ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 22 ಏಕದಿನ ಪಂದ್ಯಗಳಲ್ಲಿ ಗೆಲುವು; ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ದಾಖಲೆ

ಸತತ 22ನೇ ಏಕದಿನ ಪಂದ್ಯದಲ್ಲಿ ಗೆಲುವು
Last Updated 4 ಏಪ್ರಿಲ್ 2021, 10:34 IST
ಅಕ್ಷರ ಗಾತ್ರ

ಮೌಂಟ್ ಮಾಂಗನೂಯಿ, ನ್ಯೂಜಿಲೆಂಡ್‌: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಸತತ 22 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ರಿಕಿ ಪಾಂಟಿಂಗ್ ನೇತೃತ್ವದ ತಂಡ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿಹಾಕಿದೆ. ನ್ಯೂಜಿಲೆಂಡ್ ತಂಡದ ಎದುರು ಭಾನುವಾರ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸುವುದರೊಂದಿಗೆ ಆಸ್ಟ್ರೇಲಿಯಾ ಮಹಿಳೆಯರು ಈ ಸಾಧನೆ ಮಾಡಿದರು.

2003ರಲ್ಲಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ಸತತ 21 ಪಂದ್ಯಗಳಲ್ಲಿ ವಿಜಯಪತಾಕೆ ಹಾರಿಸಿತ್ತು.

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಲ್ಕು ವಿಕೆಟ್‌ ಗಳಿಸಿದ ಮೆಗನ್ ಶುಟ್, ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆತಿಥೇಯ ತಂಡ 212 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಲಾರೆನ್ ಡಾನ್‌ (90) ಉತ್ತಮವಾಗಿ ಬ್ಯಾಟ್ ಬೀಸಿದರು.

ಅಲಿಸ್ಸಾ ಹೀಲಿ (65) ಹಾಗೂ ಎಲಿಸ್‌ ಪೆರಿ (ಔಟಾಗದೆ 56) ಹಾಗೂ ಆ್ಯಷ್ಲೆ ಗಾರ್ಡನರ್‌ (ಔಟಾಗದೆ 53) ಸೊಗಸಾದ ಅರ್ಧಶತಕಗಳನ್ನು ಸಿಡಿಸಿ ಪ್ರವಾಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಇನ್ನೂ 69 ಎಸೆತಗಳು ಬಾಕಿ ಇರುವಂತೆಯೇ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು ಜಯದ ದಡ ತಲುಪಿತು.

‘ಬಹಳ ದಿನಗಳ ಬಳಿಕ ತಂಡದಿಂದ ಇಂತಹ ಮಹಾನ್ ಸಾಧನೆ ಮೂಡಿಬಂದಿದೆ‘ ಎಂದು ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದರು.

ಸದರ್ನ್ ಸ್ಟಾರ್ಸ್ ಎಂದು ಕರೆಯಲಾಗುವ ಆಸ್ಟ್ರೇಲಿಯಾ ಮಹಿಳಾ ತಂಡ 2007ರ ಅಕ್ಟೋಬರ್‌ನಿಂದ ಒಂದೂ ಪಂದ್ಯ ಸೋತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT