ನಾಯಕ ಜುವಾನ್ ಜೇಮ್ಸ್ (24) ಹಾಗೂ ಟ್ರಿಸ್ಟನ್ ಲಿಸ್ (23*) ಉಪಯುಕ್ತ ಕಾಣಿಕೆ ನೀಡಿದರು.

ಭಾರತದ ಪರ ರಾಜ್ ಲಿಂಬಾನಿ ಮೂರು, ಮುಶೀರ್ ಖಾನ್ ಎರಡು ಮತ್ತು ಸೌಮಿ ಪಾಂಡೆ ಹಾಗೂ ನಮನ್ ತಿವಾರಿ ತಲಾ ಒಂದು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT