ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥುನ್‌ ಪ್ರದರ್ಶನಕ್ಕೆ ಅರವಿಂದ್‌ ಮೆಚ್ಚುಗೆ

ಯುವ ಪ್ರತಿಭೆಗಳಿಗೆ ‘ಪೀಣ್ಯ ಎಕ್ಸ್‌ಪ್ರೆಸ್‌’ ಸಲಹೆಗಾರರಿದ್ದಂತೆ: ಬೌಲಿಂಗ್ ಕೋಚ್‌
Last Updated 20 ಡಿಸೆಂಬರ್ 2019, 20:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಭಿಮನ್ಯು ಮಿಥುನ್‌ ಪ್ರತಿ ಪಂದ್ಯದಲ್ಲಿಯೂ ವಿಕೆಟ್‌ ಪಡೆಯಬಲ್ಲ ಅನುಭವಿ ಬೌಲರ್‌. ಅವರು ತಂಡದ ಹೊಸ ಪ್ರತಿಭೆಗಳಿಗೆ ಸಲಹೆಗಾರರಿದ್ದಂತೆ ಎಂದು ಕರ್ನಾಟಕ ತಂಡದ ಬೌಲಿಂಗ್ ಕೋಚ್‌ ಎಸ್‌. ಅರವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ಪಂದ್ಯ ಮುಗಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಫಿಟ್‌ನೆಸ್‌ ಗಳಿಸಿಕೊಳ್ಳಲು ಮಿಥುನ್‌ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಈ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅವರು ತಂಡದಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ’ ಎಂದರು.

‘ರಾಜ್ಯದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ರಣಜಿ ತಂಡಕ್ಕೆ ಮೂರನೇ ವೇಗದ ಬೌಲರ್‌ ಬಗ್ಗೆ ಚಿಂತೆಯಿಲ್ಲ. ಡೇವಿಡ್‌ ಮಥಾಯಸ್ ಆ ಸ್ಥಾನ ತುಂಬಬಲ್ಲರು. ಮಿಥುನ್‌ ಮತ್ತು ರೋನಿತ್ ತಂಡದ ವೇಗದ ಬೌಲರ್‌ಗಳಿಗೆ ಅಗತ್ಯ ಸಲಹೆ ನೀಡುತ್ತಿದ್ದಾರೆ. ಪ್ರಸಿದ್ಧ ಕೃಷ್ಣ ಕೂಡ ಫಿಟ್‌ ಆಗುತ್ತಿದ್ದು, ಒಂದೆರೆಡು ವಾರಗಳಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ’ ಎಂದರು.

ಮೆಚ್ಚುಗೆ:

ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅರವಿಂದ್‌ ‘ಈ ಬಾರಿಯ ದೇಶಿ ಋತುವಿನುದ್ದಕ್ಕೂ ದೇವದತ್‌ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದ ತಂಡಕ್ಕೆ ಸಾಕಷ್ಟು ಅನುಕೂಲವಾಗಿದೆ’ ಎಂದರು.

‘ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಳ್ಳಲು ಪ್ರಯತ್ನಿಸುವಾಗ ಒತ್ತಡಕ್ಕೆ ಒಳಗಾಗುವುದು ಸಹಜ. ಆದ್ದರಿಂದ ಅವರಿಗೆ ಅಭ್ಯಾಸದ ಸಮಯದಲ್ಲಿ ಸಲಹೆ ನೀಡಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ಬ್ಯಾಟ್ಸ್‌ಮನ್‌ಗಳು ಪ್ರತಿ ಪಂದ್ಯದಲ್ಲಿಯೂ ಉತ್ತಮ ಮೊತ್ತ ದಾಖಲಿಸಿ ಸಕಾರಾತ್ಮಕ ಪರಿಸ್ಥಿತಿ ನಿರ್ಮಿಸಬೇಕು. ಮುಂದಿನ ಪಂದ್ಯಗಳಲ್ಲಿ ಅವರಿಂದ ಇದನ್ನು ನಿರೀಕ್ಷೆ ಮಾಡುತ್ತಿದ್ದೇವೆ’ ಎಂದರು.

ಎಂಟು ಇನಿಂಗ್ಸ್‌ಗಳಿಂದ ಕರುಣ್‌ ಗಳಿಸಿದ್ದು 114 ರನ್‌!

ರಾಜ್ಯ ತಂಡದ ನಾಯಕ ಕರುಣ್‌ ನಾಯರ್‌ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರ ನೀರಸ ಬ್ಯಾಟಿಂಗ್‌ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿಯೂ ಮುಂದುವರಿಯಿತು.

ಸೈಯದ್‌ ಮುಷ್ತಾಕ್‌ ಟಿ–20 ಟೂರ್ನಿಯ ಬಿಹಾರ ವಿರುದ್ಧದ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿದ್ದರು. ಈ ಪಂದ್ಯದ ಬಳಿಕ ಗೋವಾ (21), ಜಾರ್ಖಂಡ್‌ (19), ಪಂಜಾಬ್‌ (ಔಟಾಗದೆ 23), ಮುಂಬೈ (8), ತಮಿಳುನಾಡು (17) ರಣಜಿ ಟೂರ್ನಿಯಲ್ಲಿ ತಮಿಳುನಾಡು ಎದುರು (13) ಮತ್ತು ಉತ್ತರ ಪ್ರದೇಶ ವಿರುದ್ಧ (13) ರನ್ ಮಾತ್ರ ಗಳಿಸಿದ್ದಾರೆ.

ಈ ಬಗ್ಗೆ ಅರವಿಂದ್‌ ಅವರನ್ನು ಪ್ರಶ್ನಿಸಿದಾಗ ‘ಎಲ್ಲ ಆಟಗಾರರಿಗೂ ಕೆಟ್ಟ ಸಮಯವೆಂಬುದು ಇರುತ್ತದೆ. ಕರುಣ್‌ ತಂಡದ ಹಿರಿಯ ಆಟಗಾರನಾಗಿರುವ ಕಾರಣಕ್ಕೆ ಅವರು ಆದಷ್ಟು ಬೇಗನೆ ಫಾರ್ಮ್ ಕಂಡುಕೊಳ್ಳಬೇಕಿದೆ. ನಾವೂ ಇದನ್ನೇ ಎದುರು ನೋಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT