ಶನಿವಾರ, ಡಿಸೆಂಬರ್ 3, 2022
27 °C
ಭಾರತ–ನ್ಯೂಜಿಲೆಂಡ್ ಎರಡನೇ ಟಿ20 ಕ್ರಿಕೆಟ್ ಪಂದ್ಯ ಇಂದು

IND vs NZ T20I: ಶುಭಾರಂಭದ ಮೇಲೆ ಹಾರ್ದಿಕ್ ಬಳಗದ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

ಮೌಂಟ್ ಮಾಂಗನೆ: ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಭಾನುವಾರ ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಎರಡು ದಿನಗಳ ಹಿಂದೆ ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಇನ್ನುಳಿದ ಎರಡು ಪಂದ್ಯಗಳಲ್ಲಿ ಸರಣಿ ಜಯ ಸಾಧಿಸುವ ಸವಾಲು ಉಭಯ ತಂಡಗಳಿಗೆ ಇದೆ. ಭಾನುವಾರದ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಕಿರೀಟ ಒಲಿಸಿಕೊಳ್ಳುವ ಅವಕಾಶ ಹೆಚ್ಚು. ಆದ್ದರಿಂದ ಈ ಪಂದ್ಯ ಮಹತ್ವದ್ದಾಗಲಿದೆ.

ಭಾರತ ತಂಡವು ತನ್ನ ಬೌಲಿಂಗ್ ವಿಭಾಗದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆ ಇದೆ. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರು ಕಳೆದ ಕೆಲವು ದಿನಗಳಿಂದ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇಲ್ಲಿ ಅವರಿಗೆ ತಮ್ಮ ಲಯ ಕಂಡುಕೊಳ್ಳಲು ಮತ್ತೊಂದು ಅವಕಾಶ ಸಿಗುವುದೇ ಕಾದು ನೋಡಬೇಕು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಅನುಭವಿ ಆಟಗಾರರು ವಿಶ್ರಾಂತಿ ಪಡೆದಿರುವುದರಿಂದ ಯುವ ಆಟಗಾರರಿಗೆ ಮಿಂಚಲು ಇದು ಸದವಕಾಶವಾಗಿದೆ. ಆರಂಭಿಕ ಬ್ಯಾಟಿಂಗ್ ಜೋಡಿಯನ್ನು ಸಿದ್ಧಗೊಳಿಸುವ ಪ್ರಯೋಗಕ್ಕೂ ಈ ಸರಣಿ ವೇದಿಕೆಯಾಗಲಿದೆ.

ತಂಡದಲ್ಲಿ ಮೂವರು ವಿಕೆಟ್‌ಕೀಪರ್ ಬ್ಯಾಟರ್‌ಗಳಾದ ರಿಷಭ್ ಪಂತ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಇದ್ದಾರೆ.

ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ ಹಂತದಲ್ಲಿ ಸೋತಿದ್ದವು.  ಚುಟುಕು ಕ್ರಿಕೆಟ್‌ ವಿಭಾಗದಲ್ಲಿ ಹೊಸದಾಗಿ ತಂಡವನ್ನು ಕಟ್ಟುವತ್ತ ಎರಡೂ ದೇಶಗಳು ಈ ಸರಣಿಯನ್ನು ವೇದಿಕೆಯಾಗಿ ಮಾಡಿಕೊಂಡಿವೆ.

ತಂಡಗಳು
ಭಾರತ:
ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್, ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್. 

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೆಸ್‌ವೆಲ್, ಡೆವೊನ್ ಕಾನ್ವೆ (ವಿಕೆಟ್‌ಕೀಪರ್), ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಆ್ಯಡಂ ಮಿಲ್ನೆ, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೌಥಿ, ಈಶ್ ಸೌಧಿ, ಬ್ಲೇರ್ ಟಿಕ್ನರ್. 

ಪಂದ್ಯ ಆರಂಭ: ಮಧ್ಯಾಹ್ನ 12ರಿಂದ
ನೇರಪ್ರಸಾರ: ಅಮೆಜಾನ್‌ ಪ್ರೈಮ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು