ಟೆಸ್ಟ್ ಸಾಧಕರಿಗೆ ಏಕದಿನ ಸವಾಲು

7
ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದು ಆರಂಭ

ಟೆಸ್ಟ್ ಸಾಧಕರಿಗೆ ಏಕದಿನ ಸವಾಲು

Published:
Updated:
Prajavani

ಸಿಡ್ನಿ: ಟೆಸ್ಟ್ ಸರಣಿಯನ್ನು ಗೆದ್ದು ದಾಖಲೆ ನಿರ್ಮಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಈಗ ಏಕದಿನ ಕ್ರಿಕೆಟ್‌ನ ಸವಾಲು.
ಶನಿವಾರ ಇಲ್ಲಿ ಆರಂಭವಾಗಲಿವ ಮೂರು ಪಂದ್ಯಗಳ ಸರಣಿ, ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಉಭಯ ತಂಡಗಳಿಗೂ ಮಹತ್ವದ್ದು.

ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್‌.ರಾಹುಲ್ ಅವರ ಅಕ್ಷೇಪಾರ್ಹ ಹೇಳಿಕೆಯಿಂದ ಭಾರತದ ಕ್ರಿಕೆಟ್ ಕ್ಷೇತ್ರ ಬೇಸರಗೊಂಡಿದೆ. ಆದರೆ ತಂಡದ ಸಾಮರ್ಥ್ಯದ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರದು ಎಂದು ನಾಯಕ ವಿರಾಟ್ ಕೊಹ್ಲಿ ಪರೋಕ್ಷವಾಗಿ ಹೇಳಿದ್ದಾರೆ.

‘ಅದು ಅವರಿಬ್ಬರ ವೈಯಕ್ತಿಕ ಹೇಳಿಕೆ. ಅವರ ಬಾಯಿಂದ ಅಂಥ ಮಾತುಗಳು ಬಂದಿವೆ. ಈಗ ಅವರಿಗೆ ಅದರ ಪರಿಣಾಮ ಅರ್ಥವಾಗಿದೆ. ಅಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಅನಗತ್ಯ’ ಎಂದು ಕೊಹ್ಲಿ ಹೇಳಿದ್ದಾರೆ.

ಇವರಿಬ್ಬರನ್ನೂ ಬಿಸಿಸಿಐ ಅಮಾನತು ಮಾಡಿದೆ. ರಾಹುಲ್ ಇತ್ತೀಚೆಗೆ ಫಾರ್ಮ್‌ನಲ್ಲಿಲ್ಲ. ಆದರೆ ಪಾಂಡ್ಯ ಅನುಪಸ್ಥಿತಿ ತಂಡದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜಸ್‌ಪ್ರೀತ್ ಬೂಮ್ರಾ ಅವರಿಗೆ ಈಗಾಗಲೇ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಈಗ ಪಾಂಡ್ಯ ಕೂಡ ಹೊರಗೆ ಉಳಿಯಬೇಕಾಗಿದೆ. ಆದ್ದರಿಂದ ಬೌಲಿಂಗ್‌ ವಿಭಾಗವನ್ನು ಸರಿದೂಗಿಸುವುದು ವಿರಾಟ್ ಕೊಹ್ಲಿಗೆ ಸವಾಲಾಗಿದೆ.

ಭುವನೇಶ್ವರ್ ಕುಮಾರ್ ಜೊತೆ ಮೊಹಮ್ಮದ್ ಶಮಿ ಮತ್ತು ಖಲೀಲ್ ಅಹಮ್ಮದ್ ಅವರನ್ನು ಕಣಕ್ಕೆ ಇಳಿಸಲು ಕೊಹ್ಲಿ ಮುಂದಾಗುವ ಸಾಧ್ಯತೆ ಇದೆ. ಸ್ಪಿನ್‌ಗೂ ಅನುಕೂಲಕರ ವಾತಾವರಣ ಇರುವುದರಿಂದ ಇಬ್ಬರು ಸ್ಪಿನ್ನರ್‌ಗಳಿಗೂ
ಅವಕಾಶ ನೀಡುವ ಸಾಧ್ಯತೆ ನಿಚ್ಚಳವಾಗಿದ್ದು ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರಿಗೆ ಅವಕಾಶ ಸಿಗಲಿದೆ.

ಭಾರತದ ಆರಂಭಿಕ ಜೋಡಿ ಬಲಿಷ್ಠವಾಗಿದ್ದು ಮಧ್ಯಮ ಕ್ರಮಾಂಕಕ್ಕೆ ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ ಮತ್ತು ಅಂಬಟಿ ರಾಯುಡು ಅವರ ಬಲವಿದೆ. ಕಳೆದ ವರ್ಷ ನಿರೀಕ್ಷಿತ ಸಾಮರ್ಥ್ಯ ತೋರಲಾಗದ ಧೋನಿ ವಿಶ್ವಕಪ್‌ ಟೂರ್ನಿಗೆ ಮುನ್ನ ಫಾರ್ಮ್‌ಗೆ ಮರಳಲು ಈ ಸರಣಿ ಸಹಕಾರಿಯಾಗಲಿದೆ.

ಮತ್ತೆ ಸ್ಮಿತ್‌, ವಾರ್ನರ್ ಕನವರಿಕೆ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ ಅವರ ಅನುಪಸ್ಥಿತಿ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಇದೀಗ ಏಕದಿನ ಸರಣಿಯಲ್ಲೂ ಅವರ ‘ಕೊರತೆ’ ತಂಡಕ್ಕೆ ಕಾಡಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಮಿಷೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಪೀಟರ್ ಸಿಡ್ಲ್‌, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌ ಮುಂತಾದವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಪಂದ್ಯ ಆರಂಭ: ಬೆಳಿಗ್ಗೆ 7.50 (ಭಾರತೀಯ ಕಾಲಮಾನ)
ಸ್ಥಳ: ಎಸ್‌ಜಿಜಿ ಕ್ರೀಡಾಂಗಣ, ಸಿಡ್ನಿ
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !