ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಅಲ್ಪ ಮುನ್ನಡೆ: ಮತ್ತೆ ಮುಗ್ಗರಿಸಿದ ಇಂಗ್ಲೆಂಡ್

ಎಂಸಿಜಿಯಲ್ಲಿ ವೇಗಿಗಳ ದರಬಾರು; ಆ್ಯಂಡರ್ಸನ್‌ಗೆ ನಾಲ್ಕು ವಿಕೆಟ್
Last Updated 27 ಡಿಸೆಂಬರ್ 2021, 12:05 IST
ಅಕ್ಷರ ಗಾತ್ರ

ಮೆಲ್ಬರ್ನ್: ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಿದರು. ಅವರ ಶಿಸ್ತಿನ ದಾಳಿಯಿಂದಾಗಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮುನ್ನಡೆ ಗಳಿಸಲು ಮಾತ್ರ ಸಾಧ್ಯವಾಯಿತು.

ಇದರಿಂದಾಗಿ ಇಂಗ್ಲೆಂಡ್ ತಂಡಕ್ಕೆ ಮರುಹೋರಾಟ ಮಾಡುವ ಅವಕಾಶ ದೊರೆಯಿತು. ಆದರೆ, ಎರಡನೇ ಇನಿಂಗ್ಸ್‌ನ ಆರಂಭದಲ್ಲಿಯೇ ಪ್ರವಾಸಿ ಬಳಗವು ಮುಗ್ಗರಿಸಿತು. ಪಂದ್ಯದ ಮೊದಲ ದಿನವಾದ ಭಾನುವಾರ ಇಂಗ್ಲೆಂಡ್ ತಂಡವು 185 ರನ್‌ಗಳಿಗೆ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ 87.5 ಓವರ್‌ಗಳಲ್ಲಿ 267 ರನ್ ಗಳಿಸಿತು. ಆತಿಥೇಯ ಬಳಗವು 82 ರನ್‌ಗಳ ಮುನ್ನಡೆ ಗಳಿಸಿತು. ಸೋಮವಾರ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ದಿನದಾಟದ ಮುಕ್ತಾಯಕ್ಕೆ 12 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 31 ರನ್ ಗಳಿಸಿದೆ. ನಾಯಕ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್‌ ಕ್ರೀಸ್‌ನಲ್ಲಿದ್ದಾರೆ.

ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಪ್ರವಾಸಿ ಬಳಗವು ಇಲ್ಲಿಯೂ ಆತಂಕ ಎದುರಿಸುತ್ತಿದೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿಯಿದೆ.

ಬೆಳಿಗ್ಗೆ ಆಸ್ಟ್ರೇಲಿಯಾದ ಇನಿಂಗ್ಸ್‌ಗೆ ಬಲ ತುಂಬಿದ್ದು ಆರಂಭಿಕ ಬ್ಯಾಟರ್ ಮಾರ್ಕಸ್ ಹ್ಯಾರಿಸ್ (76; 189ಎ, 4X7) ಅವರ ಆಟ. ಡೇವಿಡ್ ವಾರ್ನರ್ ಮೊದಲ ದಿನ ಸಂಜೆಯೇ ಔಟಾಗಿದ್ದರು.

ರಾತ್ರಿ ಕಾವಲುಗಾರ ನೇಥನ್ ಲಯನ್ (10; 22ಎ) ಮತ್ತು ಹೋದ ಪಂದ್ಯದಲ್ಲಿ ಶತಕ ಬಾರಿಸಿದ್ದ ಮಾರ್ನಸ್ ಲಾಬುಷೇನ್ (1 ರನ್) ಬೇಗನೆ ನಿರ್ಗಮಿಸಿದರು. ಇದರಿಂದಾಗಿ ತಂಡವು 84 ರನ್‌ಗಳಿಗೇ ಮೂರು ವಿಕೆಟ್ ಕಳೆದುಕೊಂಡಿತು.

ಊಟದ ವಿರಾಮದ ನಂತರವೂ ತಂಡದ ಪತನ ಮುಂದುವರಿಯಿತು. ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಸ್ಟೀವ್ ಸ್ಮಿತ್ (16 ರನ್) ಮತ್ತು ಟ್ರಾವಿಸ್ ಹೆಡ್ (27 ರನ್) ಔಟಾಗಿದ್ದು ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಬಿತ್ತು.

ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಹ್ಯಾರಿಸ್ ಮಾತ್ರ ಗಟ್ಟಿಯಾಗಿ ನಿಂತರು. ತಾಳ್ಮೆಯಿಂದ ರನ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡವು ಇನಿಂಗ್ಸ್ ಹಿನ್ನಡೆಯ ಆತಂಕದಿಂದ ತಪ್ಪಿಸಿಕೊಂಡಿತು.

ಇಂಗ್ಲೆಂಡ್‌ ತಂಡದ ಮಾರ್ಕ್ ವುಡ್, ಒಲಿ ರಾಬಿನ್ಸನ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು.ಕೆಳ ಕ್ರಮಾಂಕದಲ್ಲಿ ನಾಯಕ ಪ್ಯಾಟ್ ಕಮಿನ್ಸ್ (21; 32ಎ) ಮತ್ತು ಮಿಚೆಲ್ ಸ್ಟಾರ್ಕ್ (ಔಟಾಗದೆ 24; 37ಎ) ನೀಡಿದ ಕಾಣಿಕೆಯಿಂದಾಗಿ ತಂಡದ ಮೊತ್ತ ಸ್ವಲ್ಪ ಮಟ್ಟಿಗೆ ಏರಿತು.

ಬೌಲಿಂಗ್‌ನಲ್ಲಿಯೂ ಮಿಂಚಿದ ಸ್ಟಾರ್ಕ್ ಎಸೆತಗಳಿಗೆ ಜ್ಯಾಕ್ ಕ್ರಾಲಿ ಮತ್ತು ಡೆವಿಡ್ ಮಲಾನ್ ಪೆವಿಲಿಯನ್‌ಗೆ ಮರಳಿದರು. ಮಲಾನ್ ಖಾತೆಯನ್ನೂ ತೆರೆಯಲಿಲ್ಲ. ಜ್ಯಾಕ್ ಲೀಚ್ ಗೆ ಖಾತೆ ತೆರೆಯಲು ಸ್ಕಾಟ್ ಬೊಲ್ಯಾಂಡ್ ಬಿಡಲಿಲ್ಲ. ಆರಂಭಿಕ ಬ್ಯಾಟರ್ ಹಸೀಬ್ ಹಮೀದ್ ವಿಕೆಟ್ ಕೂಡ ಸ್ಕಾಟ್ ಪಾಲಾಯಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಇಂಗ್ಲೆಂಡ್: 65.1 ಓವರ್‌ಗಳಲ್ಲಿ 185, ಆಸ್ಟ್ರೇಲಿಯಾ: 87.5 ಓವರ್‌ಗಳಲ್ಲಿ 267 (ಮಾರ್ಕಸ್ ಹ್ಯಾರಿಸ್ 76, ಡೇವಿಡ್ ವಾರ್ನರ್ 38, ಟ್ರಾವಿಸ್ ಹೆಡ್ 27, ಪ್ಯಾಟ್ ಕಮಿನ್ಸ್ 21, ಮಿಚೆಲ್ ಸ್ಟಾರ್ಕ್ ಔಟಾಗದೆ 24, ಜೇಮ್ಸ್ ಆ್ಯಂಡರ್ಸನ್ 33ಕ್ಕೆ4, ಒಲಿ ರಾಬಿನ್ಸನ್ 64ಕ್ಕೆ2, ಮಾರ್ಕ್ ವುಡ್ 71ಕ್ಕೆ2) ಎರಡನೇ ಇನಿಂಗ್ಸ್: ಇಂಗ್ಲೆಂಡ್: 12 ಓವರ್‌ಗಳಲ್ಲಿ 4ಕ್ಕೆ31 (ಜೋ ರೂಟ್ ಬ್ಯಾಟಿಂಗ್ 12, ಬೆನ್ ಸ್ಟೋಕ್ಸ್ ಬ್ಯಾಟಿಂಗ್ 2, ಮಿಚೆಲ್ ಸ್ಟಾರ್ಕ್ 11ಕ್ಕೆ2, ಸ್ಕಾಟ್ ಬೊಲ್ಯಾಂಡ್ 1 ರನ್‌ಗೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT