ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs WI | ವಿಂಡೀಸ್‌ಗೆ ಮುಖಭಂಗ: 6.5 ಓವರುಗಳಲ್ಲಿ ಗೆದ್ದ ಆಸ್ಟ್ರೇಲಿಯಾ!

Published 6 ಫೆಬ್ರುವರಿ 2024, 13:17 IST
Last Updated 6 ಫೆಬ್ರುವರಿ 2024, 13:17 IST
ಅಕ್ಷರ ಗಾತ್ರ

ಕೆನ್‌ಬೆರ್‍ರಾ: ವೆಸ್ಟ್‌ ಇಂಡೀಸ್ ತಂಡವನ್ನು 83 ರನ್‌ಗಳಿಗೆ ಉರುಳಿಸಿದ ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ರೀತಿಯಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಬರೇ 6.5 ಓವರುಗಳಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆ ಮೂಲಕ ವೆಸ್ಟ್‌ ಇಂಡೀಸ್ ತಂಡ ಸರಣಿಯಲ್ಲಿ 0–3 ಅಂತರದಲ್ಲಿ ಮುಖಭಂಗ ಅನುಭವಿಸಿತು.

ಕ್ಸೇವಿಯರ್ ಬಾರ್ಟ್ಲೆಟ್‌ 21 ರನ್ನಿಗೆ 4 ವಿಕೆಟ್ ಪಡೆದು ಪ್ರವಾಸಿ ತಂಡದ ಇನಿಂಗ್ಸ್ ಧ್ವಂಸಗೊಳಿಸಿದರು. ಆರಂಭ ಆಟಗಾರ ಅಲಿಕ್ ಅಥನೇಜ್ ಗಳಿಸಿದ 32 ರನ್‌ಗಳೇ ವೈಯಕ್ತಿಕ ಗರಿಷ್ಠಮೊತ್ತ. ಇತರೆ ರೂಪದಲ್ಲಿ ಬಂದ 13 ರನ್‌ಗಳೇ ಎರಡನೇ ಅತ್ಯಧಿಕ ಎನಿಸಿದವು. ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬಾರ್ಟ್ಲೆಟ್‌ ಅಲ್ಲಿ 17 ರನ್ನಿಗೆ 4 ವಿಕೆಟ್ ಪಡೆದಿದ್ದರು.

ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌, ಜೋಶ್ ಹ್ಯಾಜಲ್‌ವುಡ್‌ ಇಲ್ಲದೇ ಆಸ್ಟ್ರೇಲಿಯಾ ಕಣಕ್ಕಿಳಿದರೂ, ಬಾರ್ಟ್ಲೆಟ್‌ ಆ ಕೊರತೆ ನೀಗಿಸಿದರು.

ಆಸ್ಟ್ರೇಲಿಯಾ ಪರ 21 ವರ್ಷದ ಸ್ಫೋಟಕ ಹೊಡೆತಗಳ ಆಟಗಾರ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ 18 ಎಸೆತಗಳಲ್ಲಿ 41 ರನ್‌ ಚಚ್ಚಿದರೆ, ಜೋಶ್ ಇಂಗ್ಲಿಸ್‌ 16 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿ ವೆಸ್ಟ್ ಇಂಡೀಸ್ ದಾಳಿ ಧೂಳೀಪಟಗೊಳಿಸಿದರು. ಕೇವಲ 4.3 ಓವರುಗಳಲ್ಲಿ 67 ರನ್‌ಗಳು ಬಂದವು.

ಸ್ಕೋರುಗಳು: ವೆಸ್ಟ್‌ ಇಂಡೀಸ್‌: 24.1 ಓವರುಗಳಲ್ಲಿ 86 (ಅಲಿಕ್ ಅಥನೇಜ್ 32; ಕ್ಸೇವಿಯರ್ ಬಾರ್ಟ್ಲೆಟ್‌ 21ಕ್ಕೆ4, ಲ್ಯಾನ್ಸ್ ಮಾರಿಸ್ 13ಕ್ಕೆ2, ಆ್ಯಡಂ ಜಂಪಾ 14ಕ್ಕೆ2); ಆಸ್ಟ್ರೇಲಿಯಾ: 6.5 ಓವರುಗಳಲ್ಲಿ 2 ವಿಕೆಟ್‌ಗೆ 87 (ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ 41, ಜೋಶ್ ಇಂಗ್ಲಿಷ್ ಔಟಾಗದೇ 35).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT