ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಾಬರ್ ಆಜಂ

Last Updated 15 ಅಕ್ಟೋಬರ್ 2021, 12:00 IST
ಅಕ್ಷರ ಗಾತ್ರ

ದುಬೈ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲುವು ದಾಖಲಿಸುವ ವಿಶ್ವಾಸವನ್ನು ಪಾಕಿಸ್ತಾನ ನಾಯಕ ಬಾಬರ್ ಆಜಂ ವ್ಯಕ್ತಪಡಿಸಿದ್ದಾರೆ.

ಕಳೆದ 3-4 ವರ್ಷಗಳಲ್ಲಿ ಹೆಚ್ಚಾಗಿ ಯುಎಇನಲ್ಲೇ ಆಡಿರುವುದು ಮತ್ತು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿರುವುದರಿಂದ ಗೆಲುವು ದಾಖಲಿಸುವ ನಂಬಿಕೆಯನ್ನು ಹೊಂದಿದ್ದೇವೆ ಎಂದು ಬಾಬರ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 24 ಭಾನುವಾರ, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಆಡಿರುವ ಕೊನೆಯ ಆರು ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿದೆ.

'ನಾವು ಕಳೆದ ಮೂರು-ನಾಲ್ಕು ವರ್ಷಗಳಿಂದ ಯುಎಇನಲ್ಲಿ ಕ್ರಿಕೆಟ್ ಆಡುತ್ತಿದ್ದೇವೆ. ಅಲ್ಲದೆ ಇಲ್ಲಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದ್ದೇವೆ. ವಿಕೆಟ್ ಹೇಗೆ ವರ್ತಿಸುತ್ತದೆ ಮತ್ತು ಬ್ಯಾಟರ್‌ಗಳು ಹೇಗೆ ಹೊಂದಾಣಿಕೆ ಮಾಡಬೇಕಾಗುತ್ತದೆ ಎಂಬುದು ಗೊತ್ತಿದೆ. ಆ ನಿರ್ದಿಷ್ಟ ದಿನದಲ್ಲಿ ಉತ್ತಮವಾಗಿ ಆಡಿದ ತಂಡವು ಪಂದ್ಯ ಗೆಲ್ಲಲಿದೆ. ಆದರೆ ನೀವು ನನ್ನಲ್ಲಿ ಕೇಳಿದರೆ ನಾವೇ ಗೆಲ್ಲುತ್ತೇವೆ' ಎಂದು ಬಾಬರ್ ಉತ್ತರಿಸಿದರು.

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಎಂದೂ ಗೆದ್ದಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಬಾಬರ್, 'ಪ್ರತಿಯೊಂದು ಪಂದ್ಯವೂ ಅದರಲ್ಲೂ ವಿಶೇಷವಾಗಿ ಮೊದಲನೇಯ ಪಂದ್ಯದ ಒತ್ತಡ ಹಾಗೂ ತೀವ್ರತೆಯ ಬಗ್ಗೆ ತಿಳಿದಿದೆ. ಮೊದಲ ಪಂದ್ಯ ಗೆದ್ದು ಮುಂದಿನ ಪಂದ್ಯಗಳಲ್ಲಿ ಅದೇ ಆವೇಗ ಕಾಪಾಡಿಕೊಳ್ಳುವ ಭರವಸೆಯಿದೆ. ಟೂರ್ನಿಗೂ ಮುನ್ನ ವಿಶ್ವಾಸವು ಅತಿ ಮುಖ್ಯವೆನಿಸುತ್ತದೆ. ನಮ್ಮ ಆತ್ಮವಿಶ್ವಾಸ ಹಾಗೂ ಮನೋಬಲ ಉನ್ನತ ಮಟ್ಟದಲ್ಲಿದೆ. ನಾವು ಕಳೆದು ಹೋಗಿರುವುದರ ಬಗ್ಗೆ ಯೋಚಿಸುವುದಿಲ್ಲ. ಭವಿಷ್ಯದ ಬಗ್ಗೆ ಯೋಚಿಸುತ್ತೇವೆ. ಅದಕ್ಕಾಗಿ ತಯಾರಿ ನಡೆಸುತ್ತೇವೆ' ಎಂದಿದ್ದಾರೆ.

ಅಂದ ಹಾಗೆ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನು ಬಾಬರ್ ಆಜಂ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT