ನವದೆಹಲಿ: ಬಹುನಿರೀಕ್ಷಿತ ಏಷ್ಯನ್ ಗೇಮ್ಸ್ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಒಂದು ವೇಳೆ ಭಾರತ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ನೇರವಾಗಿ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಅಂಪೈರ್‌ಗಳನ್ನು ಟೀಕಿಸಿದ್ದ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಬಾಂಗ್ಲಾ ಆಟಗಾರ್ತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಹರ್ಮನ್‌ಪ್ರೀತ್ ಮೇಲೆ ಐಸಿಸಿ ಎರಡು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಿತ್ತು.
ಟ್ವೆಂಟಿ-20 ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ ಭಾರತ ಮಹಿಳೆಯರ ತಂಡವು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಜೂನ್ 1ರಂದು ಬಿಡುಗಡೆಗೊಂಡ ಐಸಿಸಿ ರ‍್ಯಾಂಕಿಂಗ್ ಆಧಾರದಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಅಂತಿಮ ಎಂಟರ ಘಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿವೆ. ಭಾರತದೊಂದಿಗೆ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ.
ಹರ್ಮನ್‌ಗೆ ಎರಡು ಪಂದ್ಯಗಳ ನಿಷೇಧ ಹೇರಿದ್ದರಿಂದ ಕ್ವಾರ್ಟರ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಹಾಗಾಗಿ ಭಾರತ ತಂಡ ಫೈನಲ್‌ಗೆ ಪ್ರವೇಶಿಸಿದ್ದಲ್ಲಿ ಚಿನ್ನದ ಪದಕಕ್ಕಾಗಿನ ಹೋರಾಟದಲ್ಲಿ ಭಾರತ ತಂಡವನ್ನು ಹರ್ಮನ್ ಮುನ್ನಡೆಸುವ ಸಾಧ್ಯತೆಯಿದೆ.
ಚೀನಾದ ಹ್ಯಾಂಗ್‌ಜೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಕ್ರಿಕೆಟ್ ಸೆಪ್ಟೆಂಬರ್ 19ರಿಂದ ಆರಂಭವಾಗಿ 26ರವರೆಗೆ ನಡೆಯಲಿದೆ. ಮಹಿಳೆಯರ ಕ್ರಿಕೆಟ್‌ನಲ್ಲಿ ಒಟ್ಟು 14 ತಂಡಗಳು ಸ್ಪರ್ಧಿಸಲಿವೆ. ಹರ್ಮನ್ ಅಲಭ್ಯತೆಯಲ್ಲಿ ತಂಡಕ್ಕೆ ಸ್ಮೃತಿ ಮಂದಾನ ನಾಯಕಿಯಾಗುವ ಸಾಧ್ಯತೆಯಿದೆ.
ಪುರುಷರ ವಿಭಾಗದಲ್ಲೂ ಕ್ವಾರ್ಟರ್‌ಗೆ ಪ್ರವೇಶ...
ಪುರುಷರ ಕ್ರಿಕೆಟ್ ವಿಭಾಗದಲ್ಲೂ ಭಾರತ ತಂಡ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ. ಒಟ್ಟು 18 ತಂಡಗಳು ಭಾಗವಹಿಸುತ್ತಿದ್ದು, ಭಾರತ ತಂಡವನ್ನು ಋತುರಾಜ್ ಗಾಯಕವಾಡ್ ಮುನ್ನಡೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.