ಶುಕ್ರವಾರ, ಮಾರ್ಚ್ 31, 2023
32 °C

ಟಿ20 ವಿಶ್ವಕಪ್‌ ಪಾಕ್‌ ತಂಡಕ್ಕೆ ಬಾಬರ್‌ ನಾಯಕ: ಯಾರೆಲ್ಲ ಇದ್ದಾರೆ ತಂಡದಲ್ಲಿ?

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಆಸಿಫ್ ಅಲಿ ಮತ್ತು ಖುಷ್‌ದಿಲ್‌ ಶಾ ಸ್ಥಾನ ಪಡೆದಿದ್ದಾರೆ. ಬಾಬರ್‌ ಆಜಂ ನಾಯಕತ್ವದ 15 ಮಂದಿಯ ತಂಡಕ್ಕೆ ಅನುಭವಿ ಆಟಗಾರರಾದ ಫಖ್ರ್‌ ಜಮಾನ್ ಮತ್ತು ವಿಕೆಟ್‌ ಕೀಪರ್ ಸರ್ಫರಾಜ್‌ ಅಹಮದ್‌ ಅವರನ್ನು ಪರಿಗಣಿಸಿಲ್ಲ.

ಜಮಾನ್ ಕಾಯ್ದಿರಿಸಿದ ಆಟಗಾರನಾಗಿ ತಂಡದೊಂದಿಗೆ ತೆರಳಲಿದ್ದಾರೆ.

ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ಎದುರು ಕಣಕ್ಕಿಳಿಯಲಿದೆ. ದುಬೈನಲ್ಲಿ ಅಕ್ಟೋಬರ್ 24ರಂದು ಈ ಪಂದ್ಯ ನಿಗದಿಯಾಗಿದೆ.

ತಂಡ ಇಂತಿದೆ: ಬಾಬರ್ ಆಜಂ (ನಾಯಕ), ಶಾದಾನ್ ಖಾನ್ (ಉಪನಾಯಕ), ಆಸಿಫ್ ಅಲಿ, ಅಜಮ್‌ ಖಾನ್‌, ಹ್ಯಾರಿಸ್‌ ರವೂಫ್‌, ಹಸನ್ ಅಲಿ, ಇಮದ್ ವಾಸೀಂ, ಖುಷ್‌ದಿಲ್ ಶಾ, ಮೊಹಮ್ಮದ್ ಹಫೀಜ್‌, ಮೊಹಮ್ಮದ್ ಹಸ್ನೈನ್‌, ಮೊಹಮ್ಮದ್ ನವಾಜ್‌, ಮೊಹಮ್ಮದ್ ರಿಜ್ವಾನ್‌, ಮೊಹಮ್ಮದ್ ವಾಸೀಂ ಜೂನಿಯರ್‌, ಶಾಹೀನ್ ಶಾ ಅಫ್ರಿದಿ, ಶೋಯಬ್ ಮಸೂದ್.

ಮಿಸ್ಬಾ, ಯೂನಿಸ್‌ ರಾಜೀನಾಮೆ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಮಿಸ್ಬಾ ಉಲ್ ಹುಕ್‌ ಹಾಗೂ ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಒಂದು ತಿಂಗಳು ದೂರ ಇರುವಂತೆಯೇ ಇವರಿಬ್ಬರ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಸೋಮವಾರ ಈ ವಿಷಯ ತಿಳಿಸಿದ್ದು, ಸದ್ಯ ಮಾಜಿ ಆಟಗಾರರಾದ ಸಕ್ಲೇನ್ ಮುಷ್ತಾಕ್ ಮತ್ತು ಅಬ್ದುಲ್ ರಜಾಕ್‌ ಹಂಗಾಮಿ ಕೋಚ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ.

ಪಾಕಿಸ್ತಾನ ಟೆಸ್ಟ್ ತಂಡದ ಮಾಜಿ ನಾಯಕ ರಮೀಜ್ ರಾಜಾ ಅವರು ಇದೇ 13ಕ್ಕೆ ಪಿಸಿಬಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅದಕ್ಕೂ ಮೊದಲೇ ಈ ಹಠಾತ್‌ ಬೆಳವಣಿಗೆ ಕಾಕತಾಳೀಯ ಎನಿಸಿದೆ.

ರಮೀಜ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮಿಸ್ಬಾ ಮತ್ತು ವಕಾರ್‌ ಶ್ರೇಷ್ಠ ತರಬೇತುದಾರರೆಂದು ತಾನು ಭಾವಿಸುವುದಿಲ್ಲ‘ ಎಂದಿದ್ದರು.

ಸೋಮವಾರ ಪ್ರಕಟಿಸಲಾದ ಟಿ20 ವಿಶ್ವಕಪ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ರಮೀಜ್ ತಮ್ಮ ಪ್ರಭಾವ ಬಳಸಿದ್ದು, ಯುವ ಆಟಗಾರರು ಮತ್ತು ಬಿರುಸಿನ ಹೊಡೆತಗಳ ಆಟಗಾರರತ್ತ ಒಲವು ತೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು