ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಕ್ಲೀನ್‌ಸ್ವೀಪ್ ಸಾಧನೆ

ಅಕ್ಷರ ಗಾತ್ರ

ಲೀಡ್ಸ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್‌ಸ್ವೀಪ್ ಗೆಲುವಿನ ಸಾಧನೆಗೈದಿದೆ.

ಲೀಡ್ಸ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ 296 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ ಮೂರು ವಿಕೆಟ್ ನಷ್ಟಕ್ಕೆಗೆಲುವಿನ ನಗೆ ಬೀರಿತು.

ಓಲಿ ಪೋಪ್ (82), ಜೋ ರೂಟ್ (86*) ಹಾಗೂ ಜಾನಿ ಬೆಸ್ಟೊ (71*) ಗೆಲುವಿನ ರೂವಾರಿ ಎನಿಸಿದರು.

ಕೊನೆಯ ದಿನದಲ್ಲಿ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿತ್ತು. ಅಂತಿಮ ದಿನದಾಟದಲ್ಲಿ ಕೇವಲ 15.2 ಓವರ್‌ಗಳಲ್ಲಿ ಗೆಲುವಿಗೆ ಬೇಕಾಗಿದ್ದ 113 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳು ಅಬ್ಬರಿಸಿದರು.

ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬೆಸ್ಟೊ, ಇಂಗ್ಲೆಂಡ್‌ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಅರ್ಧಶತಕದ ಸಾಧನೆ ಮಾಡಿದರು.

ಈ ಮೂಲಕ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ನಾಯಕತ್ವ ವಹಿಸಿದ ಚೊಚ್ಚಲ ಸರಣಿಯಲ್ಲೇ, ವಿಶ್ವ ಚಾಂಪಿಯನ್ ನ್ಯೂಜಿಲೆಂಡ್‌ಗೆ ವೈಟ್‌ವಾಶ್ ಬಳಿದ ಸಾಧನೆ ಮಾಡಿದರು.

ಈ ಮೊದಲು ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 326 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಅಜೇಯ 88, ಟಾಮ್ ಲೇಥಮ್ 76 ಹಾಗೂ ಡ್ಯಾರಿಲ್ ಮಿಚೆಲ್ 56 ರನ್ ಗಳಿಸಿದರು.

ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಐದು ವಿಕೆಟ್ ಪಡೆದರು. ಈ ಮೂಲಕ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ ಐದು ವಿಕೆಟ್ ಸೇರಿದಂತೆ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಕಬಳಿಸಿದರು.

ನ್ಯೂಜಿಲೆಂಡ್‌ನ 329 ರನ್ನಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 360 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ:
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 329ಕ್ಕೆ ಆಲೌಟ್ (ಡ್ಯಾರಿಲ್ ಮಿಚೆಲ್ 109, ಟಾಮ್ ಬ್ಲಂಡೆಲ್ 55, ಜ್ಯಾಕ್ ಲೀಚ್ 100/5)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 360ಕ್ಕೆ ಆಲೌಟ್ (ಜಾನಿ ಬೆಸ್ಟೊ 162, ಜೆಮಿ ಓವರ್‌ಟನ್ 97, ಟ್ರೆಂಟ್ ಬೌಲ್ಟ್ 104/4)
ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್ 326ಕ್ಕೆ ಆಲೌಟ್ (ಟಾಮ್ ಬ್ಲಂಡೆಲ್ 88*, ಟಾಮ್ ಲೇಥಮ್ 76, ಡ್ಯಾರಿಲ್ ಮಿಚೆಲ್ 56, ಜ್ಯಾಕ್ ಲೀಚ್ 66/5)
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 296ಕ್ಕೆ 3 (ಜೋ ರೂಟ್ 86*, ಜಾನಿ ಬೆಸ್ಟೊ 71*, ಓಲಿ ಪೋಪ್ 82)

ಫಲಿತಾಂಶ:
ಮೊದಲ ಟೆಸ್ಟ್: ಇಂಗ್ಲೆಂಡ್‌ಗೆ 5 ವಿಕೆಟ್ ಗೆಲುವು
ದ್ವಿತೀಯ ಟೆಸ್ಟ್: ಇಂಗ್ಲೆಂಡ್‌ಗೆ 5 ವಿಕೆಟ್ ಗೆಲುವು
ಅಂತಿಮ ಟೆಸ್ಟ್: ಇಂಗ್ಲೆಂಡ್‌ಗೆ 7 ವಿಕೆಟ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT