ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ ಗೇಲ್, ಯುವರಾಜ್ ಮಾದರಿಯ ಬ್ಯಾಟ್ಸ್‌ಮನ್‌...ಯಾರು ಈ ಪೋರ...?

Last Updated 14 ಸೆಪ್ಟೆಂಬರ್ 2020, 11:09 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಎಸೆತಗಳು. ಒಂದು ಆಫ್‌ಸ್ಟಂಪ್‌ ಮತ್ತು ಮಿಡಲ್ ಸ್ಟಂಪ್ ಮೇಲೆ. ಮತ್ತೆರಡು ಆಫ್ ಸ್ಟಂಪಿಂದ ಹೊರಗೆ. ಈ ಮೂರೂ ಎಸೆತಗಳನ್ನು ಅಮೋಘ ಪದಚಲನೆಯ ಮೂಲಕ ದೂರಕ್ಕೆ ಅಟ್ಟಿದ ಆ ಪುಟಾಣಿ ’ಬ್ಯಾಟ್ಸ್‌ಮನ್‘ ಯಾರು...?

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ ವಿಡಿಯೊದಲ್ಲಿ ಕಾಣುವ ಈ ಬಾಲಕ ಯಾರು ಎಂಬ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಟ್ವೀಟ್‌ಗೆ ಕ್ರಿಕೆಟ್ ಪ್ರಿಯರು ಮತ್ತು ಆಕಾಶ್ ಚೋಪ್ರಾ ಅವರ ಅಭಿಮಾನಿಗಳು ಲೈಕ್‌ಗಳ ಮಳೆ ಸುರಿಸಿದ್ದಾರೆ. ಬಾಲಕನನ್ನು ಕೊಂಡಾಡಿದ್ದಾರೆ.

ಆಕಾಶ್ ಚೋಪ್ರಾ ಅವರು ತಮ್ಮ @cricketaakash ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಸುಮಾರು ಐದು ವರ್ಷದ ಒಳಗಿನ ಬಾಲಕ ಮೆಟ್ಟಿಲುಗಳನ್ನು ಹತ್ತಿದ ನಂತರ ಸಿಗುವ ಸಮತಟ್ಟಾದ ಜಾಗದಲ್ಲಿ ನಿಂತಿದ್ದಾನೆ. ಪ್ರಾಸ್ಟಿಕ್‌ನಿಂದ ತಯಾರಿಸಿದಂಥ ಚೆಂಡು ತನ್ನತ್ತ ನುಗ್ಗಿ ಬರುತ್ತಿದ್ದಂತೆ ಪರಿಣಿತ ಆಟಗಾರನಂತೆ ಪದಚಲನೆ ಮಾಡುತ್ತ ಬ್ಯಾಟ್ ಬೀಸುತ್ತಾನೆ. ಈ ಪುಟ್ಟ ಎಡಗೈ ‘ಬ್ಯಾಟ್ಸ್‌ಮನ್‌‘ ಎರಡು ಎಸೆತಗಳನ್ನು ಎಡಭಾಗಕ್ಕೆ ಎತ್ತಿದರೆ ಮತ್ತೊಂದು ಎಸೆತವನ್ನು ಬಲಭಾಗಕ್ಕೆ ಅಟ್ಟುತ್ತಾನೆ.

ವಿಡಿಯೊ ಪೋಸ್ಟ್ ಮಾಡಿರುವ ಆಕಾಶ್‌ ಚೋಪ್ರಾ 'ಕಿಸೀ ಕೆ ಹಾತ್ ನಾ ಆಯೇಗಿ ಏ ಲಡ್ಕಿ'ಎಂಬ ಹಾಡಿನ ದಾಟಿಯಲ್ಲಿ 'ಕಿಸೀ ಕೆ ಹಾತ್ ನಾ ಆಯೇಗಾ ಏ ಲಡ್ಕಾ‘ (ಯಾರ ಕೈಗೂ ಸಿಗಲಾರ ಈ ಪೋರ) ಎಂದು ಬರೆದಿದ್ದಾರೆ. ಮರು ಟ್ವೀಟ್ ಮಾಡಿರುವ ಕೆಲವರು ಈ ಬಾಲಕನನ್ನು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ ಅವರಿಗೂ ಇನ್ನು ಕೆಲವರು ಭಾರತದ ಯುವರಾಜ್ ಅವರಿಗೂ ಹೋಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿಡಿಯೊ ವೈರಲ್ ಆಗಿದ್ದು ಆರು ತಾಸುಗಳಲ್ಲಿ 3100 ಮಂದಿ ವೀಕ್ಷಿಸಿದ್ದಾರೆ. 240 ಮಂದಿ ಮರು ಟ್ವೀಟ್ ಮಾಡಿದ್ದಾರೆ.

ಸಾರಂಗ್ ಬಾಲೇ ರಾವ್ ಎಂಬವರು 'ಪುಟಾಣಿ ಪವರ್ ಹಿಟ್ಟರ್‌, ಕೊನೆಯ ಐದು ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರ ಆಗಬಲ್ಲ'ಎಂದು ಹೇಳಿದ್ದರೆ, ನಿತಿನ್ ತೆಗ್ಗಿನಮನಿ ಎಂಬವರು ಆ್ಯಂಡ್ರೆ 'ರಸೆಲ್ ಅವರು ಎಡಗೈ ಬ್ಯಾಟ್ಸ್‌ಮನ್ ಆಗಿದ್ದರೆ ಹೀಗೆಯೇ ಇರುತ್ತಿತ್ತು'ಎಂಬ ಧಾಟಿಯಲ್ಲಿ ಬಣ್ಣಿಸಿದ್ದಾರೆ.

'ಎಡಗಾಲು ಎತ್ತಿ ಭರ್ಜರಿ ಹೊಡೆತ ಹೊಡೆಯುವುದು ನೋಡಿದರೆ ಕ್ರಿಸ್ ಗೇಲ್‌ ಅವರಂತೆಯೇ ಕಾಣಿಸುತ್ತಾನೆ'ಎಂದು ಅಮೋಘ್ ಮಹೋಲ್ಕರ್ ಎಂಬವರು ಬರೆದಿದ್ದಾರೆ. ‘ಭಾರತ ಕ್ರಿಕೆಟ್ ಕ್ಷೇತ್ರ ಆತಂಕಪಡುವ ಅಗತ್ಯವಿಲ್ಲ. ಅತ್ಯುತ್ತಮ ಪ್ರತಿಭೆಗಳು ನಮ್ಮಲ್ಲಿವೆ'ಎಂದು ಕೆಲವರು ಹೇಳಿದ್ದರೆ’ ಚೆನ್ನಾಗಿ ಗಮನಿಸಿ, ಈತನಲ್ಲಿ ಋಷಭ್ ಪಂತ್‌ನನ್ನು ಕಾಣಬಹುದು' ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಆಕಾಶ್ ಚೋಪ್ರಾ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲೂ ವಿಡಿಯೊವನ್ನು ಪೋಸ್ಟ್ ಮಾಡಿದ್ದು ಅಲ್ಲೂ ಅನೇಕರು ಪುಟಾಣಿ 'ಆಟಗಾರ’ನ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT