ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು–ರಾತ್ರಿ ಟೆಸ್ಟ್‌ಗೆ ಸಿದ್ಧತೆ: 72ಪಿಂಕ್ ಬಾಲ್‌ಗಳಿಗೆ ಆರ್ಡರ್ ಮಾಡಿದ ಬಿಸಿಸಿಐ

ಭಾರತ–ಬಾಂಗ್ಲಾ ಪಿಂಕ್‌ ಟೆಸ್ಟ್‌
Last Updated 31 ಅಕ್ಟೋಬರ್ 2019, 12:21 IST
ಅಕ್ಷರ ಗಾತ್ರ

ನವದೆಹಲಿ:ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಡೆಯಲಿರುವ ಹಗಲು ರಾತ್ರಿ ಟೆಸ್ಟ್‌ ಪಂದ್ಯದ ಸಲುವಾಗಿ, ಮುಂದಿನ ವಾರದೊಳಗೆ 6 ಡಜನ್‌(72) ಗುಲಾಬಿ(ನಸುಗೆಂಪು/ಪಿಂಕ್‌) ಬಣ್ಣದ ಚೆಂಡುಗಳನ್ನು ತಯಾರಿಸಿಕೊಡುವಂತೆ ಕ್ರೀಡಾಪರಿಕರ ತಯಾರಕ ಸಂಸ್ಥೆ ಸಾನ್ಸ್‌ ಪರೀಲ್ಸ್ ಗ್ರೀನ್‌ಲ್ಯಾಂಡ್ಸ್(ಎಸ್‌ಜಿ)ಗೆಬಿಸಿಸಿಐ ಆರ್ಡರ್‌ ಮಾಡಿದೆ.

ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿಆಯೋಜನೆಯಾಗಿರುವ ಈ ಪಂದ್ಯ ನವೆಂಬರ್‌ 22ರಂದು ನಡೆಯಲಿದ್ದು, ಇದು ಭಾರತಕ್ಕೆ ಮೊದಲ ಹಗಲು–ರಾತ್ರಿ ಪಂದ್ಯವಾಗಿದೆ. ಈ ವೇಳೆ ನಸುಗೆಂಪು ಬಣ್ಣದ ಚೆಂಡುಗಳನ್ನು ಬಳಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈಗಾಗಲೇ ಖಚಿತಪಡಿಸಿದ್ದಾರೆ.

ರಾತ್ರಿ ವೇಳೆ ದೀಪದ ಬೆಳಕಿನಲ್ಲಿ ನಡೆಯುವ ಪಂದ್ಯದಲ್ಲಿ ಸ್ಪರ್ಧಾತ್ಮಕ ಆಟಕ್ಕೆ ಸಹಕಾರಿಯಾಗುವಂತೆ ಚೆಂಡುಗಳನ್ನು ತಯಾರಿಸಿಕೊಡುವುದು ಎಸ್‌ಜಿಗೆ ಸವಾಲಿನ ಸಂಗತಿಯಾಗಿದೆ. ಇದುವರೆಗೆ ದುಲೀಪ್‌ ಕ್ರಿಕೆಟ್‌ ಸರಣಿ ವೇಳೆ ಮೂರು ಬಾರಿ ಕೂಕಬುರ್ರಾ ಕಂಪೆನಿಯ ನಸುಗೆಂಪು ಚೆಂಡುಗಳನ್ನು ಬಳಸಲಾಗಿತ್ತು. ಆದರೆ, ಈ ವರ್ಷ ಮತ್ತೆ ಎಸ್‌ಜಿ ಕಂಪೆನಿಯ ಕೆಂಪು ಚೆಂಡುಗಳನ್ನೇ ಬಳಸಿ ಆಡಲಾಗಿದೆ.

‘ಆರು ಡಜನ್‌ ಪಿಂಕ್‌ ಚೆಂಡಗಳನ್ನು ತಯಾರಿಸಿಕೊಡುವಂತೆ ಬಿಸಿಸಿಐ ಕೇಳಿದೆ. ಮುಂದಿನ ವಾರದ ಮಧ್ಯದಲ್ಲಿ ನಾವು ಚೆಂಡುಗಳನ್ನು ಪೂರೈಸಲಿದ್ದೇವೆ. ನಮ್ಮ ಕೆಂಪು ಚೆಂಡುಗಳಲ್ಲಿ ಗಮನಾರ್ಹ ಸುಧಾರಣೆ ಆಗಿರುವುದನ್ನು ನೀವು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಗಮನಿಸಿದ್ದೀರಿ. ಪಿಂಕ್‌ ಚೆಂಡುಗಳಲ್ಲಿಯೂ ಅದೇ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸಂಶೋದನೆ ನಡೆಸುತ್ತಿದ್ದೇವೆ’ ಎಂದು ಎಸ್‌ಜಿ ಕಂಪೆನಿಯ ಮಾರಾಟ ವಿಭಾಗದ ನಿರ್ದೇಶಕ ಪರಾಸ್‌ ಆನಂದ್‌ ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಬಳಸುವ ಡ್ಯೂಕ್‌ ಮತ್ತು ಆಸ್ಟ್ರೇಲಿಯಾದಲ್ಲಿ ಬಳಸುವ ಕೂಕಬುರ್ರಾ ಚೆಂಡುಗಳಿಗೆ ಹೋಲಿಸಿದರೆ, ಎಸ್‌ಜಿ ಕಂಪೆನಿಯ ಚೆಂಡುಗಳು ಬೇಗನೆ ಹಾಳಾಗುತ್ತವೆ ಎಂದುಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಈ ಹಿಂದೆ ಕಟುವಾಗಿ ಟೀಕಿಸಿದ್ದರು.ಈಚೆಗೆ ಮುಕ್ತಾಯವಾದ ಸರಣಿಯಲ್ಲಿ ಬಳಸಿದ ಎಸ್‌ಜಿ ಚೆಂಡುಗಳಲ್ಲಿ ಸುಧಾರಣೆಗಳಾಗಿವೆ. ಆದರೂ, ಕನಿಷ್ಟ 60 ಓವರ್‌ಗಳ ವರೆಗೆ ಅವು ಹಾಳಾಗಬಾರದು ಎಂದು ಸಲಹೆಯನ್ನೂ ನೀಡಿದ್ದರು.

‘ಪಿಂಕ್‌ ಚೆಂಡುಗಳನ್ನು ಪರೀಕ್ಷೆ ಕಾರ್ಯ ನಡೆಯುತ್ತಿದೆ. ನಾವು2016–17ರಿಂದಲೂ ಪಿಂಕ್‌ ಬಾಲ್‌ಗಳ ಮೇಲೆ ಸಂಶೋದನೆ ನಡೆಸುತ್ತಿದ್ದೇವೆ. ಬಿಸಿಸಿಐ ಅಧಿಕಾರಿಗಳೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಇದು ಸವಾಲಿನ ಸಂಗತಿಯಾಗಿಯಾದರೂ ನಾವು ಯಶಸ್ವಿಯಾಗಲಿದ್ದೇವೆ’ ಎಂದುಆನಂದ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಚೆಂಡು ಹಳತಾದಂತೆ ಬೌಲರ್‌ಗಳಿಗೆ ಉಂಟಾಗುವ ಅನನುಕೂಲತೆಗಳನ್ನು ಗಮನದಲ್ಲಿರಿಸಿ, ಎಸ್‌ಜಿ ಪಿಂಕ್‌ ಬಾಲ್‌ಗಳನ್ನು ಹೇಗೆ ತಯಾರಿಸಲಿದೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT