ನವದೆಹಲಿ: ಐಸಿಸಿಯಿಂದ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ಫೈನಲ್ ತಲುಪಿದರೆ ಮಾತ್ರ ಆಡಲು ಸಾಧ್ಯವಾಗುತ್ತದೆ.
ಚೀನಾದ ಹ್ಯಾಂಗ್‌ಝೌನಲ್ಲಿ ಸೆ.23ರಂದು ಏಷ್ಯನ್ ಗೇಮ್ಸ್ ಆರಂಭವಾಗಲಿದೆ. ಇದೇ ಮೊದಲ ಬಾರಿ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಅನ್ನು ಸೇರ್ಡಡೆಗೊಳಿಸಲಾಗಿದೆ. ಜೂನ್ 1ರ ಟಿ20 ರ‍್ಯಾಂಕಿಂಗ್ ಅನ್ವಯ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿವೆ.
ಬಾಂಗ್ಲಾದೇಶದ ವಿರುದ್ಧ ಅಂತಿಮ ಏಕದಿನ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ ಹರ್ಮನ್‌ಪ್ರೀತ್ ಕೌರ್ ಅವರಿಗೆ ಐಸಿಸಿ ಎರಡು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಿದೆ. ಹೀಗಾಗಿ, ಅವರು ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳನ್ನು ಆಡುವಂತಿಲ್ಲ.
ಭಾರತದ ಪುರುಷರ ತಂಡವನ್ನು ಋತುರಾಜ್ ಗಾಯಕವಾಡ್ ಮುನ್ನಡೆಸಲಿದ್ದಾರೆ. ಪುರುಷರ ವಿಭಾಗದಲ್ಲಿ 18 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 14 ತಂಡಗಳು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿವೆ. ಮಹಿಳೆಯರ ಕ್ರಿಕೆಟ್ ಪಂದ್ಯ ಸೆ.19ರಂದು ಆರಂಭವಾಗಲಿದ್ದು, ಸೆ. 26ರಂದು ಚಿನ್ನ ಮತ್ತು ಕಂಚಿನ ಪದಕಕ್ಕಾಗಿ ಹಣಾಹಣಿ ನಡೆಯಲಿದೆ.
ಪುರುಷರ ಕ್ರಿಕೆಟ್ ಪಂದ್ಯ ಸೆ.28ರಂದು ಆರಂಭವಾಗಲಿದ್ದು, ಅ.7ರಂದು ಅಂತಿಮ ಪಂದ್ಯಗಳು ನಡೆಯಲಿವೆ. ಭಾರತ ತಂಡ ಫೈನಲ್ ಪ್ರವೇಶಿಸಿದರೆ ಸತತ ಮೂರು ದಿನ ಪಂದ್ಯಗಳನ್ನು ಆಡಬೇಕಿದೆ. ಅ.5ರಂದು ಕ್ವಾರ್ಟರ್ ಫೈನಲ್, 6ರಂದು ಸೆಮಿಫೈನಲ್, 7ರಂದು ಫೈನಲ್ ಪಂದ್ಯಕ್ಕೆ ದಿನ ನಿಗದಿಯಾಗಿದೆ. ಈ ಮಧ್ಯೆ ಅ.5ರಂದು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.