ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಸಂಘರ್ಷ | ಐಪಿಎಲ್ ಪ್ರಾಯೋಜಕತ್ವ ಮರುಪರಿಶೀಲನೆಗೆ ಬಿಸಿಸಿಐ ಚಿಂತನೆ

Last Updated 20 ಜೂನ್ 2020, 2:07 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಮೊಬೈಲ್ ಫೋನ್ ಕಂಪೆನಿ ವಿವೊ ಸೇರಿದಂತೆ ಐಪಿಎಲ್ ಪ್ರಾಯೋಜಕತ್ವದ ಕಂಪೆನಿಗಳ ಜೊತೆಗಿನ ಒಪ್ಪಂದದ ಬಗ್ಗೆ ಮರುಪರಿಶೀಲನೆ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ.

ಮುಂದಿನ ವಾರ ನಡೆಯಲಿರುವ ಐಪಿಎಲ್ ಅಡಳಿತ ಸಮಿತಿ ಸಭೆಯಲ್ಲಿ ಪ್ರಾಯೋಜಕತ್ವದ ಕುರಿತು ಚರ್ಚೆ ನಡೆಯಲಿದೆ ಎಂದು ಐಪಿಎಲ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ತಡರಾತ್ರಿ ತಿಳಿಸಲಾಗಿದೆ.

ವಿವೊ ಕಂಪೆನಿ ವಾರ್ಷಿಕ ₹ 440 ಕೋಟಿ ಮೊತ್ತದ ಪ್ರಾಯೋಜಕತ್ವ ಹೊಂದಿದ್ದು ಬಿಸಿಸಿಐನ ಪ್ರಮುಖ ಪ್ರಾಯೋಜಕರಲ್ಲಿ ಒಂದಾದ ಪೇಟಿಎಂನಲ್ಲಿ ಚೀನಾದ ಅಲಿಬಾಬ ಶೇಕಡಾ 37.15ರ ಪಾಲು ಹೊಂದಿದೆ. ಆದ್ದರಿಂದ ಪೇಟಿಎಂ ಜೊತೆಗಿನ ಒಪ್ಪಂದ ಮುಂದುವರಿಯುವ ಬಗ್ಗೆಯೂ ಚರ್ಚೆ ಆಗಲಿದೆ. ಸ್ವಿಗ್ಗಿ ಮತ್ತು ಡ್ರೀಮ್ ಇಲೆವನ್ ಕೂಡ ಬಿಸಿಸಿಐಯ ಪ್ರಮುಖ ಪ್ರಾಯೋಜಕತ್ವ ಕಂಪೆನಿಗಳಾಗಿವೆ. ಸ್ವಿಗ್ಗಿಯಲ್ಲಿ ವಿಡಿಯೊ ಗೇಮ್ ಕಂಪೆನಿ ಟೆನ್ಸೆಂಟ್, ಸಣ್ಣ ಪಾಲು ಹೊಂದಿದ್ದು ಡ್ರೀಮ್ ಇಲೆವನ್‌ನಲ್ಲಿ ಈ ಕಂಪೆನಿಗೆ ದೊಡ್ಡ ಪಾಲು ಇದೆ.

ಭಾರತ ಕ್ರಿಕೆಟ್ ತಂಡದ ಪೋಷಾಕು ಪ್ರಾಯೋಜಿಸುತ್ತಿರುವ ಬೈಜುಸ್ ಐದು ವರ್ಷಗಳಿಗೆ ₹ 1079 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಬೈಜುಸ್‌ನಲ್ಲೂ ಟೆನ್ಸೆಂಟ್‌ನ ಪಾಲು ಇದೆ.

‘ಪೇಟಿಎಂ ಮತ್ತು ಬೈಜುಸ್‌ ಸಂಬಂಧ ಇರುವುದು ಭಾರತ ತಂಡದೊಂದಿಗೆ. ನಮ್ಮ ಮೊದಲ ಆದ್ಯತೆ ಇರುವುದು ಐಪಿಎಲ್ ಪ್ರಾಯೋಜಕತ್ವದ ವಿವೊ, ಡ್ರೀಮ್ ಇಲೆವನ್ ಮತ್ತು ಸ್ವಿಗ್ಗಿ ಮೇಲೆ. ಇತರ ಕಂಪೆನಿಗಳ ಕುರಿತು ಕೂಡ ಚರ್ಚೆಯಾಗುವ ಸಾಧ್ಯತೆ ಇದೆ’ ಎಂದು ಐಪಿಎಲ್ ಆಡಳಿತ ಸಮಿತಿ ಸದಸ್ಯರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

’ಚೀನಾ ಕಂಪೆನಿಗಳ ಜೊತೆ ಪ್ರಾಯೋಜಕತ್ವ ಒಪ್ಪಂದ ಮುಂದುವರಿದರೆ ಬಿಸಿಸಿಐ ಮತ್ತು ಭಾರತಕ್ಕೆ ಆರ್ಥಿಕ ಲಾಭವಿದೆ ನಿಜ. ಆದರೆ ದೇಶದ ಹಿತವೇ ಮುಖ್ಯ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಗುರುವಾರ ಹೇಳಿದ್ದರು. ಭಾರತದ 20 ಯೋಧರನ್ನು ಚೀನಾ ಕೊಂದು ಹಾಕಿದ ನಂತರ ಚೀನಾ ವಿರೋಧಿ ಅಲೆ ದೇಶದಲ್ಲಿ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಸಮಿತಿ ಸಭೆ ಮಹತ್ವ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT