ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಇಂಗ್ಲೆಂಡ್ ಕ್ರಿಕೆಟ್ ಸರಣಿ: ಎರಡನೇ ಟೆಸ್ಟ್‌ಗೆ ಶೇ 50 ಪ್ರೇಕ್ಷಕರಿಗೆ ಅವಕಾಶ

Last Updated 1 ಫೆಬ್ರುವರಿ 2021, 13:15 IST
ಅಕ್ಷರ ಗಾತ್ರ

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ನಿರ್ಧರಿಸಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಫೆಬ್ರುವರಿ 13ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಕ್ರೀಡಾಂಗಣವು 50 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.

ಸಾರ್ವಜನಿಕರ ಸಂಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸಿದ ಮತ್ತು ಕ್ರೀಡಾಂಗಣಗಳಿಗೆ ಪ್ರೇಕ್ಷಕರನ್ನು ಬಿಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ ಹೊಸ ಕೋವಿಡ್‌–19 ಮಾರ್ಗದರ್ಶನದ ಹಿನ್ನೆಲೆಯಲ್ಲಿ ಟಿಎನ್‌ಸಿಎ ಸುದೀರ್ಘ ಚರ್ಚೆ ನಡೆಸಿತು. ನಂತರ ಬಿಸಿಸಿಐ ಜೊತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಟಿಎನ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಫೆಬ್ರುವರಿ ಐದರಂದು ಆರಂಭಗೊಳ್ಳಲಿದ್ದು ಮೂರು ಮತ್ತು ನಾಲ್ಕನೇ ಪಂದ್ಯಗಳು ಅಹಮದಾಬಾದ್‌ನಲ್ಲಿ ಕ್ರಮವಾಗಿ ಫೆಬ್ರುವರಿ 24 ಮತ್ತು ಮಾರ್ಚ್ ನಾಲ್ಕರಿಂದ ನಡೆಯಲಿವೆ. ಅಹಮದಾಬಾದ್‌ ಟೆಸ್ಟ್‌ಗಳಿಗೆ ಪ್ರೇಕ್ಷಕರನ್ನು ಬಿಡಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಚೆನ್ನೈನ ಎರಡೂ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೇ ನಡೆಸಲು ಈ ಹಿಂದೆ ಬಿಸಿಸಿಐ ಮತ್ತು ಟಿಎನ್‌ಸಿಎ ತೀರ್ಮಾನಿಸಿತ್ತು.

ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯಗಳನ್ನು ವರದಿ ಮಾಡಲು ಪತ್ರಕರ್ತರಿಗೂ ಅವಕಾಶ ನೀಡಲಾಗಿದ್ದು ‘ಪ್ರೆಸ್‌ ಬಾಕ್ಸ್‌’ಗೆ ಮಾತ್ರ ಪ್ರವೇಶಾವಕಾಶವಿದೆ. ಪತ್ರಿಕಾಗೋಷ್ಠಿಯಗಳು ವರ್ಚುವಲ್ ಆಗಿಯೇ ನಡೆಯಲಿವೆ.

ಮೊದಲ ಪಂದ್ಯಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಇವೆ. ಆದ್ದರಿಂದ ಪ್ರೇಕ್ಷಕರನ್ನು ಅನುವು ಮಾಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲ ಮತ್ತು ಎರಡನೇ ಟೆಸ್ಟ್‌ಗಳ ನಡುವೆ ಮೂರು ದಿನಗಳ ಅಂತರವಷ್ಟೇ ಇರುವುದಾದರೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಬದ್ಧ ಎಂದು ಟಿಎನ್‌ಸಿಎ ತಿಳಿಸಿದೆ.

ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡಾ ಚಟುವಟಿಕೆಗಳಿಗೂ ಶೇ 50ರಷ್ಟು ಪ್ರೇಕ್ಷಕರನ್ನು ಅನುವು ಮಾಡುವುದಾಗಿ ತಮಿಳುನಾಡು ಸರ್ಕಾರ ಕೂಡ ಭಾನುವಾರ ತಿಳಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾರತದಲ್ಲಿ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೇ ನಡೆಸಬೇಕು ಎಂದು ಕೋರಿದೆ.

ಚಾನಲ್‌–4ಕ್ಕೆ ಪ್ರಸಾರ ಹಕ್ಕು ಸಾಧ್ಯತೆ
ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿಯನ್ನು ಇಂಗ್ಲೆಂಡ್‌ನಲ್ಲಿ ಪ್ರಸಾರ ಮಾಡುವ ಹಕ್ಕು ಚಾನಲ್–4 ವಾಹಿನಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ವಾಹಿನಿ ಹಕ್ಕು ಪಡೆದರೆ ಸುದೀರ್ಘ 15 ವರ್ಷಗಳ ನಂತರ ಇಂಗ್ಲೆಂಡ್‌ ತಂಡದ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಿದಂತಾಗುತ್ತದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಸ್ಟಾರ್ ಸ್ಪೋರ್ಟ್ಸ್‌, ಬಿಟಿ ಸ್ಪೋರ್ಟ್ಸ್ ಮತ್ತು ಸ್ಕೈ ಸ್ಪೋರ್ಟ್ಸ್ ವಾಹಿನಿಗಳು ಪ್ರಸಾರದ ಹಕ್ಕು ಪಡೆಯುವುದಕ್ಕಾಗಿ ಜಿದ್ದಿಗೆ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT