ಶುಕ್ರವಾರ, ಮೇ 29, 2020
27 °C

ಬಾರ್ಡರ್‌–ಗಾವಸ್ಕರ್ ಟ್ರೋಫಿ: ಮೊದಲ ಪಂದ್ಯ ಗೆಲ್ಲಲು ಉಭಯ ತಂಡಗಳಿಗೆ ಸಮಾನ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್‌: ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡದೆದುರು ನಡೆಯುತ್ತಿರುವ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 323 ರನ್‌ಗಳ ಸವಾಲಿನ ಗುರಿ ನೀಡಿದೆ. ಇನ್ನೂ ಒಂದು ದಿನದ ಆಟ ಬಾಕಿ ಉಳಿದಿದ್ದು, ಉಭಯ ತಂಡಗಳಿಗೂ ಪಂದ್ಯ ಗೆಲ್ಲಲು ಸಮಾನ ಅವಕಾಶ ಇದೆ.

ಗುರುವಾರ ಟಾಸ್‌ಗೆದ್ದು ಬ್ಯಾಟಿಂಗ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಬಳಗ ಮೊದಲ ಇನಿಂಗ್ಸ್‌ನಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 250 ರನ್‌ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಟಿಮ್‌ ಪೇನ್‌ ಬಳಗ 235 ರನ್‌ಗಳಿಗೆ ಆಲೌಟ್‌ ಆಗಿತ್ತು. ಬೌಲರ್‌ಗಳು ಮೇಲುಗೈ ಸಾಧಿಸಿದ್ದ ಇನಿಂಗ್ಸ್‌ನಲ್ಲಿ ಭಾರತ ಪರ ಚೇತೇಶ್ವರ ಪೂಜಾರ ಶತಕ(123) ಹಾಗೂ ಆಸೀಸ್‌ ಪರ ಟ್ರಾವಿಸ್‌ ಹೆಡ್‌ ಅರ್ಧ ಶತಕ(72) ಬಾರಿಸಿ ತಮ್ಮ ತಂಡಗಳಿಗೆ ನೆರವಾಗಿದ್ದರು.

15 ರನ್‌ಗಳ ಅಲ್ಪ ಮುನ್ನಡೆ ಪಡೆದು ಬ್ಯಾಟಿಂಗ್‌ ಆರಂಭಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗಳಿಸಿ ಆಲೌಟ್‌ ಆಗಿದೆ. ಅನುಭವಿ ಆಟಗಾರ ಪೂಜಾರ(71) ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ(70) ಅರ್ಧ ಶತಕ ಗಳಿಸಿ ನೆರವಾದರು. ಆಸಿಸ್‌ ಪರ ಭರ್ತಿ 42 ಓವರ್‌ ಎಸೆದ ಸ್ಪಿನ್ನರ್‌ ನೇಥನ್‌ ಲಿಯೊನ್‌ 122 ರನ್‌ ನೀಡಿ 6 ವಿಕೆಟ್‌ ಪಡೆದು ಮಿಂಚಿದರು. ಮೂರು ವಿಕೆಟ್‌ ಪಡೆದ ವೇಗಿ ಮಿಚೇಲ್‌ ಸ್ಟಾರ್ಕ್‌ ಲಿಯೊನ್‌ಗೆ ಉತ್ತಮ ಬೆಂಬಲ ನೀಡಿದರು.

ಸದ್ಯ ಎರಡನೇ ಇನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ 5 ಓವರ್‌ಗಳ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್‌ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಆ್ಯರೋನ್‌ ಫಿಂಚ್(4) ಮತ್ತು ಮಾರ್ಕಸ್‌ ಹ್ಯಾರಿಸ್‌(2) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು