ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಸಾಮಾಜಿಕ ಜಾಲತಾಣಗಳ ಮೇಲೆ ಎಸಿಯು ನಿಗಾ

ಯುಎಇಯಲ್ಲಿ ಕ್ವಾರಂಟೈನ್ ಆಗಿರುವ ಬಿಸಿಸಿಐ ಎಸಿಯು ತಂಡ
Last Updated 10 ಸೆಪ್ಟೆಂಬರ್ 2020, 18:14 IST
ಅಕ್ಷರ ಗಾತ್ರ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲಿರುವ ತಂಡಗಳ ಆಟಗಾರರ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕವು (ಎಸಿಯು)ತಿಳಿಸಿದೆ.

ಅಜಿತ್ ಸಿಂಗ್ ಮುಂದಾಳತ್ವದ ಎಸಿಯು ತಂಡವು ಮಂಗಳವಾರ ದುಬೈಗೆ ತೆರಳಿದೆ. ಆರುದಿನಗಳ ಪ್ರತ್ಯೇಕವಾಸ ನಿಯಮಪಾಲನೆ ಮಾಡುತ್ತಿದೆ.

ಈ ಬಾರಿಯ ಟೂರ್ನಿಯ ಪಂದ್ಯಗಳು ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣಗಳಲ್ಲಿ ನಡೆಯುತ್ತಿವೆ. ತಂಡಗಳ ಆಟಗಾರರು ತಂಗಿರುವ ಹೋಟೆಲ್‌ಗಳಿಗೂ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಜೀವ ಸುರಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಇದೆಲ್ಲದರ ಜೊತೆಗೆ ಭ್ರಷ್ಟಾಚಾರ ತಡೆ ನಿಯಮಗಳ ಕುರಿತು ಎಲ್ಲ ಆಟಗಾರರಿಗೂ ತಿಳಿವಳಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಈ ಬಾರಿ ಆಟಗಾರರೊಂದಿಗೆ ವಿಡಿಯೊ ಮೂಲಕ ಆಪ್ತ ಸಮಾಲೋಚನೆ ಮಾಡಲಾಗುವುದು. ಸಾಮೂಹಿಕವಾಗಿ ಮತ್ತು ವೈಯಕ್ತಿಕವಾಗಿ ಈ ಕಾರ್ಯ ನಡೆಸಲಾಗುವುದು. ಎಲ್ಲ ತಂಡಗಳ ಆಟಗಾರರು, ಸಿಬ್ಬಂದಿ ಮತ್ತಿತರರಿಗೆ ನಿಯಮಗಳ ಕುರಿತು ತಿಳಿವಳಿಕೆ ಮೂಡಿಸುವುದು ನಮ್ಮ ಆದ್ಯತೆ’ ಎಂದು ಸಿಂಗ್ ಹೇಳಿದರು.

‘ಬೆಟ್ಟಿಂಗ್ ಚಟುವಟಿಕೆಗಳಲ್ಲಿ ಅಕ್ರಮ ನಡೆಸುವ ಮತ್ತು ಸಂಶಯಾಸ್ಪದ ವ್ಯಕ್ತಿಗಳ ಮಧ್ಯಸ್ಥಿಕೆಗಳನ್ನು ಪತ್ತೆ ಹಚ್ಚಲು ಪರಿಣತ ಏಜೆನ್ಸಿಗಳಿಂದ ನೆರವು ಪಡೆಯಲಾಗುತ್ತಿದೆ. ತಜ್ಞರನ್ನು ನಿಯೋಜನೆ ಮಾಡುತ್ತಿದ್ದೇವೆ. ಆಟಗಾರರ ಫೋನ್, ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗುವುದು’ ಎಂದು ವಿವರಿಸಿದರು.

‘ಭಾರತದಲ್ಲಿ ಟೂರ್ನಿಗಳು ನಡೆದಾಗಲೂ ನಮಗೆ ಸಿಗುವ ಮಾಹಿತಿಗಳನ್ನು ಐಸಿಸಿಯೊಂದಿಗೆ ಹಂಚಿಕೊಳ್ಳುತ್ತೇವೆ. ಅದೇ ರೀತಿ ಇಲ್ಲಿಯೂ ಮಾಡುತ್ತೇವೆ. ಇದುವರೆಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ವರದಿಯಾಗಿವೆ. ನಮ್ಮಲ್ಲಿ ಈಗ ಇಬ್ಬರು ಭದ್ರತಾ ಅಧಿಕಾರಿಗಳು ಇದ್ದಾರೆ’ ಎಂದು ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT