ಗುರುವಾರ , ಆಗಸ್ಟ್ 5, 2021
23 °C

ಚಂಡೀಗಡ ಟಿ20 ಪಂದ್ಯಕ್ಕೆ ಲಂಕಾ ಲೀಗ್ ಹೆಸರು: ಬಿಸಿಸಿಐ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಂಡೀಗಡ ಸಮೀಪ ಈಚೆಗೆ ನಡೆದಿದ್ದ ಅನಧಿಕೃತ  ಟ್ವೆಂಟಿ–20 ಕ್ರಿಕೆಟ್‌ ಪಂದ್ಯದ ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ ಮತ್ತು ಪಂಜಾಬ್ ಪೊಲೀಸ್ ಇಲಾಖೆ ಮುಂದಾಗಿವೆ.

ಜೂನ್ 29ರಂದು ಚಂಡೀಗಡದಿಂದ 16 ಕಿ.ಮೀ ದೂರದಲ್ಲಿರುವ ಸವಾರಾದಲ್ಲಿ ಟಿ20 ಪಂದ್ಯ ನಡೆದಿತ್ತು. ಆದರೆ ಅದನ್ನು ಶ್ರೀಲಂಕಾದಲ್ಲಿ ನಡೆದ 'ಯುವಿಎ ಟಿ20 ಲೀಗ್' ಪಂದ್ಯ ಎಂದು ವೆಬ್‌ತಾಣದಲ್ಲಿ ಪ್ರಸಾರ ಮಾಡಲಾಗಿತ್ತು.

ಇದೀಗ ಪಂದ್ಯ ನಡೆದ ತಾಣವನ್ನು ಖಚಿತಪಡಿಸಿಕೊಂಡಿರುವ ಪೊಲೀಸರು ಬೆಟ್ಟಿಂಗ್ ಜಾಲವೊಂದು ಇದರ ಹಿಂದಿರಬಹುದೆಂದು ಅನುಮಾನಿಸಿದ್ದಾರೆ. ಇದರಲ್ಲಿ ಭಾಗಿಯಾದವರ ವಿವರಗಳನ್ನು ಕಲೆಹಾಕಲು ಬಿಸಿಸಿಐ ಕಾರ್ಯಪ್ರವೃತ್ತವಾಗಿದೆ.

'ನಮ್ಮ ಕಾರ್ಯಾಚರಣೆ ಆರಂಭವಾಗಿದೆ. ಇದರಲ್ಲಿ ಶಾಮೀಲಾದವರು ಯಾರು ಎಂದು ಪತ್ತೆ ಹಚ್ಚುತ್ತೇವೆ. ಮುಂದಿನ ಕ್ರಮವನ್ನು ಪೊಲೀಸರು ಜರುಗಿಸುತ್ತಾರೆ' ಎಂದು ಬಿಸಿಸಿಐ ಎಸಿಯು ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ.

’ಒಂದೊಮ್ಮೆ ಈ ಪಂದ್ಯವು ಬಿಸಿಸಿಐ ಅನುಮತಿಯಿಂದ ನಡೆದ ಲೀಗ್ ಆಗಿದ್ದಿದ್ದರೆ ಅಥವಾ ನಮ್ಮ ಆಟಗಾರರು ಆಡಿದ್ದರೆ ನಾವು ಕ್ರಮಕೈಗೊಳ್ಳಬಹುದು. ಆದರೆ, ಅಕ್ರಮ ಬೆಟ್ಟಿಂಗ್‌ ಉದ್ದೇಶದಿಂದಲೇ ಮಾಡಿದ್ದ ಕೃತ್ಯವಾದರೆ ಅದು ಪೊಲೀಸರ ಕಾರ್ಯವ್ಯಾಪ್ತಿಗೆ ಬರುತ್ತದೆ‘ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿ ನೀಡಿರುವ ಶ್ರೀಲಂಕಾ ಕ್ರಿಕೆಟ್, ’ನಮ್ಮ ಸಂಸ್ಥೆ ಅಥವಾ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯು ಈ ಪಂದ್ಯ ಆಯೋಜಿಸಿಲ್ಲ. ಆಟಗಾರರು ಭಾಗಿಯಾಗಿರುವ ಕುರಿತೂ ಮಾಹಿತಿ ಇಲ್ಲ. ಆದರೆ ಭಾರತದ ಕೆಲವು ವೆಬ್‌ಸೈಟ್‌ಗಳಲ್ಲಿ ಆ ಪಂದ್ಯವು ಶ್ರೀಲಂಕಾದ ಬದುಲ್ಲಾ ಕ್ರೀಡಾಂಗಣದಲ್ಲಿ ನಡೆದ ಯುವಿಎ ಪ್ರೀಮಿಯರ್ ಲೀಗ್ ಎಂದು ಪ್ರಸಾರ ಮಾಡಿವೆ. ಸ್ಕೋರ್‌ಕಾರ್ಡ್‌ಗಳನ್ನೂ ಪ್ರಕಟಿಸಿವೆ. ಆದರೆ ಅಂತಹ ಯಾವುದೇ ಟೂರ್ನಿಯು ನಮ್ಮ ದೇಶದಲ್ಲಿ ಆಯೋಜನೆಗೊಂಡಿಲ್ಲ‘ ಎಂದು ಖಚಿಪಡಿಸಿದೆ.

’ನಮ್ಮ ಸಂಸ್ಥೆಯಿಂದ ಟೂರ್ನಿಗೆ ಯಾವುದೇ ಮಾನ್ಯತೆ ನೀಡಿಲ್ಲ  ನಾವು ಪ್ರಾಯೋಜಕತ್ವ ಮತ್ತಿತರ ರೂಪದಲ್ಲಿಯೂ ಆ ಪಂದ್ಯಕ್ಕೆ ಬೆಂಬಲ ನೀಡಿಲ್ಲ. ಯಾವುದೇ ರೀತಿಯಿಂದಲೂ ಆ ಪಂದ್ಯಕ್ಕೆ ನಮ್ಮ ದೇಶ ಭಾಗಿಯಾಗಿಲ್ಲ‘ ಎಂದು  ಎಸ್‌ಎಲ್‌ಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆ್ಯಷ್ಲೆ ಡಿಸಿಲ್ವಾ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುವಿಎ ಪ್ರೊವಿನ್ಸ್‌ ಕ್ರಿಕೆಟ್ ಸಂಸ್ಥೆ ಸಹಾಯಕ ಕಾರ್ಯದರ್ಶಿ ಭಗಿರಥನ್ ಬಾಲಚಂದ್ರನ್, ’ನಮ್ಮ ಸಂಘಟನೆಯಿಂದ ಯಾವುದೇ ಪಂದ್ಯವನ್ನು ಆಯೋಜಿಸಿಲ್ಲ. ಅಲ್ಲದೇ ಯಾವುದೇ ಪಂದ್ಯಕ್ಕೂ ಮಾನ್ಯತೆ ಅಥವಾ ಪ್ರಾಯೋಜಕತ್ವವನ್ನೂ ನೀಡಿಲ್ಲ. ಕೆಲ ಕಾಲದಿಂದ ನಮ್ಮ ಸಂಸ್ಥೆಯ ಚಟುವಟಿಕೆಗಳು ಸ್ಥಗಿತವಾಗಿವೆ. ಕಿಡಿಗೇಡಿಗಳು ಇದರ ದುರ್ಲಾಭ ಪಡೆದಿರಬಹುದು‘ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು