ಮಂಗಳವಾರ, ಮಾರ್ಚ್ 21, 2023
25 °C

ದ.ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಗೆಲುವು;WTC ಫೈನಲ್‌ನತ್ತ ಆಸೀಸ್ ದಿಟ್ಟ ಹೆಜ್ಜೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. 

ಮೆಲ್ಬರ್ನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 182 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಕಾಂಗರೂ ಪಡೆ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ಗೆಲುವು ದಾಖಲಿಸಿದೆ. 

ಮತ್ತೊಂದೆಡೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾದ ಫೈನಲ್ ಪ್ರವೇಶ ಮತ್ತಷ್ಟು ಕ್ಷೀಣವೆನಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. 

14 ಪಂದ್ಯಗಳಲ್ಲಿ 132 ಅಂಕ ಸಂಪಾದಿಸಿರುವ ಆಸ್ಟ್ರೇಲಿಯಾ, ಶೇಕಡಾ 78.57ದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. 

ಅಗ್ರ ಎರಡು ತಂಡಗಳು ಫೈನಲ್‌ಗೆ ಲಗ್ಗೆಯಿಡಲಿವೆ. ಬಾಂಗ್ಲಾದೇಶ ವಿರುದ್ಧದ ಸರಣಿ ಗೆಲುವಿನೊಂದಿಗೆ ಭಾರತ (58.93%) ಎರಡನೇ ಸ್ಥಾನಕ್ಕೇರಿದೆ.  ಶ್ರೀಲಂಕಾ ಮೂರು (53.33%) ಮತ್ತು ದಕ್ಷಿಣ ಆಫ್ರಿಕಾ (50%) ನಾಲ್ಕನೇ ಸ್ಥಾನದಲ್ಲಿದೆ. 

ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿವೆ. 

100ನೇ ಪಂದ್ಯದಲ್ಲಿ ವಾರ್ನರ್ ದ್ವಿಶತಕ... 
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ (27ಕ್ಕೆ 5 ವಿಕೆಟ್) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 189 ರನ್‌ಗಳಿಗೆ ಕುಸಿಯಿತು. 

ಬಳಿಕ ತಮ್ಮ 100ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಿಡಿಸಿದ ದ್ವಿಶತಕದ ನೆರವಿನಿಂದ ಆಸ್ಟ್ರೇಲಿಯಾ ಎಂಟು ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಅಲೆಕ್ಸ್ ಕ್ಯಾರಿ (111), ಸ್ಟೀವ್ ಸ್ಮಿತ್ (85), ಟ್ರಾವಿಸ್ ಹೆಡ್ (51) ಮತ್ತು ಗ್ರೀನ್ (51*) ಉಪಯುಕ್ತ ಕಾಣಿಕೆ ನೀಡಿದರು. 

ದ್ವಿತೀಯ ಇನ್ನಿಂಗ್ಸ್‌ನಲ್ಲೂ ವೈಫಲ್ಯ ಕಂಡ ದಕ್ಷಿಣ ಆಫ್ರಿಕಾ ಕೇವಲ 204ಕ್ಕೆ ಆಲೌಟ್ ಆಯಿತು. ತೆಂಬ ಬಾವುಮಾ 65 ರನ್ ಗಳಿಸಿದರು. ಆಸೀಸ್ ಪರ ನಥನ್ ಲಯನ್ ಮೂರು ವಿಕೆಟ್ ಕಬಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು