ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎದುರಿನ ಕ್ರಿಕೆಟ್ ಪಂದ್ಯ ಟೈ ಆದರೂ ನೈತಿಕವಾಗಿ ಗೆದ್ದ ಅಸ್ಗರ್ ಅಫ್ವಾನ್ ಬಳಗ

ಬಲಿಷ್ಠ ತಂಡಗಳಿಗೆ ಅಫ್ಗಾನ್‌ ಎಚ್ಚರಿಕೆ ಗಂಟೆ
Last Updated 26 ಸೆಪ್ಟೆಂಬರ್ 2018, 17:11 IST
ಅಕ್ಷರ ಗಾತ್ರ

ದುಬೈ: ‘ನಾವು ಸುಮ್ಮನೇ ಆಡಿ ವಾಪಸಾಗಲು ಇಲ್ಲಿಗೆ ಬಂದಿಲ್ಲ. ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿಯೇ ತೀರುತ್ತೇವೆ, ಎದುರಾಳಿ ತಂಡಗಳನ್ನು ಕಂಗೆಡಿಸುತ್ತೇವೆ...’

ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗುವ ಮೊದಲು ಅಫ್ಗಾನಿಸ್ತಾನ ತಂಡದ ನಾಯಕ ಅಸ್ಗರ್‌ ಅಫ್ಗಾನ್ ಅವರು ಆಡಿದ ಮಾತು ಇದು. ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಲು ತಂಡಕ್ಕೆ ಸಾಧ್ಯವಾಗದಿದ್ದರೂ ಅವರು ಹೇಳಿದ ಮಾತು ನಿಜವಾಗಿದೆ. ಪ್ರಮುಖ ತಂಡಗಳಿಗೆ ಭಾರಿ ಸವಾಲು ಒಡ್ಡಿ ಅಫ್ಗಾನ್‌ ಗಮನ ಸೆಳೆದಿದೆ.

ಮಂಗಳವಾರ ನಡೆದ ಭಾರತದ ಎದುರಿನ ಪಂದ್ಯದಲ್ಲಿ ಟೈ ಸಾಧಿಸಿದ ಅಸ್ಗರ್ ಬಳಗ ಪಂದ್ಯ ಗೆದ್ದಷ್ಟೇ ಖುಷಿಯಿಂದ ಸಂಭ್ರಮಿಸಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡದ ಎದುರು ತೋರಿದ ಈ ಸಾಮರ್ಥ್ಯವು ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ್ದು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡುವ ತಂಡಗಳಿಗೆ ಸವಾಲೆಸೆಯುವ ಭರವಸೆ ಮೂಡಿದೆ.

ಗುಂಪು ಹಂತದ ಪಂದ್ಯಗಳಲ್ಲಿ ಶ್ರೀಲಂಕಾವನ್ನು 91 ರನ್‌ಗಳಿಂದ ಮತ್ತು ಬಾಂಗ್ಲಾದೇಶವನ್ನು 136 ರನ್‌ಗಳಿಂದ ಮಣಿಸಿದ್ದ ಅಫ್ಗಾನಿಸ್ತಾನವು ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎದುರು ಕ್ರಮವಾಗಿ ಮೂರು ವಿಕೆಟ್ ಮತ್ತು ಮೂರು ರನ್‌ಗಳಿಂದ ಸೋತಿತ್ತು. ಈ ಎರಡೂ ಪಂದ್ಯಗಳು ಕೊನೆಯ ಓವರ್‌ನಲ್ಲಿ ರೋಚಕ ಅಂತ್ಯ ಕಂಡಿದ್ದವು.

ಮಂಗಳವಾರದ ಪಂದ್ಯದಲ್ಲಿ 253 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ ಏಳು ರನ್‌ ಬೇಕಾಗಿತ್ತು. ಭಾರತದ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್ನರ್ ರಶೀದ್ ಖಾನ್‌ ಕಟ್ಟಿ ಹಾಕಿದ್ದರು. ಕೊನೆಯ ಎರಡು ಎಸೆತ ಬಾಕಿ ಇದ್ದಾಗ ಧೋನಿ ಬಳಗದ ಗೆಲುವಿಗೆ ಒಂದು ರನ್ ಬೇಕಾಗಿತ್ತು. ಆದರೆ ರವೀಂದ್ರ ಜಡೇಜ ಭಾರಿ ಹೊಡೆತಕ್ಕೆ ಮುಂದಾಗಿ ಮಿಡ್‌ವಿಕೆಟ್‌ನಲ್ಲಿದ್ದ ನಜೀಬುಲ್ಲ ಜಡ್ರಾನ್‌ಗೆ ಕ್ಯಾಚ್‌ ನೀಡಿ ನಿರಾಸೆಗೊಂಡಿದ್ದರು.

‘ಈ ಪಂದ್ಯದಲ್ಲಿ ತೋರಿದ ಸಾಮರ್ಥ್ಯ ತಂಡಕ್ಕೆ ಗೌರವ ತಂದಿದೆ. ಇದು ಮುಂದಿನ ವಿಶ್ವಕಪ್‌ಗೆ ಬಲಿಷ್ಠ ತಂಡಗಳಿಗೆ ಎಚ್ಚರಿಕೆಯ ಗಂಟೆ’ ಎಂದು ನಾಯಕ ಅಸ್ಗರ್ ಅಫ್ಗಾನ್ ಹೇಳಿದರು.

ರಷ್ಯಾ ಆಕ್ರಮಣದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ ಲಕ್ಷಾಂತರ ಮಂದಿಯಲ್ಲಿ ಅನೇಕರು ಅಲ್ಲಿ ಕ್ರಿಕೆಟ್ ಕಲಿತಿದ್ದರು. ತಾಯ್ನಾಡಿಗೆ ವಾಪಸಾದ ನಂತರ ಈ ಕ್ರೀಡೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. 2009ರಲ್ಲಿ ಟ್ವೆಂಟಿ–20 ವಿಶ್ವಕಪ್‌, 2015ರಲ್ಲಿ 50 ಓವರ್‌ಗಳ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಮುಂದಿನ ವಿಶ್ವಕಪ್‌ ವೇಳೆ ಇನ್ನಷ್ಟು ಪ್ರಬಲ ಶಕ್ತಿಯಾಗಿ ಬೆಳೆಯುವ ಭರವಸೆಯಲ್ಲಿದ್ದಾರೆ ತಂಡದ ಆಟಗಾರರು. ತಂಡವನ್ನು ಮಹೇಂದ್ರ ಸಿಂಗ್ ಧೋನಿ ಕೂಡ ಅಭಿನಂದಿಸಿದರು.

ಡಿಆರ್‌ಎಸ್‌, ರನ್ ಔಟ್‌ ಮುಳುವಾಯಿತು
ರಶೀದ್‌ ಖಾನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದ ಕೆ.ಎಲ್‌.ರಾಹುಲ್ ಡಿಆರ್‌ಎಸ್‌ ತೆಗೆದುಕೊಳ್ಳದೇ ಇದ್ದಿದ್ದರೆ....ಕೇದಾರ್ ಜಾಧವ್‌, ಕುಲದೀಪ್ ಯಾದವ್ ಮತ್ತು ಸಿದ್ಧಾರ್ಥ್ ಕೌಲ್ ರನ್‌ ಔಟ್‌ನಿಂದ ಬಚಾವಾಗಿದ್ದರೆ...

ಅಫ್ಗಾನಿಸ್ತಾನ ಎದುರಿನ ಪಂದ್ಯ ಟೈ ಆದ ನಂತರ ಭಾರತದ ಅಭಿಮಾನಿಗಳ ಈ ರಿತಿ ಯೋಚಿಸಿರುವುದು ಖಚಿತ. 21ನೇ ಓವರ್‌ನಲ್ಲಿ ಔಟಾಗಿದ್ದ ರಾಹುಲ್ ಡಿಆರ್‌ಎಸ್ ಮೊರೆ ಹೋಗಿದ್ದರು. ಈ ಮೂಲಕ ಭಾರತದ ಅವಕಾಶವನ್ನು ಕಳೆದುಕೊಂಡಿದ್ದರು.

26ನೇ ಓವರ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಔಟ್‌ ಎಂದು ಅಂಪೈರ್ ತೀರ್ಪು ನೀಡಿದ್ದರು. ಆದರೆ ಡಿಆರ್‌ಎಸ್ ಬಳಸಿಕೊಂಡಿದ್ದರೆ ಅವರಿಗೆ ಬಚಾವಾಗುವ ಅವಕಾಶ ಇತ್ತು.

ಭಾರತ ಗುರಿಯತ್ತ ಯಶಸ್ವಿ ಹೆಜ್ಜೆ ಇರಿಸಿದ್ದಾಗ 39ನೇ ಓವರ್‌ನಲ್ಲಿ ಕೇದಾರ್ ಜಾಧವ್‌, 49ನೇ ಓವರ್‌ನಲ್ಲಿ ಕುಲದೀಪ್ ಯಾದವ್‌ ಮತ್ತು ಸಿದ್ಧಾರ್ಥ್ ಕೌಲ್‌ ರನ್ ಔಟ್‌ ಆಗಿದ್ದರು. ಇದನ್ನು ತಪ್ಪಿಸಿದ್ದರೆ ತಂಡ ಜಯದ ದಡ ಸೇರಬಹುದಿತ್ತು. ತಾನು ಡಿಆರ್‌ಎಸ್‌ಗೆ ಮೊರೆ ಹೋಗಬಾರದಿತ್ತು ಎಂದು ಪಂದ್ಯದ ನಂತರ ರಾಹುಲ್ ಹೇಳಿದರು.

*
ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್ ಉತ್ತಮ ಬೆಳವಣಿಗೆ ಕಂಡಿದೆ. ಏಷ್ಯಾಕಪ್ ಟೂರ್ನಿಯ ಆರಂಭದಿಂದಲೇ ಅಮೋಘ ಸಾಮರ್ಥ್ಯ ತೋರಿದೆ.
-ಮಹೇಂದ್ರ ಸಿಂಗ್ ಧೋನಿ, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT