ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತವಾಗಿ ತವರಿಗೆ ಕಳುಹಿಸಿಕೊಡುತ್ತೇವೆ: ವಿದೇಶಿ ಆಟಗಾರರಿಗೆ ಬಿಸಿಸಿಐ ಭರವಸೆ

Last Updated 27 ಏಪ್ರಿಲ್ 2021, 12:57 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್ ಟೂರ್ನಿ ಮುಕ್ತಾಯವಾದ ಬಳಿಕ ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಮರಳಲು ವಿದೇಶಿ ಕ್ರಿಕೆಟಿಗರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡುಬಂದ ಬಳಿಕ ಆಸ್ಟ್ರೇಲಿಯಾದ ಆಟಗಾರರಾದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ (ಆರ್‌ಸಿಬಿ) ಹಾಗೂ ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್) ಐಪಿಎಲ್‌ ಕಣದಿಂದ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಆಟಗಾರರನ್ನು ಕಳುಹಿಸಿಕೊಡುವ ಭರವಸೆ ನೀಡಿದೆ.

‘ಟೂರ್ನಿ ಮುಕ್ತಾಯವಾದ ಬಳಿಕ ಹೇಗೆ ತವರಿಗೆ ಮರಳುವುದು ಎಂಬ ಬಗ್ಗೆ ನಿಮ್ಮಲ್ಲಿ ಅನೇಕರು ಆತಂಕಕ್ಕೆ ಒಳಗಾಗಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆ. ಆ ಕುರಿತು ಚಿಂತಿಸಬೇಕಾಗಿಲ್ಲ’ ಎಂದು ಬಿಸಿಸಿಐಯ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಹೇಳಿದ್ದಾರೆ.

‘ನಿಮ್ಮ ಗಮ್ಯಗಳಿಗೆ ನಿಮ್ಮಿಚ್ಛೆಯಂತೆ ತಲುಪಿಸುವ ಬಗ್ಗೆ ಬಿಸಿಸಿಐ ಭರವಸೆ ನೀಡುತ್ತಿದೆ. ಸಂಸ್ಥೆಯು ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಹಾಗೂ ಟೂರ್ನಿ ಕೊನೆಗೊಂಡ ಬಳಿಕ ನಿಮ್ಮನ್ನು ತವರಿಗೆ ಕಳುಹಿಸಿಕೊಡುವ ಬಗ್ಗೆ ಈಗಾಗಲೇ ಸರ್ಕಾರದ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ’ ಎಂದು ವಿದೇಶಿ ಕ್ರಿಕೆಟಿಗರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

‘ನೀವು ಪ್ರತಿಯೊಬ್ಬರೂ ನಿಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪುವವರೆಗೆ ಬಿಸಿಸಿಐಗೆ ಟೂರ್ನಿ ಮುಕ್ತಾಯವಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್–19 ಪರಿಸ್ಥಿತಿ ಉಲ್ಬಣಿಸಿರುವ ಕಾರಣ ಮೇ 15ರವರೆಗೆ ಅಲ್ಲಿಂದ ಬರುವ ಎಲ್ಲ ಪ್ರಯಾಣಿಕ ವಿಮಾನಗಳನ್ನು ನಿಷೇಧಿಸಿ ಆಸ್ಟ್ರೇಲಿಯಾ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆಟಗಾರರು ತವರಿಗೆ ಮರಳಲು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದರು.

ಐಪಿಎಲ್‌ ಟೂರ್ನಿ ಮುಕ್ತಾಯವಾದ ಬಳಿಕ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಲು ವಿಮಾನದ ವ್ಯವಸ್ಥೆ ಮಾಡಬೇಕೆಂದು ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಲಿನ್ ಇತ್ತೀಚೆಗೆ ‘ಕ್ರಿಕೆಟ್ ಆಸ್ಟ್ರೇಲಿಯಾ’ಕ್ಕೆ ಮನವಿ ಮಾಡಿದ್ದರು.

ಸದ್ಯ ಸ್ಟೀವ್ ಸ್ಮಿತ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್), ಪ್ಯಾಟ್ ಕಮಿನ್ಸ್ (ಕೋಲ್ಕತ್ತ ನೈಟ್‌ ರೈಡರ್ಸ್), ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್, ಆರ್‌ಸಿಬಿಯ ಸೈಮನ್ ಕ್ಯಾಟಿಚ್‌ ಸೇರಿ ಆಸ್ಟ್ರೇಲಿಯಾದ 14 ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ವೀಕ್ಷಕ ವಿವರಣೆಗಾರರಾಗಿ ಮ್ಯಾಥ್ಯೂ ಹೇಡನ್, ಬ್ರೆಟ್‌ ಲೀ, ಮೈಕೆಲ್ ಸ್ಲಾಟೆರ್ ಹಾಗೂ ಲೀಸಾ ಸ್ಥಲೇಕರ್‌ ಸಹ ಐಪಿಎಲ್‌ನಲ್ಲಿ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT