ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ 53 ದಿನಗಳ ಐಪಿಎಲ್: ಯುಎಇಯಲ್ಲಿ ನಡೆಸಲು ಆಡಳಿತ ಸಮಿತಿ ಸಮ್ಮತಿ

ಸರ್ಕಾರದ ಒಪ್ಪಿಗೆಯ ನಿರೀಕ್ಷೆ
Last Updated 2 ಆಗಸ್ಟ್ 2020, 17:31 IST
ಅಕ್ಷರ ಗಾತ್ರ

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸೆಪ್ಟೆಂಬರ್‌ 19ರಿಂದ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲು ನವೆಂಬರ್ 8ರಂದು ನಡೆಸಲಾಗುವುದು ಎಂದು ಹೇಳಲಾಗಿತ್ತು.

'ಫೈನಲ್ ಪಂದ್ಯವು ನಡೆಯುವ ವೇಳೆಯು ದೀಪಾವಳಿಯ ಹಬ್ಬದ ಸಮಯವಾಗಿದೆ. ಆದ್ದರಿಂದ ಅಧಿಕೃತ ಪ್ರಸಾರಕರಿಗೆ ಹೆಚ್ಚು ದಿನಗಳ ಅವಧಿ ಲಭಿಸಿದರೆ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಮೊದಲು ಯೋಚಿಸಿದ್ದಕ್ಕಿಂತ ಎರಡು ದಿನ ಹೆಚ್ಚು ಮಾಡಲಾಗಿದೆ. ಇದರಿಂದಾಗಿ 51 ದಿನಗಳ ಟೂರ್ನಿಯು 53 ದಿನವಾಗಲಿದೆ‘ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.

’ಯುಎಇಯಲ್ಲಿ ಟೂರ್ನಿ ನಡೆಸಲು ಸದಸ್ಯರು ಒಪ್ಪಿದ್ದಾರೆ. ಫ್ರ್ಯಾಂಚೈಸ್‌ಗಳೂ ಸಹಮತ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರವು ಇನ್ನೂ ಅನುಮತಿ ನೀಡಬೇಕಿದೆ. ಶೀಘ್ರದಲ್ಲಿಯೇ ಹಸಿರುನಿಶಾನೆ ಸಿಗಬಹುದು‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

’ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಬಿಸಿಸಿಐ ದುಬೈ ಮೂಲದ ಪರಿಣತರ ಸಮೂಹವನ್ನು ಸಂಪರ್ಕಿಸಿದೆ. ಅವರಿಂದ ಯೋಜನಾ ವರದಿಗಳನ್ನೂ ತರಿಸಿಕೊಂಡಿದೆ. ಅಲ್ಲದೇ ಜೀವ ಸುರಕ್ಷಾ ನಿಯಮಗಳನ್ನು ಅನುಷ್ಠಾನಗೊಳಿಸಲು ಟಾಟಾ ಸಮೂಹ ಸಂಸ್ಥೆಯೊಂದಿಗೂ ಮಾತುಕತೆ ನಡೆಸಲಾಗುತ್ತಿದೆ‘ ಎಂದು ಹೇಳಿದರು.

7.30ಕ್ಕೆ ಪಂದ್ಯ ಆರಂಭ: ಈ ಬಾರಿಯ ಟೂರ್ನಿಯಲ್ಲಿ ಹತ್ತು ದಿನ ಡಬಲ್ ಹೆಡರ್‌ ಪಂದ್ಯಗಳು ನಡೆಯಲಿವೆ. ಒಂದೇ ದಿನ ಎರಡು ಪಂದ್ಯಗಳನ್ನು ನಡೆಸಿ ನಿಗದಿಯ ದಿನಗಳಲ್ಲಿ ಟೂರ್ನಿ ಮುಗಿಸಲು ಪ್ರಯತ್ನಿಸಲಾಗಿದೆ.

ಅಲ್ಲದೇ ಈ ಬಾರಿ ಸಂಜೆ 7.30ಕ್ಕೆ ಪಂದ್ಯಗಳನ್ನು ಆರಂಭಿಸಲಾಗುವುದು. ಈ ಮೊದಲು ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗುತ್ತಿದ್ದವು ಎಂದು ಮೂಲಗಳು ತಿಳಿಸಿರುವುದಾಗಿ ಇಂಗ್ಲಿಷ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT