ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೇ ಐಪಿಎಲ್‌ ನಡೆಯಲಿದೆ: ಅನಿಲ್‌ ಕುಂಬ್ಳೆ ವಿಶ್ವಾಸ

Last Updated 29 ಮೇ 2020, 2:13 IST
ಅಕ್ಷರ ಗಾತ್ರ

ನವದೆಹಲಿ: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯು ಇದೇ ವರ್ಷ ನಡೆಯಲಿದೆ’ ಎಂದು ಹಿರಿಯ ಕ್ರಿಕೆಟಿಗ ಹಾಗೂ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ನಿಯಂತ್ರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದಾಗಿ ಈ ಬಾರಿಯ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 13ನೇ ಆವೃತ್ತಿಯ ಲೀಗ್‌ ಅನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಆಯೋಜಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜನೆ ರೂಪಿಸಿದೆ ಎಂದೂ ಹೇಳಲಾಗಿದೆ.

‘ಈ ವರ್ಷವೇ ಲೀಗ್‌ ನಡೆಯಬಹುದೆಂಬ ವಿಶ್ವಾಸ ನಮಗೆಲ್ಲರಿಗೂ ಇದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಪರಿಸ್ಥಿತಿ ಎದುರಾದರೆ ಆಗ ಮೂರು ಅಥವಾ ನಾಲ್ಕು ನಗರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಐಸಿಸಿ ಕ್ರಿಕೆಟ್‌ ಕೌನ್ಸಿಲ್‌ನ ಮುಖ್ಯಸ್ಥರೂ ಆಗಿರುವ ಕುಂಬ್ಳೆ, ಸ್ಟಾರ್‌ ಸ್ಪೋರ್ಟ್ಸ್ ಆಯೋಜಿಸಿದ್ದ ‘ಕ್ರಿಕೆಟ್‌ ಕನೆಕ್ಟೆಡ್‌’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

‘ಈ ವರ್ಷ ಐಪಿಎಲ್‌ ನಡೆಯುವುದು ಖಚಿತ. ಈಗಿನ ಪರಿಸ್ಥಿತಿಯಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುವುದು ಸುರಕ್ಷಿತವಲ್ಲ. ಇದಕ್ಕಾಗಿ ಮೂರರಿಂದ ನಾಲ್ಕು ಮೈದಾನಗಳನ್ನು ಹೊಂದಿರುವ ನಗರವೊಂದನ್ನು ಆಯ್ಕೆಮಾಡಿಕೊಂಡು ಅಲ್ಲೇ ಲೀಗ್‌ ಆಯೋಜಿಸಬೇಕು. ಇದರಿಂದ ಸತತ ಪ್ರಯಾಣವನ್ನು ತಪ್ಪಿಸಬಹುದು’ ಎಂದು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಹಿರಿಯ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಸಲಹೆ ನೀಡಿದ್ದಾರೆ.

‘ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಮಂದಿ ಇರುತ್ತಾರೆ. ಯಾರು ಎಲ್ಲಿಗೆ ಹೋಗುತ್ತಿದ್ದಾರೆ. ಯಾರು ಎಲ್ಲಿಂದ ಬಂದಿದ್ದಾರೆ ಎಂಬುದು ಗೊತ್ತಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಹಾಗೂ ಫ್ರಾಂಚೈಸ್‌ಗಳು ಸೂಕ್ತ ಯೋಜನೆ ರೂಪಿಸಬೇಕು’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT