ಬುಧವಾರ, ಮಾರ್ಚ್ 3, 2021
18 °C
ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್: ಬಿಸಿಸಿಐ ಬೆಂಬಲ

2022ರಲ್ಲಿ ಐಪಿಎಲ್‌ಗೆ ಎರಡು ಹೊಸ ತಂಡಗಳು: ಬಿಸಿಸಿಐ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

Sourav Ganguly

ಅಹಮದಾಬಾದ್: ಮೊದಲೇ ನಿರೀಕ್ಷಿಸಿದಂತೆ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಗೂ ಗುರುವಾರ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸರ್ವಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ಆಡುವ ತಂಡಗಳ ಸಂಖ್ಯೆಯು ಹತ್ತಕ್ಕೇರಲಿದೆ.

ಲಾಸ್‌ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಬಿಡ್ ಸಲ್ಲಿಸಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಬೆಂಬಲ ನೀಡಲು ಕೂಡ ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು. 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಪದಾಧಿಕಾರಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು, ಐಪಿಎಲ್ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

’ಮುಂಬರುವ ಐಪಿಎಲ್‌ನಲ್ಲಿಯೇ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡುವ ಯೋಚನೆ ಮಂಡಳಿಗಿತ್ತು. ಆದರೆ ಸಮಯ ಕಡಿಮೆ ಇರುವುದರಿಂದ ತರಾತುರಿಯಲ್ಲಿ ಸರಿಯಲ್ಲ ಎಂಬ ಕಾರಣಕ್ಕೆ 2022ರ ಐಪಿಎಲ್‌ನಲ್ಲಿ ಸೇರಿಸಲು ನಿರ್ಧರಿಸಲಾಯಿತು‘ ಎಂದು ಮೂಲಗಳು ತಿಳಿಸಿವೆ.

ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಆಡಲು ದಶಕಗಳ ಹಿಂದಿನಿಂದಲೂ ಹಿಂದೇಟು ಹಾಕುತ್ತಿದ್ದ ಬಿಸಿಸಿಐ ತನ್ನ ನಿಲುವು ಬದಲಿಸಿದೆ. 2028ರಲ್ಲಿ ಲಾಸ್‌ ಏಂಜಲಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಬಿಡ್ ಸಲ್ಲಿಸಲಿರುವ ಐಸಿಸಿಯನ್ನು ಬೆಂಬಲಿಸಲು ನಿರ್ಧರಿಸಿದೆ. ಆದರೆ ಈ ಕುರಿತು ಕೆಲವು ಸಂದೇಹಗಳನ್ನು ಪರಿಹರಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಗೆ ಮನವಿ ಸಲ್ಲಿಸಲಿದೆ.

’ಕೋವಿಡ್ –19 ಕಾರಣದಿಂದ ಈ ವರ್ಷದ ದೇಶಿ ಕ್ರಿಕೆಟ್ ಟೂರ್ನಿಗಳು ವಿಳಂಬವಾಗಿ ನಡೆಯಲಿವೆ.  ಜನವರಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯು ನಡೆಯಲಿದೆ. ಈ ವರ್ಷ ಆದಾಯ ನಷ್ಟ ಅನುಭವಿಸಿರುವ ದೇಶಿ ತಂಡಗಳ ಆಟಗಾರರಿಗೆ ಪರಿಹಾರ ನೀಡುವ ಕುರಿತು ತೀರ್ಮಾನಿಸಲಾಯಿತು‘ ಎಂದು ಮೂಲಗಳು ತಿಳಿಸಿವೆ.

ಸಭೆಯ ಮುಖ್ಯಾಂಶಗಳು

* 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ಗೆ ಬೆಂಬಲ

* 2022ರ ಐಪಿಎಲ್‌ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹತ್ತಕ್ಕೇರಿಸಲು ಅನುಮೋದನೆ

* ಜನವರಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟ20 ಟೂರ್ನಿಯೊಂದಿಗೆ ದೇಶಿ ಕ್ರಿಕೆಟ್‌ಗೆ ಚಾಲನೆ

* ಕೋವಿಡ್ –19 ಕಾರಣ  ಆದಾಯ ನಷ್ಟವಾಗಿರುವ ಪುರುಷ ಮತ್ತು ಮಹಿಳಾ ದೇಶಿ ತಂಡಗಳ ಕ್ರಿಕೆಟಿಗರಿಗೆ ಪರಿಹಾರ

* ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ ಶುಕ್ಲಾ

* ಐಸಿಸಿಯ ಮಂಡಳಿಯಲ್ಲಿ ಸೌರವ್ ಗಂಗೂಲಿ ನಿರ್ದೇಶಕರಾಗಿ ಮುಂದುವರಿಯಲು ಸಹಮತ

* ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಮಿತಿ ಸಭೆಯಲ್ಲಿ ಪ್ರತಿನಿಧಿಯಾಗಿ ಕಾರ್ಯದರ್ಶಿ ಜಯ್ ಶಾ ಹೆಚ್ಚುವರಿ ನಿರ್ದೇಶಕರಾಗಿ ಮುಂದುವರಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು