ಗುರುವಾರ , ಜನವರಿ 28, 2021
25 °C
ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಅಲ್ಲಗಳೆದ ಕ್ರಿಕೆಟ್‌ ಮಂಡಳಿ

ಕೋವಿಡ್‌ ತಡೆ ನಿಯಮಗಳ ಉಲ್ಲಂಘನೆಯಾಗಿಲ್ಲ: ಬಿಸಿಸಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಭಾರತ ಕ್ರಿಕೆಟ್ ತಂಡದ ಆಟಗಾರರು ಕೋವಿಡ್ –19 ತಡೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳ ವರದಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅಲ್ಲಗಳೆದಿದೆ. ನಿಯಮ ಮೀರಿ ಆಟಗಾರರು ರೆಸ್ಟೊರೆಂಟ್‌ವೊಂದರಲ್ಲಿ ಊಟ ಮಾಡಿದ್ದಾರೆ ಎಂಬ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಬಿಸಿಸಿಐ  ಪ್ರತಿಕ್ರಿಯಿಸಿದೆ.

‘ಕೋವಿಡ್‌ ನಿಯಮಗಳ ಬಗ್ಗೆ ನಮ್ಮ ತಂಡದ ಆಟಗಾರರು ಹಾಗೂ ಸಿಬ್ಬಂದಿಗೆ ಚೆನ್ನಾಗಿ ಅರಿವಿದೆ. ಜೀವಸುರಕ್ಷಾ ನಿಯಮಗಳನ್ನು ಯಾರೂ ಉಲ್ಲಂಘಿಸಿಲ್ಲ‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ರಿಷಭ್ ಪಂತ್‌, ನವದೀಪ್ ಸೈನಿ ಹಾಗೂ ಶುಭಮನ್ ಗಿಲ್ ರೆಸ್ಟೊರೆಂಟ್‌ವೊಂದರಲ್ಲಿ ಊಟ ಮಾಡುತ್ತಿರುವ ಚಿತ್ರ ಮತ್ತು ವಿಡಿಯೊಗಳನ್ನು ನವಲ್‌ದೀಪ್ ಸಿಂಗ್ ಎಂಬ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ ಬಳಿಕ ಈ ಗೊಂದಲ ಸೃಷ್ಟಿಯಾಗಿತ್ತು.

‘ನಾನು ಆಟಗಾರರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದೆ. ಅವರು ಊಟ ಮಾಡಿದ ನಂತರ ಬಿಲ್‌ ಪಾವತಿಸಿದಾಗ ರಿಷಭ್ ನನ್ನನ್ನು ಆಲಂಗಿಸಿಕೊಂಡರು‘ ಎಂದು ನವಲ್‌ದೀಪ್ ಹೇಳಿಕೊಂಡಿದ್ದ. ಬಳಿಕ ಈ ರೀತಿಯ ಗೊಂದಲ ಸೃಷ್ಟಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದ.

ನಿಯಮಗಳ ಅನ್ವಯ ಆಟಗಾರರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರೆಸ್ಟೊರೆಂಟ್‌ನಲ್ಲಿ ಊಟ ಮಾಡಲು ಅನುಮತಿ ನೀಡಲಾಗುತ್ತದೆ.

‘ಇದು ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳ ದುರುದ್ದೇಶಪೂರಿತ ವರದಿ. ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತ ಬಳಿಕ ಇಂತಹ ಕೃತ್ಯಕ್ಕಿಳಿದಿವೆ‘ ಎಂದು ಅಧಿಕಾರಿ ಕಿಡಿ ಕಾರಿದ್ದಾರೆ.

ಮೆಲ್ಬರ್ನ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್‌ಗಳಿಂದ ಆತಿಥೇಯ ತಂಡವನ್ನು ಸೋಲಿಸಿತ್ತು. ನಾಲ್ಕು ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು