ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೆಸ್ಟ್‌ ಸರಣಿಗೆ ಆ್ಯಷಸ್ ಮುನ್ನುಡಿ

ಇಂಗ್ಲೆಂಡ್– ಆಸ್ಟ್ರೇಲಿಯಾ ಹಣಾಹಣಿ ಇಂದಿನಿಂದ; ಜೊ ರೂಟ್‌ ನಾಯಕತ್ವಕ್ಕೆ ಸವಾಲು; ಬೆನ್‌ ಸ್ಟೋಕ್ಸ್ ಮೇಲೆ ಕಣ್ಣು
Last Updated 31 ಜುಲೈ 2019, 20:00 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಟೆಸ್ಟ್ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುವ ಆ್ಯಷಸ್ ಸರಣಿಯು ಈ ಬಾರಿ ಹೊಸದೊಂದು ಇತಿಹಾಸ ಬರೆಯಲಿದೆ.

136 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಸರಣಿಯು ಈ ಸಲ ಟೆಸ್ಟ್‌ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮುನ್ನುಡಿ ಬರೆಯಲಿದೆ. ದೀರ್ಘ ಮಾದರಿಯ ಕ್ರಿಕೆಟ್‌ ಉಳಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಯೋಜಿಸುತ್ತಿರುವ ಮಹತ್ವಾಕಾಂಕ್ಷೆಯ ಟೂರ್ನಿ ಇದಾಗಿದೆ. ಸುಮಾರು ಎರಡು ವರ್ಷ ನಡೆಯಲಿರುವ ಟೂರ್ನಿಯಲ್ಲಿ ಒಂಬತ್ತು ದೇಶಗಳ ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡಲಿವೆ. ಅದರ ಅಂಗವಾಗಿ ಆ್ಯಷಸ್ ಮೊದಲ ಸರಣಿಯಾಗಲಿದೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಪಾಲಿಗೆ ಇದು ಪ್ರತಿಷ್ಠೆಯ ಹಣಾಹಣಿಯೂ ಹೌದು. ಹೋದ ಸಲ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳಲು ಆತಿಥೇಯ ಇಂಗ್ಲೆಂಡ್ ಕಾದು ಕುಳಿತಿದೆ. ತಂಡದ ನಾಯಕತ್ವವನ್ನು ಜೋ ರೂಟ್ ವಹಿಸಲಿದ್ದಾರೆ. ಏಕದಿನ ವಿಶ್ವಕಪ್ ಗೆದ್ದಿರುವ ಇಂಗ್ಲೆಂಡ್ ತಂಡವು ಈಚೆಗಷ್ಟೇ ಐರ್ಲೆಂಡ್‌ ಎದುರಿನ ಏಕೈಕ ಟೆಸ್ಟ್‌ನಲ್ಲಿಯೂ ಜಯಿಸಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಆಲೌಟ್ ಆಗಿದ್ದ ಇಂಗ್ಲೆಂಡ್ ಮತ್ತೆ ಪುಟಿದೆದ್ದು ಜಯಿಸಿತ್ತು.

ತಂಡಕ್ಕೆ ಜಾನಿ ಬೇಸ್ಟೊ, ಜೋಸ್ ಬಟ್ಲರ್, ಜೇಸನ್ ರಾಯ್, ರೋರಿ ಬರ್ನ್ಸ್‌ ಅವರು ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಬೆನ್ ಸ್ಟೋಕ್ಸ್‌ ಅವರ ಆಲ್‌ರೌಂಡ್ ಆಟವು ರಂಗೇರುವ ನಿರೀಕ್ಷೆ ಇದೆ. ಉಪನಾಯಕರೂ ಆಗಿರುವ ಬೆನ್, ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಪರಾಕ್ರಮ ಮೆರೆಯಲು ಸಿದ್ಧರಾಗಿದ್ದಾರೆ. ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಅವರನ್ನು ಎದುರಿಸಲು ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಯುವ ವಿಶೇಷ ಯೋಜನೆ ರೂಪಿಸುವುದು ಅನಿವಾರ್ಯ.

ಆಸ್ಟ್ರೇಲಿಯಾ ತಂಡವು ಟಿಮ್ ಪೆನ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ನಿಷೇಧ ಶಿಕ್ಷೆಯ ನಂತರ ಮೊದಲ ಆ್ಯಷಸ್ ಸರಣಿ ಆಡಲಿರುವ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್‌ ಅವರು ರನ್‌ ಹೊಳೆ ಹರಿಸುವ ಕಾತುರದಲ್ಲಿದ್ದಾರೆ. ಸ್ಪಿನ್ನರ್ ನೇಥನ್ ಲಯನ್, ವೇಗಿಗಳಾದ ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್‌, ಆಲ್‌ರೌಂಡರ್ ಜೋಶ್ ಹ್ಯಾಜಲ್‌ವುಡ್ ತಂಡದ ಬೌಲಿಂಗ್‌ನ ಬಲ ಹೆಚ್ಚಿಸುವಂತಹ ಆಟಗಾರರು. ತವರಿನಲ್ಲಿ ಯಾವಾಗಲೂ ದಿಟ್ಟ ಹೋರಾಟ ಮಾಡುವ ಇಂಗ್ಲೆಂಡ್ ತಂಡವನ್ನು ಎದುರಿಸುವುದು ಆಸ್ಟ್ರೇಲಿಯಾ ತಂಡಕ್ಕೆ ಕಠಿಣ. ಅದರಲ್ಲೂ ವಿಶ್ವಕಪ್ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಮಾಡುವತ್ತ ಎರಡೂ ತಂಡಗಳು ಕಣ್ಣಿಟ್ಟಿರುವುದರಿಂದ ರೋಚಕ ಹಣಾಹಣಿಯ ಸಾಧ್ಯತೆ ಇದೆ.

ಆರ್ಚರ್‌ಗೆ ಅವಕಾಶವಿಲ್ಲ
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರಿಗೆ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡುವ ಕಾಲ ಇನ್ನೂ ಕೂಡಿ ಬಂದಿಲ್ಲ.

ಗುರುವಾರ ಇಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ ತಂಡದಲ್ಲಿ ಅವರಿದ್ದಾರೆ. ಆದರೆ, ಕಣಕ್ಕಿಳಿಯುವ ಹನ್ನೊಂದು ಆಟಗಾರರ ಪಟ್ಟಿಯಲ್ಲಿ ಅವರನ್ನು ಆಯ್ಕೆ ಮಾಡಿಲ್ಲ. ಇದರಿಂದಾಗಿ ಅವರು ಸರಣಿಯ ಎರಡನೇ ಟೆಸ್ಟ್‌ ವರೆಗೂ ಕಾಯಬೇಕಿದೆ. ಬುಧವಾರ ಸಂಜೆ ಪ್ರಕಟಿಸಲಾಗಿರುವ ತಂಡದಲ್ಲಿ ವೇಗಿಗಳಾದ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ವೋಕ್ಸ್‌ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT