ಶುಕ್ರವಾರ, ಜನವರಿ 24, 2020
20 °C
ಭಾರತ ‘ಎ’ ತಂಡದ ನಾಯಕತ್ವದಿಂದ ಕಿತ್ತುಹಾಕಲು ಆಗ್ರಹ

ಶುಭಮನ್‌ ಗಿಲ್‌ ವರ್ತನೆ ಅಕ್ಷಮ್ಯ: ಬಿಷನ್‌ ಸಿಂಗ್‌ ಬೇಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೊಹಾಲಿಯಲ್ಲಿ ದೆಹಲಿ ವಿರುದ್ಧ ರಣಜಿ ಟ್ರೋಫಿ ಪಂದ್ಯದ ವೇಳೆ ಫೀಲ್ಡ್‌ ಅಂಪೈರ್‌ ಜೊತೆ ವಾಗ್ವಾದ ನಡೆಸಿದ್ದ ಶುಭಮನ್‌ ಗಿಲ್‌ ಅವರನ್ನು ಸ್ಪಿನ್‌ ಗಾರುಡಿಗ ಬಿಷನ್‌ ಸಿಂಗ್‌ ಬೇಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಅವರ ವರ್ತನೆ ರೌಡಿಯ ರೀತಿಯಲ್ಲಿದ್ದು, ಅದು ಅಕ್ಷಮ್ಯ’ ಎಂದು ಟೀಕಿಸಿದ್ದಾರೆ.

ಅವರನ್ನು ಭಾರತ ‘ಎ’ ತಂಡದ ನಾಯಕತ್ವದಿಂದ ಕಿತ್ತುಹಾಕಬೇಕು ಎಂದೂ ಅಬ್ಬರಿಸಿದ್ದಾರೆ. ಶುಕ್ರವಾರ ಪಂದ್ಯದ ಮೊದಲ ದಿನ ಮಧ್ಯಮ ವೇಗಿ ಸುಬೋಧ್‌ ಭಾಟಿ ಬೌಲಿಂಗ್‌ನಲ್ಲಿ ಅಂಪೈರ್‌ ಅವರು  ಕಾಟ್‌ ಬಿಹೈಂಡ್‌ ತೀರ್ಪು ಕೊಟ್ಟ ನಂತರ ಪಂಜಾಬ್‌ನ ಯುವ ಆಟಗಾರ ಕ್ರೀಸ್‌ ಬಿಟ್ಟು ಹೋಗಲು ನಿರಾಕರಿಸಿದ್ದರು.

ತೀರ್ಪಿಗೆ ಆಕ್ರೋಶಗೊಂಡಿದ್ದ ಗಿಲ್‌ ಅಂಪೈರ್‌ ಜೊತೆ ವಾಗ್ವಾದ ನಡೆಸಿದ್ದರು. ಅಂಪೈರ್‌ ಮೊಹಮದ್‌ ರಫಿ, ಕ್ರೀಡಾಂಗಣದಲ್ಲಿದ್ದ ಇನ್ನೊಬ್ಬ ಅಂಪೈರ್‌ ಜೊತೆ ಸಮಾಲೋಚಿಸಿದ ನಂತರ ತೀರ್ಪು ಬದಲಾಯಿಸಿದ್ದರು. ಈ ಎಲ್ಲ ಘಟನೆಗಳಿಂದ ಪಂದ್ಯ 10 ನಿಮಿಷ ಸ್ಥಗಿತಗೊಂಡಿತ್ತು. ಘಟನೆ ನಡೆದಾಗ 10 ರನ್‌ ಗಳಿಸಿದ್ದ ಅವರು 23 ರಲ್ಲಿದ್ದಾಗ ಔಟಾದರು.  

‘ಇಂಥ ವರ್ತನೆಯನ್ನು ಕ್ಷಮಿಸಲಾಗದು. ಅದೂ ಭಾರತ ‘ಎ’ ತಂಡದ ನಿಯೋಜಿತ ನಾಯಕನಿಂದ’ ಎಂದು ಬೇಡಿ ಶನಿವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ಅವರು ಪ್ರತಿಭಾನ್ವಿತ ಇರಬಹುದು. ಆದರೆ ಆಟಕ್ಕಿಂತ ಯಾರೂ ದೊಡ್ಡವರಲ್ಲ’ ಎಂದಿದ್ದಾರೆ. ಈ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್‌ ಪ್ರವಾಸ ಮಾಡಲಿರುವ ಭಾರತ ‘ಎ’ ತಂಡಕ್ಕೆ ಗಿಲ್‌ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಅಂ‍ಪೈರ್‌ ಜೊತೆ ವಾಗ್ವಾದ ನಡೆಸಿದ್ದು ಶಿಸ್ತು ಉಲ್ಲಂಘನೆ. ಹೀಗಾಗಿ ಮ್ಯಾಚ್‌ ರೆಫ್ರಿ ರಂಗನಾಥನ್‌ ಅವರನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಒಂದೊ ಅವರಿಗೆ ಎಚ್ಚರಿಕೆ ನೀಡಬಹುದು. ಅಥವಾ ಲೆವಲ್‌ 1 ತಪ್ಪಿನಡಿ ಶಿಕ್ಷೆ ವಿಧಿಸಬಹುದು. ಪಂದ್ಯದ ನಂತರ ರೆಫ್ರಿ ನಿರ್ಧಾರ ಗೊತ್ತಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು